ಅಡ್ಡ ಹೆಸರುಗಳ ಲೋಕದಲ್ಲಿ….

Share Button

ದೀಪಾವಳಿ ಹಬ್ಬ ನಮ್ಮ ಊರು ಕಡೆ ವರ್ಷದಲ್ಲೇ ದೊಡ್ಡ ಹಬ್ಬ.ಹಿರಿಯರಿಗೆ ಎಡೆ ಇಡೋದು, ಹಬ್ಬದ ಮಾರನೆಗೆ ವರ್ಷತೊಡಕಿಗೆ ಮರಿ ಕಡೆದು ನೆಂಟರಿಷ್ಟರನ್ನೆಲ್ಲ ಊಟಕ್ಕೆ ಕರೆದು ಬವಣಿಸುವುದು ಎಲ್ಲಾ ಈ ಹಬ್ಬದಲ್ಲಿ ಬಲು ಜೋರು. ಹೇಗಿದ್ರೂ ಹಬ್ಬಕ್ಕೆ ಮೂರು ದಿನ ರಜ ಸಿಗೋದ್ರಿಂದ ದೂರದ ಊರುಗಳಲ್ಲಿ ಇರೋರು ಕೂಡ ಆರಾಮಾಗಿ ಬಂದು ಹಬ್ಬ ತೀರಿಸಿಕೊಂಡು ಹೋಗಬಹುದು. ಹಾಗಾಗಿ ಬಂಧು ಬಳಗದವರೆಲ್ಲ ಒಟ್ಟಾಗಿ ಸೇರಲು ಒಂದು ಒಳ್ಳೆಯ ನೆವ ದೀಪಾವಳಿ ಕೊಡುತ್ತದೆ.

ಹಬ್ಬದ ದಿನದ ಸೀ ಊಟಾ ಕ್ಕೆ ಜನ ಕಮ್ಮಿ ಮಾರನೇ ದಿನದ ಮಾಂಸದೂಟಕ್ಕೆ ಬರೋರೆ ಹೆಚ್ಚು. ಹೀಗೆ ಒಂದು ವರ್ಷದ ಹಬ್ಬದ ವರ್ಷತೊಡಕಿಗೆ ನಮ್ಮಮ್ಮನ ಜೊತೆ ನಾವು ಮೂವರು ನಮ್ಮ ಚಿಕ್ಕಮ್ಮನ ಮನೆಗೆ ಹೋಗಿದ್ದೆವು.ನಾವೆಲ್ಲಾ ಹೈಸ್ಕೂಲ್ ನ ಬೇರೆ ಬೇರೆ ತರಗತಿ ಗಳಲ್ಲಿ ಓದುತ್ತಿದ್ದಾಗ ಹೋಗಿದ್ದು.ಆಗೆಲ್ಲ ಈಗಿನಂತೆ ಬ್ರಾಯ್ಲರ್ ಕೋಳಿಗಳ ಹಾವಳಿ ಅಷ್ಟಿರಲಿಲ್ಲ, ಕೋಳಿ ಅಂದರೆ ಮನೆಗಳಲ್ಲಿ ಸಾಕುವ ನಾಟಿ ಕೋಳಿಗಳೆ. ನಮ್ಮ ಚಿಕ್ಕಮ್ಮ ಅಂತೂ ಕೋಳಿ ಸಾಕೊದ್ರಲಿ ನಮ್ಮ ವಠಾರದಲ್ಲೇ  ಫೇಮಸ್.  ಸತೊಂಬತ್ತು ಕಾಲವೂ ಅವರ ಮನೆ ಕೊಟ್ಟಿಗೆಯಲ್ಲಿ ಕೋಳಿಗಳು ಹಿಂಡು ಹಿಂಡಾಗಿ ಪಿತಗರಿಯುತ್ತಿದ್ದವು. ಅವರ ಮನೆಗೆ ಹೋದರೆ ನಾಟಿಕೋಳಿ ಸಾರು ಒತ್ತು ಶಾವಿಗೆ ಊಟಾ ಹಾಕದೆ ಅವರು  ಕಳಿಸುತ್ತಿರಲಿಲ್ಲ. ಹಾಗಾಗಿ  ಅವರ ಮನೆಗೆ ನೆಂಟರು ಯಾವಾಗ್ಲೂ ಜಾಸ್ತಿ.

ಅಂತೆ  ಆ ದಿನ ಕೂಡ ಒಂದು ಮರಿಯ ಜೊತೆಗೆ ಒಂದತ್ತು ಕೋಳಿಗಳ ಕೊಯ್ದು ಔತಣಕ್ಕೆ  ಸಿದ್ದತೆ ನಡಿತಿತ್ತು. ಕೋಳಿಗಳಲ್ಲಿ ಚೆನ್ನಾಗಿ ಕೊಬ್ಬಿರುವವನ್ನ ಹಿಡಿಯುವ ಕಾರ್ಯ ನನ್ನ ಚಿಕ್ಕಮ್ಮನ ಮಗಂದು.ಅವನೋ ಕೊಟ್ಟಿಗೆಲ್ಲೆಲ್ಲ ಅಟ್ಟಾಡಸಿಕೊಂಡು ಕೋಳಿ ಹಿಡಿತಿದ್ದ.ನಾವು ಕೂಡ ಎಲ್ಲ ಸೇರಿಕೊಂಡು ಹಿತ್ತಲಲ್ಲಿ ಬೊಬ್ಬೆಯೋ ಬೊಬ್ಬೆ. ಅಂತೂ ಇಂತೂ ಕುಯ್ಯಲು  ಗುರುತು ಮಾಡಿದ್ದ ಎಲ್ಲಾ ಕೋಳಿ ಹಿಡಿದು ಕೊಟ್ಟಿದ್ದಾಯಿತು. ಅಷ್ಟರಲ್ಲಿ ಹಿತ್ತಲಿನಲ್ಲಿ ಒಂದು ಕುರಿಮರಿ ಗಾತ್ರಕ್ಕಿದ್ದ ಒಂದು ಗಿರಿರಾಜ ಹುಂಜ ಕ್ಕೋ ಕ್ಕೊ ಕ್ಕೊ ಅಂತ ಗತ್ತಿನಿಂದ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ಓಡಾಡತೊಡಗಿತು.

ನನಗೆ ಯಾವಾಗಲೂ ಕೋಳಿ ತಲೆ ತಿನ್ನೋಕೆ ಬಹಳ ಇಷ್ಟ, ಆಗ ಆ ಕೊಬ್ಬಿದ ಕೋಳಿಯ ದಪ್ಪ ತಲೆ ಅದರ ಜುಟ್ಟು ಎಲ್ಲಾ ನೋಡಿ ,ಬಾಯಲ್ಲಿ ನೀರೂರಿ,”ಲೋ ಅದ ಹಿಡ್ಕೊಳೋ ಕಮ್ಮಿ ಅಂದ್ರು ಐದು ಕೆಜಿ ಮಾಂಸ ಸಿಗುತ್ತೆ” ಅಂತ ಮುನ್ನುಗ್ಗಿದವಳ ಕೈ ಹಿಡಿದು ಹಿಂದಕ್ಕೆಳೆಯುತ್ತ, “ಲೆ,ಅದು  ನಮ್ಮ ಕೊಳಿಯಲ್ಲ, ಹೊಟ್ಟೆ ಹೆಡ್ತಿದು, ಬಾ ಬೇಡ, ಈಗ ಹಿಡ್ ದಿರವ್ ಸಾಕು”ಅಂತ ತಡೆದ.

ನಂಗೆ ಹೊಟ್ಟೆ ಹೆಡ್ತಿ ಅಂದ ತಕ್ಷಣ ನಗು ತಾಳಲಾರದೆ “ಅದ್ಯಾರೋ ಹೊಟ್ಟೆ” ಅಂದಿದ್ದಕ್ಕೆ, ವಿಪರೀತ ದಪ್ಪವಾಗಿದ್ದ ಆತನ ಪಕ್ಕದ ಮನೆಯವನು ಅಂತ ಗೊತ್ತಾಯಿತು. ನಾ ನಗುವುದು ನೋಡಿ ಅವನಿಗೆ ಆಶ್ಚರ್ಯ.”ಅದ್ರಲ್ಲಿ ನಗಾಡಕ್ಕೆ ಏನದೆ ಅಂತ  ನಗಾಡಿ, ನಮ್ಮೂರಲ್ಲಿ ಹಂಗೆಯ, ಎಲ್ರುಗೂ ಒಂದೊಂದು ಅಡ್ಡ ಹೆಸರದೆ”ಎಂದ. ನಂಗೆ ಕುತೂಹಲ ಕೆರಳಿ “ಹಂಗೆಲ್ಲಾ ಕರೆದ್ರೆ, ಅವರಿಗೆ ಬೇಜಾರಾಗಲ್ವೇನೋ” ಅಂದ್ರೆ, “ನಿಂದೊಳ್ಳೆ ಸರಿಯಾಯಿತು, ಎಷ್ಟೋ ಜನಕ್ಕೆ ಅವ್ರ ನಿಜ್ವದ್ ಹೆಸ್ರೆ ಮರ್ತೋಗದೆ, ಅಡ್ಡೇಸ್ರು ಕರೆದ್ರೆನೆ ಓ ಅನ್ನೋದು” ಅಂತ ನಗಾಡಿದ.

ಅಷ್ಟರಲ್ಲಿ ನಿದ ನಿದಾನವಾಗಿ ಅಡುಗೆ ಕೆಲಸ ಶುರುವಾಗಿ, ನೆಂಟರೆಲ್ಲ ಒಬ್ಬಬ್ಬೊರಾಗಿ ಬರತೊಡಗಿದರು.ನನ್ನ ಕಸಿನ್ಸ್ ಒಂದು ಹಿಂಡು  ಜನರಿದ್ದಾರೆ,ಎಲ್ಲಾ ಬಂದು ಸೇರ್ಕೊಂಡು ಒಂದು ರೂಮಿನಲ್ಲಿ ಕಲೆ ಹಾಕ್ಕೊಂಡು, ಹರಟೆ ನಗು ಬೊಬ್ಬೆ ಎಲ್ಲಾ ಶುರುವಾಯಿತು. ನನ್ನ ತಲೆಯಲ್ಲಿ ಬೆಳಿಗ್ಗೆ ಕೇಳಿದ್ದ ಹೊಟ್ಟೆ ಹೆಡ್ತಿ ಪದ ಇನ್ನೂ ನಗು ಉಕ್ಕಿಸುತ್ತಲೆ ಇತ್ತು. ಎಲ್ಲರಿಗೂ ಹೇಳ್ಕೊಂಡು ನಗಾಡಿದೆ. ಅದಕ್ಕೆ” ಲೆ ಅದರಲ್ಲೇನು, ಎಲ್ಲ ಊರಲ್ಲೂ ಎಲ್ರ ಮನೆಲೂ ಇರೋದೇ” ಅಂತ ಹೇಳಿದ ನನ್ನ ಮಾವನ ಮಗ ತನಗೆ ಗೊತ್ತಿರುವ ನೆಂಟರ ಅಡ್ಡ ಹೆಸರುಗಳನ್ನಲ್ಲ ಹೇಳಿ ನಗಿಸಿದ.ನಂತರ ಒಬ್ಬೊಬ್ಬರಂತೆ ಶುರು ಹಚ್ಚಿಕೊಂಡರು. ಕೆಲವು ಸಾಮಾನ್ಯ ಅಂಶಗಳೂ ಸಾಕಷ್ಟಿದ್ದವು.

ಅವರ ಪ್ರಕಾರ ವ್ಯಕ್ತಿಯ ದೈಹಿಕ ಚರ್ಯೆ ಅನುಸರಿಸಿ ಕುಳ್ಳ/ಕುಳ್ಳಿ, ಡುಮ್ಮ/ಡುಮ್ಮಿ, ಹೊಟ್ಟೆ ಇತ್ಯಾದಿ, ಕೈ ಡೊಂಕಗಿದ್ದರೆ ಚೊತ್ತ, ಎಡಗೈ ಬಳಕೆಯವರು ಲೊಡ್ಡೆ, ದಪ್ಪ ಕಣ್ಣುಳ್ಳವರು ಮೆಡ್ಡ/ಮೆಡ್ಡಿ, ಯಾವಾಗಲೂ ಶೀತ ಸುರಿಯುವವರಿಗೆ ಗೊಣ್ಣೇ, ಬಕ್ಕ ತಲೆಯವರಿಗೆ  ಬಾಂಡ್ಲಿ, ಅಂತ, ಬೆಳ್ಳಗಿದ್ದರೆ ಕೆಂದ/ಕೆಂದಿ, ಕಪ್ಪಾಗಿದ್ದರೆ ಕರಿಯ/ಕರ್ಮಿ ಮಾತನಾಡುವಾಗ ತೊದಲಿಸಿದರೆ ತೊಧ್ಲ, ಬಿಕ್ಕಳಿಸುವ ಸ್ವಭಾವ ಇದ್ದರೆ ಬಿಕ್ಲ, ಇತ್ಯಾದಿ ನಾಮಧೇಯಗಳು. ಇನ್ನೂ ಗುಣಲಕ್ಷಣಗಳಿಗೆ ತಕ್ಕಂತೆ ಪಾಪ ಸ್ವಲ್ಪ ಹೊಟ್ಟೆ ಕೆಡುವ ಸಮಸ್ಯೆ ಇದ್ದ ಒಬ್ಬ ಪುರ್ಲ, ಚೆನ್ನಾಗಿ ಚಟುವಟಿಕೆಯಿಂದ ಇದ್ದರೆ ಕುದುರೆ, ಕುಡಿದು ತೊರಾಡುವವರು ತೂರಣ್ಣ, ಹೀಗೆ ಥರಾವರಿ ಉದಾಹರಣೆಗಳು ಎದ್ದು ಬರತೊಡಗಿದವು.

ಇನ್ನು ಬೂದ, ಕಂಟಿ, ಭಟ್ಟ, ಟರ್ರೆ ಇತ್ಯಾದಿ ನಾಮಧೇಯ ಅದು ಹೇಗೆ ಬಂದವೋ ಗೊತ್ತಿಲ್ಲದಿದ್ದರು ಸರಾಗವಾಗಿ ಬಳಕೆಯಲ್ಲಂತು ಇದ್ದವು ತೂರಣ್ಣಾನಿಗಂತು ಆತನ ಹುಟ್ಟು ಹೆಸರು ತಕ್ಷಣಕ್ಕೆ ನೆನಪಿಗೆ ಬರುತ್ತಿರಲಿಲ್ಲ. ಅದರಿಂದ ಆತ ಸುಮಾರು ಸರಿ ಪಜೀತಿಗೆ ಸಿಲುಕಿದ್ದು ಇದೆ. ಒಮ್ಮೆ ವೋಟ್ ಹಾಕಲು ಹೋದಾಗ ಅವನ ಐ ಡಿ ಕಾರ್ಡ್ ತೋರಿಸಿದಾಗ ಮತಗಟ್ಟೆ ಅಧಿಕಾರಿ ನಿಯಮದಂತೆ ಆತನ ಹೆಸರು “ಚಿಕ್ಕೆಗೌಡ” ಅಂತ ಗಟ್ಟಿಯಾಗಿ ಹೇಳಿದಾಗ ಆತ ಅಲ್ಲ “ನನ್ ಹೆಸರು ತೂರಣ್ಣ” ಅಂದಾಗ ಹಿಂದೆಯೇ ನಿಂತಿದ್ದ ಆತನ ಹೆಂಡತಿ ತಲೆ ಚಚ್ಚಿಕೊಂಡು “ಇದ್ಯಾಕೆ, ಅಪ್ಪ ಅವ್ವ ಇಟ್ಟಿರೋ ಹೆಸ್ರು ಮರೆತ್ರೆ ಹೆಂಗೆ” ಅಂತ ತಿವಿದು ಎಚ್ಚರಿಸಿದಾಗಲೆ ಅವನಿಗೆ  ತನ್ನ  ನಿಜವಾದ  ಹೆಸರು  ಚಿಕ್ಕೆಗೌಡ  ಅಂತ  ಗ್ಯಾನವಾಗಿದ್ದು. ಇನ್ನೊಮ್ಮೆ ಯಾವುದೋ ಕೋರ್ಟ್ ಕೇಸ್ ನಲ್ಲಿ ಸಾಕ್ಷಿ ಹೇಳಲು ಹೋಗಿ ಅಲ್ಲಿ  “ಚಿಕ್ಕೇಗೌಡ” ಅಂತ ಕರೆದರೂ ಅವನು ಹೋಗದೆ ಸುಮ್ಮನೆ ಕೂತಿದ್ದು, ನಂತರ ನನ್ನ ಕರೀಲೆ ಇಲ್ಲ ಅಂತ ಎದ್ದು ಬಂದಿದ್ದನಂತೆ. ಪಾಪ ಅವನನ್ನು ಕರೆದು ಕೊಂಡು ಹೋಗಿದ್ದವರಿಗೂ ಗೊತ್ತಾಗಲಿಲ್ಲವಂತೆ.

ಅಂತೂ ಹಬ್ಬಕ್ಕೆ ಬಂದಿದ್ದ ನೆಂಟರಲ್ಲಿ ಹಲವರ ಅಡ್ಡ ಹೆಸರು,ಅದರ ಮೂಲ ಇತ್ಯಾದಿ ಗಳನ್ನಿಲ್ಲದಂತೆ ಹರಟೆ ಹೊಡೆದು, ಸೂರು ಹಾರಿ ಹೋಗುವಂತೆ ನಗಾಡಿ,ಚೆನ್ನಾಗಿ ಮರಿ ಊಟಾ ಹೊಡೆದು  ಹಿಂದಿರುಗಿದೆವು.

ಹಾಗೆ ನೋಡುತ್ತಾ ಹೋದರೆ ಜೀವನದ ಎಲ್ಲಾ ರಂಗಗಳಲ್ಲು ಅಡ್ಡ ಹೆಸ್ರು ಹೊಂದಿರೋರನ್ನ ನಾವು ಕಾಣೋದಿಲ್ಲವೆ?ಉದಾಹರಣೆಗೆ  ಹೇಳುವುದಾದರೆ ತಮ್ಮ ತಮ್ಮ ವೃತ್ತಿಗನುಗುಣವಾಗಿ, ಅಂಗಡಿ,ಕೋಳಿ,ಕುರಿ,ಲಾರಿ, ವೈನ್ ಸ್ಟೋರ್, ಪೈಲ್ವಾನ್  ಇತ್ಯಾದಿ ಪ್ರಿ ಫಿಕ್ಸ್ ಗಳು ಹೊಂದಿರುವವರು ಪ್ರತೀ ಊರಲ್ಲೂ ಸಿಕ್ಕೆ ಸಿಗ್ತಾರೆ. ಭೂಗತ ಲೋಕದ ಉದಾಹರಣೆ ಹೇಳೋದಾದ್ರೆ, ಅಡ್ಡ ಹೆಸರು ಇಲ್ಲದೆ ಇರುವ ರೌಡಿಗಳು ಇಲ್ಲವೇ ಇಲ್ಲವೇನೋ. ಅವರ ನಿಜವಾದ ಹೆಸರುಗಳಿಗಿಂತ ಅಡ್ಡ ಹೆಸರುಗಳೇ ಹೆಚ್ಚು ನೊಟೋರಿಯಸ್ ಅಂದ್ರೆ ತಪ್ಪಾಗಲಾರದು.

ಇನ್ನೂ ಶಾಲೆಯಲ್ಲಿ ಮೇಷ್ಟ್ರು ಟೀಚರ್ ಗಳಿಗೆ ಇಟ್ಟ ಅಡ್ಡ ಹೆಸರುಗಳಿಗಂತು ಲೆಕ್ಕವೇ ಇಲ್ಲ. ಅವರ ಇನಿಶಿಯಲ್ಸ್ ಗಳನ್ನೆ ಅಪಬ್ರಂಶ ಗೊಳಿಸಿ ಬೇರೆಯೇ ಹೆಸರು ಅವರಿಗೆ ಬಂದು ಹೋಗುತ್ತಿತ್ತು.  ಹೈಸ್ಕೂಲ್ ನಲ್ಲಿದ್ದಾಗ ಒಬ್ಬರು ಇತಿಹಾಸದ ಮೇಡಂ. ಎಂ ಬಿ ಎನ್ ಅಂತ. ಅವರ ಪಾಠದ ಶೈಲಿಗೆ ತಲೆದೂಗಿ ಆಕಳಿಸದೆ ಇದ್ದ ಭೂಸುರರು ಒಬ್ಬರೂ ತರಗತಿಯಲ್ಲಿ ಇರಲಿಲ್ಲ. ಎಂಥಾ ಕುಡುಮಿ ವಿದ್ಯಾರ್ಥಿಯೂ ಎಚ್ಚರ ತಪ್ಪಿ ಬೀಳುವಂತೆ ಪಾಠ ಹೇಳುವ ಅವರ ಶೈಲಿ ಇಡೀ ಶಾಲೆಯಲ್ಲಿ ಪ್ರಖ್ಯಾತವಾಗಿ, ನಮ್ಮ ಸೀನಿಯರ್ ವಿದ್ಯಾರ್ಥಿಗಳು ಅವರಿಗೆ ಪ್ರದಾನ ಮಾಡಿದ್ದ ಮಹಾ ಬೋರ್ ನಾಗಮ್ಮ ಎಮ್ ಬಿ ಎನ್ ಅನ್ನುವ ಹೆಸರನ್ನೇ ನಾವೂ ಮುಂದುವರೆಸಿದೆವು.  ಇನ್ನು ಗುಂಡ ಗುಂಡಗೆ ಬಿಳಿ ಬಿಳಿಯಾಗಿದ್ದ ನಮ್ಮ ಬಿ ಬಿ ಮೇಷ್ಟ್ರು ಬೋಂಡಾ ಬಸವಣ್ಣ, ಕುಳ್ಳಗಿದ್ದ ಜಿಎಂ ಮೇಷ್ಟ್ರು ಗಿಡ್ಡ ಮೂಲಂಗಿ. ಇನ್ನು ಕೆಲವು ಹೆಸರು ಗಳಿಗೆ ಅರ್ಥ ಹುಡುಕಲು ಒಂದು ಮಹಾನ್ ಸಂಶೋಧನೆಯೇ ಆಗಬೇಕಿತ್ತು. ಜಿ ಐ ಯಾಕೆ ಗವರ್ನಮೆಂಟ್ ಇಡ್ಲಿ, ಕೆ ಎಲ್ ಆರ್ ಯಾಕೆ ಕರ್ನಾಟಕ ಲಾರಿ ರಿಪೇರಿ ಆದ್ರೋ ಆ ಶಿವನಿಗೆ ಗೊತ್ತು. ಅಂದ ಹಾಗೆ ಶಿವನಿಗೂ ಮುಕ್ಕಣ್ಣ ಅಂತ ಅಡ್ಡ ಹೆಸರಲ್ಲವೆ.

ಇನ್ನು ನಮ್ಮ ಹೆಡ್ ಮೇಷ್ಟ್ರ ಗಿಟಾರ್ ಅಂತ ಯಾಕೆ ಅಡ್ಡ ಹೆಸರು ಪಡೆದರೋ ಆ ಇಟ್ಟವರಿಗೆ ಗೊತ್ತು.ಅಜ್ಜಿ ಟೀಚರ್,ತಾತ ಮೇಶ್ಟ್ರು ಬಹುಷ ಎಲ್ಲ ಶಾಲೆಗಳಲ್ಲಿ ಒಬ್ಬರಾದರೂ ಇದ್ದೇ ಇರೋರು. ಅದರಲ್ಲಿ ಎಲ್ಲಾ ಶಾಲೆಗಳಲ್ಲೂ ಅನಾಮಧೇಯವಾಗಿರುವಾ ಎಲ್ಲಾ ಶಾಲೆಗಳಲ್ಲೂ ಒಂದೇ ಹೆಸರಿನಿಂದ ಕರೆಯಲ್ಪಡುವ ವರು ದೈಹಿಕ ಶಿಕ್ಷಣ ಶಿಕ್ಷಕರು.ಅವರು ಎಲ್ಲ ಕಡೆ ಒಂದೋ ಪಿ ಟಿ ಮೇಷ್ಟ್ರು  ಇಲ್ಲವೇ ಪಿ ಟಿ ಮೇಡಂ,  ಬೇಕಾದ್ರೆ ಚಾಲೆಂಜ್ ತೊಗೊಳ್ಳಿ ನೂರಕ್ಕೆ ತೊಂಬತ್ತು ಮಕ್ಕಳಿಗೆ ಅವರ ಶಾಲೆ ಪಿ ಟಿ ಮೇಷ್ಟ್ರು/ಮೇಡಂ ಗಳ ಅಸಲಿ ಹೆಸರು ಗೊತ್ತಿರೋದಿಲ್ಲ.

ಬರಿ ವಿದ್ಯಾರ್ಥಿಗಳು ಮಾತ್ರವಲ್ಲ ಮೇಷ್ಟ್ರುಗಳು ಕೂಡ ತಮ್ಮ ವಿದ್ಯಾರ್ಥಿಗಳಿಗೆ ಅಡ್ಡ ಹೆಸರು ಇಡೋದ್ರಲ್ಲಿ ಕಮ್ಮಿ ಏನೂ ಇರ್ಲಿಲ್ಲ. ಪಾಪ ಅವರೇನು ಬೇಕು ಅಂತ ಇಡ್ತಾ ಇರ್ಲಿಲ್ಲ, ಮಾತಿನ ಇಲ್ಲವೇ ಬೈಗುಳದ ಓಘ ದಲ್ಲಿ ಏನಾದರೂ ಅಂದು ಬಿಟ್ಟರೆ ಅದೇ ಅನ್ನಿಸಿಕೊಂಡವರಿಗೆ ಪಟ್ಟಾಗಿ ಹಿಡಿದು ಬಿಡುತ್ತಿತ್ತು. ನಮ್ಮ ಗಣಿತ ಮೇಷ್ಟ್ರು ಒಬ್ಬರು ಯಾರನ್ನೂ ಅಡ್ಡ ಹೆಸ್ರು ಬಿಟ್ಟು, ಅಸಲಿ ಹೆಸರಿಡಿದು  ಕರೆದವರೆ ಅಲ್ಲ. ಮೊದಲೇ ಲೆಕ್ಕ ಅಂದ್ರೆ ಎಲ್ಲರಿಗೂ ದುಕ್ಕ, ಇನ್ನು ಉರಿಸಿಂಗ ಮೇಷ್ಟ್ರು ಅಂದಮೇಲೆ ಮುಗಿಯಿತು. ಏನು ಮಾಡಿದ್ರೂ ತರಗತಿಯಲ್ಲಿ ಬಹಳಷ್ಟು ಜನಕ್ಕೆ ಗಣಿತ ಕ್ಲಾಸ್ ಅಂದ್ರೆ ಗಡಗಡ ನಡುಕ ಶುರುವಾಗುತಿತ್ತು.

ಅವರಂತೂ ಲೋ ,ಹನುಮಂತ,ಕತ್ತೆ,,ನಾಲಾಯಕ್, ಗೂಬೇ,ಮುಶಂಡಿ,ಪೆದ್ದಿ, ದಡ್ಡಿ,ಅಡ್ಡಕಸುಬಿ, ಮಂಕುತಿಮ್ಮ, ದನ, ಎಮ್ಮೆ, ಕೋಣ, ಇತ್ಯಾದಿ  ವಿಶೇಷಣಗಳಿಲ್ಲದೇ ನಮ್ಮನ್ನು ಮಾತನಾಡಿದವರೇ ಅಲ್ಲ. ಒಮ್ಮೆ ಒಬ್ಬ ಕೈ ಮುರಿದುಕೊಂಡು ಬ್ಯಾಂಡೇಜ್ ಕುತ್ತಿಗೆಗೆ ನೇತು ಹಾಕ್ಕೊಂಡು ಬಂದವನನ್ನು ನೊಂಡೆ ಎಂದು ನಾಮಕರಣ ಮಾಡಿ ಅವನು ಅಂದಿನಿಂದ ನೊಂಡೆ ಎಂದೇ  ಪ್ರಖ್ಯಾತನಾದ. ದುರಂತವೆಂದರೆ ಅವನು ಶಾಲೆ ಬಿಟ್ಟು ಕಾಲೇಜಿಗೆ ಹೋದ ನಂತರ ಅವನ ತಮ್ಮ ಶಾಲೆಗೆ ಸೇರಿದಾಗ, ಅಣ್ಣನ ಹೆಸರು ತಮ್ಮನಿಗೂ ವರ್ಗಾವಣೆ ಆಗಿ ಅವನೂ ನೊಂಡೆ ಆಗಿಬಿಟ್ಟ. ಅದಕ್ಕಿಂತ ವಿಚಿತ್ರವೆಂದರೆ ಅಣ್ಣನಿಗೆನೋ ನೊಂಡೆ ಅನ್ನೋದು ಕಾಲಕ್ರಮೇಣ ನಿಂತು ಹೋದರೂ ತಮ್ಮ ಮಾತ್ರ ಇನ್ನೂ ನೊಂಡೆ ಆಗಿಯೇ ಉಳಿದಿದ್ದಾನೆ.

ಕಾಲೇಜ್ನಲ್ಲೂ ಲೆಕ್ಚರರ್ಗಳಿಗೆ , ಸಹಪಾಠಿಗಳಿಗೆ ವಿಚಿತ್ರ ವಿಚಿತ್ರ ಹೆಸರಿನಲ್ಲಿ ಕರೆವವರಿಗೇನೂ ಕೊರತೆ ಇರಲಿಲ್ಲ. ಹುಡುಗಿಯರಿಗೆ ಅಷ್ಟು ಧೈರ್ಯ ಇರಲಿಲ್ಲ.ಆದ್ರೆ ತರ್ಲೆ ಹುಡುಗರು ಮಾಡುತ್ತಿದ್ದ ಗಲಾಟೆಗಳು ಅಷ್ಟಿಷ್ಟಲ್ಲ. ಒಬ್ಬ ನಮ್ಮ ಸೀನಿಯರ್ಗೆ ಸ್ಕಿಡ್ ಅಂತ ಹೆಸರಿಟ್ಟಿದ್ದರು, ಯಾಕೆ  ಅಂದ್ರೆ ಅವನ ಬೈಕ್ ಹುಡುಗಿಯರ ಕಂಡ ಹಾಗೆಲ್ಲ ಸ್ಕಿಡ್ ಆಗ್ತಿತ್ತಂತೆ. ಇನ್ನೊಬ್ಬ ದಿನಾ ಬೈಕ್ ನಲ್ಲಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬರುತ್ಚಿದ್ದವ ಪ್ರಿನ್ಸ್. ಮತ್ತೊಬ್ಬ ಭೂಪ ಹುಡುಗಿಯೊಬ್ಬಳ ಹಿಂದೆ ಬಿದ್ದು ಅವಳು ನಿರಾಕರಿಸಿದ ಕಾರಣಕ್ಕೆ ಗಾಜಿನ ಪುಡಿ ಕುಡಿದು ಆತ್ಮ ಹತ್ಯೆಗೆ ಯತ್ನಿಸಿದ. ಆತನ ತಂದೆ ತಾಯಿ ಆತನನ್ನು ಹರಸಾಹಸದಿಂದ ಬದುಕಿಸಿಕೊಂಡರೇನೋ ಸರಿ, ಆದರೆ ಅವತ್ತಿನಿಂದ ಆತನ ಹೆಸರಿನ ಹಿಂದೆ ಗ್ಲಾಸ್ ಅನ್ನೋ ಪದ ಶಾಶ್ವತವಾಗಿ ಸೇರಿಕೊಂಡು ಬಿಟ್ಟಿತು.

ಇನ್ನೊಬ್ಬ ಸೀನಿಯರ್ ಯಾವಾಗ್ಲೂ ಕಾಲೇಜ್ ಗೇಟ್ ಹತ್ರವೇ ನಿಂತುಕೊಂಡು ಹೋಗೋ ಬರೋ ಹುಡ್ಗೀರನ್ನೆಲ್ಲಾ ಚುಡಾಯಿಸಿಕೊಂಡು ಅವರನ್ನೆಲ್ಲ ಮೇಲಿಂದ ಕೆಳಗೆ ನೋಡ್ಕೊಂಡು ಇರ್ತಿದ್ದ ಅವನಿಗೆ ಎಕ್ಸ್ ರೇ ಮಷೀನ್ ಅನ್ನೋ ಹೆಸ್ರು ತಾನೇ ತಾನಾಗಿ ಬಂದು ಬಿಟ್ಟಿತ್ತು . ಮತ್ತೊಬ್ಬ ಸುಂದರಾಂಗ ನೋಡೋಕೆ ಚೆನ್ನಾಗಿದ್ದರೂ ದಪ್ಪ ಕಂಬಳಿ ಹುಳುಗಳಂತಹ  ಕೂಡು ಹುಬ್ಬುಗಳ ಕಾರಣದಿಂದ ಕಾಡು ಅಂತ ಹೆಸರಿಟ್ಟು ಬಿಟ್ಟಿದ್ದರು. ಇನ್ನು ಸಿನೆಮಾ ತಾರೆಯರನ್ನು, ಕ್ರೀಡಾಪಟುಗಳನ್ನು ಹೊಲುತ್ತಿದ್ದರಂತು ಅವ್ರು ಹೋಲುವ ತಾರೆಯರ ಹೆಸರು ತಪ್ಪದೆ ತಗಲಿ ಕೊಳ್ಳುತ್ತಿತ್ತು. ಹಾಗಾಗಿ ಕಾಲೇಜ್ ನಲ್ಲಿ ಸಲ್ಮಾನ್ ಖಾನ್, ಅಮೀರ್ಖಾನ್, ಅಮಿತಾಭ್, ರೇಖಾ, ಶ್ರೀದೇವಿ, ಮಾಧುರಿಯರಿಗೇನು ಬರವಿರಲಿಲ್ಲ.

ಹುಡುಗರಿಗೆ ಎಲ್ಲಾ ತರ್ಲೆತರ್ಲೆಯಾಗಿ  ಹೆಸರು ಇಡು ತ್ತಿದ್ದರೂ, ಹುಡುಗಿಯರಿಗೆ ಅಂತಾ ಏನೂ ಹಾಸ್ಯಾಸ್ಪದ ಅಡ್ಡಹೆಸರುಗಳಿರುತ್ತಿರಲಿಲ್ಲ. ಸುಂದರಿಯಾಗಿದ್ದರಂತೂ ವಿಶೇಷಣಗಳು ಸಿಗುವುದು ಗ್ಯಾರಂಟಿ. ನಮ್ಮ ಜೂನಿಯರ್ ಹುಡುಗಿ *ಒಬ್ಳು* ಕಪ್ಪಾಗಿದ್ದರೂ ತುಂಬಾ ಕಳೆ ಕಳೆಯಾಗಿ ಚೆನ್ನಾಗಿದ್ದಳು.ಅವಳನ್ನು ಕ್ಯಾಡ್ಬರಿಸ್ ಚಾಕೊಲೇಟ್ ಗೆ ಹೊಲಿಸಿ ಕ್ಯಾಡು ಅಂತ ಕರಿತಿದ್ರು. ಇನ್ನೊಬ್ಬಳು ಯಾವ ಹುಡುಗ ಮಾತನಾಡಿಸಿದ್ರು ಉರಿದು ಉರಿದು ಬೀಳವ್ಳು, ಅವಳ ಪಾಲಿಗೆ ಬೆಂಕಿ ಅನ್ನೋ  ಹೆಸರು. ತುಂಬಾ ಬೆಳ್ಳಗೆ ಬಿಳಿಚಿಕೊಂಡಿದ್ದರೆ ಬಿಳಿ ಜಿರಳೆ. ಬ್ರಹ್ಮ ಕುಮಾರಿ ಆಶ್ರಮದ ಪ್ರಭಾವಕ್ಕೆ ಒಳಗಾಗಿ ಒಬ್ಬಳು ನಮ್ಮ ಸಹಪಾಠಿ ಯಾವಾಗಲೂ ಶ್ವೇತ ವಸ್ತ್ರಧಾರಿಣಿಯಾಗಿ ಚಾಂದಿನಿ ಯಾಗಿಬಿಟ್ಲು.

ಈಗಿನ ಪೀಳಿಗೆಯ ಮಕ್ಕಳು ಕೂಡ ಏನೂ ಹೆಸರು ಇಡೋದ್ರಲ್ಲಿ ಕಮ್ಮಿ ಇಲ್ಲ.ನಮ್ಮ ಶಾಲೆಯ ,ಅಕ್ಕ ಪಕ್ಕದ ಕಾಲೇಜ್ ಮಕ್ಕಳು ಆಡುವ ಮಾತುಗಳು ಕಿವಿಗೆ ಬಿದ್ದಾಗಲ್ಲೆಲ್ಲ, ವರ್ಷಗಳು ಬದಲಾಗಿವೆ ಆದ್ರೆ ಮಕ್ಕಳ ಕುಚೇಷ್ಟೆಗಳೇನು ಬದಲಾಗಿಲ್ಲ ಅನ್ನಿಸುತ್ತದೆ.

ಆದರೆ ಈ ಅಡ್ಡ ಹೆಸರುಗಳು ಕರೆಸಿಕೊಳ್ಳುವವರಿಗೆ ಅಂತ ಏನೂ ಬೇಸರ ಉಂಟುಮಾಡಿದ್ದು ಕಂಡಿಲ್ಲ. ಸಹಜವಾಗಿ ಅದನ್ನು ಸ್ವೀಕರಿಸುವವರೆ ಬಹಳ.ನನ್ನ ಗೆಳತಿಯೊಬ್ಬಳನ್ನ ಯಾವಾಗಲೂ ಕುಳ್ಳಿ ಅಂತ ಕರೆದರು ಅವಳು ಅದೇ ಅವಳ ನಿಜವಾದ ಹೆಸರೇನೋ ಅನ್ನುವಂತೆ ನಾರ್ಮಲ್ ಆಗಿ ಇರ್ತಾಳೆ.ಇದಕ್ಕೆ ಅಪವಾದಗಳು ಇಲ್ಲದಿಲ್ಲ. ಕೆಲವು ಬಾರಿ ಅಡ್ಡ ಹೆಸ್ರು ವಿರುದ್ಧ ತಿರುಗಿ ಬಿದ್ದು ಅದರಿಂದ ಕಳಚಿಕೊಂಡ ಉದಾಹರಣೆಗಳೂ ಇವೆ.

ಹೈಸ್ಕೂಲ್ನಲ್ಲಿ ನಮ್ಮ ಕ್ಲಾಸ್ನಲ್ಲಿ ಇದ್ದ ಮನೋಜನಿಗೆ ಸ್ವಲ್ಪ ಹಲ್ಲು ಉಬ್ಬಾಗಿದ್ದ ಕಾರಣ ಹುಡುಗರೆಲ್ಲ ಕೆ ಟಿ ಎಂ ಅಂದ್ರೆ ಕಾಯಿ ತುರಿಯೋ ಮಣೆ ಅಂತ ಅಡ್ಡ ಹೆಸರಿಟ್ಟುಬಿಟ್ಟಿದ್ದರು. ಅವನಂತು ಆ ಹೆಸರು ಕರೆದರೆ ಸಾಕು ಉರಿದುರಿದು ಬೀಳುತ್ತಿದ್ದ. ಅವನನ್ನು ಉರಿಸುವುದಕ್ಕಾಗಿಯೆ ಹಾಗೆ ಕರೆದು ಚೆನ್ನಾಗಿ ಗೋಳು ಹುಯಿದುಕೊಳ್ಳುತ್ತಿದ್ದ ಹುಡುಗರೂ ತರಗತಿಯಲ್ಲಿ ಸಾಕಷ್ಟಿದ್ದರು. ಒಂದು ದಿನ ಮನೋಜ ಶಾಲೆಗೆ ರಜೆ ಮಾಡಿ ಮಾರನೇ ದಿನ ಬಂದಾಗ ಕ್ಲಾಸ್ ಟೀಚರ್ ಮಾಮೂಲಿನಂತೆ “ಏಕಪ್ಪ,ನಿನ್ನೆ ಸ್ಕೂಲ್ಗೆ ಬರಲಿಲ್ಲ” ಅಂದಾಗ,ಅವನು ಉತ್ತರಿಸುವ ಮುನ್ನವೇ ಹಿಂದಿನ ಬೆಂಚಿನ ಒಬ್ಬ ತರಲೆ “ಸಾರ್ ಅವರಜ್ಜಿ ಮನೆಗೆ ಕಾಯಿ ತುರಿಯಲು ಹೋಗಿದ್ದ” ಅಂದಾಕ್ಷಣವೇ ಇಡೀ ಕ್ಲಾಸ್ ನಗೆಗಡಲಲ್ಲಿ ಮುಳುಗಿ ಹೋಯಿತು. ಮನೋಜ ಅವಮಾನ ತಾಳಲಾರದೆ ಬಿಕ್ಕಳಿಸಿ ಅಳತೊಡಗಿದ.  ನಮ್ಮ ಮೇಷ್ಟು “ಸೈಲೆನ್ಸ್”ಎಂದು ಕೂಗುತ್ತ ಎಲ್ಲರನ್ನು ಸುಮ್ಮನಿರಿಸಿ ನಂತರ ಅಳುತಿದ್ದ ಮನೋಜನನ್ನು ಸಮಾಧಾನಿಸಿದರು. ಬಳಿಕ ನಮ್ಮ ಮೇಷ್ಟ್ರು ಅರ್ಧ ಗಂಟೆ” ಮನುಷ್ಯರನ್ನು ಅವ್ರ ದೈಹಿಕ ಗುಣಲಕ್ಷಣಗಳಿಂದ ಅಳೆಯುವುದು ಎಷ್ಟು ತಪ್ಪು” ಎನ್ನುವುದರ ಬಗ್ಗೆ ಚೆನ್ನಾಗಿ ತಿಳಿ ಹೇಳಿ ಹೋದ ಬಳಿಕ ನಮಗೆಲ್ಲ ಮನೋಜನ ಬಗ್ಗೆ ಪಾಪ ಅನ್ನಿಸತೊಡಗಿ ಎಲ್ಲರೂ “ಸಾರಿ ಕಣೋ ಮನೋಜ” ಹೇಳಿದ ಮೇಲೆ ಮತ್ತವನ ಮುಖದಲ್ಲಿ ನಗುವರಳಿತು. ನಂತರ ಇನ್ನೆಂದೂ ಯಾರೂ ಅವನನ್ನು ಕೆ ಟಿ ಎಂ ಅನ್ನುವ ಸಾಹಸ ಮಾಡಲಿಲ್ಲ.

ವಿದ್ಯಾಭ್ಯಾಸ ಮುಗಿಸಿ ಶಿಕ್ಷಕಿಯಾಗಿ ವೃತ್ತಿ ಪ್ರಾರಂಭಿಸಿದ ಮೇಲೆ ‘ನನಗೂ ಏನಾದ್ರೂ ಅಡ್ಡ ಹೆಸರು ನನ್ನ ವಿದ್ಯಾರ್ಥಿಗಳು ಇಟ್ಟಿರಬಹುದ’ ಅನ್ನೋ ಗುಮಾನಿ ನನಗಂತೂ ಇದ್ದೇ ಇದೆ.ಆದ್ರೆ ಅದು ಎಂದಿಗೂ ನನಗೆ ಬಹುಶಃ ಗೊತ್ತಗಲಾರದೇನೋ?ಏಕೆಂದರೆ ನಾವೇನು ನಮ್ಮ ಮೇಷ್ಟ್ರುಗಳಿಗೆ ಅವರ ಅಡ್ಡೆಸರು ಗೊತ್ತಾಗಲು ಬಿಟ್ವಾ ಹೇಳಿ.

-ಸಮತಾ.ಆರ್

  

 

21 Responses

  1. Anonymous says:

    Super bombat masth agide

  2. kishore says:

    super

  3. Hema says:

    ಲಲಿತ ಬರಹ ಬಹಳ ಸೊಗಸಾಗಿದೆ..

  4. Veena says:

    Super

  5. Yuvaraj dc says:

    Fine

  6. Roopa H S says:

    ಸೂಪರ್ ವೆರಿ ನೈಸ್ ….

  7. Dayananda says:

    Super

  8. ASHA nooji says:

    SUPER

  9. Dayananda Diddahalli says:

    Beautiful article with a lot of humour

  10. Roopashree a says:

    Good ,ಲಲಿತ ಬರಹ ಬಹಳ ಸೊಗಸಾಗಿದೆ..

    Reply

  11. Ashwini says:

    Good one

  12. SmithaAmrithraj. says:

    Super samatha

  13. ಶಂಕರಿ ಶರ್ಮ says:

    ಸೊಗಸಾದ ಲಘು ಹಾಸ್ಯ ಬರಹ…ಆದ್ರೆ ನಿಮ್ಮೂರ ಭಾಷೆಯಲ್ಲಿ ಕೆಲವು ಶಬ್ದಗಳ ಅರ್ಥ ಆಗಲೊಲ್ಲದು,!

  14. Anonymous says:

    Simply super

  15. Usha says:

    ಇತ್ತೀಚಗೆ ಒಳ್ಳೆಯ ಲೇಖನಗಳನ್ನು ಬರೇಯುತ್ತಿರುವ ನನ್ನ ಪ್ರೀತಿಯ ಗೆಳತಿ ಸಮತಗೆ ನಾ ಇಡುವ ಅಡ್ಡ ಹೆಸರು ಪುಸ್ತಕಪ್ರಿಯೆ…

  16. Anonymous says:

    Superb

  17. ನಯನ ಬಜಕೂಡ್ಲು says:

    ಬಹಳ ಚೆನ್ನಾಗಿದೆ ಲೇಖನ, ಕೆಲವು ಘಟನೆಗಳನ್ನು ಓದುವಾಗ ನಗು ತಡೆಯಲಾಗಲಿಲ್ಲ. ಹಾಗೆಯೇ ಶಾಲೆ, ಕಾಲೇಜಿನ ದಿನಗಳು ನೆನಪಾಗಿ ಖುಷಿ ಆಯ್ತು

  18. Jayalakshmi says:

    Thank u for remembering my Nick name
    We r so famous in calling Nick name in our school days Sami
    All the best for our writer

  19. Arpitha says:

    Very nice writing

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: