‘ನೆಮ್ಮದಿಯ ನೆಲೆ’-ಎಸಳು 11
ನನ್ನವರಿಗೆ ಸುದ್ಧಿ ಮುಟ್ಟಿಸಿ ನಾಳೆಯೇ ಭಾನುವಾರ, ಮರೆತು ಎಂದಿನಂತೆ ಹೊರಗೆ ಹೊರಟುಬಿಡಬೇಡಿ ಎಂದೆ. ಅದಕ್ಕವರು ನಗುತ್ತಾ ‘ನೋಡು ಸುಕನ್ಯಾ, ನೀನು ಬೇಕಾದರೆ ನಿನ್ನ ಪಟಾಲಂ ಜೊತೆ ಎಲ್ಲಿಗಾದರೂ ಹೋಗಿಬಾ. ನಾನೇನೂ ಅಡ್ಡಿಪಡಿಸುವುದಿಲ್ಲ’ ಎಂದರು.
ಆಹಾ ! ಬೇರೆ ದಿನಗಳಾಗಿದ್ದರೆ ಇವರು ಹೇಳಿದಂತೆ ಮಾಡಬಹುದಿತ್ತು. ಆದರೆ ವೀಕೆಂಡ್‌ನಲ್ಲಿ ಮನೆಯವರ ಜೊತೆ ಇರುವುದು ಬಿಟ್ಟು ನನ್ನ ಜೊತೆಗೆ ಯಾರು ಬರುತ್ತಾರೆ. ಫೂಲಿಷ್ ಸಜೆಷನ್. ಹೀಗೆ ಆಲೋಚನಾ ಲಹರಿಯಲ್ಲಿರುವಾಗಲೇ ‘ಹಲೋ..ಮೇಡಂ, ಇದೇನು ಒಮ್ಮೊಮ್ಮೆ ಎಲ್ಲೋ ಕಳೆದುಹೋಗಿಬಿಡ್ತೀರಾ’ ಎಂದು ರೇಗಿಸಿ ‘ಆ ಹುಡುಗ ಎಷ್ಟು ಹೊತ್ತಿಗೆ ಬರುತ್ತಾನಂತೆ?’ ಎಂದು ಕೇಳಿದರು ನನ್ನವರು. “ತಿಂಡಿಗೇ ಬರುತ್ತಾನಂತೆ” ಎಂದೆ. ‘ಆಯಿತು ಬಿಡು ನಮ್ಮ ಇಬ್ಬರೂ ಮಕ್ಕಳೂ ತಮ್ಮ ತಮ್ಮ ಬಾಳಸಂಗಾತಿಗಳನ್ನು ತಾವೇ ಆರಿಸಿಕೊಂಡು ನಮ್ಮ ಜವಾಬ್ದಾರಿಯ ಹೊರೆಯನ್ನು ಕಡಿಮೆ ಮಾಡಿದ್ದಾರೆ’ಎಂದರು. ಅದನ್ನು ಕೇಳಿದ ನಾನುಅದು ನಿರಾಸೆಯೋ, ಇಲ್ಲ ಎಂದಿನ ನಿರ್ಲಿಪ್ತತೆಯೋ ತಿಳಿಯದೆ ಸುಮ್ಮನಾದೆ.
ಬೆಳಗ್ಗೆ ಬೇಗ ಎದ್ದು ಎಲ್ಲ ಕೆಲಸಗಳನ್ನು ಮುಗಿಸಿ ತಿಂಡಿಗೆ ಬೇಕಾದ ಚಟ್ನಿ, ಪಲ್ಯಗಳನ್ನು ಸಿದ್ಧಪಡಿಸಿದೆ. ನನ್ನವರೂ ಸ್ನಾನ ಮುಗಿಸಿ ಪತ್ರಿಕೆ ಓದುವುದರಲ್ಲಿ ಮಗ್ನರಾಗಿದ್ದರು. ಗಂಟೆ ಒಂಬತ್ತಾದರೂ ಆಸಾಮಿಯ ಪತ್ತೆಯಿಲ್ಲ. ಪ್ರತಿದಿನ ಬೆಳಗಿನ ತಿಂಡಿಯನ್ನು ಬೇಗ ತಿಂದು ಅಭ್ಯಾಸವಿದ್ದ ನನ್ನವರು ಗಳಿಗೆಗೊಮ್ಮೆ ಬಾಗಿಲ ಕಡೆ ದೃಷ್ಟಿಹಾಯಿಸುತ್ತಿದ್ದುದನ್ನು ಗಮನಿಸಿದ ನಾನು ಈಗಿನ ಕಾಲದ ಹುಡುಗರಿಗೆ ಸಮಯ ಪ್ರಜ್ಞೆಯೇ ಇಲ್ಲ. ಅವನನ್ನು ಕರೆದುಕೊಂಡು ಬರುತ್ತೇನೆಂದು ಎಂಟುಗಂಟೆಗೇ ಮನೆಬಿಟ್ಟ ಮಗಳೂ ಇನ್ನೂ ಬರಲಿಲ್ಲ ಎಂದು ಅಂದುಕೊಳ್ಳುತ್ತಿರುವಾಗಲೇ ಹೊರಗಡೆ ಗೇಟು ತೆರೆದ ಸದ್ದಾಯಿತು. ಸುಕನ್ಯಾ ಬಂದಳೂಂತ ಕಾಣುತ್ತೆ ಎಂದು ಓದುತ್ತಿದ್ದ ಪೇಪರನ್ನು ಟೀಪಾಯಿಯ ಮೇಲಿರಿಸಿ ಮುಂಬಾಗಿಲು ತೆರೆಯಲು ಹೋದರು. ನಾನೂ ಅವರನ್ನು ಹಿಂಬಾಲಿಸಿದೆ. ಕಾಲಿಂಗ್ ಬೆಲ್ ಸದ್ದಾಗುತ್ತಿದ್ದಂತೆ ಬಾಗಿಲು ತೆರೆದ ನನ್ನವರು ಅವರನ್ನು ಒಳಕ್ಕೆ ಆಹ್ವಾನಿಸಿದರು. ಆ ಹುಡುಗನ ಕೈಹಿಡಿದೇ ಒಳಗೆ ಪ್ರವೇಶಿಸಿದ ನನ್ನ ಕುವರಿ “ಭರತ್ ಇವರೇ ನೋಡು ನನ್ನ ಅಪ್ಪ, ಅಮ್ಮ ” ಎಂದು ನಮ್ಮ ಪರಿಚಯ ಮಾಡಿಸಿದಳು.
“ಓ ! ನಿಮಗೆ ಕನ್ನಡ ಬರುತ್ತಾ?” ಅಂದರು ನನ್ನವರು.
“ಹೌದು ಅಂಕಲ್, ನಾನು ಓದಿದ್ದೆಲ್ಲಾ ಬಹುತೇಕ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ. ನನ್ನ ಓದಿಸಿ ಸಲಹುತ್ತಿರುವವರು ಕರ್ನಾಟಕದವರೇ” ಎಂದು ಹೇಳಿದ.
ನಾನು ಅವನನ್ನೇ ದೃಷ್ಟಿಸಿ ನೋಡೇ ನೋಡಿದೆ. ನನ್ನ ಮಗಳು ಮಗನಷ್ಟು ಎತ್ತರವಿಲ್ಲದಿದ್ದರೂ ನನ್ನಷ್ಟು ಕುಳ್ಳಿಯಲ್ಲ. ರೂಪವಂತೆಯರ ಸಾಲಿಗೆ ಸೇರುವಂತಿದ್ದಳು. ಕೆಂಪನೆಯ ಮೈಬಣ್ಣ, ಪುಟ್ಟಬಾಯಿ, ನೀಳವಾದ ನಾಸಿಕ, ಕಾಂತಿಯುಕ್ತ ಕಣ್ಣುಗಳು, ನಗುಮುಖ, ದಟ್ಟವಾದ ಕಪ್ಪು ಕೂದಲು, ಮಿಗಿಲಾಗಿ ಯಾವ ಆಭರಣವನ್ನೂ ಹಾಕಿಕೊಳ್ಳದ ನಿರಾಭರಣ ಸುಂದರಿ. ಈ ಹುಡುಗನ ಬಣ್ಣ, ಎತ್ತರ, ಲಕ್ಷಣ ಎಲ್ಲವೂ ಓ.ಕೆ. ಆದರೆ ಬಕ್ಕತಲೆ ಎಕೆ ಎನ್ನಿಸಿತು. ಅದೂ ಇಷ್ಟು ಚಿಕ್ಕವಯಸ್ಸಿಗೇ.( ಅವನ ನಿಖರವಾದ ವಯಸ್ಸಂತೂ ತಿಳಿಯದು. ಮಗಳಿಗೆ ತಿಳಿದಿದ್ದರೂ ಅವಳು ಹೇಳದೇ ಇದ್ದಾಳೋ) ಲೌವ್ ಈಸ್ ಬ್ಲೈಂಡ್ ಹಾಗೇ ಲವರ್ಸ್ ಆರ್ ಆಲ್ಸೋ ಬ್ಲೈಂಡ್ ಅಂತ ಸೇರಿಸಬಹುದು ಎಂದುಕೊಂಡೆ. ಉಭಯ ಕುಶಲೋಪರಿ ಮುಗಿಸಿ ತಿಂಡಿ ಸಿದ್ಧಪಡಿಸಲು ಒಳನಡೆದೆ. ಕೈಗಳಲ್ಲಿ ದೋಸೆ ಹಾಕುತ್ತಿದ್ದರೂ ಕಿವಿಗಳನ್ನು ಹೊರಗೆ ನಡೆಯುತ್ತಿದ್ದ ಸಂಭಾಷಣೆ ಕೇಳಲು ಹರಿಯಬಿಟ್ಟಿದ್ದೆ. ಆ ಹುಡುಗನ ಹೆತ್ತವರು ಅಪಘಾತವೊಂದರಲ್ಲಿ ತೀರಿಹೋದರೆಂದು, ಅಜ್ಜ, ಅಜ್ಜಿಯ ಆಶ್ರಯದಲ್ಲಿ ಸ್ವಲ್ಪ ಕಾಲ ಇದ್ದು ಅವರ ಕಾಲಾನಂತರ ದೂರದ ಸಂಬಂಧಿಯೊಬ್ಬರು ಅವನನ್ನು ಸಾಕಿ ಸಲಹಿ ಈ ಹಂತಕ್ಕೆ ತಂದಿದ್ದಾರೆಂದು, ಎಂ.ಬಿ.ಎ., ಮಾಡಿ ನನ್ನ ಮಗಳು ಕೆಲಸ ಮಾಡುತ್ತಿರುವ ಅಫೀಸಿನಲ್ಲಿ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದೇನೆಂದು ಹೇಳಿದ. ಇಷ್ಟಾನಿಷ್ಟಗಳನ್ನೆಲ್ಲ ನನ್ನ ಮಗಳ ಹೇಳಿಕೆಯಂತೆಯೇ ಇತ್ತು. ಏನೂ ಹೊಸದಿರಲಿಲ್ಲ. ಆದರೆ ತಿಂಡಿ ಕಾಫಿ ಮುಗಿದ ಮೇಲೆ ಇಡೀಮನೆಯನ್ನೆಲ್ಲ ಸುತ್ತಾಡಿದವನೇ ನನ್ನವರ ರೂಮಿಗೆ ಹೋದ. ಆನಂತರದ ಮಾತುಗಳು ನನಗೆ ಕೇಳಿಸಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಹೊರಟ ಆ ಹುಡುಗನನ್ನು ಬೀಳ್ಕೊಡಲು ನನ್ನ ಮಗಳೂ ಅವನ ಹಿಂದೆಯೇ ಹೋದಳು.
ಅವರಿಬ್ಬರೂ ಹೊರಟುಹೋದ ಮೇಲೆ ನನ್ನವರು “ಸುಕನ್ಯಾ, ನಮ್ಮ ಮಗನಂತೆಯೇ ಇವರೂ ತಾವು ಹೇಗೆ ಮದುವೆಯಾಗಬೇಕೆಂದು ನಿರ್ಧರಿಸಿಬಿಟ್ಟಿದ್ದಾರೆ “ಎಂದರು. ನಾನು “ಅಂದರೆ ಇವರ್‍ಯಾವ ಊರಿನಲ್ಲಿ ಹೇಗೆ ಮದುವೆಯಾಗುತ್ತಾರಂತೆ?” ಎಂದು ಕೇಳಿದೆ.
“ಯಾವ ಊರಿಗೂ ಹೋಗುವ ಹಾಗಿಲ್ಲ. ಇಲ್ಲೇ ಮೈಸೂರಿನಲ್ಲಿರುವ ಒಂಟಿಕೊಪ್ಪಲಿನ ಶ್ರೀವೆಂಕಟೇಶ್ವರಸ್ವಾಮಿಯ ದೇವಸ್ಥಾನದಲ್ಲಿ ಮುಂದಿನ ತಿಂಗಳು ಕೊನೆಯ ಭಾನುವಾರ ಬೆಳಗ್ಗೆ ತಾಳಿಭಾಗ್ಯ, ಸಂಜೆ ‘ಸ್ಕೌಟ್ ಅಂಡ್ ಗೈಡ್ಸ್’ ಮೈದಾನದ ಪೆಂಡಾಲಿನಲ್ಲಿ ಗೆಟ್‌ಟುಗೆದರ್. ಆನಂತರ ಅವರಿಬ್ಬರೂ ಹನಿಮೂನಿಗೆ ಕಾಶ್ಮೀರಕ್ಕೆ ಹೋಗುತ್ತಾರಂತೆ. ಎಲ್ಲವೂ ಬುಕ್ಕಾಗಿದೆ” ಎಂದರು.
“ಅರೆ ಇನ್ನು ಒಂದು ತಿಂಗಳೂ ಇಲ್ಲ, ಇನ್ವಿಟೇಷನ್, ಬಂಧುಬಳಗದವರಿಗೆ ಕರೆಕಳುಹಿಸುವುದು ಬೇಡವೇ? ಹೋಗಲಿ ಅವಳಣ್ಣ ಆದಿಗೆ ಮೊದಲೇ ತಿಳಿಸುವುದು ಯಾವಾಗ? “ನನ್ನವರು ಮಾತನ್ನು ತಡೆದು ಹೋಲ್ಡಾನ್, ಸುಕನ್ಯಾ “ಈ ಎಲ್ಲ ವಿಚಾರಗಳು ಅವನಿಗೆ ಆಗಲೇ ಗೊತ್ತಾಗಿವೆ. ಅವರೆಲ್ಲ ಕಸಿನ್‌ಗಳಿಗೂ ಸುದ್ಧಿ ಹರಡಿವೆ” ಎಂದರು.
“ಓ ! ಹೆತ್ತವರು ಹೇಳುವ ಕರ್ತವ್ಯವನ್ನೂ ಅವಳೇ ಪೂರೈಸಿದ್ದಾಳೆಂದ ಹಾಗಾಯಿತು” ಎಂದೆ. ಮನಸ್ಸಿಗೆ ನೋವಾಯಿತು. “ಬಿಡು ಸುಕನ್ಯಾ, ಇದರ ಬಗ್ಗೆ ಮತ್ತೆ ಗುದ್ದಾಡುವುದು ಬೇಡ. ಹೇಗೆ ಆಗುತ್ತೋ ಹಾಗೆ ನಾವೇ ನಡೆದುಕೊಂಡರಾಯ್ತು. ಅವರೆಲ್ಲ ಯಾರ್‍ಯಾರಿಗೆ ಹೇಳಬೇಕೋ ಅವರಿಗೆಲ್ಲ ವಾಟ್ಸಪ್ಪಿನಲ್ಲಿ ಮೆಸೇಜ್ ಕಳಿಸಿದ್ದಾರಂತೆ. ನಾನು ನೀನು ನಮಗೆ ಬೇಕಾದವರಿಗೆ ಫೋನ್ ಮಾಡಿಕೊಳ್ಳೋಣ. ತಿಳಿದಂತೆ ಸಿದ್ಧ ಮಾಡಿಕೋ” ಎಂದು ಎಂದಿನಂತೆ ತಮ್ಮ ಸ್ಟೇಟ್‌ಮೆಂಟ್ ಕೊಟ್ಟು ಹೊರನಡೆದರು.
ಈ ವ್ಯವಸ್ಥೆಯನ್ನೆಲ್ಲ ನನ್ನ ಮುಂದೆ ನನ್ನ ಮುದ್ದು ಕುವರಿ ಹೇಳಲೇ ಇಲ್ಲವಲ್ಲ. ಇವಳು ನನ್ನ ಮಗ ಮಾಡಿದ್ದಕ್ಕಿಂತ ಬೇಗ ಹಾಗೂ ವಿಭಿನ್ನವಾಗಿ ಮಾಡಿದ್ದಾಳೆ ಎಂದುಕೊಂಡು ಒಂದು ನಿಡಿದಾದ ನಿಟ್ಟುಸಿರು ಬಿಟ್ಟು ಮಿಕ್ಕ ಕೆಲಸಗಳ ಕಡೆಗೆ ಗಮನ ಹರಿಸಿದೆ.
ಮಗನ ಮದುವೆಯ ಸಮಯದಲ್ಲಿ ಸೊಸೆಯ ಇಚ್ಛೆಯಂತೆ ಬೇಕುಬೇಡಗಳನ್ನು ತಯಾರಿ ಮಾಡಿಕೊಂಡಿದ್ದೆ. ಈಗ ಮಗಳ ಆದೇಶದಂತೆ ಕೊಡುವುದು ಬಿಡುವುದನ್ನು ಸಿದ್ಧಪಡಿಸಿಕೊಂಡೆ. ಅವಳ ವಿವಾಹದ ಬಗ್ಗೆ ಅಂದಿನಿಂದ ಮತ್ತೆ ಚಕಾರವೆತ್ತದಂತೆ ಎಚ್ಚರವಹಿಸಿದೆ. ನನ್ನಪ್ಪನಿಗೂ ಹುಡುಗನ ಫೋಟೋ ತೋರಿಸಿದೆ. ಅದನ್ನು ನೋಡಿದ ಅವರು ನೀನು ವಿದೇಶಕ್ಕೆ ಹೋದ ಸಮಯದಲ್ಲಿ ಮಾಧವಿ ನಮ್ಮ ಮನೆಯಲ್ಲಿದ್ದಾಗ ಅವನು ಹಲವಾರು ಸಾರಿ ಬಂದು ಹೋಗಿದ್ದನೆಂದರು.
“ಹೌದೇ? ನೀವು ಈ ವಿಚಾರವನ್ನು ಒಂದು ಸಾರೀನೂ ಹೇಳಲೇ ಇಲ್ಲವಲ್ಲಾ?” ಎಂದೆ.
“ಹೇ..ಹೇ.. ನಿನ್ ಮಗಳ ಸ್ನೇಹಿತರ ಸೈನ್ಯದಲ್ಲಿ ಇವನೂ ಒಬ್ಬನಷ್ಟೇ. ಹಾಗಂತ ಅಂದುಕೊಂಡಿದ್ದೆ. ಇವನೇ ಅವಳ ಬಾಳಸಂಗಾತಿಯಾಗಿ ಆಯ್ಕೆಯಾಗುತ್ತಾನೆಂದು ನನಗೆ ತಿಳಿಯಲಿಲ್ಲ. ಹೋಗಲಿ ಬಿಡು ಇನ್ನಾದರೂ ಸೈನ್ಯ ಕಟ್ಟಿಕೊಂಡು ಅಲೆದಾಡುವುದನ್ನು ಬಿಡಬಹುದು. ತನ್ನದೇ ಒಂದು ನೆಲೆ ಕಟ್ಟಿಕೊಳ್ಳುತ್ತಿದ್ದಾಳಲ್ಲ. ಸಂತೋಷದಿಂದ ಕಲ್ಯಾಣ ಮಾಡಿ ಕಳುಹಿಸಿಕೊಡು” ಎಂದರು.
ನನ್ನ ಮಗಳ ಮದುವೆ ತರಾತುರಿಯಲ್ಲಿ ನಡೆದರೂ ನನ್ನವರ ಮತ್ತು ನನ್ನ ಕುಟುಂಬವರ್ಗದವರು ಆಗಮಿಸಿದ್ದು ಬಹಳ ಸಂತಸವಾಗಿತ್ತು. ಮೇಲಾಗಿ ಎರಡೂ ಕುಟುಂಬದ ಕಡೆಯ ಮಕ್ಕಳು ಸಾಕಷ್ಟು ಬದಲಾವಣೆ ತಂದಿದ್ದವು. ಅದು ಇಷ್ಟವಿರಲಿ ಇಲ್ಲದಿರಲಿ ಹಿರಿಯರು ಅದಕ್ಕೆ ತಲೆಬಾಗಿದ್ದರು. ಹೀಗಾಗಿ ನಮ್ಮ ಮಕ್ಕಳ ಆಯ್ಕೆ, ಮದುವೆಯ ವ್ಯವಸ್ಥೆಗಳ ಬಗ್ಗೆ ಕಾಲೆಳೆಯುವ ಮಾತುಗಳು ಬರಲಿಲ್ಲ. ಮಗ, ಸೊಸೆ, ಮೊಮ್ಮಗ ಬಂದಿದ್ದು ಮದುವೆ ಮುಗಿದ ನಂತರ ಒಂದುವಾರ ಮೈಸೂರಿನಲ್ಲಿದ್ದು ಹಿಂತಿರುಗಿದ್ದು ಸಂಭ್ರಮಕ್ಕೆ ರೆಕ್ಕೆ ಮೂಡಿಸಿತ್ತು.
ಮದುವೆಯಾದ ಮಗಳು ಅಳಿಯ ಬೇರೆ ಮನೆಯೊಂದನ್ನು ಮಾಡಿದ್ದರೂ ಅವರ ಊಟತಿಂಡಿ ನಮ್ಮಲ್ಲಿಯೇ ನಡೆಯುತ್ತಿತ್ತು. ಶಯನಕ್ಕೆ ಮಾತ್ರ ಮನೆ ಇದ್ದಂತೆ ಇತ್ತು. ಹೀಗೇ ವರ್ಷಗಳೆರಡು ಉರುಳಿದವು. ಈ ಅಂತರದಲ್ಲಿ ನನ್ನ ಮಗಳ ಕೈಹಿಡಿದ ಅಳಿಯನ ಗುಣಸ್ವಭಾವಗಳ ಪರಿಚಯವಾಯಿತು. ಅವನಿಗೆ ‘ಮೂಗುಮುಟ್ಟಿದ ಕೈಯಲ್ಲಿ ಮುಸಣೀನೂ ಮುಟ್ಟಲ್ಲ’ ಎನ್ನುವಷ್ಟರಮಟ್ಟಿಗೆ ಅತಿಯಾದ ಸ್ವಚ್ಛತೆಯ ಹುಚ್ಚು. ಪ್ರತಿಯೊಂದು ಕೆಲಸವೂ ತಲೆ ಕೆಡುವಷ್ಟು ನಿಧಾನ. ಬಹಳಷ್ಟು ನೆಗೆಟಿವ್ ಆಲೋಚನೆಗಳು. ಆಹಾ ಏನಂತಾ ಒಪ್ಪಿದ್ದಾಳೋ ಇವನನ್ನು ನನ್ನ ಸುಪುತ್ರಿ? ಎಂದುಕೊಳ್ಳುತ್ತಿದ್ದೆ.
ಈಗಾಗಲೇ ಲಘು ಹೃದಯಾಘಾತವಾಗಿ ಚಿಕಿತ್ಸೆ ಪಡೆದಿದ್ದ ನನ್ನ ದೊಡ್ಡಣ್ಣನಿಗೆ ಮತ್ತೊಮ್ಮೆ ಹೃದಯಾಘಾತವಾಗಿ ಈ ಬಾರಿ ಚೇತರಿಸಿಕೊಳ್ಳದೆ ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ಹೊರಟುಹೋದ. ಇದರಿಂದ ನಮ್ಮಪ್ಪ ಹೆಚ್ಚು ಜರ್ಝರಿತರಾದರು. ಅವರ ಯೋಗಕ್ಷೇಮ ನನ್ನ ಹೊಣೆಯೆಂದು ನಾನು ಭಾವಿಸಿದೆ. ಅವರನ್ನು ಒಂಟಿಯಾಗಿರಲು ಬಿಡದೆ ನಮ್ಮ ಮನೆಗೆ ಕರೆದುಕೊಂಡು ಬರುವುದು ಆಗುವುದಿಲ್ಲ ಎಂದು ನಾನೇ ಅವರಿದ್ದ ಮನೆಗೆ ಹೋಗಿಬಂದು ಮಾಡುತ್ತಿದ್ದೆ. “ಆ ಹೋಟೆಲ್ ಕೆಲಸ ಇನ್ನೆಷ್ಟು ವರ್ಷಮಾಡುತ್ತೀರಿ, ಬಿಟ್ಟುಬಿಡಿ” ಎಂದರೆ “ಇಲ್ಲಾ ಮಗಳೇ ಲೆಕ್ಕಪತ್ರದ ಕೆಲಸದಲ್ಲಿ ತೊಡಗಿಕೊಂಡ ಅವಧಿಯೇ ನನಗೆ ಸಮಾಧಾನ ತರುತ್ತದೆ” ಎನ್ನುತ್ತಿದ್ದರು. ಆದರೇಕೋ ತಮ್ಮ ಕಣ್ಮುಂದೆಯೇ ಮಗನ ಸಾವಿನಿಂದ ಚೇತರಿಸಿಕೊಳ್ಳಲಿಕ್ಕಾಗಲಿಲ್ಲವೋ ಅಥವಾ ತಮ್ಮ ವಯೋಸಹಜ ಕಾರಣವೋ ತಮ್ಮ ತೊಂಭತ್ತನೇ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಕಾಲವಾದರು.
ಕೇವಲ ಆರುತಿಂಗಳ ಅವಧಿಯಲ್ಲಿ ನನ್ನ ಒಡಹುಟ್ಟಿದವ, ಮತ್ತು ಹೆತ್ತಪ್ಪನನ್ನು ಕಳೆದುಕೊಂಡಿದ್ದು ನನಗೆ ಅತೀವ ದುಃಖವನ್ನುಂಟು ಮಾಡಿತು. ಅದೇ ವೇಳೆಯಲ್ಲಿ ವಿದೇಶದಲ್ಲಿದ್ದ ಮಗನಿಂದ ನಾನು ಅಲ್ಲಿಗೆ ಬರಬೇಕೆಂಬ ಮತ್ತೆ ಒತ್ತಾಯದ ಕರೆ ಬಂತು. ಈ ಸಾರಿ ನನ್ನವರೇ ಆಸಕ್ತಿ ವಹಿಸಿ ಸ್ವಲ್ಪಮಟ್ಟಿಗೆ ನನ್ನ ದುಗುಡ ಮರೆತಂತಾಗುತ್ತದೆಂದು ನನ್ನನ್ನು ಅಲ್ಲಿಗೆ ಕಳುಹಿಸಲು ಸಿದ್ಧತೆ ನಡೆಸಿದರು. ನನಗೂ ಬದಲಾವಣೆ ಬೇಕಿತ್ತು. ಮಗಳ ಜವಾಬ್ದಾರಿಯೂ ಈಗ ಮುಗಿದಿತ್ತು. ಹೆಚ್ಚು ಹೇಳಿಸಿಕೊಳ್ಳದೆ ಹೊರಡಲು ಸಿದ್ಧವಾದೆ. ಈ ಸಾರಿ ನನ್ನವರು ಜೊತೆಗೆ ಬರಲು ವಾರ್ಷಿಕ ಪರೀಕ್ಷೆಗಳ ಸಮಯ, ಕಾಲೇಜಿನ ಕೆಲಸದ ಬಾಹುಳ್ಯ ಹೆಚ್ಚಾಗಿತ್ತು. ಅದಕ್ಕಾಗಿ ಅವರ ಗೆಳೆಯರೊಬ್ಬರ ಹೆಂಡತಿ ‘ವತ್ಸಲ’ರವರು ಜೊತೆಗೂಡಿದ್ದರು. ಅವರು ಈಗಾಗಲೆ ಮೂರು ನಾಲ್ಕು ಬಾರಿ ಅಲ್ಲಿಗೆ ಹೋಗಿ ಬಂದಿದ್ದರು. ನನಗೆ ಮಾರ್ಗದರ್ಶಿಯಾದರು. ಆಗ ನನ್ನ ಮಗ ನ್ಯೂಜೆರ್ಸಿಯಿಂದ ಸೆಂಟ್‌ಕೂಯಿಸ್‌ಗೆ ತನ್ನ ವಾಸ್ತವ್ಯವನ್ನು ಬದಲಾಯಿಸಿದ್ದ. ಸೊಸೆ ಪ್ರಣತಿಯೂ ಅಲ್ಲಿಯೇ ಬೇರೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇಲ್ಲಿ ಎಲ್ಲ ರೀತಿಯಲ್ಲಿ ನಮಗೆ ಅನುಕೂಲವಾಗಿದೆಯೆಂದು ಫೋನ್ ಮಾಡಿದಾಗ ಮಗ ಹೇಳಿದ್ದ. ವತ್ಸಲಾರ ಮಗನೂ ಅಲ್ಲಿಯೇ ಇದ್ದುದರಿಂದ ನಿರ್ಯೋಚನೆಯಿಂದ ನನ್ನವರು ನನ್ನನ್ನು ಕಳುಹಿಸಿದರು. ವಿಮಾನದಲ್ಲಿ ಕಿಟಕಿಯ ಕಡೆಯ ಸೀಟು ನನ್ನದಾಗಿದ್ದರೂ ಮೊದಲ ಸಲ ಕುಳಿತಾಗ ಆದ ರೋಮಾಂಚನವಾಗಲಿಲ್ಲ. ಕಾರಣ ಅಪ್ಪ. ಅಣ್ಣನ ಅಗಲಿಕೆಯ ನೋವು ನನ್ನ ಮನದಲ್ಲಿ ಇನ್ನೂ ಆರಿರಲಿಲ್ಲ. ಪ್ರಯಾಣದಲ್ಲಿ ಯಾವ ತೊಂದರೆಯಾಗದೇ ತಲುಪಬೇಕಾದ ತಾಣವನ್ನು ತಲುಪಿದೆವು. ಅಲ್ಲಿ ನಮಗಾಗಿ ನಮ್ಮನಮ್ಮ ಮಕ್ಕಳು ಬಂದಿದ್ದರು. ಒಬ್ಬರಿಗೊಬ್ಬರು ವಿದಾಯ ಹೇಳಿ ಮನೆಯ ಹಾದಿ ಹಿಡಿದೆವು.
ನನ್ನನ್ನು ಸ್ವಾಗತಿಸಲು ಸೊಸೆ ಮೊಮ್ಮಗ ಬರಬಹುದೆಂದು ನಿರೀಕ್ಷಿಸಿದ್ದ ನನಗೆ ಮಗನೊಬ್ಬನನ್ನೇ ಕಂಡು ನಿರಾಸೆಯಾಯಿತು. ಏನೋ ಉದ್ಯೋಗದಲ್ಲಿರುವವರ ಕಾರುಬಾರು, ಬಿಡುವಿರಲಾರದು ಎಂದು ಏನೂ ಕೇಳದೆ ಮನೆಗೆ ಬಂದೆ. ಬಾಗಿಲು ತೆರೆಯುತ್ತಿದ್ದಂತೆ ನನ್ನನ್ನು ಕಂಡು ವಿಷ್ ಮಾಡಿದ ಸೊಸೆಯನ್ನು ನೋಡಿದೆ. ತುಂಬುಗರ್ಭಿಣಿಯಂತೆ ಕಂಡಳು. ಪ್ರಶ್ನಾರ್ಥಕವಾಗಿ ಮಗನ ಕಡೆ ನೋಡಿದೆ. “ಹೌದಮ್ಮಾ ಡ್ಯೂಡೇಟ್, ಟ್ವಿನ್ಸ್ ಎಂದಿದ್ದಾರೆ ಡಾಕ್ಟರ್. ಒಂದು ಗಂಡು, ಒಂದು ಹೆಣ್ಣಂತೆ” ಎಂದ.
ಅವನು ಹೇಳಿದ್ದು ಕೇಳಿದ ನಾನು “ಅಲ್ಲವೋ ಆದಿ, ನೀನು ಫೋನ್ ಮಾಡಿದಾಗ ಒಂದು ಸಾರಿಯೂ ಹೀಗೇ ಅಂತ ಹೇಳಲಿಲ್ಲವಲ್ಲೋ. ಸ್ವಲ್ಪ ತಯಾರಿ ಮಾಡಿಕೊಂಡು ಬರುತ್ತಿದ್ದೆ “ಎಂದೆ.
“ನೀವು ಅಲ್ಲಿ ಉಂಟಾಗಿರುವ ಪರಿಸ್ಥಿತಿಗಳಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿರುತ್ತೀರಿ. ಇತ್ತೀಚೆಗೆ ಅಲ್ಲಿ ನಡೆದುಹೋದ ಘಟನೆಗಳು ನನ್ನನ್ನು ಏನೂ ಹೇಳದಂತೆ ಬಾಯಿಕಟ್ಟಿದವು. ಈಗೇನು ನೀವು ಬಂದಾಯಿತಲ್ಲ. ನಿಮಗೇನು ಬೇಕೋ ತಯಾರಿ ಇಲ್ಲಿದ್ದೇ ಮಾಡಿಕೊಂಡರಾಯಿತು. ಇಲ್ಲಿಯೂ ಇಂಡಿಯನ್ ಸ್ಟೋರ್‌ಗಳಿವೆ. ಎಲ್ಲಾ ಸಾಮಾನುಗಳು ಸಿಗುತ್ತವೆ. ನಿಮಗೆ ಆಯಾಸವಾಗಿರಬೇಕು ಸ್ನಾನ ಮಾಡಿಫ್ರೆಶ್ ಆಗಿ ಊಟಮುಗಿಸಿ ನಿದ್ರೆ ಮಾಡಿ” ಎಂದು ಮುಂದಿನ ಮಾತಿಗೆ ಅವಕಾಶ ಕೊಡದಂತೆ ತನ್ನ ರೂಮಿಗೆ ಹೋದ.
ಈ ಸಾರಿಯಾದರೂ ಸುತ್ತಮುತ್ತಲಿನ ಕೆಲವಾದರೂ ತಾಣಗಳನ್ನು ನೋಡಬಹುದೆಂಬ ಆಸೆಯನ್ನು ಹೊತ್ತುಬಂದಿದ್ದ ನನಗೆ ನಿರಾಸೆಯೇ ಗತಿಯಾಯಿತು. ಅದ್ಯಾವುದನ್ನೂ ಹೊರಗಡೆ ತೋರಗೊಡದೆ ಅವನು ಹೇಳಿದಂತೆ ಮೀಸಲಿದ್ದ ರೂಮಿಗೆ ತೆರಳಿದೆ. ಅಲ್ಲಿ ಆಗಲೇ ನಿದ್ರೆಯಲ್ಲಿ ಮುಳುಗಿಹೋಗಿದ್ದ ಮೊದಲ ಮೊಮ್ಮಗನನ್ನು ಕಣ್ತುಂಬ ನೋಡಿದೆ. ನಿನಗೆ ತಮ್ಮ, ತಂಗಿ ಜೊತೆಯಾಗಿ ಬರುತ್ತಾರೆಂದು ಅಂದುಕೊಂಡು ಅವನ ಹಣೆಗೊಂದು ಹೂಮುತ್ತನಿತ್ತು ಹಾಗೇ ಹಾಸಿಗೆಯ ಮೇಲುರುಳಿದೆ.
ಮಗನ ಜೊತೆ ನನಗೆ ತಿಳಿದಷ್ಟು, ನೆನಪಿಗೆ ಬಂದಷ್ಟು ಸಾಮಾನುಗಳನ್ನು ತರಿಸಿಕೊಂಡು ಕಂದಮ್ಮಗಳ ಆಗಮನಕ್ಕಾಗಿ ಕಾಯುತ್ತಿದ್ದೆ. ಅವೇನೂ ತುಂಬ ಕಾಯಿಸದೆ ನಾನು ಅಲ್ಲಿಗೆ ತಲುಪಿದ ಹತ್ತು ದಿನಗಳೊಳಗಾಗಿ ಪ್ರಪಂಚಕ್ಕೆ ಕಾಲಿಟ್ಟವು. ಅವುಗಳಿಗೆ ಹೆಸರೇನಿಟ್ಟಿದ್ದೀರಾ? ಎಂದು ಮಗನನ್ನು ಕೇಳಿದೆ. ಗಂಡುಮಗುವಿಗೆ ‘ಇಂದುಧರ’, ಹೆಣ್ಣು ಮಗುವಿಗೆ ‘ಇಳಾ’ ಎಂದು ಹೇಳಿದ. ವಾವ್ ! ಮೊದಲ ಮಗನ ಹೆಸರು ‘ಇಶಾಂಕ’ ಈಗ ‘ಇಂದುಧರ’ ಮತ್ತು ‘ಇಳಾ’ ಪ್ರಾಸಬದ್ಧವಾಗಿ, ಅರ್ಥವತ್ತಾಗಿವೆ ಎಂದುಕೊಂಡೆ.
ಮೊದಲು ಮೊಮ್ಮಗ, ಈಗ ಎರಡು ಒಟ್ಟು ಮೂರು ಮಕ್ಕಳು. ಮೊದಲ ಮಗುವಿನ ಬಾಣಂತನದಲ್ಲಿ ಮಾಡಿದ ರೀತಿಯನ್ನೇ ನಾನು ಅನುಸರಿಸುತ್ತಿದ್ದರೂ ನನ್ನ ಸೊಸೆಯ ಕಡೆಯಿಂದ ಅನೇಕ ರೀತಿಯಲ್ಲಿ ಆಗೀಗ ಆಕ್ಷೇಪಣೆಗಳು ಪರೋಕ್ಷವಾಗಿ ಕಿವಿಗೆ ಬೀಳುತ್ತಿದ್ದವು. ಮೊದಲಿನಂತೆ ಅವಳಿಂದ ಗಲಗಲ ಮಾತುಕತೆಯಿಲ್ಲ, ಎಲ್ಲದರಲ್ಲೂ ಲೆಕ್ಕಾಚಾರ ಬಹಳವಾಗಿ ಮುಷ್ಟಿ ಬಿಗಿಯಾಗಿತ್ತು. ಇದು ಸಹಜವೇ, ಸಂಸಾರವು ದೊಡ್ಡದಾಗುತ್ತಿದೆ. ಮನೆಯನ್ನು ಕೊಂಡುಕೊಂಡಿದ್ದಾರೆ ಎಂದುಕೊಂಡು ಆದಷ್ಟು ಮಿತವಾಗಿ ಸೊಸೆಯ ಕಣ್ಗಾವಲಿನಲ್ಲೇ ಮೊಮ್ಮಕ್ಕಳ ಲಾಲನೆ, ಪಾಲನೆ ಇತರ ಕೆಲಸ ಕಾರ್ಯಗಳನ್ನು ಮಾಡಿದೆ. ಮಕ್ಕಳ ಮುಗ್ಧನಗು, ನಿಷ್ಕಲ್ಮಷ ಮನಸ್ಸು ಅವುಗಳ ಆಟಪಾಟಗಳು ನನ್ನೆಲ್ಲ ಯೋಚನೆಗಳನ್ನು ದೂರ ಸರಿಸುತ್ತಿದ್ದವು. ಹಾಗೇ ನಾನು ಹಿಂತಿರುಗುವ ದಿನವೂ ಹತ್ತಿರವಾಯ್ತು. ಮಕ್ಕಳ ಯೋಗಕ್ಷೇಮಕ್ಕೆ ಎಲ್ಲ ವ್ಯವಸ್ಥೆಯಾದಮೇಲೆ ನಾನು ಭಾರತಕ್ಕೆ ಹೊರಟುಬಂದೆ.
ಅಲ್ಲಿಂದ ಹಿಂತಿರುಗಿ ಬಂದ ನನ್ನನ್ನು “ಮುಗಿಯಿತೇ ನಿನ್ನ ಆಯಿಯ ಕೆಲಸ? “ಎಂದು ಮಗಳು ಗೇಲಿ ಮಾಡಿದಳು. ಆದರೆ ನನ್ನವರು “ನೀನು ಇಲ್ಲಿನ ಜಂಝಾಟಗಳನ್ನೆಲ್ಲ ಮರೆತು ಅಲ್ಲಿಗೆ ಕೆಲವು ಕಾಲ ಹೋಗಿಬರಲೆಂದು ಬಯಸಿ ನಾನೇ ಕಳುಹಿಸಿದೆ. ಆದರೆ ಅಲ್ಲಿ ಅನಿರೀಕ್ಷಿತವಾಗಿ ಆಯಾಕೆಲಸ ಬಂದದ್ದು ತಿಳಿದು ಬೇಸರವಾಯ್ತು “ಎಂದರು. ಒಂದು ಕ್ಷಣ ನನ್ನ ಸಂಗಾತಿಯ ಬಗ್ಗೆ ಹೆಮ್ಮೆ ಎನ್ನಿಸಿತು. ಯಾವಾಗಲೂ ನಿರ್ಲಿಪ್ತರಂತೆ ತೋರುವ ಇವರ ಮನದೊಳಗೆ ಸೂಕ್ಷ್ಮವಾಗಿ ಯೋಚಿಸುತ್ತಾರೆ ಎಂದುಕೊಂಡೆ.
ಪುಣ್ಯಕ್ಕೆ ನಾನು ಅಲ್ಲಿಗೆ ಹೋಗುವ ಮೊದಲು ನನ್ನ ಮನಸ್ಸಿನಲ್ಲಿ ಸಾಧ್ಯವಾದರೆ ಕೆಲವು ಸ್ಥಳಗಳನ್ನು ನೋಡಿಕೊಂಡು ಬರಬೇಕೆನ್ನುವ ಆಸೆಯನ್ನು ಹೇಳಿಕೊಂಡಿರಲಿಲ್ಲ. ಅಸ್ತವ್ಯಸ್ತವಾಗಿದ್ದ ಮನೆಯನ್ನು ನೋಡಿ ಹೂಂ ಮದುವೆಯಾದರೂ ಈ ನನ್ನ ಮಗಳು ಬದಲಾಗಿಲ್ಲ. ಅವಳ ಪತಿರಾಯನೂ ಅಷ್ಟೊಂದು ಕ್ಲೀನ್. ಇವಳನ್ನು ಹೇಗೆ ಸಹಿಸಿಕೊಂಡಿದ್ದಾನೆ. ತಡೆಯಲಾರದೆ ಮನೆಗೆ ಬಂದ ಮಗಳನ್ನು ಕೇಳೇಬಿಟ್ಟೆ “ಅಲ್ವೇ ಮಾಧವಿ, ನನ್ನ ಅಳಿಯಂದಿರು ದೇಹದೊಳಗಿನ ಕಳ್ಳುಬಳ್ಳಿ ಏನಾದರೂ ಹೊರತೆಗೆದು ಶುಚಿಗೊಳಿಸುವ ಹಾಗಿದ್ದರೆ ಅದನ್ನೂ ಮಾಡುತ್ತಿದ್ದರೇನೋ ಅಷ್ಟೊಂದು ಚೊಕ್ಕಟ. ಅಂಥವರನ್ನು ಕಟ್ಟಿಕೊಂಡು ಬದುಕುತ್ತಿರುವ ನೀನು ಬದಲಾಗುತ್ತೀಯಾ ಅಂದುಕೊಂಡಿದ್ದೆ. ಆದರೆ ನಾನು ಮೊದಲ ಸಾರಿ ನಿಮ್ಮಣ್ಣನ ಮನೆಯಿಂದ ಹಿಂದಿರುಗಿದಾಗ ಎಷ್ಟು ಹೊ;ಲಸಾಗಿತ್ತೋ ಈಗಲೂ ಹಾಗೇ ಇದೆ ಮನೆ. ಏಕೆ ನೀವಿಬ್ಬರೂ ಇಲ್ಲಿಗೆ ಬರುತ್ತಿರಲಿಲ್ಲವೇ? ಅಥವಾ ನಿಮ್ಮಪ್ಪನ ಊಟ,ತಿಂಡಿಯೂ ಅಲ್ಲಿಯೇ ಆಗುತ್ತಿತ್ತಾ? ಹೇಗೆ “ಎಂದು ಕೇಳಿದೆ.
ಅದಕ್ಕವಳು ನೀನು ಹೇಳಿದ್ದರಲ್ಲಿ “ಅರ್ಧ ಸತ್ಯ, ಅರ್ಧ ಸುಳ್ಳು”. ಎಂದಳು.
“ಅದು ಹೇಗೆ?” ಎಂದೆ.
“ನೋಡಮ್ಮಾ ನೀನು ಹೇಳಿದಂತೆ ನನ್ನ ಗಂಡನಿಗೆ ಅತಿಯಾದ ಕ್ಲೀನಿಂಗಿನ ಹುಚ್ಚಿರುವುದು ಸತ್ಯ. ಆದರೆ ಅವರಿರುವ ಕಡೆಯಲ್ಲಿ ಮಾತ್ರ. ಬೇರೆಕಡೆ ಹೇಗಿದ್ದರೂ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ತಿಂಡಿ ಊಟದ ಬಗ್ಗೆ ಕೇಳಿದೆಯಲ್ಲಾ, ನನ್ನ ಗಂಡ ಒಳ್ಳೆಯ ಕುಕ್, ಎಲ್ಲರಿಗೂ ಅವರದ್ದೇ ಕೈರುಚಿ. ನಾನೇನಿದ್ದರೂ ಅವರು ಹೇಳಿದ್ದನ್ನು ಮಾಡುವ ಅಸಿಸ್ಟೆಂಟ್ ಮಾತ್ರ. ಅಷ್ಟನ್ನು ಮಾಡುತ್ತಿದ್ದೆ. ತುಂಬಾ ಬೇಸರವಾದಾಗ ಮೂರೂ ಜನ ಹೊರಗೆ ಹೋಗುತ್ತಿದ್ದೆವು. ಈ ಮನೆಯ ಉಸಾಬರಿಯೆಲ್ಲ ಆ ನಿನ್ನ ಭಂಟಿ ಮನೆಗೆಲಸದವಳದ್ದೇ. ಅಪ್ಪ ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇಷ್ಟೇ ಸಾಕಾ ಇನ್ನೂ ಏನಾದರೂ ವಿವರಣೆ ಬೇಕಾ?” ಎಂದುತ್ತರಿಸಿದಳು.
“ಬೇಡಾ ಮಹಾತಾಯಿ, ಇನ್ನು ಬಾಯಿಬಿಟ್ಟರೆ ಕೇಳು” ಎಂದು ನನ್ನ ಪಾಡಿಗೆ ನಾನು ಮನೆಯನ್ನು ಮೊದಲ ಸ್ಥಿತಿಗೆ ತರುವಷ್ಟರಲ್ಲಿ ಸಾಕುಬೇಕಾಯಿತು. ಹಳೆಯ ಸ್ನೇಹಿತೆಯರನ್ನೆಲ್ಲ ಒಮ್ಮೆ ಭೇಟಿಯಾಗಿದ್ದಾಯಿತು. ನಿಧಾನವಾಗಿ ನನ್ನ ಎಂದಿನ ದಿನಚರಿಗೆ ಹೊಂದಿಕೊಂಡೆ. ಮತ್ತೊಂದೂವರೆ ವರ್ಷದ ನಂತರ ನನ್ನ ಮಗನಿಂದ ಬೇಡಿಕೆ ಬಂದಿತು. “ಅಮ್ಮಾ ನಾನು ಇಲ್ಲಿನ ಎಂ.ಬಿ.ಎ., ಪರೀಕ್ಷೆಗೆ ಕುಳಿತಿದ್ದೇನೆ. ಇದನ್ನು ಮೊದಲೂ ನಿನಗೆ ಹೇಳಿದ್ದೆ. ಈ ಸಾರಿ ಫೈನಲ್ ಎಕ್ಸಾಮಿದೆ. ಮೂರೂ ಮಕ್ಕಳನ್ನೂ ಸುಧಾರಿಸಿಕೊಂಡು ಓದುವುದು, ಜೊತೆಗೆ ಕೆಲಸವನ್ನೂ ಮಾಡಬೇಕು. ಪ್ರಣತಿ ತನ್ನ ಕಂಪನಿಯ ಪ್ರಾಜೆಕ್ಟಿನಲ್ಲಿ ತುಂಬಾ ಬ್ಯುಸಿಯಾಗಿದ್ದಾಳೆ. ಅಮ್ಮಾ ಒಂದು ಮೂರು ತಿಂಗಳ ಮಟ್ಟಿಗಾದರೂ ನೀನು ಬರಲಿಕ್ಕಾಗುತ್ತದೆಯಾ? ಇಲ್ಲವೆಂದರೆ ಇಷ್ಟು ದಿನ ಕಷ್ಟಪಟ್ಟಿದ್ದೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಹೇಗಾದರೂ ಮಾಡಮ್ಮಾ” ಎಂದು ಅಲವತ್ತುಕೊಂಡ. ನನಗೆ ಕಟುವಾಗಿ ಬರಲಿಕ್ಕಾಗದು ಎಂದು ಹೇಳಲು ಬಾಯಿ ಬರಲಿಲ್ಲ. “ಆಯಿತು ನಿಮ್ಮಪ್ಪನನ್ನು ಕೇಳಿ ಹೇಳುತ್ತೇನೆ ಆದಿ” ಎಂದೆ.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=31651
-ಬಿ.ಆರ್ ನಾಗರತ್ನ, ಮೈಸೂರು
ಅರ್ಥಪೂರ್ಣ ಬರಹ.ಧನ್ಯವಾದಗಳು
ಸುಲಲಿತವಾಗಿ ಓದಿಸಿಕೊಂಡು ಹೋಗುತ್ತಿದೆ
ತುಂಬಾ ಚೆನ್ನಾಗಿದೆ
ಧನ್ಯವಾದಗಳು ಸಹೃದಯರಿಗೆ
ಪಾಪ ಸುಕನ್ಯ….. ಕಾರ್ಯಾವಾಸಿ ಮಗ……ಅಮೇರಿಕಕ್ಕೆ ಹೋದರು ಹೊಸ ಊರು ನೋಡೊ ಸೌಭಾಗ್ಯ ಇಲ್ಲ.
ಧನ್ಯವಾದಗಳು ಗೆಳತಿ ಮಾಲತಿ.
ದೂರದ ಬೆಟ್ಟ ನುಣ್ಣಗೆ ಅಂಥ ಸಾಬೀತಾಯಿತು
ಧನ್ಯವಾದಗಳು ಗೆಳತಿ ವೀಣಾ.
ಆತ್ಮೀಯವಾಗಿ ಓದಿಸಿಕೊಂಡು ಹೋಗುವ ಚಂದದ ಕಥಾಹಂದರ..ಧನ್ಯವಾದಗಳು, ನಾಗರತ್ನಾ ಮೇಡಂ.
story in all homes
ವಂದನೆಗಳು ಮೇಡಂ.
ಧನ್ಯವಾದಗಳು ಮೇಡಂ.