ಕನಸೊಂದಿರಬೇಕು
ಕನಸೊಂದಿರಬೇಕು,ಕಣ್ಣೆದುರಿಗೆ ಬರಬೇಕು
ಕ್ಷಣ ಕ್ಷಣವೂ ಪ್ರತಿ ಕ್ಷಣವೂ ಅದೇ ಉಸಿರಾಗಿರಬೇಕು
ಜಯಿಸುವೆನೆಂದು ಹೇಳಲಿ ನಿನ್ನ ಪ್ರತಿ ಶ್ವಾಸ
ಯಾರೂ ಇಲ್ಲ ಜೊತೆಗೆ ನೀನೇ ನಿನ್ನ ವಿಶ್ವಾಸ……..
ರಾಜಿಯು ಬೇಡ ಕೆಲಸದ ಜೊತೆ
ಸಮಯವು ಮೀರಿ ಪಡುವೆ ವ್ಶಥೆ
ಯಾರನ್ನೋ ನೆಚ್ಚಿ ಯಾಕಿರುವೆ ಅಣ್ಣಾ
ನೋಡು ಈ ಜಗವ ತೆರೆದು ನಿನ್ನ ಕಣ್ಣಾ……
ಕೋಟಿ ಕೋಟಿ ಜನರು, ಕೋಟಿ ಕೋಟಿ ಬಣ್ಣ
ಆ ದೇವರ ಸೃಷ್ಟಿಯಲಿ ನೀನು ಬಹಳ ಸಣ್ಣ
ನಿಂದಕರಿರಬೇಕೋ ನಿದ್ದಿ ಮಾಡಲು ಬಿಡದಾಂಗ
ಸೋಲಿಲ್ಲದೆ ಗೆಲುವನು ರುಚಿಸುವೆ ನೀ ಹ್ಯಾಂಗ?
ಬರುತಾವ ಕಷ್ಟ ಸಾಗರದ ಅಲೆಯಂತೆ
ಜೀವನ ಸಾಗರದಾಗ ಮಾಡುತ ಕುಂತರ ಹ್ಯಾಂಗ ಚಿಂತೆ?
ಎಲ್ಲಿ ನೋಡಿದರೂ ಕಾಣಲ್ಲೊ ನಿನಗ ದಡ
ಹಾಗಂತ ಎದೆಗುಂದಿ ನೀ ಛಲವ ಬಿಡಬ್ಯಾಡ……
ಆಕಾಶ – ಭೂಮಿಗಳು ಯುಗ ಯುಗದ ಪ್ರೇಮಿಗಳು
ಅವು ಒಂದಾದರ ಉಳಿತಾವ ಜೀವಿಗಳು?
ಹಾಗೇ ಅಲ್ಲವೇ ಈ ಸೋಲು- ಗೆಲುವುಗಳು
ಒಂದಿದ್ದರ ಇನ್ನೊಂದಿರದು ತಿಳಿ ನೀ ಅದರ ತಿರುಳು…….
ಅಳಬೇಕು – ನಗಬೇಕು, ಪ್ರೀತಿ-ತ್ಯಾಗ ಇರಬೇಕು
ಸ್ನೇಹಿತರು ಬೇಕು ಶತ್ರುಗಳೂ ಬರಬೇಕು
ಬಯಸುವೆ ನೀ ವಿಧವಿಧದ ಊಟ
ಈ ಜೀವನವೂ ಬಹುಮುಖದ ಪಾಠ….
ಎಲ್ಲವನ್ನೂ ಸ್ವೀಕರಿಸಿ ಸಾಗು ನೀ ಮುಂದೆ ಮುಂದೆ
ಕಣ್ಬಿಟ್ಟರೂ ಮುಚ್ಚಿದರೂ ಕಾಣಲಿ ಗುರಿಯು ಒಂದೇ
ಇದು ಕವನವೂ ಅಲ್ಲ, ಕಥೆಯೂ ಅಲ್ಲ ಮನದ ಮಾತು ಮಾತ್ರ
ಹೇಳಲೆಂಬ ಉತ್ಸಾಹ ಈ ಸಹೃದಯನ(ಓದುಗರು) ಹತ್ರ……..
-ವಿದ್ಯಾ ಶ್ರೀ, ಬಳ್ಳಾರಿ
SUPER
ಒಳ್ಳೆಯ ಕವನ. ವಿದ್ಯಾಶ್ರೀ.
ಸ್ಫೂರ್ತಿ ತುಂಬಿದ ಸಾಲುಗಳು
ಮನಸ್ಸಿನಲ್ಲಿ ತುಂಬಿರುವ ಕನಸುಗಳನ್ನು ನನಸಾಗಿಸುವ ಹಂಬಲ ತುಂಬಿದ ಕವಿತೆ ಚೆನ್ನಾಗಿದೆ.