ಅಡುಗೆ ಮನೆಯೊಳಗಿನ ಔಷಧದ ಖಣಜ
ಹಿತ್ತಲ ಗಿಡ ಮದ್ದಲ್ಲ ಅಂತಾರೆ.ಆದರೆ ಕೆಲವೊಮ್ಮೆ ಅವೇ ಮದ್ದಾಗಿ ಉಪಯೋಗಿಸಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಗೊತ್ತಿಲ್ಲದವರ ಬಗ್ಗೆಯೇ ಆ ಗಾದೆ ಹುಟ್ಟಿ ಕೊಂಡಿರುವುದು ಸತ್ಯವೇ. ಸಣ್ಣ ಪುಟ್ಟದ್ದಕ್ಕೆಲ್ಲ ಆಸ್ಪತ್ರೆಗೆ ಹೋಗುವ ಬದಲು ಮನೆ ಔಷಧಿ ಮಾಡಿದರಾಯಿತು. ಬಗ್ಗದಿದ್ದಾಗ ಮಾತ್ರ ವೈದ್ಯರಲ್ಲಿಗೆ ಹೋದರಾಯಿತು ಅನ್ನೊದು ನನ್ನ ಪಾಲಿಸಿ.ಆ ಪಾಲಿಸಿ ನನ್ನ ಜೀವನದಲ್ಲಿ ಅದೆಷ್ಟೋ ಉಪಕಾರ ಮಾಡಿದೆ. ಸಮಯ,ಹಣ,ಶ್ರಮ ಉಳಿಸಿದೆ.
ನನ್ನ ಮಗಳನ್ನು ನೋಡಿಕೊಳ್ಳಬೇಕೆಂದು ಊರಿನಿಂದ ಬಂದ ನಮ್ಮ ಅತ್ತೆಯವರಿಗೆ ನಮ್ಮ ಊರಿನ ಹವೆ ಹಿಡಿಸದೇ ಶೀತ ಶುರುವಾಗಿ ಬಿಟ್ಟಿತು.ಮಲೆನಾಡಿನವರಾದರೂ ಅವರಿಗೆ ಅರೆಮಲೆನಾಡಿನ ಹವೆ ಒಗ್ಗದೆ ದಿನಾ ಶೀತ, ಕೆಮ್ಮು,ನೆಗಡಿ ಅಂತ ಪರದಾಡುತ್ತಿದ್ದರು .ವೈದ್ಯರಲ್ಲಿ ತೋರಿಸಿ ಔಷಧಿ ಮಾಡಿದ್ದಾಯಿತು. ಅವರು ಕೊಟ್ಟ ಮಾತ್ರೆ ,ಸಿರಪ್ ನಮ್ಮಅತ್ತೆಯ ಕೆಮ್ಮು,ನೆಗಡಿ ಕಡಿಮೆ ಮಾಡಲೇ ಇಲ್ಲ.ಕೊನೆಗೆ ನಮ್ಮ ಅತ್ತೆ ಈ ಮಾತ್ರೆ,ಸಿರಫ್ ಬೇಡವೇ ಬೇಡ ಅಂತ ಹಠಹಿಡಿದು ಬಿಟ್ಟರು. ಏನು ಮಾಡಲು ತೋಚದೆ ಅವರ ಸಂಕಟವನ್ನು ನೋಡಲಾರದೆ ನಾನೇ ಮನೆ ಮದ್ದು ಮಾಡಲು ನಿಶ್ಚಯಿಸಿದೆ.ಮನೆಯಲ್ಲಿದ್ದ ಕೊತ್ತಂಬರಿ ಬೀಜ ಒಂದು ಲೋಟ, ಒಣಶುಂಠಿ ,ಸ್ವಲ್ಪ ಕರಿ ಮೆಣಸು, ಜೀರಿಗೆ,ಲವಂಗ ಇವನ್ನು ಪುಡಿ ಮಾಡಿ ಇಟ್ಟುಕೊಂಡು, ಪ್ರತಿದಿನ ಬೆಳಗ್ಗೆ ಎರಡು ಲೋಟ ನೀರಿಗೆ ಎರಡು ಚಮಚ ಪುಡಿ ಜೊತೆ ನಾಲ್ಕು ಎಲೆ ಪುದೀನ,ತುಳಸಿ,ಒಂದು ದೊಡ್ಡ ಪತ್ರೆ ಎಲೆಸೇರಿಸಿ, ಬೆಲ್ಲ ಸೇರಿಸಿ ಕುದಿಸಿ, ಅದು ಕುದ್ದು ಒಂದು ಲೋಟ ಆದ ಮೇಲೆ , ಬಿಸಿ ಇರುವಾಗಲೇ ಅತ್ತೆಗೆ ಕುಡಿಯಲು ಕೊಡಲು ಶುರುಮಾಡಿದೆ. ತಿಂಗಳು ಕಳೆಯುವಷ್ಟರಲ್ಲಿ ಅತ್ತೆಯ ಕೆಮ್ಮು,ಶೀತ ಹೇಳದೆ ಕೇಳದೆ ಓಡಿಹೋಗಿತ್ತು.
ನನ್ನ ಸ್ನೇಹಿತೆಯೊಬ್ಬರಿಗೆ ಮಂಡಿ ನೋವು ,ವೈದ್ಯರು ಕೊಟ್ಟಿರುವ ಔಷಧಿ ಮಾತ್ರೆ ತೆಗೆದುಕೊಂಡಾಗ ಮಾತ್ರ ನೋವು ಇರುವುದಿಲ್ಲ, ಸದಾ ನೋವು ನಿವಾರಕ ತೆಗೆದು ಕೊಳ್ಳುವುದು ಸಾಧ್ಯವೇ ಅಂತ ಪೇಚಾಡುತ್ತಿದ್ದರು.ಅವರಿಗೆ ಒಂದು ಮನೆ ಮದ್ದು ಹೇಳಿದೆ.ಪುಟ್ಟಳ್ಳೆಣ್ಣೆಗೆ ಬೆಳ್ಳುಳ್ಳಿ ಮತ್ತು ಇಂಗು ಹಾಕಿ ಚೆನ್ನಾಗಿ ಕುದಿಸಿ ಇಟ್ಟುಕೊಂಡು ಪ್ರತಿನಿತ್ಯ ಮಂಡಿಗೆ ಆ ಎಣ್ಣೆ ಹಾಕಿ ಮಸಾಜ್ ಮಾಡಿ ಬಿಸಿನೀರು ಹಾಕಿಕೊಂಡರೆ ಮಂಡಿನೋವು ಕಡಿಮೆ ಆಗುತ್ತದೆ ಅಂತ ಹೇಳಿದೆ.ಜೊತೆಗೆ ಕಾಲಿನ ವ್ಯಾಯಾಮವಾದ ಮಂಡಿ ಮಡಿಚುವುದು,ಚಾಚುವುದು, ಕಾಲನ್ನು ಮೇಲೆತ್ತಿ ಕೆಳಗಿಳಿಸುವುದು,ಕಾಲು ಚಾಚಿ ಮಂಡಿಯನ್ನು ಬಿಗಿಗೊಳಿಸುವುದು ಹೀಗೆ ಕೆಲವು ವ್ಯಾಯಾಮ ಹೇಳಿಕೊಟ್ಟೆ..ಅದನ್ನು ಚಾಚೂ ತಪ್ಪದೆ ಮಾಡಿದ ನನ್ನ ಸ್ನೇಹಿತೆಗೆ ಮಂಡಿ ನೋವು ಕಡಿಮೆ ಆಗಿದೆ.
ನಮ್ಮ ಮನೆಗೆಲಸಕ್ಕೆ ಬರುವ ಲಕ್ಷ್ಮಿಗೆ ಒಮ್ಮೆ ಭೇದಿ ಅಂತ ಪರದಾಡುತ್ತಿದ್ದಳು.ಅವಳಿಗೆ ಒಂದು ಚಮಚದಷ್ಟು ಮೆಂತ್ಯದ ಕಾಳು ಕೊಟ್ಟು ನುಂಗಲು ಹೇಳಿ,ಹಾಲು ಹಾಕದೆ ಕಪ್ಪು ಟೀ ಮಾಡಿಕೊಟ್ಟೆ.ಸ್ವಲ್ಪ ಹೊತ್ತಿನಲ್ಲಿಯೇ ಅವಳ ಸಮಸ್ಯೆಗೆ ಪರಿಹಾರ ಕಂಡಿತು.ಈ ಮನೆ ಮದ್ದಿಗೆ ಪರಿಹಾರ ಕಾಣದಿದ್ದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಅಂತ ಕೂಡ ಹೇಳಿದೆ. ಮತ್ತೆ ನೆನಪಾದದ್ದು ನಮ್ಮ ಸ್ನೇಹಿತರೊಬ್ಬರು ಹೇಳಿದ್ದು . ಸಾಮಾನ್ಯ ಸಸ್ಯವಾದರೂ ಅಸಾಮಾನ್ಯ ಶಕ್ತಿಯನ್ನು ಪುದೀನಾ ಸೊಪ್ಪು ಹೊಂದಿದೆ ಅಂತ ಅವರು ಹೇಳಿದ ಮೇಲೆ ಅರ್ಥವಾಗಿತ್ತು. ಅವರ ಗೆಳೆಯರೊಬ್ಬರು 3 ವರ್ಷದ ತನ್ನ ಮಗನಿಗೆ ಭೇದಿಯಾಗುತ್ತಿದೆ. ಒಂದೇ ದಿನದಲ್ಲಿ 30 ಕ್ಕೂ ಹೆಚ್ಚು ಬಾರಿ ಆಗಿದೆ. ಏನು ಮಾಡಲು ತೋಚದೆ ಸಲಹೆ ಕೇಳಿದ್ದರು. ಒಂದು ಚಮಚ ಪುದೀನಾ ಸೊಪ್ಪಿನ ರಸವನ್ನು ಕುಡಿಸು ನಿಲ್ಲುತ್ತದೆ ಎಂದು ಹೇಳಿದ್ದರಂತೆ.
ಎರಡು ಬಾರಿ ವೈದ್ಯರಿಗೆ ತೋರಿಸಿ, ಔಷಧಿ ತೆಗೆದುಕೊಂಡರೂ ಭೇದಿಯಾಗುವುದು ನಿಲ್ಲುತ್ತಿಲ್ಲ. ಇದರ ಜೊತೆ ಬೇರೆ ಏನಾದರೂ ಕೊಡಬೇಕಾ? ಕೇವಲ ಪುದಿನಾ ಸೊಪ್ಪು ಸಾಕಾ? ಎಂದದ್ದಕ್ಕೆ. ಅವನಲ್ಲಿದ್ದ ಭಯಮಿಶ್ರಿತ ಸಂಶಯ ಗಮನಕ್ಕೆ ಬಂದಿತು. ಒಂದು ಚಮಚ ಕೊಡು, ನಿಲ್ಲದಿದ್ದರೆ ಒಂದು ಗಂಟೆ ನಂತರ ಇನ್ನೊಂದು ಬಾರಿ ಒಂದು ಚಮಚ ಕುಡಿಸು, ನಿಲ್ಲುತ್ತದೆ, ಹೆದರದಿರು ಎಂದು ಹೇಳಿದ್ದರಂತೆ. ಬೆಳಗ್ಗೆ ಒಂದು ಗಂಟೆಗೆ ಕರೆ ಮಾಡಿದ, ಹೇಳಿದಂತೆ ರಾತ್ರಿಯೇ ಒಂದು ಚಮಚ ಪುದೀನಾ ಸೊಪ್ಪಿನ ರಸ ಕುಡಿಸಿದೆ, ನಂತರ ಒಮ್ಮೆ ಬಾರಿ ಭೇದಿಯಾಗಿ ನಿಂತು ಹೋಯಿತು. ರಾತ್ರಿಯಿಂದ ಭೇದಿಯಾಗಿಲ್ಲ. ಬೆಳಗ್ಗೆಯೂ ಒಂದು ಚಮಚ ಕುಡಿಸಿದ್ದೇನೆ. ಔಷಧಿಗಳಿಂದ ನಿಲ್ಲದ ಭೇದಿ ಪುದಿನಾ ಸೊಪ್ಪಿನಿಂದ ನಿಂತಿತು. ಸಸ್ಯಗಳಲ್ಲಿ ಎಷ್ಟೇಲ್ಲಾ ಔಷಧೀಯ ಗುಣಗಳಿವೆಯಲ್ಲಾ. ನೂರಾರು ಜನರಿಗೆ ವಯಸ್ಸಿನ ಬೇಧವಿಲ್ಲದೇ ಕೇವಲ ಪುದೀನಾ ಸಸ್ಯದಿಂದಲೇ ವಾಂತಿ, ಭೇದಿಯನ್ನು ಗುಣಮಾಡುವ ಶಕ್ತಿ ಇದೆ. ತೆಗೆದುಕೊಂಡವರಿಗೆ ಗುಣವಾಗಿದೆ. ಮಕ್ಕಳಿಗಾದರೆ ಒಂದು ಚಮಚ, ದೊಡ್ಡವರಿಗಾದರೆ ಒಂದು ಗ್ಲಾಸ್ ಪುದೀನಾ ಸೊಪ್ಪಿನ ರಸವನ್ನು ಕುಡಿಸಿದರೆ ಎಂತಹ ಭೇದಿಯಾದರೂ ನಿಂತು ಹೋಗುತ್ತದೆ, ಪುದೀನಾ ಸೊಪ್ಪನಿಂದ ಭೇದಿ ಕಡಿಮೆಯಾಗುತ್ತದೆ.
ಸಣ್ಣ ಪುಟ್ಟದ್ದಕ್ಕೆಲ್ಲ ಆಸ್ಪತ್ರೆಗೆ ಹೋಗುವ ಬದಲು ಮನೆ ಔಷಧಿ ಮಾಡಿದರಾಯಿತು. ಬಗ್ಗದಿದ್ದಾಗ ಮಾತ್ರ ವೈದ್ಯರಲ್ಲಿಗೆ ಹೋದರಾಯಿತು ಅನ್ನೊದು ನನ್ನ ಪಾಲಿಸಿ. ನೆರೆಮನೆಯ ಸೊಸೆ ನಮ್ಮ ಮನೆಯಲ್ಲಿರುವ ಪುಸ್ತಕಗಳಿಗಾಗಿ ದಿನ ನಮ್ಮ ಮನೆಗೆ ಬರುತ್ತಿದ್ದಳು. ಅವಳಿಗೆ ಹೇಳಿ ಕೊಳ್ಳಲು ಆಗದ ಸಮಸ್ಯೆ ಇರುವುದು ನನಗೆ ಗೊತ್ತಾಯಿತು. ವೈದ್ಯರಲ್ಲಿ ಹೋಗಲು ಸಂಕೋಚ. ಹೊಸ ಸೊಸೆ ಬೇರೆ ಯಾರಲ್ಲಿಯೂ ಹೇಳಿ ಕೊಳ್ಳದ ಅನುಭವಿಸುತ್ತಿದ್ದಳು. ಗಂಡನ ಮನೆಗೆ ಬಂದ ಮೇಲೆ ದಿನಾ ರಾತ್ರಿ ಚಪಾತಿ ತಿನ್ನುತ್ತಿದ್ದ ಅವಳಿಗೆ ಕೆಲವೇ ದಿನಗಳಲ್ಲಿ ಮಲಬದ್ದತೆ ಕಾಡತೊಡಗಿತು. ಆಸನದಲ್ಲಿ ಗಾಯವಾಗಿ ಹೇಳಲಾರದೆ,ಅನುಭವಿಸಲಾರದ ಅವಳ ಸಂಕಟ ನನಗೆ ಅರ್ಥವಾಗಿ ಒತ್ತಾಯ ಮಾಡಿ ಕೇಳಿದಾಗ ಬಾಯಿಬಿಟ್ಟಿದ್ದಳು. ತಕ್ಷಣವೇ ಬಿಸಿನೀರಿಗೆ ಎರಡು ಚಮಚ ತುಪ್ಪ ಹಾಕಿ ಕುಡಿಯಲು ಹೇಳಿದೆ. ಎರಡು ಬಾಳೆಹಣ್ಣು ತಿನ್ನಲು ಕೊಟ್ಟು ಪ್ರತಿದಿನ ತಪ್ಪದೆ ಬಾಳೆಹಣ್ಣು ತಿನ್ನು, ನಿನ್ನ ಸಮಸ್ಯೆ ಓಡಿಹೋಗುತ್ತದೆ ಎಂದಿದ್ದೆ. ಈಗ ಅವಳು ಊಟ ಬಿಟ್ಟರೂ ಬಾಳೆಹಣ್ಣು ತಿನ್ನಲು ಬಿಡುವುದಿಲ್ಲ.
ಕೆಲವು ವರ್ಷಗಳ ಹಿಂದೆ ನನಗೆ ವಿಪರೀತ ಕಾಲು ನೋವು. ಸ್ವಲ್ಪ ಹೊತ್ತು ನಿಂತರೆ ಸಾಕು ಕಾಲುನೋವು. ನನ್ನ ಉದ್ಯೋಗವೇ ನಿಲ್ಲುವುದು. ಇಡೀ ದಿನ ನಿಂತು ಪಾಠ ಮಾಡಬೇಕು. ವೈದ್ಯರ ಬಳಿ ಹೋದಾಗ ಕ್ಯಾಲ್ಷಿಯಂ ಮಾತ್ರೆ ಕೊಟ್ಟು , ಹೆಚ್ಚು ನಿಲ್ಲಬೇಡಿ ಅಂದು ಬಿಟ್ಟರು. ಹೆಚ್ಚು ಹೊತ್ತು ನಿಲ್ಲಬಾರದೆಂದರೆ ಕೆಲಸ ಬಿಡಬೇಕು,ಆದರೆ ಈ ಸಣ್ಣ ಕಾರಣಕ್ಕೆ ಕೆಲಸ ಬಿಡಲು ಸಾಧ್ಯವೇ, ಕಾಲು ನೋವು ಅನುಭವಿಸಲೂ ಸಾಧ್ಯವಿಲ್ಲ. ಏನು ಮಾಡಲು ತೋಚದೆ ಚಿಂತೆಯಾಗಿತ್ತು. ಸದಾ ಕ್ಯಾಲ್ಷಿಯಂ ಮಾತ್ರೆ ತೆಗೆದು ಕೊಳ್ಳುವುದಕ್ಕಿಂತ ಕ್ಯಾಲ್ಷಿಯಂ ಇರುವ ಆಹಾರವನ್ನು ತೆಗೆದುಕೊಳ್ಳುವುದು ಅಂತ ತೀರ್ಮಾನಕ್ಕೆ ಬಂದು ಬಿಟ್ಟೆ. ಹಿಂದಿನವರು ಸದಾ ರಾಗಿ ಉಪಯೋಗಿಸಿ ಅದೆಷ್ಟು ಗಟ್ಟಿಮುಟ್ಟಾಗಿದ್ದರು. ಕಾಲು ನೋವು ,ಕೈ ನೋವು ಅಂತೆಲ್ಲಾ ಅಂದವರೇ ಅಲ್ಲ. ಸರಿ ಮನೆಗೆ ರಾಗಿ ಬಂದೇ ಬಿಟ್ಟಿತು. ರಾಗಿಗೆ ಸೋಯಬೀನ್ ಹಾಕಿ ಹಿಟ್ಟು ಮಾಡಿಸಿ ಪ್ರತಿದಿನ ಮುದ್ದೆ ಉಪಯೋಗಿಸಿದೆ. ಬೆಳಿಗ್ಗೆ ನಾನೇ ತಯಾರಿಸಿದ ಬಾದಾಮಿ ಪುಡಿ ಬೆರಸಿದ ಹಾಲು, ಮಧ್ಯಾಹ್ನ ಮೊಸರು, ಊಟಕ್ಕೆ ಮೂಲಂಗಿ, ಸೌತೆಕಾಯಿ, ಕ್ಯಾರೆಟ್ ,ಈರುಳ್ಳಿ ಹಾಕಿದ ಸಲಾಡ್ ಉಪಯೋಗಿಸತೊಡಗಿದೆ.ಜೊತೆಗೆ ಕಾಲಿನ ಸರಳ ವ್ಯಾಯಾಮ ಮಾಡತೊಡಗಿದೆ.ಈಗ ನಾನೂ ಎಷ್ಟು ಹೊತ್ತು ನಿಂತರೂ ಕಾಲು ನೋವು ಇಲ್ಲ.ಬರಿ ಅಡುಗೆಗೆ ಮಾತ್ರವೇ ಬಳಸಲ್ಪಡದೆ ಆರೋಗ್ಯ ಮತ್ತು ಸೌಂದರ್ಯ ಸಾಧನವಾಗಿಯೂ ಬಳಸಬಹುದು.
ಒಮ್ಮೆ ಮಲೆನಾಡಿನಲ್ಲಿರುವ ನಮ್ಮ ಅತ್ತಿಗೆಯ ಊರಿಗೆ ಹೋಗಿದ್ದಾಗ ಜ್ವರ ಬಂದಿತ್ತು.ತಕ್ಷಣಕ್ಕೆ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲದ ಕಾರಣ ಕಹಿಜೀರಿಗೆಯನ್ನು ಪುಡಿ ಮಾಡಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕುಡಿಯಲು ಕೊಟ್ಟಿದ್ದರು. ಕಹಿ ವಿಷ ಅನ್ನಿಸಿದ್ದರೂ ಅವರಿಗೆ ಬೇಸರವಾಗುತ್ತದೆ ಅಂತ ಬಲವಂತವಾಗಿ ಕುಡಿದಿದ್ದೆ. ಬೆಳಿಗ್ಗೆವರೆಗೆ ಎರಡು ಮೂರು ಬಾರಿ ಆ ಕಹಿ ವಿಷವನ್ನು ಕುಡಿಸಿದ್ದರು. ಆಶ್ಚರ್ಯ ಎಂಬಂತೆ ಬೆಳಿಗ್ಗೆ ಹೊತ್ತಿಗೆ ನನ್ನ ಜ್ವರ,ಮೈಕೈ ನೋವು ಕೂಡ ಕಡಿಮೆಯಾಗಿತ್ತು.ಇನ್ಯಾಕೆ ಆಸ್ಪತ್ರೆ, ನನಗೆ ಮೈ ಕೈ ನೋವು,ಜ್ವರ ಬಂದರೆ ನಾನೂ ಹೀಗೆ ಮಾಡುತ್ತೇನೆ ,ಇದಕ್ಕೂ ಜಗ್ಗದಿದ್ದಾಗ ಮಾತ್ರವೇ ನಾವು ಆಸ್ಪತ್ರೆಗೆ ಹೋಗುವುದು ಅಂತ ಹೇಳಿದಾಗ ಒಳ್ಳೆಯ ಔಷಧಿ ಹೇಳಿದ್ರಿ ಅಂತ ,ವಾಪಸ್ಸು ಬರುವಾಗ ಅವರಿಂದ ಕಹಿ ಜೀರಿಗೆ ಪಡೆದು ಕೊಂಡು ಬಂದಿದ್ದೆ.
ಮಗಳು ಇತ್ತೀಚೆಗೆ ಕೂದಲು ಜಾಸ್ತಿ ಉದುರುತ್ತಿದೆ ಅಂತ ದೂರಿದಳು.ಕೂದಲು ಬಗ್ಗೆ ಕೇರ್ ತೆಗೆದು ಕೊಳ್ಳದ ಬಗ್ಗೆ ನನಗೆ ಮಗಳ ಮೇಲಿನ ಅಸಮಾಧಾನ ಮಾಯವಾಗಿ ತಕ್ಷಣವೇ ಮೆಂತ್ಯದ ಕಾಳು ನೆನೆಸಿದೆ. ಬೆಳಿಗ್ಗೆ ನೆನಸಿದ ಮೆಂತ್ಯೆ ಜೊತೆ, ಕರಿಬೇವು, ದಾಸವಾಳದ ಸೊಪ್ಪನ್ನು ಹುಳಿಮೊಸರಿನ ಜೊತೆ ರುಬ್ಬಿ ಮಗಳ ಕೂದಲಿಗೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಲು ತಿಳಿಸಿದೆ.ವಾರಕ್ಕೊಮ್ಮೆ ಕೂದಲಿಗೆ ಈ ಉಪಚಾರ ತಪ್ಪದೆ ಮಾಡಲು ಶುರುವಾದ ಮೇಲೆ ಮಗಳ ಕೂದಲು ಉದುರುವುದು ನಿಂತಿತು . ಪ್ರತಿದಿನ ತಲೆಗೆ ಹಚ್ಚಲು ಎಣ್ಣೆ ಕೂಡ ತಯಾರಿಸಿದೆ. ಈರುಳ್ಳಿ ಚೂರುಗಳು,ದಾಸವಾಳದ ಸೊಪ್ಪು,ಮೆಂತ್ಯದ ಸೊಪ್ಪು,ದಂಟಿನಸೊಪ್ಪು,ಕರಿಬೇವಿನಸೊಪ್ಪು,ಮೆಹಂದಿ ಎಲೆಗಳು ಇವನ್ನು ರುಬ್ಬಿ, ಕೊಬ್ಬರಿ ಎಣ್ಣೆ ಮತ್ತು ಪುಟ್ಟಳ್ಳೆಣ್ಣೆ ಹಾಕಿ ಚೆನ್ನಾಗಿ ಕುದಿಸಿ ಸೋಸಿ ಇಟ್ಟು ಕೊಂಡು, ತಲೆಗೆ ಎಣ್ಣೆ ಹಚ್ಚುವಾಗಲೆಲ್ಲ ಕೊಬ್ಬರಿ ಎಣ್ಣೆ ಜೊತೆ ಬೆರೆಸಿ ಅಥವಾ ಹಾಗೆಯೇ ಹಚ್ಚಿ ಮಸಾಜು ಮಾಡಿದರೆ ಕೂದಲು ಸೊಂಪಾಗಿ ಬೆಳೆಯಲು ಸಹಕಾರಿ ಆಗುತ್ತದೆ.ಬಿಳಿಕೂದಲು ಕಪ್ಪಾಗುತ್ತದೆ. ಸ್ನಾನ ಮಾಡಲು ತಲೆಗೆ ಶಾಂಪೊ ಹಾಕುವ ಬದಲು ಸೀಗೆಪುಡಿ, ಸಿಜ್ಜಲುಪುಡಿ , ಕಡಲೇಹಿಟ್ಟಿಗೆ ಬೆರೆಸಿ ಇಟ್ಟುಕೊಂಡು ಕೂದಲು ತೊಳೆಯಲು ಬಳಸಿದರೆ ಕೂದಲು ಬೇಗ ಬಿಳಿಯಾಗುವುದಿಲ್ಲ. ಹೀಗೆ ಅನೇಕ ಔಷಧಿಗಳು ನಮ್ಮ ದಿನ ನಿತ್ಯದ ಪದಾರ್ಥಗಳಲ್ಲಿ ನಮ್ಮ ಹಿತ್ತಲು ಹಾಗು ಅಡುಗೆಮನೆಯಲ್ಲಿಯೇ ಇರುತ್ತದೆ.
-ಎನ್. ಶೈಲಜಾ, ಹಾಸನ.
ನಿಮ್ಮ ಉತ್ತಮ ಮಾಹಿತಿ ಎಲ್ಲಾ ವರ್ಗದ ಜನತೆಗೆ ಸಮಾಜಕ್ಕೆ ಕೊಡುಗೆ ವಂದನೆಗಳು
ಸ್ವಂತ ಅನುಭವಗಳನ್ನು ಒಳಗೊಂಡ ಮನೆ ಮದ್ದಿನ ಮಹತ್ವವನ್ನು ತಿಳಿಸುವಂತಹ ಉಪಯುಕ್ತ ಲೇಖನ .
ಮನೆಯೊಳಗೇ ಔಷಧಿ… ಉತ್ತಮ ಮಾಹಿತಿಯುಕ್ತ ಸೊಗಸಾದ ಬರಹ.