ರೈತರ ದಿನಕ್ಕಾಗಿ ರೈತನ ಕುರಿತು ಕಿರುಗವಿತೆಗಳು

Share Button

ಒಂದು ಮುಂಜಾನೆಯಲ್ಲಿ
ಎರಡು ದನಿ..
ರೈತನಿಗೆ ಕೋಳಿ ಕೂಗು
ಕವಿಗೆ ಹಕ್ಕಿಗಳ ಹಾಡು
*
ಹತ್ತಾರು ಜನರ
ಬೆವರ ಹನಿ ಜೊತೆಯಲ್ಲಿ
ಹತ್ತಾರು ಕಾಳು
ಒಂದೇ ತೆನೆಯಲ್ಲಿ
*
ಇದೇನಿದು?
ಇದು ರಾಗಿಯ ಹೊಲವೋ
ಬೆವರಿನ ಹೊಲವೋ..
ಅವತ್ತು ಅಪ್ಪ ಬಿತ್ತಿದ್ದು
ಬೆವರನ್ನೇ ತಾನೇ!?
*
ನನ್ನ ಬೆವರುಂಡ
ಭೂಮಿ
ಹಕ್ಕಿಗಳ ಹಾಡು ಕೇಳುತ್ತಾ
ಬಸುರಾದಳು
*
ಅಬ್ಬಾ! ಈ ರೈತನೂ
ಕವಿತೆ ಬರೆಯಬಲ್ಲ.
ಇವನು ಗದ್ದೆಯಲ್ಲಿ ಹೂತ
ಸುಂದರ ಪದಗಳೀಗ
ಪೈರಿನ ನೆತ್ತಿಯ ಮೇಲೆ
ಭತ್ತದ ತೆನೆ
*
ಕೆಸರು ಮೆತ್ತಿದ ಅಪ್ಪನ
ಹರಿದ ಅಂಗಿಗೆ ಗೊತ್ತಿಲ್ಲ
ದೇಶವೇ ಉಣ್ಣುವುದು
ತಾನುಂಡು ಬಿಟ್ಟ
ಬೆವರ ಎಂಜಲೆಂಬ ಸತ್ಯ
*
ಅಪ್ಪ
ಕನಸುಗಳ ಬೆಳೆವಾಗ
ಅವ್ವ
ಕಷ್ಟಗಳ ಕಳೆ ಕಿತ್ತಳು
*
ರೈತನ ಬೆವರ ಹನಿ
ಹೊಳೆದಿದೆ
ಎಳೆ ಬಿಸಿಲಿಗೆ
ಪೈರಿನ ನೆತ್ತಿಯ ಮೇಲೆ
ತೆನೆ
*
ರೈತನೆಂದರೆ
ಕೆಂಪು ಬೆವರಿನ
ಉಪ್ಪುಪ್ಪು ನೆತ್ತರಿನ
ಹಸಿರು ಮನುಷ್ಯ
*
ರೈತನ ಬೆವರಿನಿಂದ ಬೆಳೆದ
ಹಸಿರು ಹೊಲವನ್ನು
ನೋಡಿದ ಕವಿಯೊಬ್ಬ
‘ಉಸಿರು’ ಎಂಬ ಶೀರ್ಷಿಕೆಯಿಟ್ಟು
ಹಸಿರಿನ ಕುರಿತು ಕವಿತೆ ಬರೆದ
*
ಸೌದೆಯ ಹೊರೆ
ಹೊತ್ತ
ಅವ್ವನ ನೆತ್ತಿಯ ಮೇಲೆ
ಸಂಸಾರದ
ಹಸಿವಿನ ಭಾರ
*
ಅಪ್ಪ ಗೆಯ್ಮೆ ಮಾಡಿದ
ಹೊಲದಲ್ಲಿ
ಅವ್ವ
ಜೋಳದ ಜೊತೆ
ಬಿತ್ತುವಳು
ತನ್ನ ಕನಸುಗಳ
*
ರೈತನ ಬೆವರ
ಪದ ಪದಗಳು ಸೇರಿ
ಹೊಲದ ತುಂಬಾ ಹಸಿರು
ತೆನೆ ತೆನೆಯ ಕಾವ್ಯ
*
ರೈತನ ಹೊಲದಲ್ಲಿ
ಬೆಳೆದ ಹೂವಿನ
ಮಕರಂದ ಹೀರುವ
ಜೇನುಹುಳುಗಳು
ಸುಂಕ ಕಟ್ಟುವುದಿಲ್ಲ
***
– ನವೀನ್ ಮಧುಗಿರಿ

6 Responses

  1. Shantharam v shetty says:

    ಅದ್ಭುತ ಹನಿ. ಮಧುರ ಮಧುವಂತೆ ಮಧುಗಿರಿ .

  2. Anonymous says:

    ಅದ್ಭುತ ರಚನೆ… ವಿಶ್ವ ರೈತರ ದಿನಾಚರಣೆ ಯ ಪ್ರಯುಕ್ತ ನಿಮಗೊಂದು ಸಲಾಮ್

  3. ಬಿ.ಆರ್.ನಾಗರತ್ನ says:

    ಅರ್ಥಪೂರ್ಣ ವಾಗಿದೆ ಕವಿತೆ.ಅಭಿನಂದನೆಗಳು ಸಾರ್

  4. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ. ನಮ್ಮ ಅನ್ನದಾತನ ಪರಿಶ್ರಮ ಇಲ್ಲಿ ಹನಿಗವನದ ರೂಪದಲ್ಲಿ ಅನಾವರಣ ಗೊಂಡಿದೆ.

  5. .ಮಹೇಶ್ವರಿ.ಯು says:

    ಚೆನ್ನಾಗಿವೆ ನಿಮ್ಮ ಕಿರುಗವಿತೆಗಳು.

  6. ಶಂಕರಿ ಶರ್ಮ, ಪುತ್ತೂರು says:

    ಸೊಗಸಾದ ಸಕಾಲಿಕ ಕಿರುಗವನಗಳು ರೈತನ ಹಿರಿಮೆಯನ್ನು ಸಾರಿವೆ..
    ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: