ರೂಪಾಂತರ
ಕರೆದಿಟ್ಟ ಹಾಲು
ಕಾಯಿಸಿಸುವ ಕಾತರತೆಯಲ್ಲಿ
ಅರೆಗಳಿಗೆ ಉಕ್ಕಿ ಬಿಡುವುದೋ
ಕ್ಷಣ ಕ್ಷಣ ಜತನ
ಅಂತೂ ನೊರೆ ಹಾಲು
ಕುದಿ ಬಂದು
ಕೆನೆಗಟ್ಟಿದಾಗ ಸಮಧಾನ
ಉಕ್ಕಿದರೆ ಗತಿಯೇನು?
ಎಂದು ಬಿಕ್ಕಳಿಸಿದ
ಮನಸಿಗೂ ಸಾಂತ್ವನ
ತೆಗೆದಿರಿಸಿದ ಕೆನೆಯೆಲ್ಲಾ
ಮತ್ತೆ ಸಣ್ಣಗೆ ಕಳಿತು
ಮೊಸರಾಗುವ ಪ್ರತಿಕ್ರಿಯೆ
ಅದೇ ಕಣಕಣದಲ್ಲೂ
ಸಣ್ಣದೊಂದು ಸುಳಿ
ಜೀವನದಿಯ ತಿರುವಿನೊಳಗೆ
ಸಿಹಿ ಹುಳಿಗಳ ಮಿಶ್ರಣ
ಮೊಸರಿನೊಳಗವಿತ
ನವನೀತ
ಈಗ ಬರುವುದೆಂಬ
ಕಾಯುವಿಕೆಗೂ
ಒಂದರ್ಥ ನೀಡಿದ ಚಡಪಡಿಕೆ
ಬೆಸೆದ ಭಾಂದವ್ಯ
ಬೆಣ್ಣೆಗಿಂತ ಮೃದು!
ಬೆಣ್ಣೆ ಕರಗಿ ಹದವಾಗಿ
ಕಾಲ ಕಾಲಕ್ಕೆ ತಕ್ಕಂತೆ ಕಾದು
ಪಕ್ವತೆ ತುಪ್ಪವಾಗಿ
ಪರಿಮಳ ನಾಲ್ಕೆಡೆ ಸೂಸಿದರೆ
ತುಪ್ಪ ಭಾಷ್ಯ ಬರೆದಂತೆ
ಸಾರ್ಥಕ ಸಾಲುಗಳು ಎದೆಯೊಳಗೆ!
ತುಪ್ಪ ಸವೆಸಿ ಬಂದ
ದಿನಗಳ ನಲ್ನುಡಿ
ರೂಪ ರೂಪಗಳನ್ನು ದಾಟಿ
ಸಮನ್ವಯ ಸಾಟಿಯಾಗಿ
ಜೀವನನುಭೂತಿಗೊಂದು ಮುನ್ನುಡಿ
– ಸಂಗೀತ ರವಿರಾಜ್, ಕೊಡಗು ಜಿಲ್ಲೆ
ಅರ್ಥವತ್ತಾದ ಕವನ .ಸಾಲುಗಳು,ಶಬ್ದ ಜೋಡಣೆ ಉತ್ತಮ ಕವಿಯ ನ್ನು ಪರಿಚಯ ಮಾಡಿಕೊಡುತ್ತದೆ.
ನಿಮ್ಮ ಪರಿಕಲ್ಪನೆ ಕಲ್ಪನೆಯ ಲೋಕದಲ್ಲೂ ರೂಪಾಂತರಗೊಂಡು ಬಾಯಲ್ಲಿ ನೀರೂರಿಸುತ್ತಿದೆ.
ಸೊಗಸಾದ ಬರಹ. ಅಭಿನಂದನೆಗಳು. 🙂