ಕೆ ಎಸ್‌ ನ ಕವಿನೆನಪು 34 :ಸಮಾರಂಭಕ್ಕೆ ಆಹ್ವಾನ ಮತ್ತಷ್ಟು ಪ್ರಸಂಗಗಳು

Share Button

ಕವಿ ಕೆ ಎಸ್‌ ನ

ಒಮ್ಮೆ ಕೆಲವು ಉತ್ಸಾಹಿ ಯುವಕರು ಮಳವಳ್ಳಿಯ ಹತ್ತಿರದ ಯಾವುದೋ ಹತ್ತಿರದ ಬಂದು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.ಆ ಊರಿನ ನಮ್ಮ ತಂದೆಯವರ ತುಂಬ ಪರಿಚಿತರ ಹೆಸರನ್ನೂ ಅವರು ಹೇಳಿದ್ದರಿಂದ ನಮ್ಮ ತಂದೆಯವರು ಆಹ್ವಾನವನ್ನು ಒಪ್ಪಿಕೊಂಡರು.

ಮುಂದುವರೆದು ಅವರು “ಸಾರ್ ನೀವು ಮಳವಳ್ಳಿಗೆ ನೀವು ಬಸ್ ನಲ್ಲಿ ಬಂದುಬಿಡಿ.ಅಲ್ಲಿಗೆ ಬಂದು ನಾವು ನಿಮ್ಮನ್ನು ಕರೆದುಕೊಂಡು ಹೋಗುತ್ತೇವೆ.”ಎಂದರು. ಇದು ಅಂಥ ಅಸಹಜವಾದ ಪ್ರಸ್ತಾವವೇನೂ ಆಗಿರಲಿಲ್ಲ ಹಿಂದೆ ಆರೋಗ್ಯ ಹಾಗೂ ಶಕ್ತಿ ಇದ್ದಾಗ ಹೀಗೆ ಹಲವಾರು ಬಾರಿ ಒಂದು ಊರಿನವರೆಗೆ ಬಸ್ ನಲ್ಲಿ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಈ ಆಹ್ವಾನ ಬಂದಾಗ ನಮ್ಮ ತಂದೆ ಎಪ್ಪತ್ತೈದು  ವರುಷ ದಾಟಿತ್ತು , ವಯೋಸಹಜವಾದ ಅನಾರೋಗ್ಯದ ಜತೆಗೆ ದೃಷ್ಟಿಯೂ ಮಂದವಾಗುತ್ತಿದ್ದರಿಂದ ಜತೆಯಲ್ಲಿ ಒಬ್ಬರು ಹೋಗುವುದು ಅಗತ್ಯವಾಗಿತ್ತು.ಆದ್ದರಿಂದ ಕಾರ್ ವ್ಯವಸ್ಥೆ ಮಾಡಬೇಕೆಂದು ಸ್ಪಷ್ಟವಾಗಿ ಹೇಳಿಬಿಟ್ಟರು.ಆ ಸಂಘಟಕರು ಬೇರೆ ದಾರಿಯಿಲ್ಲದೆ ಕಾರ್ ಗೊತ್ತುಮಾಡಿದರು. ಸಮಾರಂಭ ತುಂಬ ಯಶಸ್ವಿಯಾಗಿ ನಡೆಯಿತು.ಆದರೆ ಆ ಸಂಘಟಕರು ನಮ್ಮ ತಂದೆಗೂ ಪರಿಚಿತರಿದ್ದ ವ್ಯಕ್ತಿಯ ಹತ್ತಿರ “ಅತಿಥಿಗಳ ವೆಚ್ಚ ದುಬಾರಿಯಾಯಿತು. ಅವರು ಬಸ್ ನಲ್ಲೇ ಬರಬಹುದಿತ್ತು” ಎಂದು ಬೇಸರಮಾಡಿಕೊಂಡರಂತೆ.

ಮತ್ತೊಂದು ಬಾರಿ ಕೆನಡಾದಿಂದ ಕನ್ನಡ ಸಾಹಿತ್ಯಾಭಿಮಾನಿಯೊಬ್ಬರು ಪತ್ರ ಬರೆದು “ನಿಮ್ಮ ಕಾವ್ಯಧಾರೆಯನ್ನು  ನಿಮ್ಮಿಂದಲೇ ಕೇಳಲು ಇಲ್ಲಿನ ಕಾವ್ಯಾಸಕ್ತರು ಉತ್ಸುಕರಾಗಿದ್ದಾರೆ. ಬಿಡುವು ಮಾಡಿಕೊಂಡು ಬನ್ನಿ. ನಿಮ್ಮ ಖರ್ಚಿನಲ್ಲಿ ಕೆನಡಾವರೆಗೆ ಬಂದರೆ ಅಲ್ಲಿನ ವೆಚ್ಚ ಮತ್ತು ವಾಪಸು ಬರುವ ವೆಚ್ಚವನ್ನು ನಾವು ಭರಿಸುತ್ತೇವೆ “ಎಂದಿದ್ದರು. ಆಹ್ವಾನವೇನೋ ಸೌಹಾರ್ದಪೂರ್ಣ.ಆದರೆ ಆ ಕಾಲದಲ್ಲೇ ವಿಮಾನ ವೆಚ್ಚ ಇಪ್ಪತ್ತು ಸಾವಿರ ರೂಪಾಯಿಗಳಷ್ಟಿತ್ತು. ಇಬ್ಬರು ಹೆಣ್ಣು ಮಕ್ಕಳ ಮದುವೆ, ಕೊನೆಯ ಮಗನ ದಿನ ಓದಿನ ಜವಾಬ್ದಾರಿ, ಸಂಸಾರದ ಖರ್ಚು ಇಂಥವನ್ನು ನಿಭಾಯಿಸುವುದೇ ಕಷ್ಟವಾಗಿತ್ತು. ನಮ್ಮ ತಂದೆ ಆ ಪತ್ರ ಓದಿ “ ಪಾಪ ಅಭಿಮಾನಿ! ಆದರೆ ಮನೆಯ ಪರಿಸ್ಥಿತಿ ತಿಳಿಯದ ಅಜ್ಞಾನಿ “ಎಂದು ಪ್ರತಿಕ್ರಿಯಿಸಿದರು. ಉತ್ತರವನ್ನು ಬರೆಯುವ ತಂಟೆಗೆ ಹೋಗಲಿಲ್ಲ.

ಮತ್ತೊಂದು ಕಹಿನೆನಪು

ಒಮ್ಮೆ ನನ್ನ ಸ್ನೇಹಿತನೊಬ್ಬ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ, ನಮ್ಮ ತಂದೆಯವರನ್ನು ಕುರಿತು ಪತ್ರಕರ್ತನೊಬ್ಬ  ಬರೆದಿದ್ದ ಲೇಖನದ ಬಿಂಬವನ್ನು ನನಗೆ ವಾಟ್ಸಪ್ ನಲ್ಲಿ ಕಳುಹಿಸಿಕೊಟ್ಟು ಇದರ ಬಗ್ಗೆ ನಿನ್ನ ಸ್ಪಂದನೆ ತಿಳಿಯಲು ಕುತೂಹಲಿಯಾಗಿದ್ದೇನೆ; ಎಂದಿದ್ದ.

ಆ ಲೇಖನದ ಒಕ್ಕಣೆಯಂತೆ ಸದರಿ ಪತ್ರಕರ್ತನನ್ನು ಮಂಡ್ಯದಲ್ಲಿ ನಡೆಯಲಿದ್ದ ಕೆ ಎಸ್ ನ ರ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಕವಿಯನ್ನು ಬೆಂಗಳೂರಿನಿಂದ ಮಂಡ್ಯಕ್ಕೆ ಕರೆತರಲು ನಿಯೋಜಿಸಿ ಸ್ವಯಂ ಜಿಲ್ಲಾಧಿಕಾರಿಗಳೇ ವಿನಂತಿಸಿದ್ದರು. ಅದರಂತೆ ನಮ್ಮ ತಂದೆಯವರನ್ನು ಈ ವ್ಯಕ್ತಿ ಕರೆದುಕೊಂಡು ಹೋಗಿದ್ದರು. ಮಾರ್ಗಮಧ್ಯದಲ್ಲಿ ಉಪಾಹಾರಕ್ಕಾಗಿ ಮದ್ದೂರಿನ ಶಿವಳ್ಳಿ ಹೋಟೆಲ್ ಬಳಿ ನಿಲ್ಲಿಸಬೇಕೆಂದು ನಮ್ಮ ತಂದೆ ಹೇಳಿದ್ದರು. ಮಾತಿನ ಭರದಲ್ಲಿ ಕಾರು ಒಂದೆರಡು ಮೈಲಿ ಮುಂದೆ ಹೋದಾಗ, ಅದೇ ಹೊಟೆಲ್ ಗೆ ಹೋಗಬೇಕೆಂದು ಕಾರ್ ವಾಪಸು ತಿರುಗಿಸಲು ಹೇಳಿದರಂತೆ. ಹೋಟೆಲ್ ನಲ್ಲಿ ಪತ್ರಕರ್ತ ನಮ್ಮ ತಂದೆಯವರಿಗೆ ಇಡ್ಲಿ ತೆಗೆದುಕೊಳ್ಳಲು ಸಲಹೆ ಮಾಡಿದರೂ ದೋಸೆಯೇ ಬೇಕೆಂದೇ ಹೇಳಿದರು ನಮ್ಮ ತಂದೆ. (ಅತಿಥಿಗಳ ಆರೋಗ್ಯದ ಕಾಳಜಿ ಬಗ್ಗೆ ಅವನ ಸಲಹೆಯಂತೂ ಮೆಚ್ಚುಗೆಗೆ ಅರ್ಹ) ವಾಪಸು ಬರುವಾಗಲೂ ಇದೇ ಬಗೆ ಪುನರಾವರ್ತನೆಯಾಯಿತು ಎಂದೆಲ್ಲ ಬರೆದಿತ್ತು. ಆ ಲೇಖನದಲ್ಲಿ ಇದೊಂದೇ ಪ್ರಸಂಗ ಲೇಖನದುದ್ದಕ್ಕೂ ಪ್ರಖರವಾಗಿ ಪ್ರಸ್ತಾಪಗೊಂಡು, ಕವಿಯನ್ನು ಇಂಥದೇ ಬೇಕು ಎಂದು ಒತ್ತಾಯ ಮಾಡುವ, ಬಾಯಿಚಪಲದ ವ್ಯಕ್ತಿ ಎಂದು ಬಿಂಬಿಸುವಂತೆ ಇತ್ತು.

ನಾನು ಗಮನಿಸಿದಂತೆ ನಮ್ಮ ತಂದೆ ಹಾಗೆ ಇಂಥದೇ ಬೇಕೆಂದು ಒತ್ತಾಯ ಮಾಡುವ ವ್ಯಕ್ತಿ ಅಲ್ಲವೇ ಅಲ್ಲ. ಆದರೆ ಮನೆಯಲ್ಲಿ ಇಂಥ ಖಾದ್ಯ (ಬೋಂಡ,ಪಕೋಡ ಇತ್ಯಾದಿ) ಬೇಕೆಂದು ಅಗಾಗ್ಗೆ ಬೇಡಿಕೆ ಸಲ್ಲಿಸಿ ಪಡಯುತ್ತಿದ್ದರಷ್ಟೆ. ಬೇರೆಯವರು ಪ್ರೀತಿ ವಿಶ್ವಾಸಗಳಿಂದ ನೀಡಿದ್ದ ತಿನಿಸುಗಳನ್ನು ಬಹಳ ಅಭಿಮಾನದಿಂದ ನೆನೆಯುತ್ತಿದ್ದರು. ಸರ್ಕಾರಿ ಕೆಲಸಕ್ಕೆ ಸೇರುವ ಮುಂಚೆ, ಅಲ್ಪಕಾಲ ತಿ ತಾ ಶರ್ಮಾ ರವರ ವಿಶ್ವಕರ್ನಾಟಕ ಪತ್ರಿಕೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.ಆ ಸಮಯದಲ್ಲಿ ಆಗಾಗ್ಗೆ ಶರ್ಮ ಅವರ ಪತ್ನಿ ಭಾರತಿ (ತಿರುಮಲೆ ರಾಜಮ್ಮ:ಲೇಖಕಿ,ವೀಣಾ ವಿದುಷಿ,ಮತ್ತು ಸ್ವಾತಂತ್ಯ ಹೋರಾಟಗಾರ್ತಿ)ಯವರು ನೀಡುತ್ತಿದ್ದ  ಕೈತುತ್ತನ್ನು ಕೃತಜ್ಞತೆಯಿಂದ ಪದೇ ಪದೇ ನೆನೆಯುತ್ತಿದ್ದರು.

ಹೊಸದಾಗಿ ಪರಿಚಯವಾಗುವ ನಮ್ಮ ತಂದೆಯ ಅಭಿಮಾನಿಗಳಲ್ಲಿ ಕೆಲವರು ತಾವು ಅವರಿಗೆ ಕೊಡಿಸಿ, ಅವರೊಂದಿಗೆ  ಸೇವಿಸಿದ್ದ ಕಾಫಿ ತಿಂಡಿಗಳ ವಿಷಯಗಳ ಬಗ್ಗೆಯೇ ಪ್ರಧಾನವಾಗಿ ಪ್ರಸ್ತಾಪಿಸಿದಾಗಲೂ ನಾನು ಎಂದೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಈ ವ್ಯಕ್ತಿ ಸಮಾರಂಭದ ಇತರ ಸಾಹಿತ್ಯಕ ವಿವರಗಳ ಬಗ್ಗೆ  ಏನೂ ತಿಳಿಸದೆ ದೋಸೆ ವಿಚಾರವನ್ನೇ ಎತ್ತಿ ಹಿಡಿದಿದ್ದು ವಿಷಾದಕರವಾಗಿತ್ತು.

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:  http://surahonne.com/?p=31398


-ಕೆ ಎನ್ ಮಹಾಬಲ

(ಕೆ ಎಸ್ ನ ಪುತ್ರ, ಬೆಂಗಳೂರು)

2 Responses

  1. ನಯನ ಬಜಕೂಡ್ಲು says:

    ಕೆ ಎಸ್ ನ ಅವರ ಬದುಕಲ್ಲಿ ನಡೆದ ಕಹಿ ಘಟನೆ ಗಳಿಂದ ತುಂಬಿದ ಸಂಚಿಕೆ. ಓದಿ ನೋವಾಯಿತು. ಅಷ್ಟು ದೊಡ್ಡ ಸಾಹಿತಿಗಳ ಜೊತೆಗೂ ಕೇವಲವಾಗಿ ನಡೆದುಕೊಂಡ ಕೆಲವರ ಸಣ್ಣತನ ಬೇಸರ ತರಿಸುವಂತದ್ದು.

  2. ಶಂಕರಿ ಶರ್ಮ says:

    ಹಿರಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಕಿಂಚಿತ್ ಜ್ಞಾನವಿಲ್ಲದ ಜನಗಳ ಒಡನಾಟ ಸ್ವಲ್ಪ ಕಷ್ಟವೆ! ಅಪೂರ್ವ ಮಾಹಿತಿಗಳು ತುಂಬಿರುವ ಈ ಲೇಖನ ಮಾಲೆಯು ಬಹಳ ಚೆನ್ನಾಗಿದೆ. ಧನ್ಯವಾದಗಳು ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: