ಮರೆಯಲಾರದ ವರುಷ ಗತಿಸಿ ಹೋಯಿತು
ನೋಡನೋಡುತ್ತಿದ್ದಂತೆ 2019 ಮುಗಿದೇ ಹೋಯಿತು. ಪ್ರತಿಸಲದಂತೆ ಹತ್ತು-ಹಲವು ನಿರೀಕ್ಷೆಗಳು. ಈ ವರ್ಷ ಒಳ್ಳೆಯದಾಗಿರಲಿ ಎಂಬ ಆಶಯದೊಂದಿಗೆ 2019ರ ಜೊತೆಗೆ ಹೆಜ್ಜೆಗಳನ್ನು ಹಾಕಿದ್ದೆ. ಈ ವರ್ಷದಲ್ಲಿ ನನಗೆ ಒಮ್ಮೊಮ್ಮೆ ಖುಷಿ, ಒಮ್ಮೊಮ್ಮೆ ದುಃಖ. ಮನಸ್ಸಿಗೆ ನೆಮ್ಮದಿ, ಸಂತಸ ನೀಡಿದ ಕ್ಷಣಗಳು ಹಲವಾದರೆ ಪ್ರೀತಿಪಾತ್ರರನ್ನು ಕಳೆದುಕೊಂಡ ಬೇಸರ ಇನ್ನೊಂದೆಡೆ. ನನ್ನ ಪಾಲಿಗಂತೂ, ಈ ವರ್ಷ ಬಹಳ ಮಹತ್ವದ್ದು ಅಂತ ಹೇಳಿದರೆ ಖಂಡಿತಾ ತಪ್ಪಾಗಲಿಕ್ಕಿಲ್ಲ.
ಮೊದಲನೆಯದಾಗಿ ನೆನಪಿಗೆ ಬರುತ್ತಿರುವುದು ಹಲವು ವರ್ಷಗಳ ಕಾಲ ಕಷ್ಟಪಟ್ಟು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಸಂಶೋಧನಾ ಪ್ರಬಂಧ ಮಂಡನೆಯನ್ನು 2018 ದಶಂಬರ್ 28 ರಂದು ಮಾಡಿದ್ದರೂ, ವಿಶ್ವವಿದ್ಯಾನಿಲಯ ನಡೆಸುವ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ಸ್ವೀಕರಿಸಿ ನನ್ನ ಹೆಸರಿನ ಜೊತೆಯಲ್ಲಿ ಡಾ. (Dr.) ಅಂತ ಸೇರಿಸಿಕೊಳ್ಳುವ ಸೌಭಾಗ್ಯ ನನ್ನದಾಗಿದ್ದು 2019ರಲ್ಲಿಯೇ. ಅಲ್ಲದೆ 2016 ರಲ್ಲಿ ಅಂಗೀಕಾರವಾಗಿದ್ದ ಸಂಶೋಧನಾ ಲೇಖನವೊಂದು ಪ್ರಕಟಗೊಂಡು, ಖುಷಿಯ ಹೆಚ್ಚಳಕ್ಕೆ ಕಾರಣವಾಯಿತು.
ಜನ್ಮ ನೀಡಿದ ಮಕ್ಕಳ ಸಾಧನೆಯಿಂದಾಗಿ, ಮಕ್ಕಳ ಜೊತೆ ನಾವು ಕೂಡಾ ಗೌರವಿಸಲ್ಪಟ್ಟಾಗ ಆಗುವ ಸಂತೋಷ ಅನಿರ್ವಚನೀಯ. ಅಂತಿಮ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ಮಗನಿಗೆ Best Outgoing Student ಪ್ರಶಸ್ತಿ ಸಿಕ್ಕಿದಾಗ, ಅವನ ಜೊತೆ ವೇದಿಕೆ ಏರುವ ಖುಷಿಯ ಕ್ಷಣಗಳು ನನ್ನ (ನಮ್ಮ) ಪಾಲಿಗೆ. ಮಗನ ಎಂಜಿನಿಯರಿಂಗ್ ಮುಗಿದು, ಅವನು ಉದ್ಯೋಗಕ್ಕೆ ಸೇರಿ ತನ್ನ ಕಾಲ ಮೇಲೆ ನಿಂತಾಗ ಆಗುವ ಅನುಭವವನ್ನೂ ಪಡೆದಿದ್ದಾಯಿತು. ಅದಕ್ಕಿಂತಲೂ ಖುಷಿಯ ವಿಷಯವೆಂದರೆ, ಮೊದಲೆಂದೂ ಅಡುಗೆ ಮಾಡದ ನನ್ನ ಮಗನೀಗ ತಾನೇ ಅಡುಗೆ ಮಾಡಿಕೊಳ್ಳಲು ಕಲಿತಿರುವುದು!
2019 ನನ್ನ ಪಾಲಿಗೆ ಅವಿಸ್ಮರಣೀಯ. ಕಾಲೇಜು ದಿನಗಳಲ್ಲಿ ಕವನ, ಕಥೆ, ಪ್ರಬಂಧ ಬರೆಯುತ್ತಿದ್ದ ನಾನು ಅದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದೆ. 26 ವರ್ಷಗಳ ನಂತರ ಮತ್ತೆ ಲೇಖನಗಳನ್ನು ಬರೆಯಲು ಪ್ರಾರಂಭ ಮಾಡಿರುವೆನು. ಸುರಹೊನ್ನೆ ಪತ್ರಿಕೆಯಲ್ಲಿ 13 ಲೇಖನಗಳನ್ನು, ಕಥಾ ಅರಮನೆ ಎಂಬ ಇನ್ನೊಂದು ಅಂತರ್ಜಾಲ ಪುಟದಲ್ಲಿ ಸುಮಾರು ಹತ್ತರಷ್ಟು ವಿಷಯಾಧಾರಿತ ಲೇಖನಗಳನ್ನು, ಹಾಗೆಯೇ ಪ್ರತಿಲಿಪಿ ಅನ್ನುವ ಅಂತರ್ಜಾಲ ಪುಟದಲ್ಲಿ ಒಂದು ಕಥೆಯನ್ನು ಬರೆದಿರುವೆನು. ಅಲ್ಲದೆ ಪ್ರತಿಷ್ಟಿತ ಸುಧಾ ಪತ್ರಿಕೆಯಲ್ಲಿ ಗೋಸಂಪಿಗೆ ಹೂವಿನ ಬಗ್ಗೆ ಬರೆದ ನನ್ನ ಲೇಖನವೊಂದು ಪ್ರಕಟಗೊಂಡಿರುವುದು ನಿಜಕ್ಕೂ ಖುಷಿ ತಂದಿದೆ. ನನ್ನನ್ನು ಬರೆಯಲು ಪ್ರೇರೇಪಿಸಿದ ಸುರಹೊನ್ನೆಗೆ ನಾನು ಚಿರಋಣಿ. ಈಗ ಬರೆಯದಿದ್ದರೆ ಏನನ್ನೋ ಕಳೆದುಕೊಂಡ ಅನುಭವವಾಗುತ್ತದೆ.
ನನಗೆ ಸಣ್ಣಂದಿನಿಂದಲೂ ನನ್ನಷ್ಟಕ್ಕೆ ಹಾಡುವುದೆಂದರೆ ಇಷ್ಟ. ಆದರೆ ಉಳಿದವರ ಎದುರು ಹಾಡಲು ಸಂಕೋಚ, ಹಿಂಜರಿಕೆ. ಸಂಗೀತ ತರಗತಿಗೆ ಹೋಗಲು ಇಷ್ಟವಿದ್ದರೂ, ಬಡತನ ಅದಕ್ಕೆ ಅಡ್ಡಿಯಾಗಿತ್ತು. ಈಗಿನಂತೆ ಪ್ರೋತ್ಸಾಹಿಸುವವರೂ ಇರಲಿಲ್ಲವೆನ್ನಿ. ರೇಡಿಯೋದಲ್ಲಿ ಕೇಳಿದ ಎಲ್ಲಾ ಹಾಡುಗಳನ್ನು ಮನೆಯಲ್ಲಿ ಹಾಡುತ್ತಿದ್ದೆ. ಆದರೆ ನನ್ನೊಳಗಿದ್ದ ಭಯದ ಕಾರಣದಿಂದ, ಹೊರಗೆಲ್ಲೂ ನಾನು ಹಾಡಿರಲಿಲ್ಲ. ವಾಸ್ತವವಾಗಿ, ನಾನು ಹಾಡಬಲ್ಲೆ ಎಂಬ ವಿಷಯವೇ ನನ್ನ ಶಿಕ್ಷಕರಿಗೆ ಮತ್ತು ಹೆಚ್ಚಿನ ಸಂಬಂಧಿಕರಿಗೆ ಗೊತ್ತಿರಲಿಲ್ಲ. ಅತಿ ಹತ್ತಿರದ ಸಂಬಂಧಿಗಳು ಹಾಡಲು ಹೇಳಿದರೆಂದರೆ, ಅದೇನೋ ಅವ್ಯಕ್ತ ಭಯ, ಗಂಟಲಿನಿಂದ ಸ್ವರವೇ ಹೊರಡದ ಪರಿಸ್ಥಿತಿ. ಕಾಲೇಜು ಉಪನ್ಯಾಸಕಿಯಾಗಿ ಸೇರಿದ ನಂತರವೂ, ಈ ಪರಿಸ್ಥಿತಿ ಮುಂದುವರಿದಿತ್ತು. ಆದರೂ, ಧೈರ್ಯ ತಂದುಕೊಂಡು, ಕೆಲವು ಸಮಾರಂಭಗಳಲ್ಲಿ ಪ್ರಾರ್ಥನಾ ಗೀತೆಗಳನ್ನು ಹಾಡುತ್ತಾ, ಸಹೋದ್ಯೋಗಿಗಳಿಂದ ಒಳ್ಳೆಯ ಗಾಯಕಿ ಅಂತ ಅನ್ನಿಸಿಕೊಂಡರೂ, ಬೇರೆ ಕಡೆ ಹಾಡಲು ಮುಜುಗರ. 2019ರಲ್ಲಿ ದಿಟ್ಟ ನಿರ್ಧಾರ ಮಾಡಿಯೇ ಬಿಟ್ಟೆ “ಬದುಕಿನ ಅರ್ಧಶತಕದ ಹೊಸ್ತಿಲಲ್ಲಿದ್ದೇನೆ. ಬಾಳಿದಷ್ಟು ವರ್ಷವಂತೂ ಬದುಕಲು ಸಾಧ್ಯವಿಲ್ಲ. ಯಾರೂ ಏನು ಬೇಕಾದರೂ ಹೇಳಲಿ. ಈಗಲೂ ಹಾಡದಿದ್ದರೆ ಇನ್ನು ಯಾವಾಗ ಹಾಡುವುದೆಂದು”. ಭಕ್ತಿಗಾನ ಸುಧೆ ದೇವರನಾಮ ಹಾಗೂ ದಾಸನಮನ ಎಂಬ ಎರಡು ಮುಖಪುಸ್ತಕದ ಪುಟಗಳಲ್ಲಿ ನಾನು ಹಾಡಿದ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿರುವೆ. ಅಲ್ಲದೆ ಸಂಗೀತ ಶಿಕ್ಷಕಿಯೊಬ್ಬರು “ಭಜನೆಗೆ ಬರಬಹುದೇ?” ಅಂತ ಕರೆದಾಗ ಅವರ ಭಜನಾ ಗುಂಪಿಗೆ ಸೇರಿ, ಎರಡು ಭಜನಾ ಕಾರ್ಯಕ್ರಮಗಳಲ್ಲಿ ಭಾಗಿಯಾದ ಸಂತಸವೂ ನನ್ನದು. ಇಹದ ಪರಿವನ್ನೇ ಮರೆತು, ಪರಮಾತ್ಮನ ಧ್ಯಾನವನ್ನು ಹಾಡುಗಳ ಮೂಲಕ ಮಾಡುತ್ತಾ ಕಳೆಯುವ ಆ ಸುಸಮಯವನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ.
ನಾನು ಆಟವಾಡಿ ಬೆಳೆದ ಮನೆ ಹಳೆಯದಾಯಿತೆಂದು ಹಾಗೂ ಹೊಸ ಮನೆಯನ್ನು ಅದೇ ಜಾಗದಲ್ಲಿ ನಿರ್ಮಿಸುವ ಅನಿವಾರ್ಯತೆ ಇದ್ದುದರಿಂದ ನಾನು ಆಟವಾಡಿ ಬೆಳೆದ ಮನೆ ಬರಿಯ ನೆನಪಿಗೆ ಸೇರಿಹೋದದ್ದೂ ಈ ವರ್ಷವೇ. ನೂತನ ಮನೆಯ ಗೃಹಪ್ರವೇಶದೊಡನೆ, ತೀರ್ಥರೂಪರ ಸಹಸ್ರ ಚಂದ್ರದರ್ಶನ ಶಾಂತಿಯ ಆಚರಣೆಯ ಸಂಭ್ರಮವನ್ನು ಎದುರು ನೋಡುತ್ತಿದ್ದ ನಮಗೆ ಹೇಳದೆಯೇ, ನಮ್ಮನ್ನೆಲ್ಲಾ ದುಃಖದ ಮಡುವಿನಲ್ಲಿ ಮುಳುಗಿಸಿ ಬಿಟ್ಟು ಅಗಲಿ ಹೋದರು ನಮ್ಮಪ್ಪ. ಜಾಸ್ತಿ ನರಳದೆ, ಸುಖ ಮರಣ ಹೊಂದಿದರೆಂಬ ನೆಮ್ಮದಿ ಒಂದೆಡೆಯಾದರೂ, ಅಪ್ಪನ ಅಗಲಿಕೆಯ ನೋವನ್ನು ಸಹಿಸುವುದು ತುಂಬಾ ಕಷ್ಟವೆನ್ನಿಸಿತು. ಅಪ್ಪ ಸಾಯುವ ಇಪ್ಪತ್ತು ದಿನ ಮೊದಲು, ನಮ್ಮ ದೊಡ್ದಪ್ಪ(ಅಪ್ಪನ ಏಕಮಾತ್ರ ಅಣ್ಣ) ವಿಧಿವಶರಾಗಿದ್ದರು. ದೊಡ್ಡಪ್ಪನನ್ನು ಕಳೆದುಕೊಂಡ ದುಃಖದಿಂದ ನಾವಿನ್ನೂ ಹೊರಗೆ ಬರುವ ಮೊದಲೇ “ಅಣ್ಣಾ, ನಿನ್ನ ಜೊತೆಗೆ ನಾನೂ ಬರುವೆ” ಅಂತ ಅಣ್ಣನನ್ನು ಹಿಂಬಾಲಿಸಿದರು ನಮ್ಮಪ್ಪ. ಮೊದಲೇ ನಿಶ್ಚಯಿಸಿದ್ದರಿಂದ ಅಪ್ಪನ ಅಗಲಿಕೆಯ ನೋವಿನಲ್ಲಿಯೇ ನೂತನ ಮನೆಯ ಗೃಹಪ್ರವೇಶವೂ ನಡೆಯಿತು.
2019ರಲ್ಲಿ ಆದ ಇನ್ನೊಂದು ಅನುಭವವನ್ನು ಮರೆಯಲು ಸಾಧ್ಯವೇ ಇಲ್ಲ. ನನ್ನೆಲ್ಲಾ ಅಗತ್ಯ ದಾಖಲೆಪತ್ರಗಳು, ಹಿಂದಿನ ದಿನವಷ್ಟೇ ಎಟಿಎಂನಿಂದ ತೆಗೆದಿದ್ದ ಹಣ, ನಾಲ್ಕೈದು ಡೆಬಿಟ್ ಕಾರ್ಡುಗಳಿದ್ದ ಪರ್ಸನ್ನು ಕಳ್ಳನೊಬ್ಬ ಎಗರಿಸಿದಾಗ ಆದ ಬೇಸರ! ಪೊಲೀಸ್ ಠಾಣೆಯಲ್ಲಿ ಪರ್ಸ್ ಕಳವಾದ ಬಗ್ಗೆ ದೂರು ನೀಡುವ ಅನುಭವವೂ ನನ್ನ ಪಾಲಿಗಾಯಿತು. “ಹಣ ಹೇಗಾದರೂ ಕೈತಪ್ಪಿದ್ದೇ. ಸಿಗುವ ಸಂಭವ ಕಡಿಮೆ. ದಾಖಲೆಪತ್ರಗಳಾದರೂ ಸಿಗಲಿ” ಅನ್ನುವ ನನ್ನ ಹಾಗೂ ನನ್ನ ಕುಟುಂಬದವರೆಲ್ಲರ ಪ್ರಾರ್ಥನೆಯ ಫಲವೋ ಎಂಬಂತೆ ದಾಖಲೆಪತ್ರಗಳಿದ್ದ ಪರ್ಸ್ ನನಗೆ ಮರಳಿ ಸಿಕ್ಕಿತು. ಹಣ ಹೋದರೂ, ದಾಖಲೆಪತ್ರಗಳು ಕೈಗೆ ಸಿಕ್ಕಿದ್ದರಿಂದ ಸ್ವಲ್ಪ ಸಮಾಧಾನವಾಯಿತು.
ಒಟ್ಟಿನಲ್ಲಿ 2019 ನನ್ನ ಪಾಲಿಗೆ ಮರೆಯಲಾರದ ವರ್ಷವೆಂದರೆ ತಪ್ಪಿಲ್ಲ. ಗತವರ್ಷದ ಸಿಹಿ ಕಹಿ ನೆನಪುಗಳನ್ನು ಒತ್ತಟ್ಟಿಗಿಟ್ಟು, ಹೊಸ ಭರವಸೆಗಳೊಂದಿಗೆ, ಹೊಸ ವರುಷವನ್ನು ಸ್ವಾಗತಿಸುವ ಸಮಯ ಸನ್ನಿಹಿತವಾಗಿದೆ.
ಹೊಸ ಬಗೆಯಲಿ ಬರಲಿ, ಸುಖಸಾವಿರ ತರಲಿ
ಸಕಲ ಜೀವಜಾತರಿಗೂ ಸನ್ಮಂಗಲವನ್ನುಂಟುಮಾಡಲಿ
ಎಂಬ ಆಶಯದೊಂದಿಗೆ 2020 ಕ್ಕೆ ಸ್ವಾಗತ ಬಯಸುವೆ. ನೆನಪಿಡಿ, ಈ ವರ್ಷ ಯಾವುದೇ ದಾಖಲೆಗಳಿಗೆ ಸಹಿ ಮಾಡಿ ದಿನಾಂಕ ನಮೂದಿಸುವಾಗ ವರ್ಷವನ್ನು2020 ಎಂದೇ ಬರೆಯಿರಿ. ಉದಾಹರಣೆಗೆ dd/mm/20 ಎಂದು ಬರೆದರೆ 20 ರ ಮುಂದೆ ಯಾವುದಾದರೂ ಸಂಖ್ಯೆ ಸೇರಿಸಿ ವರ್ಷವನ್ನು ಬದಲಾಯಿಸಬಹುದು. ಆದ್ದರಿಂದ dd/mm/2020 ಎಂದೇ ಬರೆಯಿರುವಿರಲ್ಲವೇ?
-ಡಾ.ಕೃಷ್ಣಪ್ರಭಾ,ಎಂ.. ಮಂಗಳೂರು
ಜೀವನದಲ್ಲಿ ಆಗುವ ಘಟನೆಗಳು ನೀಡುವ ಪಾಠಗಳು ನಮಗೆ ಬದುಕಿನ ಬಗ್ಗೆ ತಿಳಿಸುತ್ತವೆ
ನಿಮ್ಮ ಮಾತು ನಿಜ. ತರಗತಿ ಹಾಗೂ ಶಿಕ್ಷಕರ ಸಹಾಯವಿಲ್ಲದೆ, ಜೀವನದ ಅನುಭವಗಳು ಬದುಕಿಗೆ ಹಲವು ಪಾಠವನ್ನು ಕಲಿಸುತ್ತವೆ.
ಸೊಗಸಾದ, ಆಪ್ತವಾದ ಬರಹ. ಹೊಸವರ್ಷದಲ್ಲಿ ಇನ್ನಷ್ಟು ಸಂತಸಗಳು ನಿಮ್ಮದಾಗಲಿ. ಸುರಹೊನ್ನೆಯನ್ನು ಪ್ರೀತಿಯಿಂದ ನೆನೆಪಿಸಿಕೊಂಡಿದ್ದೀರಿ..ಖುಷಿಯಾಯಿತು. ಧನ್ಯವಾದಗಳು.
ಒಂದೇ ವರ್ಷದಲ್ಲಿ ಹಲವು ಸಿಹಿ-ಕಹಿ ಅನುಭವಗಳು. ಮೆಚ್ಚುಗೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹವೇ ನನಗೆ ಎಂದಿಗೂ ಶ್ರೀರಕ್ಷೆ. ಹಂಚಿಕೊಳ್ಳಲು ಅವಕಾಶ ಕೊಟ್ಟ ನಿಮಗೆ ವಂದನೆಗಳು
Beautiful madam. ಸುರಹೊನ್ನೆಯ ಪ್ರತಿ ನಿಮ್ಮ ಅಭಿಮಾನ ಬಹಳ ಇಷ್ಟವಾಯಿತು . ಹೊಸ ವರ್ಷ ನಿಮ್ಮ ಸಾಧನೆಯ ಹಾದಿಯಲ್ಲಿ ನೆಮ್ಮದಿ , ಸಂತಸ ಹಾಗು ಯಶಸ್ಸನ್ನು ಹೊತ್ತು ತರಲಿ ಅನ್ನುವ ಹಾರೈಕೆ .
ಧನ್ಯವಾದಗಳು ನಯನಾ. ನಿಮ್ಮ ಪ್ರೀತಿಯ ಹಾರೈಕೆ ನನ್ನನ್ನು ತಲುಪಿದೆ.
ಸುಪರ್್ಬರಹ
ಮೆಚ್ಚುಗೆಯ ನುಡಿಗೆ ಧನ್ಯವಾದಗಳು
“ಎಷ್ಟು ಆಪ್ತವಾಗಿ ಬಂದಿದೆ ಎಂದರೆ, ನನ್ ಮುಂದೆಯೇ ಕುಳಿತು ಮಾತನಾಡಿದಂತೆ ಅನ್ನಿಸಿತು…. All the best!”
ನನ್ನ ಗೆಳತಿಯೂ ಲೇಖಕಿಯೂ ಆದ ಶ್ರೀಮತಿ ಸರೋಜಾ ಪ್ರಕಾಶ್ ಅವರ ಪ್ರತಿಕ್ರಿಯೆ
Congratulations
ಧನ್ಯವಾದಗಳು
ಎಲ್ಲವೂ ಕಣ್ಣಿಗೆ ಕಟ್ಟುವಂತೆ ಬರೆಯುತ್ತೀರಿ.ಅದೇ ತುಂಬಾ ಇಷ್ಟ ನಿಮ್ಮ ಬರಹದಲ್ಲಿ.
Thank you.. ಮೆಚ್ಚುಗೆಗೆ ಧನ್ಯವಾದಗಳು
ಎಂದಿನಂತೆ ಸುಂದರ ಬರಹ.ಸಿಹಿಕಹಿಗಳ ಸಮ್ಮಿಶ್ರಣ 2019. 2020 ನಿಮ್ಮ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿ. ಪ್ರತಿಭೆಗಳ ಭಂಡಾರ ನೀವು. ಸಾಧನೆಯ ಹಾದಿಯಲ್ಲಿ ಯಶಸ್ಸು ಕಂಡವರು ನೀವು. ಹೊಸವರುಷ ಹೊಸ ಹರುಷ ತರಲಿ…
ಅಭಿಮಾನದಿಂದ ಕೂಡಿದ ಪ್ರೀತಿ,ಹಾರೈಕೆಯ ನುಡಿಗೆ ಧನ್ಯವಾದಗಳು
Very heart touching memories. Understood your feelings. Appreciation got means today itself you will bring down the moon also. Keep it up. Wish you all the best.
Very nice article Krishna Prabha. Expressed your feelings beautifully well. Wish you all the very best for your future writings
ಆಪ್ತವಾದ ಬರಹ ಮನ ತುಂಬಿತು.
KP, Charity begins at home…u r a perfect role model for all the young rural girls ..to look up to u…A humble n humility personanified ACHIEVER..