ಚೈತನ್ಯದ ಪಾಠ
ಹಸಿರೆಲೆ ಒಡಲಲಿ ಚೈತನ್ಯದ
ಹುಡುಗಾಟ..
ನೆಲಕ್ಕುದುರಿದ ಒಣತರಗೆಲೆಯದು
ಚರಪರ ನರಳಾಟ
ಒಂದೇ ಬೇರು ಒಂದೇ ಬಳ್ಳಿಗೆ
ಉಸಿರಾಗಿತ್ತು
ಒಂದೇ ರವಿಯ ಅದೇ ಕಿರಣಕೆ
ಹಸಿರಾಗಿತ್ತು
ಚಿಗಿತ ಚಿಗುರು ತೊಟ್ಟು ಕಳಚಿ
ಹಣ್ಣೆಲೆಯಾಯ್ತು
ಬಿಗಿತ ಮರೆತು ನೆಲಕೆ ಉದುರಿ
ಗೊಬ್ಬರವಾಯ್ತು
ಉದುರಿ ಬಿದ್ದ ಎಲೆಯ ರಸವನು
ಬೇರು ಹೀರಿತು
ಹೂವಾಗಿ ಕಾಯಾಗಿ ಹಣ್ಣಾಗಿ
ರೂಪಾಂತರಿಸಿ ಚೈತನ್ಯವಾಯ್ತು.
ಮಾತಿಗೊಮ್ಮೆ ಮನವ
ಮುರಿದುಕೊಳುವ ನಮಗೆ
ಗಿಡವು ಪಠ್ಯವಾಗದೆ!
ಬೇರು ಎಲೆ ಹೂವು ಕಾಯಿ
ಮಾಗಿ ಹಣ್ಣಾಗುವುದನು
ತಿಳಿಸಿ- ತಕ್ಕ ಪಾಠ ಕಲಿಸದೇ?
– ವಸುಂಧರಾ ಕದಲೂರು
ತುಂಬಾ ಭಾವಪೂರ್ಣ ಕವನ.ಧನ್ಯವಾದಗಳು
ಧನ್ಯವಾದಗಳು
ಧನ್ಯವಾದಗಳು…….!!!!
ಪ್ರಕೃತಿಯೊಳಗೆ ಅವಿತಿರುವ ಜೀವನ ಪಾಠವನ್ನು ಅರುಹುವ ಸುಂದರ ಕವನ.
ಚೆಂದದ ಕವನ…”ಮಾತಿಗೊಮ್ಮೆ ಮನವ
ಮುರಿದುಕೊಳುವ ನಮಗೆ
ಗಿಡವು ಪಠ್ಯವಾಗದೆ!.. ಈ ಸಾಲು ಬಹಳ ಇಷ್ಟವಾಯಿತು.
ಹೌದು..ಮಾನವನು ಮನದ ಕಣ್ಣು ತೆರೆದು ನೋಡಿದರೆ, ನಿಸರ್ಗದಿಂದ ಕಲಿಯಬಹುದಾದಂತಹ ಪಾಠಗಳು ಅಗಣಿತ. ಸೊಗಸಾದ ಭಾವಪೂರ್ಣ ಸಾಲುಗಳು ಕಣ್ತೆರೆಸುವಂತಿವೆ. ಧನ್ಯವಾದಗಳು ಮೇಡಂ.