ನೆನಪು 18: ಗಮಕಿ ಎಂ ರಾಘವೇಂದ್ರರಾವ್ – ಕೆ ಎಸ್ ನ ರ ಸಹಪಾಠಿ
ಗಮಕ ಕ್ಷೇತ್ರದಲ್ಲಿ ಅಸಾಧಾರಣ ಸೇವೆಸಲ್ಲಿಸಿ,ಗಮಕದ ಪಠ್ಯಕ್ರಮದ ರಚನೆಯಲ್ಲೂ ತೊಡಗಿಸಿಕೊಂಡು, ಗಮಕ ಕಲೆಗೆ ಸಂಬಂಧಿಸಿದ ಸೃಜನಾತ್ಮಕ ಸಾಹಿತ್ಯ ರಚನೆಯಲ್ಲೂ ಯಶಸ್ವಿಯಾಗಿದ್ದ ನಾಡಿನ ಪ್ರಖ್ಯಾತ ಗಮಕಿ ಎಂ. ರಾಘವೇಂದ್ರರಾವ್ ಅವರು ನಮ್ಮ ತಂದೆಯವರ ಮಾಧ್ಯಮಿಕ ಶಾಲಾ ಸಹಪಾಠಿಯಾಗಿದ್ದರು. ರಾಘವೇಂದ್ರರಾವ್ ನಮ್ಮ ತಂದೆಯವರಿಗಿಂತ ನಾಲ್ಕೈದು ತಿಂಗಳು ಹಿರಿಯರು. ಅವರಿಬ್ಬರೂ ಸೇರಿದಾಗ ಅಂದಿನ ದಿನದ ನೆನಪುಗಳ ಮೆರವಣಿಗೆಯೇ ವಿಜೃಂಭಿಸುತ್ತಿತ್ತು. ನಮ್ಮ ತಂದೆಯವರ ಬಾಯಿಯಲ್ಲಿ ಸದಾ ಅವರು “ನಮ್ಮ ರಾಘು”.
ಕೆ ಎಸ್ ನ ಅವರನ್ನು ಕುರಿತ ಸಾಕ್ಷ್ಯಚಿತ್ರದ ನಿರ್ಮಾಣದ ಸಂದರ್ಭದಲ್ಲಿ ನಮ್ಮ ತಂದೆಯವರು ರಾಘವೇಂದ್ರರಾವ್ ಅವರನ್ನು ಸಂದರ್ಶಿಸಿ ತಮ್ಮ ಬಾಲ್ಯದ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಲು ನಿರ್ದೇಶಕ ಟಿ ಎನ್ ಸೀತಾರಾಂ ಅವರಿಗೆ ಸೂಚಿಸಿದ್ದರು .ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.ಅದು ದೊರೆತಿದ್ದರೆ ಸಾಕ್ಷ್ಯಚಿತ್ರಕ್ಕೆ ಮತ್ತಷ್ಟು ಮೆರುಗು ಲಭಿಸುತ್ತಿತ್ತು.
ಹಲವಾರು ಬಾರಿ ರಾಘವೇಂದ್ರರಾವ್ ಹಾಗೂ ನಮ್ಮ ತಂದೆ ಬೇರೆ ಬೇರೆ ಊರುಗಳಲ್ಲಿ ಸಮಾರಂಭಗಳಲ್ಲಿ ಒಟ್ಟಿಗೆ ಭಾಗವಹಿಸುವ ಅವಕಾಶ ಲಭಿಸುತ್ತಿತ್ತು.ಅಂಥ ಸಂದಭಗಳಲ್ಲಿ ನಮ್ಮ ತಂದೆಯವರ ಹಿಗ್ಗು ಹೇಳತೀರದು ! ”ನಮ್ಮ ರಾಘು ಬರ್ತಾನೆ, ಒಟ್ಟಿಗೇ ಇರ್ತೀವಿ” ಎಂದು ಪದೇ ಪದೇ ಸಂಭ್ರಮದಿಂದ ಹೇಳುತ್ತಿದ್ದರು.
ಸುದೈವವೆಂದರೆ ರಾಘವೇಂದ್ರರಾವ್ ಅವರ ಪುತ್ರ ಕರ್ನಾಟಕ ಕಲಾಶ್ರಿ .ಎಂ.ಆರ್ ಸತ್ಯನಾರಾಯಣ (ಅವರೂ ಪ್ರಖ್ಯಾತ ಗಮಕಿಗಳು) 42 ವರುಷಗಳಿಂದ ನನ್ನ ಆಪ್ತ ಸ್ನೇಹಿತರು. ನಮ್ಮ ತಂದೆ ಹಾಗೂ ಅವರ ತಂದೆಯವರ ಸ್ನೇಹದ ವಿಷಯ ತಿಳಿಯುವುದಕ್ಕೂ ಮುನ್ನವೇ ನಮ್ಮಿಬ್ಬರ ಗೆಳೆತನ ಅಂಕುರವಾಗಿತ್ತು. ಮುಂದೊಂದು ಸಂದರ್ಭದಲ್ಲಿ ಈ ವಿಷಯ ತಿಳಿದಾಗ ಮತ್ತಷ್ಟು ನಿಕಟರಾದರು.ಇಂದೂ ನಾವು ಭೇಟಿಯಾದಾಗಲೆಲ್ಲ ರಾಘವೇಂದ್ರರಾವ್ ಹಾಗೂ ಕೆ ಎಸ್ ನ ರವರ ಸಲುಗೆಯ ಸ್ನೇಹದ ವಿಷಯ ಪ್ರಸ್ತಾಪವಾಗುತ್ತಲೇ ಇರುತ್ತದೆ.
ಸಾಹಿತ್ಯ ಕಾರಣದಿಂದ ನಮ್ಮ ತಂದೆಯವರಿಗೆ ನಿಕಟರಾದವರು ಹಲವರಿರಬಹುದು. ಆದರೆ ಸಹಪಾಠಿ ಎಂಬ ವಿಶೇಷ ಕಾರಣಕ್ಕೆ ಅವರ ನೆನಪಿನ ಅಂಗಳದಲ್ಲಿ ಚಿರಸ್ಥಾಯಿಯಾದವರು ಬಹುಶಃ ಗಮಕಿ ಎಂ ರಾಘವೇಂದ್ರರಾವ್ ಒಬ್ಬರೇ.
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=30073
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು
ಬಹಳ ಅಪರೂಪದ ವಿಚಾರಗಳಿಂದ ಕೂಡಿದ ಲೇಖನ ಬಹಳ ಸೊಗಸಾಗಿ, ಆಪ್ತವಾಗಿ ಮೂಡಿ ಬರುತ್ತಿದೆ ಸರ್.
ಹಿರಿಯ ಸಾಹಿತಿಗಳ ಒಡನಾಟದಲ್ಲಿದ್ದ ಇತರ ಹಿರಿಯ ಚೇತನಗಳ ಬಗೆಗೆ ಮೂಡಿಬರುವ ತಮ್ಮ ಲೇಖನಮಾಲೆ ಸೊಗಸಾಗಿದೆ ಸರ್.