ಕಟಿಪಿಟಿ ರಾಧೆ
ಇವಳು ಮಧುಬನದ ಖಾಲಿ
ಕಟಿಪಿಟಿ ರಾಧೆ
ಸೂರ್‍ಯಾಸ್ತ ಕಿರಣಗಳು ಹೊಳೆಯುತ್ತಿವೆ
ಪದರು ಬಿದ್ದ ಮೊಗದಲ್ಲಿ
ನೀಲಾಗಸ ನಿಸ್ತೇಜ ಕಂಗಳು ಇರುಳ
ಕಡಲಿನಂತೆ
ಹಳೆಯ ನೀಲಿ ಲೆಹಂಗಾದ ಕಿತ್ತು ಹೋದ
ಮಣಿ ಮುತ್ತು ಚಮಕಿಗಳ ಕಣ್ಣಲ್ಲಿ
ಕಣ್ಣಿಟ್ಟು ಹೊಲೆಯುತ್ತ ಉಸಿರ ಕೌದಿಯ ಹೊದ್ದು
ಜಪಿಸುತ್ತಲೇ ಇದ್ದಾಳೆ ಗುಂಗು ಹಿಡಿಸಿ
ಹೋದ ಮುರಳಿಗಾನವ
ಅವನೋ ಮಧುಮೋಹಿ ಮಾಧವ
ಗುಂಗುರು ತೀಡಿಕೊಂಡು ಕೆನ್ನೆಗುಳಿಯಲ್ಲಿ
ಬೊಂಬೆಗಳ ಕರಗಿಸುವಾತ
ಬಣ್ಣದ ಸಕ್ಕರೆ ಮಿಠಾಯಿಗಳ ಸೆಳೆತಕ್ಕೆ
ಸಿಲುಕಿ ನಲಿಯುವವ ಎಲ್ಲಿ ನೋಡುತ್ತಾನೆ
ಸಿಹಿ ಸೋರಿದ ಜೇನತಟ್ಟಿಯ
ಆದರೂ ನಿಶ್ವಿತ ರಾಧೆ,
ಬಂದೇ ಬರುತ್ತಾನೆ ಅವನು ಪಾನಿಪೂರಿ
ಮಸಾಲೆಯ ಹದ ಒಂದೇ ತಿಳಿದ ಮೇಲೆ
ಮೂರನೇ ಅಂಕದ ಪರದೆ ಮೇಲೆದ್ದ ಬಳಿಕ
ಆಗ ಮಾತ್ರ ನೀನು ಇಲ್ಲಿರಬೇಡ
-ದೀಪ್ತಿ ಭದ್ರಾವತಿ
ಚೆಂದದ ಕವನ
SUPER kavanq
ಕವನ ಚೆನ್ನಾಗಿದೆ.
“ಅವನೋ ಮಧು ಮೋಹಿ ಮಾಧವ,
ಮುರಳಿಯ ಗಾನವ ನುಡಿಸಿ ಹೃನ್ಮನ ಗೆದ್ದವ,
ದನಗಾಹಿ, ಗೊಲ್ಲ, ಮುಕುಂದ, ಯಾದವ,
ಸರಿದ ಯುಗ ಯುಗಗಳಾಚೆಗೂ ಮಾನಿನಿಯರ ಮನ ಸೆಳೆದವ “.
ಬಹಳ ಸುಂದರವಾಗಿದೆ ಕವಿತೆ
ಬಹಳ ಚೆಂದ