ಧೃಡತೆ
ಕಣ್ಮುಚ್ಚಿದರು ಮುಚ್ಚದಿರು
ಕನಸುಗಳು ಬರುವಂತೆ
ಗರಿಗೆದರಿ ರೆಕ್ಕೆಬಿಚ್ಚುವ ಹಕ್ಕಿಯಂತೆ.
ಪುಟ್ಟ ಬಾಲೆಯ ಮನದಿ
ಗುರಿಯೊಂದು ಮೂಡುತಿದೆ
ಬಡವ ಬಲ್ಲಿದನೆಂಬ ಬೇಧವಿರದೆ ||
ಕಾಲನದಿ ಸುಳಿಯಲ್ಲಿ
ತಾ ಸಿಲುಕಿ ಕಂಗೆಟ್ಟು
ಬದುಕು ದುಃಖಗಳ ಕಥನ
ಕಾಯಕಲ್ಪದ ಜನನ
ಕತ್ತಲಲು ಜೀವಸೆಲೆ
ಬತ್ತಿ ಹೋಗದಿಹ ಭಾವ
ಮಗಳ ಭವಿತವ್ಯದಲಿ ದೃಷ್ಟಿ ನೆಟ್ಟು ||
ತನ್ನಿಂಗಿತವ ಸುತೆಯ ಬಳಿ
ಹೇಳುತ್ತ ನಸುನಗುತ
ನೊಂದ ಜೀವದ ಬೆವರ ನೆನಪು ತರಿಸೀ
ಮೊಗೆ ಮೊಗೆದು ತುಂಬಿದಳು
ಕಣ್ಣ ಬಿಂಬದ ಒಳಗೆ
ನಡೆವ ಪಥದಲಿ ಎಚ್ಚರಿಕೆ
ಜಡತೆ ಬದಿ ಸರಿಸಿ ||
ಚೈತನ್ಯ ಮೂಡಿಸುವ
ಅಮ್ಮನಾ ಹಾರೈಕೆ
ಮುದ್ದು ಕಂದಮ್ಮ ಬೆಳೆದು
ಪ್ರಜ್ವಲಿಸುವಂತೆ
ಹೆಪ್ಪುಗಟ್ಟಿದ ನೋವು
ನೂರೆಂಟು ಇದ್ದರೂ
ಹೃದಯವದು ಬೆಂಗಾವಲು
ಗುಡಿಯ ಗೋಪುರದಂತೆ ||
ಶಿಷ್ಟರನು ರಕ್ಷಿಸುವ ದುಷ್ಟರನು
ಶಿಕ್ಷಿಸುವ
ಖಾಕಿ ಟೋಪಿಯ ಧರಿಸಿ
ಹಿಗ್ಗಿ ನಡೆವಂತೆ
ನಿರ್ಲಿಪ್ತ ಬದುಕಿನಲು
ಹೆಜ್ಜೆ ಗುರುತದು ಮೂಡಿ
ನೆನೆವರೆಲ್ಲರು ಆಗ
ಬಿಡು ಮನದ ಚಿಂತೆ ||
ಅಂತಃಸತ್ವದಿ ಸತತ ಜ್ಞಾನ
ದೀವಿಗೆ ಬೆಳಗಿ
ಖಾಲಿ ತಂಬಿಗೆಯೂ
ಕಲಶವಾಗುವಂತೆ
ಕರಿ ನೆರಳ ತೆರೆ ಸರಿದು
ಬೆಳಕು
ಮೂಡಲಿ ಹೊಳೆದು
ನೆಲೆಬೆಲೆಯು ಸಿಕ್ಕಂದು
ಬೆಳೆದು ಧರಣಿಯ ನಮಿಸು
ಕಂಡ ಕನಸುಗಳೆಲ್ಲ ನನಸಾಗುವಂತೇ
ಒಡಲ ಕಡಲಲಿ ಧೃಡತೆ ಚಿಮ್ಮುವಂತೇ..||
–ಪ್ರಮೀಳಾ ಚುಳ್ಳಿಕ್ಕಾನ.
ಸುಂದರ ಈ ಬಣ್ಣದ ಕನಸುಗಳು,
ಕಷ್ಟವಿರಬಹುದು, ಆದರೂ ನನಸಾಗಬಲ್ಲವು ದೃಢ ಸಂಕಲ್ಪವಿರಲು.
ದೃಢ ಮನದ ಮೇರು ಕನಸುಗಳು ನೆನಸಾಗುವುವು…
ಸುಂದರ ಕವನ.