ಅವ್ವ
ಒಡಲಾಗ ಹೊರಿಯಂತಾ ಭಾರವಿದ್ದರು
ಮನಸು ತುಂಬಿ ನಗಾಕಿ ನಮ್ಮವ್ವ
ದೇಹದಾಗ ಕಸುವು ಮೆತ್ತಗಾಗಿದ್ದರೂ
ದುಡಿದುಣ್ಣಾಕಿ ನಮ್ಮವ್ವ ॥೧॥
ಮಣ್ಣಿಗೂ ಬಣ್ಣ ಕೊಟ್ಟಾಕಿ
ನೆಲದ ಹಸಿರಿಗೂ ಜೀವತಂದಾಕಿ ನಮ್ಮವ್ವ
ನೆಲವ ಬಗೆದು ಹಿಡಿ ಕಾಳು ಸೇರಿಗಂಜಿಗೆ
ಮೈಯ ಮಣಿಸಿ ದುಡಿದಾಕಿ ನಮ್ಮವ್ವ.॥೨॥
ಮಣ್ಣನ್ನೇ ಜೀವದುಸಿರಾಗಿಸಿಕೊಂಡಾಕಿ
ಕೋಳಿ ಕೂಗುವಾಗ ಏಳಾಕಿ ನಮ್ಮವ್ವ
ಸಮಷ್ಟಿಯೊಳು ಜೀವ ತೇಯುವಾಕಿ
ಹಸಿರ ಸಿರಿಯ ನಡುವೆ ಕಪ್ಪುಬಣ್ಣದಾಕಿ ನನ್ನವ್ವ॥೩॥
ಭೂಮಿಯೊಡನೆ ಮಾತನಾಡುವಾಕಿ
ಧರೆಯೇ ದೇವರೆಂದಾಕಿ ನನ್ನವ್ವ
ಗುಡಿಗುಂಡಾರಕೆ ಶಿರಬಾಗದಾಕಿ
ಭೂಮ್ಯವ್ವನ ಪಾದಕೆ ಹಣೆಹಚ್ಚಾಕಿ ನನ್ನವ್ವ ॥೪॥
ಕೆರೆ ಭಾವಿ ಒಡ್ಡಿನ ಮಣ್ಣುಹೊತ್ತು
ಜೀವ ಜಲವ ತುಂಬಿಸಿದಾಕಿ ನನ್ನವ್ವ
ತನ್ನುಸಿರ ಬೇವರ ಬಸಿದೂ
ಭೂಮಿಗೆ ಕಸುವು ತುಂಬಿದಾಕಿನನ್ನವ್ವ॥೫॥
ಹಸಿವಿಗಾಗಿ ಒಂದಿನಿತೂ ಚಿಂತಿಸಲಿಲ್ಲ
ನೆಲದವ್ವನ ಮುಂದೆ ಬೆಡುವಾಕಿ ನನ್ನವ್ವ
ಕೊಡು ವರವ ತಾಯಿ ಭರ,ಹಸಿವು, ನಿಗಿಸೆಂದು
ಮಣ್ಣ ಮಡಿಕೆಯಂತ ಜೀವ ನನ್ನವ್ವ.॥೬॥
-ಮರುಳಸಿದ್ದಪ್ಪ ದೊಡ್ಡಮನಿ , ಹುಲಕೋಟಿ
ಅವ್ವನ ಕವನ ಓದಿ ಕಣ್ಣು ತುಂಬಿತು.. ಶುಭಾಶಯಗಳು.
ಮಣ್ಣಿನ ಮಗಳಾಗಿ ಬಾಳಿದ ನಿಮ್ಮವ್ವನ ಬಗೆಗಿನ ಕವನ ಮನವ ಮುಟ್ಟಿತು…ಹೃದಯ ತಟ್ಟಿತು..
ಒಳ್ಳೆ ಕವಿತೆ ಸರ್ ಅಭಿನಂದನೆ ಸರ್