ನಿಮ್ಮ ಉಸಾಬರಿಗೆ ನಮಗೆ ಮನಸ್ಸಿಲ್ಲ..!

Share Button

,

ನಿಮ್ಮ ಯಾವುದಕ್ಕೂ ಮನಸ್ಸಿಲ್ಲ ನಮಗೆ.
ಸೀತೆ ನಿನಗೇನಾಯ್ತು, ದ್ರುಪದೆ
ಏಕೆ ಹೀಗಾಯ್ತು…? ಹೀಗೆಲ್ಲವನು ನಾವು
ಕೇಳಬೇಕೆಂದು ಬಯಸಬೇಡಿರಿ, ಕ್ಷಮಿಸಿ.
.
ಪಯಣಿಸಲು ನೂರು ದಾರಿಗಳು ತೆರೆದೇ
ಇದ್ದರೂ, ಟಿಕೇಟು ತೆಗೆದುಕೊಂಡು
ಬರುವ ಗಂಡಸು ಮಕ್ಕಳಿಗಾಗಿ, ಅವಕಾಶಗಳ
ಹೆಬ್ಬಾಗಿಲ ಬಳಿ ಸರದಿಯಂತೆ ಕಾದು ಕುಳಿತ
ಮುಗ್ಧರ ಉಸಾಬರಿಯೇ ನಮಗೆ ಬೇಕಿಲ್ಲ..
.
ಅದಾವ ಪಟ್ಟ ನಿಮಗೆ ಕಟ್ಟಿದ್ದು.,
ಪತಿವ್ರತೆಯರೆಂದೇ.. ಅದೂ
ಉಳಿದ ಮೂವರೊಡನೆ..! ಅಹಲ್ಯೆಯೋ…
ತಾರೆಯೋ.. ಮಂಡೋದರಿಯೋ.. ಅಯ್ಯೋ., ಮೂರ್ಖರಾದಿರಲ್ಲಾ!?
ನೀವೆಲ್ಲರೂ ಒಟ್ಟೊಟ್ಟಿಗೆ..!!!
.
ಬಿಡಿ, ನಿಮ್ಮ ಕತೆ ಪುರಾಣಗಳಿಗೆ
ಕಿವಿಯಾದರೀಗ ನಮ್ಮ ಹೊಟ್ಟೆ ,ಬಟ್ಟೆ
ತುಂಬಿತೇನು..? ನಿಮ್ಮ ಆ
ಕಥೆಗಳಿಂದ ಉಪಯೋಗವೇನೀಗ..?.
ಅಬ್ಬಬ್ಬಾ.. ನಿಮ್ಮಂತಹ ಒಬ್ಬಿಬ್ಬರ
ಬೊಬ್ಬೆಯೇನೆಂದು ಕೇಳುವಿರಿ..?
ನಮಗೋ ಬರಿಯ ನಿಮ್ಮದೇ ಮಾದರಿಗಳು..
.
ಪರಲೋಕದ ಅಪ್ಸರೆಯರ ತೆಕ್ಕೆಗೆ
ಒಲಿದವನಿಗಾಗಿ ನಾವಿಲ್ಲಿ ಬೂದಿ..!
ಹುಸಿ ಮಾದರಿಗಳಲಿ ನಂಬಿಕೆಯಿಡಲು
ಮಾಡಿಯಾಯ್ತು ನಮ್ಮಂತಹವರ ನರಬಲಿ;.
ನಡೆಯುತ್ತಿತ್ತೇನೋ ಹೀಗೇ.., ಬಂದಳು
ನೋಡಿ ಒಬ್ಬ ಅಕ್ಕ, ಜಗದ  ಗಂಡರನ್ನೆಲ್ಲಾ
ಸರಿಸಿ ಒಲೆಯೊಳಗಿಟ್ಟು ಹೊತ್ತಿಸಿ
ಬೆಳಕಿನಭಯದ ರಕ್ಷೆ ನೀಡಿದಳು ಭಲಾ..!
.
ಈ ಹುಸಿ ಹೋಗುವ ಅಂತರಂಗ-
ಬಹಿರಂಗದಾಟ ಗೊತ್ತಾಗಿಬಿಟ್ಟಿದೆ
ನಮಗೆ. ಅದಕಾಗಿ ನಿಮ್ಮಂತಾಗದೆ,
ಬೆಳಕ ಬಯಲಲ್ಲಿ, ಬದುಕು ಕಟ್ಟಿ
 – ಗಟ್ಟಿ ನಿಂತು ಬಿಟ್ಟಿದ್ದೇವೆ.
.
ಹಾಗಾಗಿ,  ನಿಮ್ಮ ಉಸಾಬರಿಗೆ
ನಮಗೆಲ್ಲಾ ಮನಸ್ಸಾಗುತ್ತಿಲ್ಲ…

– ವಸುಂಧರಾ ಕೆ. ಎಂ., ಬೆಂಗಳೂರು

2 Responses

  1. Smitha Amrithraj says:

    Nice vasundhara

  2. Nayana Bajakudlu says:

    ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ,ಎದುರಿಸೋ ದಿಟ್ಟ ಮಹಿಳೆ, ಹೆಣ್ಣಿನ ಅಂತರಂಗ ಕಾಣಿಸುತ್ತಿದೆ ಇಲ್ಲಿ . ಚೆನ್ನಾಗಿದೆ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: