ಯಾರಿಗೆ ಹೇಳೋಣ ನಮ್ಮ ಕಷ್ಟ..?
ಆತ್ಮೀಯ ಪೋಷಕರೇ, ವಿದ್ಯಾರ್ಥಿ ಮಿತ್ರರೇ, ಶಿಕ್ಷಣ ಇಲಾಖೆಯ ಅಧಿಕಾರಿಗಳೇ, ರಾಜಕೀಯ ಧುರೀಣರೇ, ಮಹಾಜನಗಳೇ, ಸಮೂಹ ಮಾಧ್ಯಮ, ಸುದ್ಧಿ ವಾಹಿನಿಗಳ ಮಿತ್ರರೇ, ಸಾಮಾಜಿಕ ಜಾಲತಾಣಗಳ ಮಿತ್ರರೇ ನಿಮ್ಮಗೆಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರ ಪರವಾಗಿ ನಮಸ್ಕಾರಗಳು.
ನಮ್ಮಂತೆಯೇ ಲಕ್ಷಾಂತರ ಜನರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ, ಸಿಬ್ಬಂದಿ ವರ್ಗದವರಾಗಿ ಅನೇಕ ವರ್ಷಗಳಿಂದ ಜೀವನ ನಿರ್ವಹಣೆಗಾಗಿ, ಭವ್ಯ ಭಾರತದ ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾಯ, ವಾಚ, ಮನಸ್ಸಿನಿಂದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಈ ವರ್ಷ ಕರೋನ ಮಹಾಮಾರಿಯ ಆರ್ಭಟದಿಂದ ನಮ್ಮೆಲ್ಲರ ಬದುಕುಗಳು ಸಹ ದುಸ್ತರವಾಗಿವೆ. ನಮ್ಮಲ್ಲಿರುವ ಕೆಲವು ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳುವೆ.
ಶಿಕ್ಷಕರಿಲ್ಲದೇ ಶಿಕ್ಷಣವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಒಂದು ಸುಂದರವಾದ ಸಮಾಜದ, ದೇಶದ ನಿರ್ಮಾತೃಗಳನ್ನು ಸೃಷ್ಟಿಸುವ ಶಿಲ್ಪಿಗಳೇ ಶಿಕ್ಷಕರು. ಸಮಾಜದ ಪ್ರತಿಯೊಬ್ಬ ಸಾಧಕರ ಹಿಂದೆಯು ಶಿಕ್ಷಕರ ಶ್ರಮ, ಕಾಳಜಿಯೂ ಇದ್ದೆ ಇರುತ್ತದೆ. ಮಕ್ಕಳ ಲಾಲನೆ ಪಾಲನೆಯಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವೋ, ಮಕ್ಕಳ ಭೌದ್ಧಿಕ ಜ್ಞಾನವನ್ನು ವೃದ್ಧಿಸುವಲ್ಲಿ ಶಿಕ್ಷಕರ ಪಾತ್ರವೂ ಸಹ ಅಷ್ಟೇ ಮುಖ್ಯವಾಗಿರುತ್ತದೆ. ಜಾತಿ, ಲಿಂಗ, ಧರ್ಮ, ಭಾಷೆ, ಪ್ರಾಂತ್ಯ ಮುಂತಾದ ತಾರತಮ್ಯಗಳನ್ನು ಲೆಕ್ಕಿಸದೆ ಎಲ್ಲಾ ಮಕ್ಕಳನ್ನು ಸಮಾನ ರೀತಿಯಲ್ಲಿ ನೋಡುವರೇ ಶಿಕ್ಷಕರು. ದೇಶಕ್ಕೆ ವಿದ್ಯಾವಂತ ಹಾಗೂ ಆದರ್ಶಪ್ರಾಯರಾದ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಪಾತ್ರದ ಜೊತೆಗೆ ಖಾಸಗಿ ಶಾಲೆಗಳ ಶಿಕ್ಷಕರ ಕೊಡುಗೆಯು ಕೂಡ ಅಪಾರವಿದೆ. ಆದರೆ ಸರ್ಕಾರಿ ಶಾಲಾ ಶಿಕ್ಷಕರ ಜೀವನ ಮುಟ್ಟದಂತೆ ಖಾಸಗಿ ಶಾಲೆಗಳ ಶಿಕ್ಷಕರ ಜೀವನ ಮುಟ್ಟವು ಸುಧಾರಿಸಿಲ್ಲ..
ಇತ್ತೀಚೆಗೆ ಸುದ್ಧಿ ವಾಹಿನಿಗಳಲ್ಲಿ ಕೇಳಿ ಬರುತ್ತಿರುವ ಬ್ರೇಕಿಂಗ್ ನ್ಯೂಸ್ಗಳು, ಈ ವರ್ಷ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂಬ ಅಭಿಯಾನದ ಚರ್ಚೆ, ಕೆಲವು ಶಿಕ್ಷಣ ಸಂಸ್ಥೆಗಳ ಶಾಲಾ ದಾಖಲಾತಿ ಶುಲ್ಕ ವಸೂಲಿ ದಂಧೆ, ಈ ವರ್ಷ ಶಾಲೆಗಳನ್ನು ತೆರೆಯಲೇ ಬಾರದೆಂಬುವ ಅಭಿಯಾನ, ಆನ್ಲೈನ್ ತರಗತಿಗಳ ಸಾಧಕ ಬಾಧಕಗಳ ಚಿತ್ರಣ, ಕರೋನ ಮಹಾಮಾರಿಯ ಆರ್ಭಟ, ದೇಶದ ಆರ್ಥಿಕ ಬಿಕ್ಕಟ್ಟು, ಮಧ್ಯಮ ವರ್ಗದ ಜನರ ತೋಳಲಾಟ, ರಾಜಕೀಯ, ಸಿನಿಮಾ ಹಾಗೂ ಕ್ರೀಡಾ ತಾರೆಗಳ ಬಗ್ಗೆ ಇರುವಷ್ಟು ಗಮನವು ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಅಲ್ಲಿನ ಸಿಬ್ಬಂದಿ ವರ್ಗದವರ ಜೀವನ ದುಸ್ತರವಾಗಿರುವುದರ ಕಡೆಗೆ ಯಾಕಿಲ್ಲವೆಂಬುವ ಯಕ್ಷಪ್ರಶ್ನೆಯೂ ಮೂಡುತ್ತದೆ.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಾಗಿ ಕೆಲಸ ಮಾಡುವವರು ಮಧ್ಯಮ ವರ್ಗದವರಾಗಿದ್ದು. ಅವರು ಸಹ ಪ್ರತಿ ತಿಂಗಳು ಮನೆಯ ಬಾಡಿಗೆ, ದಿನಸಿ ಸಾಮಾನುಗಳು, ಗ್ಯಾಸ್ ಸಿಲಿಂಡರ್, ಕರೆಂಟ್ ಬಿಲ್, ಹಾಲು, ಪೇಪರ್, ಡಿಶ್ ಬಿಲ್, ಮನೆಯ ಸದಸ್ಯರ ಆರೋಗ್ಯದ ಸಮಸ್ಯೆಗಳ ಚಿಕಿತ್ಸೆಗೆ ಆಸ್ಪತ್ರೆಯ ಖರ್ಚು ವೆಚ್ಚ ಇತ್ಯಾದಿ ಸಮಸ್ಯೆಗಳ ಬಗ್ಗೆ ಒಂದು ದಿನವೂ ಯಾರೂ ಸಹ ಚರ್ಚೆ ಮಾಡಲಿಲ್ಲ. ಕೆಲವು ಕಾರ್ಮಿಕ ವರ್ಗದವರಿಗೆ ಸಿಕ್ಕಂತಹ ಸಹಾಯ ಧನಗಳು ಶಿಕ್ಷಕರಿಗೆ ಸಿಗಬೇಕೆಂದು ಯಾರು ಕೂಡ ಸರ್ಕಾರದ ಗಮನವನ್ನು ಸೆಳೆಯಲಿಲ್ಲ. ಯಾಕೆ ಶಿಕ್ಷಕರು ಮತ್ತು ಅಲ್ಲಿನ ಸಿಬ್ಬಂದಿ ವರ್ಗದವರು ಮನುಷ್ಯರಲ್ಲವೇ….?
ಕರೋನದ ಲಾಕ್ ಡೌನ್ ಪರಿಣಾಮದಿಂದಾಗಿ ಒಂದರಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷೆಗಳಿಲ್ಲದೇ ಉತ್ತೀರ್ಣಗೊಳಿಸಿ, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಾರ್ಚ್ ಅಂತ್ಯದಿಂದ ಏಪ್ರಿಲ್, ಮೇ, ಜೂನ್, ಮುಂದೆ ಶಾಲೆಗಳು ಆರಂಭವಾಗುವವರೆಗೂ ರಾಜ್ಯ ಸರ್ಕಾರವೇನೋ 6ನೇ ವೇತನ ಆಯೋಗದ ರೀತಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿ ಕೆಲಸ ಮಾಡುವ ನೌಕರರಿಗೆ ಸಂಬಳ ನೀಡಬೇಕೆಂದು ಆದೇಶವನ್ನು ನೀಡಿದೆ.
ಆದರೆ ಈ ಆದೇಶದಷ್ಟು ಸುಲಭವಾಗಿ ಶಾಲಾ ಶಿಕ್ಷಕರು ಮತ್ತು ಅಲ್ಲಿನ ಸಿಬ್ಬಂದಿ ವರ್ಗದವರಿಗೆ ವೇತನವನ್ನು ನೀಡಲು ಶಿಕ್ಷಣ ಸಂಸ್ಥೆಗಳಿಗೆ ಆದಾಯದ ಮೂಲಗಳಾದ ಸರ್ಕಾರವು ನೀಡಬೇಕಾಗಿರುವ ‘ಆರ್.ಟಿ.ಈ’ ಬಾಕಿ ಶುಲ್ಕ ಹಾಗೂ ಶಾಲಾ ಶುಲ್ಕ ಪಾವತಿಯನ್ನು ಪೋಷಕರು ಸಂದಾಯ ಮಾಡಿದಾಗ ಮಾತ್ರ ನೀಡಲು ಸಾಧ್ಯವಾಗುತ್ತದೆ. ಆದರೆ ಈಗ ಬರುತ್ತಿರುವ ಸುದ್ದಿಗಳನ್ನು ನೋಡಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆದಾಯವೇ ನಿಂತು ಹೋಗಿರುವಾಗ ಸಿಬ್ಬಂದಿ ವರ್ಗದವರಿಗೆ ಸಂಬಳ ನೀಡುವುದಾದರು ಹೇಗೆ ಎಂದು ಯೋಚಿಸಬೇಕಾಗಿದೆ.
ಖಾಸಗಿ ಶಾಲೆಗಳಿಂದ ಶಿಕ್ಷಕರ ಮತ್ತು ಸಿಬ್ಬಂದಿ ವರ್ಗದವರ ಜೀವನ ಮಾತ್ರ ನಡೆಯುತ್ತಿಲ್ಲ. ಇವರ ಜೊತೆಗೆ ಆಟೋ, ವ್ಯಾನ್ ಚಾಲಕರು, ವಾಚ್ ಮ್ಯಾನ್ಗಳು, ಪಠ್ಯ ಪುಸ್ತಕ ಸಾಮ್ರಾಗಿಗಳ, ತಿಂಡಿ ತಿನಿಸು ಮಾರುವ ಸಣ್ಣ ಪುಟ್ಟ ಅಂಗಡಿ ವ್ಯಾಪಾರಿಗಳು, ಪ್ರಿಂಟಿಂಗ್ ಪ್ರೆಸ್ ಕೆಲಸಗಾರರು, ಶಾಲಾ ಮಕ್ಕಳ ಬಟ್ಟೆ ಹೊಲಿಯುವವರು, ಶಾಲಾ ಸಮವಸ್ತ್ರ, ಬ್ಯಾಗ್, ನೀರಿನ ಬಾಟಲ್, ಟಿಫಿನ್ ಬಾಕ್ಸ್ , ಶಾಲಾ ಮಕ್ಕಳಿಗೆ ಶೂ ಸಾಕ್ಸ್ ಮಾರಾಟ ಮಾಡುವ ಅಂಗಡಿಯವರ ಜೀವನವು ಸಹ ಶಾಲೆಗಳ ಆರಂಭದ ಮೇಲೆಯೇ ನಿಂತಿದೆ.
ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸದ್ಯದ ಮಟ್ಟಿಗೆ ಶಾಲೆಗಳು ತೆರೆಯದಿರುವ ನಿರ್ಧಾರವೇನೋ ಸರಿಯಿದೆ. ಆದರೆ ಖಾಸಗಿ ಶಾಲೆಗಳನ್ನೇ ನಂಬಿಕೊಂಡು ಜೀವನ ನಡೆಸುವವರ ಬಗ್ಗೆಯೂ ಸರ್ಕಾರ, ಸುದ್ಧಿ ಮಾಧ್ಯಮಗಳು ಗಮನ ಹರಿಸಬೇಕಾಗಿದೆ. ರಾಜ್ಯದ, ದೇಶದ ಕೆಲವೇ ಕೆಲವು ಶಾಲೆಗಳು ಮಾಡುವ ತಪ್ಪಿಗೆ ಎಲ್ಲ ಶಾಲೆಗಳನ್ನು ದೂಷಿಸುವುದು, ಅಪರಾಧ ಕೃತ್ಯಗಳಂತೆ ಬಿಂಬಿಸುವುದು ಸರಿಯಲ್ಲ..
ನಮ್ಮಂತಹ ಲಕ್ಷಾಂತರ ಪದವೀಧರ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗ ನೀಡಿ, ಜೀವನ ಭದ್ರತೆಯನ್ನು ನೀಡಿದ ಶಿಕ್ಷಣ ಸಂಸ್ಥೆಗಳನ್ನು ಈಗ ಬೆಂಬಲಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಬನ್ನಿ ನಮಗೆಲ್ಲರಿಗೂ ಜೀವನೋಪಾಯಕ್ಕೆ ಹಾಗೂ ರಾಷ್ಟ್ರದ ಸತ್ಪ್ರಜೆಗಳನ್ನು ರೂಪಿಸುವುದಕ್ಕೆ ಅವಕಾಶ ನೀಡಿದ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ಕೈ ಜೋಡಿಸೋಣ, ಬೆಂಬಲವಾಗಿ ನಿಲ್ಲೋಣ….
-ಶಿವಮೂರ್ತಿ.ಹೆಚ್, ದಾವಣಗೆರೆ.
ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು
ಸಮಯೋಚಿತ ಲೇಖನ..
ಧನ್ಯವಾದಗಳು ಮೇಡಂ
ಹೌದು ಸರ್, ಯಾರೂ ಶಿಕ್ಷಕರ ಪರವಾಗಿ ದನಿ ಎತ್ತಿದವರಿಲ್ಲ ಅನ್ನುವುದು ನೋವಿನ ವಿಚಾರವೆ, . ಇವತ್ತು ಇಡೀ ಜಗತ್ತೇ ಸಂಕಷ್ಟದಲ್ಲಿದೆ.
ನಿಜ ಮೇಡಂ
ಸಕಾಲಿಕ ಚಿಂತನಾತ್ಮಕ ಲೇಖನ. ಖಾಸಗಿ ಶಾಲೆಯ ಶಿಕ್ಷಕರ ಕಷ್ಟವನ್ನು ಮನ ಮುಟ್ಟುವಂತೆ ಚಿತ್ರಿಸಿರುವಿರಿ. ಅರಗಿಸಿಕೊಳ್ಳಲಾಗದ ಕಠೋರ ಸತ್ಯ ನಮ್ಮ ಮುಂದಿದೆ. ನನಗೆ ತಿಳಿದಿರುವ ಪ್ರತಿಷ್ಠಿತ ಖಾಸಗಿ ಶಾಲೆಯ ಶಿಕ್ಷಕರಿಗೆ ಸಂಬಳ ಕೊಡಲು ಸಾಧ್ಯವಾಗದೆ, ಶಿಕ್ಷಕ ಶಿಕ್ಷಕಿಯರು ಶಾಲೆಗೆ ಬಂದು ವಿವಿಧ ಚಿಪ್ಸ್, ತಿಂಡಿಗಳನ್ನು ಮಾಡಿ ಮಾರಿ ಬಂದ ದುಡ್ಡನ್ನು ಹಂಚಿಕೊಳ್ಳುವ ಕಾರ್ಯ ಆರಂಭಿಸಿರುವುದು ನೋಯುವ ಸಂಗತಿ..ಮುಂದೇನಾಗುವುದೋ ಯಾರಿಗೂ ಅರಿಯದು
ವಾಸ್ತವ ಸತ್ಯ ಮೇಡಂ
ಖಾಸಗಿ ಶಾಲಾ ಶಿಕ್ಷಕರು ನಿಜವಾಗಿಯೂ ಈ ಸಮಯದಲ್ಲಿ ಅತೀವ ಸಂಕಷ್ಟ ದಲ್ಲಿದ್ದಾರೆ.ಲೇಖನ ಅವರ ಬವಣೆ ಯನ್ನೂ ಮನ ಮುಟ್ಟುವಂತೆ ಚಿತ್ರಿಸಿದೆ.
ಧನ್ಯವಾದಗಳು ಮೇಡಂ