ಕವಿ ನೆನಪು 33: ಸಮಾರಂಭಗಳಿಗೆ ಕೆ ಎಸ್ ನ ಅವರಿಗೆ ಆಹ್ವಾನ
ನಮ್ಮ ತಂದೆ ಸೇವೆಯಲ್ಲಿದ್ದಾಗ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕವಿಗೋಷ್ಠಿ, ಉಪನ್ಯಾಸದಂಥಹ ಕಾರ್ಯಕ್ರಮಗಳಿಗೆ ಆಹ್ವಾನದ ಮೇರೆ ಹೋಗುತ್ತಿದ್ದರು. ಸಂಘಟಕರು ಬಹುಪಾಲು ಕಛೇರಿಯ ಹತ್ತಿರವೇ ಬಂದು ಆಹ್ವಾನಿಸುತ್ತಿದ್ದರು. ದಿನಾಂಕ, ವೇಳೆ, ಸ್ಥಳ ತಿಳಿದುಕೊಂಡು ತಾವೇ ಅಲ್ಲಿಗೆ ಹೋಗುತ್ತಿದ್ದರು. ಆಗೆಲ್ಲ ಸಮಾರಂಭಗಳು ಸಾಮಾನ್ಯವಾಗಿ ನಡೆಯುತ್ತಿದ್ದುದು ಪುರಭವನ, ಕಲಾಕ್ಷೇತ್ರ ಅಥವಾ ಪರಿಷತ್ ಸಭಾಂಗಣದಲ್ಲಿ. ನಮ್ಮ ತಂದೆಯವರು ಕೆಲಸ ಮಾಡುತ್ತಿದ್ದ ಕರ್ನಾಟಕ ಹೌಸಿಂಗ್ ಬೋರ್ಡ್ ಪಂಪಮಹಾಕವಿ ರಸ್ತೆಯ ಗ್ರೈನ್ ಮರ್ಚಂಟ್ಸ್ ಬ್ಯಾಕ್ ಕಟ್ಟಡದಲ್ಲಿ ಇತ್ತು.
ಕಾರ್ಯಕ್ರಮಕ್ಕೆ ಆಹ್ವಾನಿಸಲು ಯಾರೇ ಬರಲಿ ಸಮಾರಂಭದ ಉದ್ದೇಶ, ಯಾರು, ಯಾರು ಬರುತ್ತಿದ್ದಾರೆ ಎಂಬುದರ ವಿವರವನ್ನು ಮೊದಲು ಪಡೆಯುತ್ತಿದ್ದರು. ಯಾರಾದರೂ ರಾಜಕಾರಣಿಗಳು ತಮ್ಮ ಜತೆ ವೇದಿಕೆ ಹಂಚಿಕೊಳ್ಳುತ್ತಿದ್ದರೆ ಸಮಾರಂಭದಲ್ಲಿ ರಾಜಕೀಯ ವಿಷಯ ಮಾತನಾಡಬಾರದೆಂದು ಅವರಿಗೆ ಮೊದಲೇ ತಿಳಿಸಿಬಿಡುತ್ತಿದ್ದರು.
ವಯಸ್ಸಾದ ನಂತರ ಮತ್ತು ಆರೋಗ್ಯ ಇಳಿಮುಖವಾದಾಗ ಕಾರ್ಯಕ್ರಮಗಳಿಗೆ ಒಪ್ಪಿಕೊಳ್ಳುವುದು ಕಡಿಮೆಯಾಯಿತು. ಕೊನೆಯ ಹತ್ತು ವರುಷಗಳಂತೂ ಯಾರಾದರೂ ಒಬ್ಬರು ಅವರ ಜತೆಯಲ್ಲಿ ಹೋಗುವುದು ಅನಿವಾರ್ಯವಾಯಿತು. ಎಲ್ಲ ಸಂದರ್ಭಗಳಲ್ಲೂ ಸಮಾರಂಭಕ್ಕೆ ಕರೆಯುವ ರೀತಿ ಕವಿಯ ಬಗ್ಗೆ ಪ್ರೀತಿ, ಗೌರವಗಳಿಂದ ಕೂಡಿರುತ್ತಿರಲಿಲ್ಲ, ಹಲವು ಬಗೆಯ ತಾರತಮ್ಯ, ಅನಾದರಗಳನ್ನೂ ಸಹಿಸಬೇಕಾಗಿತ್ತು.
ಒಮ್ಮೆ ಒಬ್ಬ ವ್ಯಕ್ತಿ ಮನೆಗೆ ಬಂದ ”ಏನ್ಸಾರ್ ಇಷ್ಟು ದೂರ ನಿಮ್ಮ ಮನೆ?” ಅನ್ನುತ್ತ ಕುಳಿತು ಸುಧಾರಿಸಿಕೊಂಡ.
“ಮುಂಬಯಿಯಲ್ಲಿ ನನ್ನ ಸ್ನೇಹಿತರು ಸಂಘ ಕಟ್ಟಿಕೊಂಡು ಬೇಕಾದಷ್ಟು ಕನ್ನಡ ಕೆಲಸ ಮಾಡ್ತಾ ಇದ್ದಾರೆ” ಎಂದು ಮಾತು ಮುಂದುವರೆಸಿದ.
“ಬಹಳ ಸಂತೋಷ,ತಾವು ಬಂದ ಕಾರಣ”
“ಈ ಬಾರಿ ರಾಜ್ಯೋತ್ಸವಕ್ಕೆ ನೀವು ಅತಿಥಿಯಾಗಿ ಭಾಗವಹಿಸಬೇಕಂತೆ. ಟ್ರೇನ್ ನಲ್ಲಿ ಬಂದು ಹೋಗೋ ವೆಚ್ಚ ಕೊಡ್ತಾರೆ.”
“ಮತ್ತೆ ಯಾರು ಬರ್ತಾರೆ?”
“ಪ್ರಸಿದ್ಧ ಸಿನಿಮಾ ನಟ……. ….ರವರು”
“ಅವರು ಹೇಗೆ ಬರ್ತಾರೆ?
“ಸಾರ್ ಅವರು ಶೂಟಿಂಗ್ನಲ್ಲಿ ಬಿಸಿ, ಅದಕ್ಕೆ ವಿಮಾನದಲ್ಲಿ ಟಿಕೆಟ್ ರಿಸರ್ವ್ ಮಾಡಲು ಹೇಳಿದ್ದಾರೆ,”
“ಓಹೋ ,ಅವನು ಬಿಸಿ,ನಾನು ಕೆಲಸವಿಲ್ಲದೆ ಕೂತಿದ್ದೇನಿ ಅಲ್ವಾ? ಅವನೂ ನನ್ನ ದೂರದ ನೆಂಟನೇ. ಟ್ರೇನ್ ನಲ್ಲಿ ನನ್ನ ಜತೆ ಬರಬಹುದಲ್ವಾ? ನಿಮ್ಮ ಸ್ನೇಹಿತರಿಗೆ ಹೇಳಿ ನನಗೂ ವಿಮಾನದಲ್ಲಿ ವ್ಯವಸ್ಥೆ ಮಾಡಿದರೆ ಬರ್ತಾರೆ ಅಂತ.”
“ಸರ್, ನೀವು ಒಪ್ಪಿದ್ದರೆ ಚೆನ್ನಾಗಿತ್ತು”
“ನಾನು ಬರೋಲ್ಲ ಅಂತ ಹೇಳಲಿಲ್ಲವಲ್ಲ.ಷರತ್ತು ಹಾಕಿದ್ದೇನೆ ಅಷ್ಟೆ.” ಎಂದು ತಣ್ಣಗೆ ಉತ್ತರಿಸಿದರು ಕವಿ.
ಪಾಪ ಆ ಬಡಪಾಯಿ ಎದ್ದು ಹೋದ.
ಅವನು ಹೋದ ಮೇಲೆ ಮತ್ತಾರೋ ಭೇಟಿ ಮಾಡಲು ಬಂದರು ಅವರ ಹತ್ತಿರ ನಮ್ಮ ತಂದೆ “ಈಗೊಬ್ಬಕರೆಯೋದಕ್ಕೆ ಬಂದಿದ್ದ. ಅವನಿಗೆ ಚೆನ್ನಾಗಿ ಷವರ್ ಬಾತ್ ಕೊಟ್ಟೆ.”ಎಂದು ನಡೆದದ್ದನ್ನು ವಿವರಿಸಿದರು.
ಇಂಥ ಪ್ರಸಂಗಗಳು ಇನ್ನೂ ಹಲವು ಇವೆ. ಆದರೆ ಈ ಒಂದು ಪ್ರಸಂಗದಲ್ಲಿ ಮಾತ್ರ ನಮ್ಮ ತಂದೆ ಸ್ವಲ್ಪ ಕಟುವಾಗಿದ್ದರು.
ಅ ಸಿನಿಮಾ ನಟನ ವಿಷಯ ಇಲ್ಲದಿದ್ದರೆ ಬಹುಶಃ ಒಪ್ಪುತ್ತಿದ್ದರೇನೋ!
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=31288
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)
ಈ ಸಂಚಿಕೆಯಲ್ಲಿ ಕವಿಗಳ ಯಾವ ಶಿಫಾರಸಿಗೂ ತಲೆಬಾಗದ ವ್ಯಕ್ತಿತ್ವದ ಅನಾವರಣ, ಚೆನ್ನಾಗಿದೆ.
ನಿಮ್ಮ ತಂದೆಯವರ ಕವಿ ಮನವು ನೇರ, ದಿಟ್ಟ ನಡೆಯನ್ನೂ ಮೈಗೂಡಿಸಿಕೊಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಅಪೂರ್ವ ಮಾಹಿತಿಗಳು ತುಂಬಿರುವ ಈ ಲೇಖನ ಮಾಲೆಯು ಬಹಳ ಚೆನ್ನಾಗಿದೆ. ಧನ್ಯವಾದಗಳು ಸರ್.