ಮಂಗಳೂರಿನಲ್ಲಿ ಮೈಸೂರಿನ ಬೊಂಬೆಗಳು
ನವರಾತ್ರಿ ಎಂದರೆ ಸಡಗರ, ಸಂಭ್ರಮ, ವಿದ್ಯುದ್ದೀಪಾಲಂಕಾರದ ಗುಡಿಗಳು, ದೇವಿಯ ಆರಾಧನೆ, ಸಾಂಸ್ಕೃತಿಕ ಕಾರ್ಯಕ್ರಮಗಳು.. ಹೀಗೆ ಅದೊಂದು ಸಾಮಾಜಿಕ, ಸಾಂಸ್ಕೃತಿಕ ಒಗ್ಗೂಡುವಿಕೆಯ ಸಮಯ. ಮೈಸೂರು ದಸರಾ ಅಲ್ಲದೆ ಮಂಗಳೂರು ದಸರಾ, ಮಡಿಕೇರಿ ದಸರಾ ,ಪುತ್ತೂರು ದಸರಾ.. ಹೀಗೆ ಅನೇಕ ಕಡೆಗಳಲ್ಲಿ ದಸರಾ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ.(ಕೆಲವು ಸಂದರ್ಭಗಳನ್ನು ಹೊರತು ಪಡಿಸಿ). ಇನ್ನು ಹಬ್ಬಗಳು ಜನಮಾನಸವನ್ನು ಬೆಸೆಯುವುದು ಹೌದು. ಹಬ್ಬಗಳೆಂದರೆ ಕ್ಷಣ ಕಾಲವಾದರೂ ನಮ್ಮೊಳಗಿನ ವಿಭಿನ್ನತೆಗಳನ್ನು, ವೈಮನಸ್ಸುಗಳನ್ನು ಮೀರಿ ಸಾಮರಸ್ಯದಿಂದಿರುವ ಸನ್ನಿವೇಶಗಳು. ಹಾಗೆಯೇ ಹಬ್ಬಗಳು ನಮ್ಮ ಬೇರುಗಳನ್ನು, ಮೂಲ ಸಂಸ್ಕೃತಿಯನ್ನು ನೆನಪಿಸಿಕೊಳ್ಳುವ ಸಮಯವೂ ಹೌದು. ಹೀಗಾಗಿಯೇ ಕರಾವಳಿ ಹಾಗೂ ಮೈಸೂರು ಭಾಗದ ದಸರಾಗಳಲ್ಲಿ ವಿಭಿನ್ನತೆ, ವೈವಿಧ್ಯತೆ ಹಾಗೂ ವಿಶಿಷ್ಟತೆಗಳಿವೆ. ಉದಾಹರಣೆಗೆ ಮೈಸೂರಿನ ಮನೆಗಳಲ್ಲಿರುವಂತೆ ಗೊಂಬೆ ಕೂರಿಸುವುದು ಮಂಗಳೂರಿನಲ್ಲಿಲ್ಲ.
ಹಾಗಿದ್ದರೂ ಮಂಗಳೂರಿನ ಜನತೆಗೆ ಈ ಅನುಭವವನ್ನು ಕಟ್ಟಿಕೊಟ್ಟವರು ’ಹಳೆ ಮೈಸೂರು ವಿಪ್ರ ಕೂಟ’ದ ದಸರಾ ಬೊಂಬೆ ಪ್ರದರ್ಶನದ ಆಯೋಜಕರು. ಇದರ ಮುಖ್ಯ ರೂವಾರಿಗಳಾದ ಶ್ರೀಧರ ಶಾಸ್ತ್ರಿಯವರು ತುಂಬು ಆತ್ಮೀಯತೆಯಿಂದಲೇ ಸಂಘದ ಬಗ್ಗೆ ಮಾಹಿತಿ ನೀಡಿದರು. 1978 ರಲ್ಲಿಯೇ ಮಂಗಳೂರಿನಲ್ಲಿ ನೆಲಸಿದ ಇವರು ಮಂಗಳೂರಿನವರೇ ಆಗಿಬಿಟ್ಟಿದ್ದಾರೆ. ಹಾಗಿದ್ದರೂ ಸಂಕ್ರಾಂತಿ, ಯುಗಾದಿ, ಗೌರಿ ಹಬ್ಬ, ನವರಾತ್ರಿಯಂತಹ ಸಂದರ್ಭಗಳಲ್ಲಿನ ಆಚರಣೆಗಳಲ್ಲಿನ ಪ್ರಾದೇಶಿಕ ವಿಭಿನ್ನತೆಗಳಿಂದಾಗಿ ಅವರಿಗೆ ತಮ್ಮ ಊರಿನವರದೇ (ಮಂಗಳೂರು ಭಾಷೆಯಲ್ಲಿ ಹೇಳುವುದಿದ್ದರೆ ’ಘಟ್ಟದ ಮೇಲೆಯವರು’ ) ಸಂಘ ಬೇಕು, ಎಂದು ಬಲವಾಗಿ ಅನಿಸುತ್ತಿತ್ತಂತೆ. ಇದರ ಸ್ಥಾಪಕ ಸಂಸ್ಥಾಪಕರು ಶಿಕಾರಿಪುರ ಕೃಷ್ಣಮೂರ್ತಿಗಳು ಆಗಿದ್ದು ಈ ವರ್ಷದ ಅಧ್ಯಕ್ಷರು ಕುದುರೆಮುಖ ಎಮ್ ಸಿ ಎಫ಼್ ನ ಡಿ ಜಿ ಎಮ್ ಆಗಿರುವ ರಾಮ ಮೋಹನ ರಾವ್ ಆಗಿದ್ದಾರೆ. ಎಮ್. ಎಸ್ ಗುರುರಾಜ್ ಅವರು ವ್ಯವಸ್ಥಾಪಕ ಕಾರ್ಯದರ್ಶಿಯವರು.
ಕಳೆದ 12 ವರುಷಗಳಿಂದ ಈ ಬೊಂಬೆ ಪ್ರದರ್ಶನವನ್ನು ಶರವು ಗಣಪತಿ ದೇವಾಲಯದಲ್ಲಿ ನಡೆಸುತ್ತಿದ್ದು ಮೊದಲು ರಾಘವೇಂದ್ರ ಮಠದಲ್ಲಿ ಹಮ್ಮಿಕೊಳ್ಳಲಾಗುತಿತ್ತು. ಶರವು ದೇವಾಲಯದ ಮೊಕ್ತೇಸರರರಾಗಿರುವ ರಾಘವೇಂದ್ರ ಶಾಸ್ತ್ರಿಯವರು ಇದಕ್ಕೆ ತುಂಬ ಪ್ರೋತ್ಸಾಹವನ್ನೀಯುತ್ತಿದ್ದಾರೆ.ಪಟ್ಟದ ಗೊಂಬೆ, ಅಷ್ಟ ಲಕ್ಶ್ಮಿಯರು, ನವ ದುರ್ಗೆ, ದಶಾವತಾರ, ತ್ರಿಯೋಗಿಗಳು, ಚಂದನದ ಗೊಂಬೆಗಳು ಇವಲ್ಲದೆ ಸಾವಿರಕ್ಕೂ ಮಿಕ್ಕಿ ಬೊಂಬೆಗಳನ್ನು ಅಂದವಾಗಿ ಜೋಡಿಸಿದ್ದು ಅವು ಕಣ್ಣಿಗೆ ಹಬ್ಬವೇ ಸರಿ.
ಹಳೆ ಮೈಸೂರಿಗರ 120 ಕುಟುಂಬಗಳು ಮಂಗಳೂರಿನಲ್ಲಿದ್ದು ಸಂಘದಲ್ಲಿ ಅಂದಾಜು 400 ಸದಸ್ಯರಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾ ಪುರಸ್ಕಾರ, ಅನಾಥ ಮಕ್ಕಳಿಗೆ ನೆರವು, ಮಹಿಳಾ ಸಮಾಜದ ಕಾರ್ಯಕ್ರಮಗಳು ಹೀಗೆ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ವರ್ಷವಿಡೀ ಹಮ್ಮಿಕೊಳ್ಳುತ್ತಿರುತ್ತಾರೆ. ಇನ್ನು ದಸರಾ ಬೊಂಬೆ ಪ್ರದರ್ಶನಕ್ಕೆ ವರ್ಷದಿಂದ ವರ್ಷಕ್ಕೆ ಜನಸ್ಪಂದನೆ ಹೆಚ್ಚಾಗುತ್ತಿದ್ದು ಎಲ್ಲಾ ಚಾನೆಲ್ ಗಳು, ಪತ್ರಿಕೆಗಳು ಹಾಗೂ ವೆಬ್ ಸೈಟ್ ಗಳಲ್ಲಿ ವ್ಯಾಪಕ ಪ್ರಚಾರ ಹಾಗೂ ಸಹಕಾರ ಸಿಗುತ್ತಿದೆ ಎಂದು ಸಂಘಟಕರು ಧನ್ಯತೆಯಿಂದ ಹೇಳಿದರು. ಒಟ್ಟಿನ ಮೇಲೆ ಮಂಗಳೂರು ದಸರಾದಲ್ಲಿ ಮೈಸೂರಿನ ಬೊಂಬೆಗಳು ಸಂಭ್ರಮದ ಕಳೆ ತಂದಿವೆ.
– ಜಯಶ್ರೀ ಬಿ. ಕದ್ರಿ
Nice madam ji. ಇತ್ತೀಚಿಗೆ ಮಂಗಳೂರು ದಸರವು ಬಹಳ ಪ್ರಸಿದ್ಧ . ಬಹಳಷ್ಟು ಹೊಸ ವಿಚಾರಗಳು ತಿಳಿಯಿತು ನಿಮ್ಮ ಬರಹದಿಂದ .
ನಮ್ಮ ಮಂಗಳೂರಿನಲ್ಲಿ , ಮೈಸೂರಿನವರು ಅಲ್ಲಿಯ ಒಳ್ಳೆಯ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ.. ಒಳ್ಳೆಯ ಲೇಖನಕ್ಕೆ ಧನ್ಯವಾದಗಳು ಜಯಶ್ರೀ.