‘ಪ್ರಜ್ಞಾ’-ಮಾದರಿ ದಂಪತಿಯ ಸಾಮಾಜಿಕ ಪ್ರಜ್ಞೆ

Share Button

ಪುತ್ತೂರಿನಲ್ಲಿ ನಾನು ಸ್ವಯಂಸೇವೆ ಮಾಡಲು ಹೋಗುತ್ತಿದ್ದ ಸಂಸ್ಥೆಯ ಹಿರಿಯರು, “ಪ್ರಜ್ಞಾ ಎನ್ನುವ ಅನಾಥಾಶ್ರಮ ಬಗ್ಗೆ ತಿಳಿದಿದೆಯಾ?” ಎಂದು ಕೇಳಿದರು. ನಾನಂತು ಮೊದಲ ಬಾರಿ ಕೇಳುತ್ತಿರುವ ಆ ಹೆಸರಿನ ಬಗ್ಗೆ ಕುತೂಹಲ ಹುಟ್ಟಿ “ಇಲ್ವಲ್ಲ ಸರ್, ಯಾಕೆ? ಎಲ್ಲಿದೆ ಅದು?” ಎಂದು ಕೇಳಿದೆ. “ಬನ್ನೂರಲ್ಲಿರುವ ಬಲಮುರಿ ಗಣಪತಿ ದೇಗುಲದ ಬಳಿ ಎಲ್ಲೋ ಇದೆಯಂತೆ. ನಿಮಗೆ ತಿಳಿದಿಲ್ಲವಾದರೆ, ಸಮಯವಿದ್ದಾಗ ಅದರ ಬಗ್ಗೆ ತಿಳಿದು ನನಗೆ ಹೇಳಿ” ಎಂದರು. ವಿಷಯವೇನೆಂದರೆ, ಹಿಂದಿನ ದಿನವೇ ‘ಪ್ರಜ್ಞಾ’ ಎಂಬ ಸಂಸ್ಥೆಯಿಂದ ಸಹಾಯ ಯಾಚಿಸಿ ಬಂದಿದ್ದರು. ಆದ್ದರಿಂದ ಅವರ ಬಗ್ಗೆ ಕೂಲಂಕುಶವಾಗಿ ವಿಚಾರಿಸುವ ಜವಾಬ್ದಾರಿ ನನಗೊಪ್ಪಿಸಿದ್ದರು, ಸರ್. ಇದು ಕತ್ತಲಲ್ಲಿ ಸೂಜಿ ಹುಡುಕುವ ಕೆಲಸವಾಗಿತ್ತು!

ಒಮ್ಮೆ ಬನ್ನೂರು ಕಡೆಗೆ ಹೋಗಿದ್ದಾಗ ಸರ್ ಹೇಳಿದ ಕಡೆ ಕೆಲವರಲ್ಲಿ ವಿಚಾರಿಸಿದಾಗ ಸರಿಯಾದ ಮಾಹಿತಿ ಸಿಗಲಿಲ್ಲ. ಇನ್ನೇನು ಮಾಡಲಿ ಎಂದು ಅಕ್ಕಪಕ್ಕ ನೋಡುತ್ತಿರುವಾಗಲೇ  ಒಂದು ಸಣ್ಣ ಬ್ಯಾನರ್ ಕಣ್ಣಿಗೆ ಬಿತ್ತು.. ಅದರಲ್ಲಿ ಪ್ರಜ್ಞಾ ಎಂದು ಬರೆದು ಮೊಬೈಲ್ ನಂಬ್ರ ನಮೂದಿಸಲಾಗಿತ್ತು! ನನಗಾದ ಸಂತೋಷ ಅಷ್ಟಿಷ್ಟಲ್ಲ..ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿತ್ತು! ಭಗವಂತನು ಸರಿಯಾದ ದಾರಿ ತೋರಿದ್ದ! ತಕ್ಷಣ ಅದಕ್ಕೆ ಫೋನ್ ಮಾಡಿ ಎಲ್ಲಿದೆಯೆಂದು ತಿಳಿದುಕೊಂಡು ಅಲ್ಲಿಗೆ ಹೋಗಿಯೇ ಬಿಟ್ಟೆ.

ಸಣ್ಣ ಹಂಚಿನ ಮನೆ, ನಗು ನಗುತ್ತಾ ಸ್ವಾಗತಿಸಿದ ದಂಪತಿಗಳು..ಸುತ್ತಲೂ ಹತ್ತಾರು ಬುದ್ಧಿಮಾಂದ್ಯ ವಿಕಲಚೇತನರು. ಅತ್ಯಂತ ಸ್ವಚ್ಚ ಮತ್ತು ಅಚ್ಚುಕಟ್ಟಾಗಿತ್ತು ಪರಿಸರ. ಕುತೂಹಲದಿಂದ ವಿಚಾರಿಸಲಾಗಿ ತಿಳಿದುಬಂದ ವಿಷಯಗಳು ನಿಜವಾಗಿಯೂ ನಂಬಲಾರದಂತಹುದು. ಅಣ್ಣಪ್ಪ ಮತ್ತು ಜ್ಯೋತಿ ದಂಪತಿಗಳು ತಮ್ಮ ಪುಟ್ಟ ಮಗುವಿನೊಂದಿಗೆ ಈ ಮಕ್ಕಳ ಮನದ ಚೇತನಗಳನ್ನೂ ಅತ್ಯಂತ ಪ್ರೀತಿಯಿಂದ, ಏನೂ ಫಲಾಪೇಕ್ಷೆಯಿಲ್ಲದೆ ನೋಡಿಕೊಳ್ಳುತ್ತಿರುವುದನ್ನು ಕಂಡು ದಿಗ್ಮೂಢಳಾದೆ! ಬನ್ನೂರಿನ ಕರ್ಮಲದ ಬಾಡಿಗೆ ಮನೆಯಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಪ್ರಜ್ಞಾ ಮಾನಸಿಕ ವಿಕಲಚೇತನ ವೃತ್ತಿ ತರಬೇತಿ ಮತ್ತು ಪುನರ್ವಸತಿ ಕೇಂದ್ರದ ವ್ಯವಸ್ಥೆಯಡಿ ಪ್ರಸ್ತುತ, ಪುತ್ತೂರು, ಮಂಗಳೂರು, ಹೆಬ್ರಿ, ಕುಂದಾಪುರ, ಕುಂಬಳೆ ಮೊದಲಾದ ಕಡೆಯ 12 ಬುದ್ಧಿಮಾಂದ್ಯರನ್ನು ಸಲಹಿ ಅವರ ಬದುಕಿಗೆ ಬೆಳಕು ತೋರಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನವೊಂದು ಸದ್ದಿಲ್ಲದೆ ಸಾಗಿದೆ. ಕುಟುಂಬದಲ್ಲಿರುವ ಒಂದೆರಡು ಮಕ್ಕಳನ್ನೇ ಸಾಕಿ ಸಲಹಲು ಕಷ್ಟಪಡುವ ಈ ಕಾಲಘಟ್ಟದಲ್ಲಿ, ವಾಸಕ್ಕೆ ಸ್ವಂತ ಸೂರಿಲ್ಲದಿದ್ದರೂ, ಇಂತಹ ಅಸಹಾಯಕ ಜೀವಗಳಿಗೆ ಮಿಡಿಯುವ ಪವಿತ್ರ ಹೃದಯ ಈ ದಂಪತಿಗಳದ್ದು. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎನ್ನುವುದನ್ನು ನಿಜಾರ್ಥದಲ್ಲಿ ಸಾಕಾರಗೊಳಿಸಿರುವ ಈ ದಂಪತಿಯ ಮಾನವೀಯ ಕಥನ ಸಮಾಜಕ್ಕೆ ಮಾದರಿ ಎಂಬುದು ಖಂಡಿತಾ ಅತಿಶಯೋಕ್ತಿಯಲ್ಲ. ‘ಸರ್ವೇ ಜನಾ: ಸುಖಿನೋ ಭವಂತು’ ಎಂಬ ಮಾತು ಕೇವಲ ಭಾಷಣಕ್ಕಷ್ಟೇ ಸೀಮಿತವಾಗುತ್ತಿರುವ ಈ ದಿನಗಳಲ್ಲಿ, ಅಣ್ಣಪ್ಪ ದಂಪತಿಗಳು ಈ ಅಮೃತವಾಣಿಯನ್ನು ಅಕ್ಷರಶ: ಪಾಲಿಸಿಕೊಂಡು ಬರುತ್ತಿರುವುದಂತೂ ಸತ್ಯ. ಸದ್ಯಕ್ಕೆ ಇಲ್ಲಿರುವ 20ರಿಂದ 56ವರ್ಷ ಪ್ರಾಯದ, ವಿಭಿನ್ನ ಸಾಮರ್ಥ್ಯ ಹೊಂದಿದವರನ್ನು ಒಂದುಗೂಡಿಸಿ ಅವರನ್ನು ಖುಷಿಯಾಗಿರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ತನ್ನದಲ್ಲದ ತಪ್ಪಿಗೆ ವಿಕಲತೆಯನ್ನು ಅನುಭವಿಸುವವರು ಸಮಾಜದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅನುವಂಶೀಯತೆ, ಹೆರಿಗೆ ಸಮಯದಲ್ಲಿ ಆಗುವ ಎಡವಟ್ಟುಗಳು, ಬೆಳವಣಿಗೆ ಪ್ರಾಯದಲ್ಲಿ ಆಂತರಿಕ ಅಥವಾ ಬಾಹ್ಯ ಕಾರಣಗಳಿಂದ ಮೆದುಳಿಗೆ ಆಗುವಂತಹ ಹಾನಿ, ಹೇಗೆ ಹಲವಾರು ಕಾರಣಗಳಿಂದ ಸಾಮಾಜಿಕ, ಬೌದ್ಧಿಕ, ಮಾನಸಿಕ, ಜ್ಞಾನಾತ್ಮಕ, ಶಾರೀರಿಕ ಚಟುವಟಿಕೆಯಲ್ಲಿ ತನ್ನ ಸಮವಯಸ್ಕರಿಗಿಂತ ಗಣನೀಯವಾಗಿ ಹಿನ್ನಡೆ ಅನುಭವಿಸುವುದೇ  ಬುದ್ಧಿಮಾಂದ್ಯತೆ. ಮನೆಯ ಅಸಹಾಯಕ ಪರಿಸ್ಥಿತಿ, ಕೆಲಸದ ಒತ್ತಡಗಳಿಂದಾಗಿ  ಕೆಲವೊಮ್ಮೆ  ಅವರ ಆರೈಕೆಗಾಗಿ ಇನ್ನೊಬ್ಬರನ್ನು ಅವಲಂಬಿಸಬೇಕಾದ ಅನಿವಾರ್ಯತೆ.. ಬುದ್ಧಿಮಾಂದ್ಯರ ಸ್ಥಿತಿ ವೈರಿಗೂ ಬೇಡ. ಪರಿಸರದಿಂದ, ಒಡಹುಟ್ಟಿದವರಿಂದ, ಕೊನೆಗೆ ಹೆತ್ತವರಿಂದಲೇ ಪರಿತ್ಯಜಿಸಲ್ಪಡುವ, ಹೊರದೂಡಲ್ಪಟ್ಟು ಬೀದಿಪಾಲಾಗುವ ಸಂದರ್ಭಗಳಿವೆ. ಇಂತಹ ಯಾರಿಗೂ ಬೇಡದವರನ್ನು ತನ್ನೆಡೆಗೆ ಪ್ರೀತಿಯಿಂದ ಬರಸೆಳೆಯುವ ಸಂಸ್ಥೆಯಾಗಿದೆ ಈ ಪ್ರಜ್ಞಾ. ಇವರೂ ದೇವರ ಸೃಷ್ಟಿಯೇ, ಅವರಿಗೂ ಈ ಜಗತ್ತಿನಲ್ಲಿ ಬಾಳಿ ಬದುಕುವ ಹಕ್ಕಿದೆ, ಅವರಿಗೆ ತಾಳ್ಮೆಯಿಂದ ತರಬೇತಿ ಕೊಟ್ಟರೆ ಅವರೊಳಗಿರುವ ಪ್ರತಿಭೆಯನ್ನು ಹೊರತೆಗೆಯಬಹುದು ಎಂಬುದನ್ನು ಸಾಬೀತು ಪಡಿಸಲು ಈ ಸಂಸ್ಥೆ ಪಣತೊಟ್ಟಿದೆ.  ಅವರಿಗೆ, ದೇವರ ಪ್ರಾರ್ಥನಾ ಶ್ಲೋಕಗಳು, ಯೋಗ, ಭಜನೆ, ಆಟೋಟ, ನೃತ್ಯ, ಕರಕುಶಲ ಸಾಮಾಗ್ರಿಗಳ ತಯಾರಿ, ವಿವಿಧ ವಿನೋದಾವಳಿಗಳು, ಕಂಪ್ಯೂಟರ್ ಮೊದಲಾದುವುಗಳ ಬಗ್ಗೆ ಅನುಭವಸ್ಥರಿಂದ ತರಬೇತಿಯನ್ನು ನೀಡಲಾಗುತ್ತದೆ. ಅವರೇ  ತಯಾರಿಸಿದ ಶುಭಾಶಯ ಪತ್ರಗಳನ್ನು ಅವರ ಕೈಯಿಂದಲೇ ಅಲ್ಲಿಗೆ ಭೇಟಿ ಕೊಡುವವರಿಗಿತ್ತು ನಮಸ್ಕರಿಸಿದಾಗ ದಂಪತಿಗಳ ಮೊಗದಲ್ಲಿ ಸಾರ್ಥಕ್ಯ ಭಾವನೆ ಮೂಡುತ್ತದೆ. ಮೊಗಸಾಲೆಯಲ್ಲಿ ಇರಿಸಲ್ಪಟ್ಟ , ಹೂ ಗುಚ್ಛಗಳಂತಹ ತರಹೇವಾರಿ ವಸ್ತುಗಳು ನಮ್ಮನ್ನು ಆಶ್ಚರ್ಯ ಚಕಿತರನ್ನಾಗಿಸುತ್ತದೆ.. ಅಣ್ಣಪ್ಪ ದಂಪತಿಗಳ ಬಗ್ಗೆ  ಅಭಿಮಾನವೆನಿಸುತ್ತದೆ. ಕೆಲವರಂತೂ ಕಂಪ್ಯೂಟರಿನಲ್ಲಿ ಬರೆಯುವಂತಹ ಕೌಶಲ್ಯವನ್ನೂ ಹೊಂದಿರುವ ಬಗ್ಗೆ ಬಹಳ ಅಭಿಮಾನ, ಸಂತೋಷದಿಂದ ದಂಪತಿಗಳು ಹೇಳುವುದರಲ್ಲಿ, ತಮ್ಮ ಸ್ವಂತ ಮಕ್ಕಳ ಅಭಿವೃದ್ಧಿಯನ್ನು ಕಂಡು ಹೆಮ್ಮೆ ಪಡುವ ಹೆತ್ತವರ ಸಂಭ್ರಮವನ್ನು ಕಾಣಬಹುದು. ಪುತ್ತೂರು ತಾಲೂಕಿನ ಪ್ರಥಮ ಮಾನಸಿಕ ವಿಕಲಚೇತನರ ವೃತ್ತಿ ತರಬೇತಿ ಮತ್ತು ಪುನರ್ವಸತಿ ಕೇಂದ್ರವಾಗಿದೆ ಈ ಪ್ರಜ್ಞಾ ಶಾಲೆ. ಇದಕ್ಕೆ ಸರಕಾರದಿಂದ ಯಾವುದೇ ಅನುದಾನವು ಇನ್ನೂ ದೊರೆತಿಲ್ಲ.

ಅಣ್ಣಪ್ಪರವರ ಹುಟ್ಟೂರು ಕೊಡಗು ಜಿಲ್ಲೆಯ ವಿರಾಜಪೇಟೆ. ಪಿ.ಯು.ಸಿ. ಕಲಿಯಲೆಂದು ಉಡುಪಿಗೆ ಹೋದ ಅವರು ಸಂಜೆ ಕಾಲೇಜಲ್ಲಿ ಶಿಕ್ಷಣ ಮುಂದುವರಿಸುವುದರ ಜೊತೆಗೆ ಹಗಲು ವೇಳೆ ಬುದ್ಧಿಮಾಂದ್ಯ ಮಕ್ಕಳ ಸಂಪರ್ಕ ದೊರೆಯಿತು. ಜೊತೆಗೆ ತನ್ನ ದೊಡ್ಡಪ್ಪ ಮಗನಾದ ಸೋದರನೊಬ್ಬ ಬುದ್ಧಿಮಾಂದ್ಯನಾಗಿ ಪಟ್ಟ ಕಷ್ಟ ಹಾಗೂ ಅದರಲ್ಲೆ ಅವರ ದೇಹಾಂತ್ಯವಾದ ಘಟನೆಗಳು ಅವರ ಮೇಲೆ ಬಹಳ ಪರಿಣಾಮ ಬೀರಿದವು. ಅದುವೇ ಮುಂದಕ್ಕೆ ಅವರು ಬುದ್ಧಿಮಾಂದ್ಯ  ಮಕ್ಕಳ ಶಿಕ್ಷಣದಲ್ಲಿ ಡಿಪ್ಲೊಮಾ ಪದವಿಯನ್ನು ಪಡೆಯಲು ಕಾರಣವಾಯಿತೆನ್ನಬಹುದು. ಆ ಬಳಿಕ ಬೇರೆ ಬೇರೆ ಕಡೆಗಳಲ್ಲಿ ಸುಮಾರು 18 ವರ್ಷಗಳ ಕಾಲ ಬುದ್ಧಿಮಾಂದ್ಯರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.  ಪ್ರಸ್ತುತ ಮೂರೂವರೆ ವರ್ಷಗಳಿಂದ ತನ್ನ ಪತ್ನಿ ಜ್ಯೋತಿ ಮತ್ತು ಇಬ್ಬರು ಪುಟ್ಟ ಮಕ್ಕಳೊಂದಿಗೆ  ವಾಸವಾಗಿರುವ ಪುತ್ತೂರಿನ ಕರ್ಮಲದ ಬಾಡಿಗೆ ಮನೆಯಲ್ಲಿಯೇ ಈ ಪುನರ್ವಸತಿ ಕೇಂದ್ರವನ್ನೂ ನಡೆಸುತ್ತಿರುವುದು  ಮತ್ತು ಇಲ್ಲಿಯ  ಮಕ್ಕಳನ್ನು ತಮ್ಮ ಒಡಹುಟ್ಟಿದವರಿಗಿಂತಲೂ ಹೆಚ್ಚಾಗಿ ಪೋಷಿಸುತ್ತಿರುವುದು ಅವರ ವಿಶಾಲ ಮನಸ್ಸಿನ ದ್ಯೋತಕವಾಗಿದೆ. ಇವರ ಪತ್ನಿ ಸುಳ್ಯಪದವು ಕಡೆಯವರಾಗಿದ್ದು, ಪತಿಯ ಸೇವಾಕಾರ್ಯದಲ್ಲಿ ಸಂಪೂರ್ಣ ಕೈಜೋಡಿಸಿ  ತಮ್ಮ ಪುಟ್ಟ ಮಕ್ಕಳ ಪೋಷಣೆಯ ಜೊತೆಗೆ ಆನಂದದಿಂದ  ಈ ಕಾರ್ಯದಲ್ಲಿ ತೊಡಗಿಸಿಕೊಂಡು, ಅವರ ಬದುಕಲ್ಲಿ ನಿಜ ಅರ್ಥದಲ್ಲಿ ಸಹಚಾರಿಣಿಯಾಗಿರುವುದು ಅವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ. ಇಲ್ಲಿಯ ಮಕ್ಕಳ ಶಿಕ್ಷಣ, ಔಷಧಿ,ಪೋಷಣೆ ಇತ್ಯಾದಿ ಕಾರ್ಯದಲ್ಲಿ ಭಾಗಶ:  ವೆಚ್ಚಕ್ಕೆ, ಇವರೊಡನೆ ಹಲವು ಸಂಘ ಸಂಸ್ಥೆಗಳು ಕೈಜೋಡಿಸಿರುವುದು ಸಂತಸದ ಸಂಗತಿ.

ಈ ಪ್ರಜ್ಞಾ ಬುದ್ಧಿಮಾಂದ್ಯರ ಕೇಂದ್ರಕ್ಕೆ ಸ್ವಂತ ಕಟ್ಟಡ ಬಹಳ ಅವಶ್ಯವಾಗಿದೆ. ಇವರ ಕಾರ್ಯ ಚಟುವಟಿಕೆಗಳಿಗೆ ಸ್ವಲ್ಪ ವಿಶಾಲವಾದ ಸ್ಥಳ, ಇತರೆ ಖರ್ಚು ವೆಚ್ಚಗಳಿಗೆ ದಾನಿಗಳ ನೆರವು, ಸರಕಾರದಿಂದ ಮೂಲ ಸೌಲಭ್ಯಗಳು ದೊರೆತರೆ ಈ ವಿಕಲಚೇತನರ ಬದುಕನ್ನು ಸಹನೀಯವಾಗಿಸಬಹುದಾಗಿದೆ. ಸಮಾಜದ ವಿಶಾಲ ಹೃದಯಿಗಳ ಸ್ಪಂದನೆ, ನೆರವುಗಳು ಅವರ ಈ ಸೇವಾಕಾರ್ಯಕ್ಕೆ ಮತ್ತಷ್ಟು ಉತ್ಸಾಹವನ್ನು ತುಂಬುವುದರಲ್ಲಿ ಸಂಶಯವಿಲ್ಲ.

ಅಣ್ಣಪ್ಪ ಸಂಚಾರವಾಣಿ: 9164774533
ತಾವು ಉದಾರ ಮನದಿಂದ ನೀಡುವ ದೇಣಿಗೆಯನ್ನು ಗೌರವದಿಂದ ಸ್ವೀಕರಿಸಲಾಗುವುದು.
ಪುತ್ತೂರು ಕರ್ನಾಟಕ ಬ್ಯಾಂಕ್ ನಲ್ಲಿರುವ ಖಾತೆ ಸಂಖ್ಯೆ: 6042000100054201
IFSC CODE: KARB0000604

-ಶಂಕರಿ ಶರ್ಮ, ಪುತ್ತೂರು.

8 Responses

  1. Hema says:

    ಶ್ಲಾಘನೀಯ ಕೆಲಸ ಮಾಡುತ್ತಿರುವ ‘ಪ್ರಜ್ಞಾ’ ಸಂಸ್ಥೆಯ ಮಹನೀಯರಿಗೆ ಪ್ರಣಾಮಗಳು..

    • ಶಂಕರಿ ಶರ್ಮ says:

      ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು,

  2. ಬಿ.ಆರ್.ನಾಗರತ್ನ says:

    ಅತ್ಯಂತ ಉಪಯುಕ್ತ ಕಾರ್ಯಮಾಡುತ್ತಿರುವ ದಂಪತಿಗಳಿಗೆ ನನ್ನ ದೊಂದು ನಮಸ್ಕಾರ.ಹಾಗೇ ಇಲ್ಲಿನ ಮೊ.ನಂ.ನನಗೆ ಗೂತ್ತಿರುವ ಕೆಲವು ಸೇವಾ ಸಮಾಜಗಳಿಗೆ ಕಳಿಸುತ್ತೇನೆ ಮತ್ತು ನಮ್ಮಗೆಳತಿಯರ ಗುಂಪು ಸೇರಿಕೊಂಡು ಏನಾದರೂ ಕೊಂಚ ಸಹಾಯ ಮಾಡಲು ಪ್ರಯತ್ನಿಸುತ್ತೇನೆ.

    • ಶಂಕರಿ ಶರ್ಮ says:

      ತಮ್ಮ ಪ್ರೀತಿಯ ಪ್ರತಿಸ್ಪಂದನೆಗೆ ನಮನಗಳು ಮೇಡಂ. ತಮ್ಮ ಸಹಕಾರವು ಖಂಡಿತವಾಗಿಯೂ ಬಹಳ ಮೌಲ್ಯಯುತವಾದುದು..ಧನ್ಯವಾದಗಳು.

  3. Sayilakshmi says:

    ಇಂತಹ ಮಕ್ಕಳ ‌ಪಾಲನೆ ಪೋಷಣೆ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಸಹ. ಅಣ್ಣಪ್ಪ ಜ್ಯೋತಿ ದಂಪತಿಗಳ ಸೇವಾಕಾರ್ಯ ಬಲಗೊಳ್ಳಲಿ. ನಾನು ನನ್ನ ನೆರವನ್ನು ವಿಸ್ತರಿಸುವೆ. ಗೂಗಲ್ ಪೇ ನಲ್ಲಿ ಲಭ್ಯವಿರುವರೇ?
    ಒಳ್ಳೆಯ ಲೇಖನ. ಅಂತ:ಕರಣ ಕಲಕಿತು.

    • ಶಂಕರಿ ಶರ್ಮ says:

      ತಮ್ಮ ಪ್ರೀತಿಯ ನೆರವು ಬಹಳ ಅಮೂಲ್ಯವಾದುದು ಮೇಡಂ..ಧನ್ಯವಾದಗಳು. ಲೇಖನದ ಕೊನೆಯಲ್ಲಿ ನಮೂದಿಸಿದ ಚರವಾಣಿಗೆ ಸಂಪರ್ಕಿಸಿರಾ?

  4. ನಯನ ಬಜಕೂಡ್ಲು says:

    ಉತ್ತಮ ವಿಚಾರದೊಂದಿಗೆ ಸಹೃದಯರ ಪರಿಚಯವನ್ನು ಮಾಡಿಸಿರುವಿರಿ.

    • ಶಂಕರಿ ಶರ್ಮ says:

      ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು, ನಯನ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: