ಆತ್ಮಲಿಂಗದ ಶಿವ ತಾಣ ಧಾರೇಶ್ವರ
ಉತ್ತರ ಕನ್ನಡ ಜಿಲ್ಲೆ ಶಿವ ಸಾನಿದ್ಯ ತಾಣ ಎಂದು ಕರೆಸಿಕೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ಜಿಲ್ಲೆಯ ಐದು ಪುರಾಣ ಶಿವ ತಾಣಗಳಲ್ಲಿ ಧಾರೇಶ್ವರ ಕೂಡ ಒಂದು ಪುಣ್ಯ ಕ್ಷೇತ್ರ. ಐತಿಹಾಸಿಕ ಹಿನ್ನೆಲೆಯುಳ್ಳ ಧಾರೇಶ್ವರದಲ್ಲಿ ಶಿವನ ಆತ್ಮಲಿಂಗ ಇದೆ.
ಕುಮಟಾ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹೊಂದಿಕೊಂಡು, ಕುಮಟಾದಿಂದ 6 ಕಿ.ಮೀ. ದೂರದಲ್ಲಿದೆ ಈ ಪುರಾಣ ಕ್ಷೇತ್ರ ಧಾರೇಶ್ವರ. ಅತ್ಯಂತ ಹಳೆಯದಾದ ಈ ದೇವಾಲಯವು ಕ್ರಿ.ಶ. 9ನೇ ಶತಮಾನದಲ್ಲಿ ಅಮರಶಿಲ್ಪಿ ಎಂದೇ ಹೆಸರಾದ ಜಕಣಾಚಾರಿಯಿಂದ ನಿರ್ಮಿಸಲ್ಪಟ್ಟಿದ್ದು ಎಂದು ಹೇಳಲಾಗುತ್ತದೆ. ದೇವಾಲಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೇಲೂರು ಹಳೆಬೀಡಿನ ದೇವಾಲಯದಂತೆ ಕಂಡುಬರುತ್ತಿದ್ದು ಕಲ್ಯಾಣ ಚಾಲುಕ್ಯರು ಹಾಗೂ ಹೊಯ್ಸಳ ಶಿಲ್ಪ ರಚನೆಯ ಮಿಶ್ರಣವನ್ನು ಇಲ್ಲಿ ನಾವು ನೋಡಬಹುದಾಗಿದೆ.
ಕಾಲಭೈರವನ ಸಣ್ಣ ದೇವಾಲಯವೂ ಇಲ್ಲಿದ್ದು ಈ ಗರ್ಭಗುಡಿಯ ಬಲಬದಿಯ ಪಾಶ್ರ್ವದಲ್ಲಿರುವ ಆದಿ ಧಾರೇಶ್ವರ ಗುಡಿ, ಕಲ್ಯಾಣ ಚಾಲುಕ್ಯರ ಕಾಲದ್ದೆಂದು ಶಾಸನ ಹೇಳುತ್ತವೆಯೆಂದು ಇತಿಹಾಸದಿಂದ ತಿಳಿಯಬಹುದಾಗಿದೆ. ಗರ್ಭಗುಡಿಯ ಒಳಗಿನ ಭಾಗದಲ್ಲಿ ನೃತ್ಯ ಭಂಗಿಯ ಕೆತ್ತನೆ, ನಾಟ್ಯರಂಗ, ಸಭಾಮಂಟಪ ಮತ್ತು ನಂದಿವಿಗ್ರಹಗಳು ಇವೆ. ಅತ್ಯ ಸೂಕ್ಷ್ಮ ಕೆತ್ತನೆಯ ಕಲ್ಲಿನ ಕಂಬಗಳು ಮಂತ್ರ ಮುಗ್ಧಗೊಳಿಸುವಂತಿವೆ. ಸಂಪೂರ್ಣವಾಗಿ ಕಲ್ಲಿನಿಂದ ಕೆತ್ತಲ್ಪಟ್ಟ ದೇವಾಲಯದ ಗರ್ಭಗುಡಿಯ ಹೊರ ಪಾರ್ಶ್ವವು ನಕ್ಷತ್ರಾಕಾರದಲ್ಲಿದೆ. ಗೋಪುರದ ಶಿಖರ ಉಂಗುರಾಕೃತಿಯಲ್ಲಿ ಇರುವುದನ್ನು ನೋಡಬಹುದಾಗಿದೆ.
ದೇವಾಲಯದ ಆವರಣದಲ್ಲಿ ವೀರಗಲ್ಲುಗಳು, ಆಯುಧಗಳನ್ನು ಹಿಡಿದ ಯೋಧರು, ಕುದುರೆ ಸವಾರರು ಮುಂತಾದ ದೃಶ್ಯಗಳಿವೆ. ದೇವಾಲಯದ ಎದುರು ಸುಂದರವಾದ ಪುಷ್ಕರಣಿ ಕೂಡ ಇದೆ. ಒಳಭಾಗದಲ್ಲಿ ಪುಟ್ಟ ಬಾವಿ ಇದ್ದು ದೇವರಿಗೆ ನಿತ್ಯವು ಇಲ್ಲಿನ ಜಲದಿಂದಲೇ ಅಭಿಷೇಕ ನಡೆಯುತ್ತದೆ. ದೇವಾಲಯ ಹೊರಭಾಗದಲ್ಲಿ ಶಿಲಾ ಸ್ಥಂಭವನ್ನು ನೋಡಬಹುದಾಗಿದೆ. ಶಿವರಾತ್ರಿಯಂದು ಸಾವಿರಾರು ಭಕ್ತಾದಿಗಳ ನಡುವೆ ವಿಶೇಷ ಪೂಜೆ ಜಾತ್ರೆಗಳು ಇಲ್ಲಿ ನಡೆಯುತ್ತದೆ.
-ಉಮೇಶ ಮುಂಡಳ್ಳಿ ,ಭಟ್ಕಳ
ಉತ್ತಮ ಮಾಹಿತಿ ಅಭಿನಂದನೆಗಳು ಸಾರ್.
ನನಗೆ ತುಂಬಾ ಸಂತೋಷವಾಯಿತು. ಇದು ಒಂದು ಕರ್ನಾಟಕದ ಐತಿಹಾಸಿಕ ಹೆಸರಾದ ಕ್ಷೇತ್ರ ಎಂದು ಹೇಳಲು ಬಯಸುತ್ತೇನೆ. ಈ ವಿಚಾರವನ್ನು ತಿಳಿಸಿದ ನಮ್ಮ ನೆಚ್ಚಿನ ಪ್ರೀತಿಯ ಉಮೇಶ್ ಮುಂಡಳ್ಳಿ ಅವರಿಗೆ ಧನ್ಯವಾದಗಳು.
Super sir pls continue
ಚೆನ್ನಾಗಿದೆ ಸರ್. ಮಾಹಿತಿಪೂರ್ಣ ಬರಹ
ಕುಮಟಾದಲ್ಲಿ ಹಲವು ವರ್ಷ ಇದ್ದ ನಾವು ಧಾರೇಶ್ವರ ದೇವಸ್ಥಾನಕ್ಕೆ ಹೋಗಿದ್ದೆವು… ಹಳೆ ನೆನಪುಗಳು ಮರುಕಳಿಸಿದವು.. ಸೊಗಸಾದ ಸ್ಥಳ ಪರಿಚಯ…ಧನ್ಯವಾದಗಳು.