ಕೆ ಎಸ್ ನ ನೆನಪು 12: ವಿದ್ವಾಂಸ ಎಲ್ ಎಸ್ ಶೇಷಗಿರಿರಾವ್ ಸ್ನೇಹ
ಕೆ ಎಸ್ ನ ಮತ್ತು ಆ ಕಾಲದಲ್ಲಿ ತಮ್ಮದೇ ಶೈಲಿಯನ್ನು ಅರಗಿಸಿಕೊಂಡು ಕಾವ್ಯ ಬರೆಯುತ್ತಿದ್ದ ಹಲವರ ರಚನೆಗಳು ನವ್ಯ ವಿಮರ್ಶಕರ ಅವಗಣನೆಗೆ ಸಿಲುಕಿತೇನೊ ಎನ್ನುವಂಥ ಸಂದಿಗ್ಧ ಕಾಲದಲ್ಲಿ ,ಇಂಥ ಕಾವ್ಯದ ಬಗ್ಗೆ ಒಂದು ಸಹೃದಯ ವಿಮರ್ಶೆಯನ್ನು ನೀಡುತ್ತಲೇ ಬಂದಿದ್ದ ಹಲವು ಮಹನೀಯರಲ್ಲಿ ಪ್ರಮುಖರು ಪ್ರೊ .ಎಲ್ .ಎಸ್ ಶೇಷಗಿರಿರಾವ್.
ಬೋಧನೆ,ನಿಘಂಟು ಕಾರ್ಯ,ಇಂಗ್ಲಿಷ್ –ಕನ್ನಡ ಅನುವಾದ,ಗ್ರಂಥ ಸಂಪಾದನೆ ,ಕನ್ನಡ ಸಾಹಿತ್ಯ ಚರಿತ್ರೆ ರಚನೆ , ಇಂಥ ಹಲವಾರು ಕ್ಷೇತ್ರಗಳಲ್ಲಿ ಮಹತ್ತರ ಕಾಣಿಕೆ ಸಲ್ಲಿಸಿರುವ ಎಲ್ ಎಸ್ ಎಸ್ ನಮ್ಮ ತಂದೆಯವರ ಆತ್ಮೀಯರಲ್ಲಿ ಒಬ್ಬರಾಗಿದ್ದರು.
1972ರಲ್ಲಿ ಕರ್ಣಾಟಕ ಸಾಹಿತ್ಯ ಅಕಾದೆಮಿಯವರು ನಮ್ಮ ತಂದೆ, ಎಲ್ ಎಸ್ ಎಸ್ ಹಾಗೂ ಕುಲಕರ್ಣಿ (ಪೂರ್ಣ ಹೆಸರು ನೆನಪಿಲ್ಲ) ಅವರುಗಳನ್ನು ಸಾಹಿತ್ಯ ವಿನಿಮಯ ಕಾರ್ಯಕ್ರಮದಡಿ ಕೇರಳ ಪ್ರವಾಸ ಮಾಡಲು ಆಯ್ಕೆ ಮಾಡಿತ್ತು. ಮೂರೂ ಸಾಹಿತಿಗಳು ಕೇರಳ ಸರ್ಕಾರದ ಅತಿಥಿಗಳಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜನಜೀವನ ಅರಿಯುವುದು, ಮಲಯಾಳಂ ಕವಿಗಳ ಜತೆ ಸಮಾಲೋಚನೆ, ಜಂಟಿ ಕವಿಗೋಷ್ಠಿ ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು.ಕೇರಳ ಸರ್ಕಾರ ಒಬ್ಬ ಸರ್ಕಾರಿ ಅಧಿಕಾರಿಯನ್ನು ನಿಯೋಜಿಸಿ ವ್ಯವಸ್ಥೆ ಮಾಡುವುದರ ಜತೆಗೆ ಪ್ರವಾಸದುದ್ದಕ್ಕೂ ಈ ಸದಸ್ಯ ಸಾಹಿತಿಗಳ ಜತೆ ಇರಬೇಕೆಂದು ತಿಳಿಸಿತ್ತು.
ಈ ಪ್ರವಾಸದಿಂದಾಗಿ ನಮ್ಮ ತಂದೆ ಹಾಗೂ ಎಲ್ ಎಸ್ ಶೇಷಗಿರಿರಾವ್ ನಡುವೆ ಬಹಳ ನಿಕಟವಾದ ಬಾಂಧವ್ಯ ಏರ್ಪಟ್ಟಿತು. ಅವರು ಪ್ರವಾಸದುದ್ದಕ್ಕೂ ನಮ್ಮ ತಂದೆಯವರ ಕವನಗಳ ಸಾರವನ್ನು ಇಂಗ್ಲಿಷ್ ನಲ್ಲಿ ತಿಳಿಸಿಕೊಟ್ಟಿದ್ದರು. ಭಾಷೆ ಬಾರದವರ ಮೇಲೂ ಕೆ ಎಸ್ ನ ಅವರ ಕಾವ್ಯ ತನ್ನ ನಾದ,ಲಯಗಳಿಂದ ಪರಿಣಾಮ ಬೀರಿದುದನ್ನು ಎಲ್ ಎಸ್ ಎಸ್ ಮೆಚ್ಚುಗೆಯಿಂದ ಗುರುತಿಸಿದ್ದರು.
ಮುಂದೆ 1976ರಲ್ಲಿ ಕೆ ಎಸ್ ನ ಅವರ ತೆರೆದ ಬಾಗಿಲು ಕವನ ಸಂಕಲನ ಪ್ರಕಟವಾದಾಗ ಅದಕ್ಕೊಂದು ಸವಿಸ್ತಾರವಾದ ಮುನ್ನುಡಿಯನ್ನು ಬರೆದುಕೊಟ್ಟರು. ಆ ಮುನ್ನುಡಿಯಲ್ಲಿ ಸಂಕಲನದ ಪ್ರತಿಯೊಂದು ಕವನ ಕುರಿತು ತುಲನಾತ್ಮಕವಾದ ಹಾಗೂ ವಸ್ತುನಿಷ್ಠವಾದ ಬರೆದದ್ದು ನಮ್ಮ ತಂದೆಯವರಿಗೆ ಸಂತಸ ತಂದಿತ್ತು.
ನನಗೂ ಎಲ್ ಎಸ್ ಶೇಷಗಿರಿರಾವ್ ಗುರುಸಮಾನರೇ.1978ರಲ್ಲಿ ನಾನು ಬ್ಯಾಂಕ್ ಸೇರುವಾಗ ಅವರ ಹೆಸರನ್ನು ಪರಾಮರ್ಶನೆ(reference)ಗೆ ಕೊಟ್ಟಿದ್ದೆ.ಆ ಸಂದರ್ಭದಲ್ಲಿ ಬ್ಯಾಂಕ್ ನೀಡಿದ್ದ ನಮೂನೆ ಪತ್ರವನ್ನು ಭರ್ತಿ ಮಾಡಿ,ಸಹಿಹಾಕಿ ನನಗೆ ಶುಭ ಹಾರೈಸಿದ್ದರು. ನನ್ನ ಕವನ ಸಂಕಲನ “ಇಂದೂ ಇದ್ದಾರೆ” ಅವರಿಗೆ ಅಭಿಪ್ರಾಯ ಬಯಸಿ ಕಳುಹಿಸಿದಾಗ, ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಹದಿನೈದು ದಿನಗಳಲ್ಲಿ ತಮ್ಮ ವಿವರವಾದ ಅನಿಸಿಕೆಗಳನ್ನು ತಿಳಿಸಿದ್ದರು. ಆ ಪತ್ರದಲ್ಲಿ “ನಿಮ್ಮ ತಂದೆಯವರ ಕವನಗಳಲ್ಲಿ ಕಾಣುವ ವಿಷಾದ ವ್ಯಂಗ್ಯ ನಿಮ್ಮ ರಚನೆಗಳಲ್ಲೂ ಕಂಡಿದ್ದೇನೆ. ಮೊದಲ ಕವನ ಸಂಕಲನ ಹೊರತರಲು ಇಷ್ಟೇಕೆ ತಡ ಮಾಡಿದಿರಿ? ಬರವಣಿಗೆಗೆ ತುಕ್ಕು ಹಿಡಿಸಬೇಡಿ .” ಎಂದಿದ್ದ ಅವರ ಮಾತು ನನಗೆ ಆಶೀರ್ವಾದ ಹಾಗೂ ಎಚ್ಚರಿಕೆ ಎರಡೂ ಆಗಿದೆ.
ಅವರ ಇಂಥ ಸಹೃದಯತೆಯೇ ನಮ್ಮ ತಂದೆಯವರಿಗೂ ಬಹಳ ಪ್ರಿಯವಾಗಿತ್ತು.
(ಮುಂದುವರಿಯುವುದು….)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=29434
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು )
ಚೆನ್ನಾದ ನೆನಪಿನ ಮಾಲೆ…
ಧನ್ಯವಾದ
ಚೆನ್ನಾಗಿದೆ ಸರ್
ತಮ್ಮ ಪ್ರತಿ ಲೇಖನದ ಮೂಲಕ ಸಾಹಿತ್ಯಲೋಕದ ದಿಗ್ಗಜರ ಪರಿಚಯವಾಗುತ್ತಿರುವುದು ಮುದ ಕೊಡುತ್ತಿದೆ.
ತಮ್ಮ ತಂದೆಯರೊಡನೆ ಒಡನಾಡಿದ ಮಹಾನ್ ಕವಿಗಳ, ಸಾಹಿತಿಗಳ ಬಗ್ಗೆಯೂ ತಿಳಿಯುವ ಅವಕಾಶ ಕಲ್ಪಿಸುತ್ತಿರುವ ಈ ಲೇಖನ ಮಾಲೆಯು ಅದ್ಭುತವಾಗಿ ಮೂಡಿಬರುತ್ತಿದೆ. ಧನ್ಯವಾದಗಳು ಸರ್.
ಧನ್ಯವಾದ