ಮಲೇರಿಯಾ ದಿನದ ಛಳಿ ನೆನಪು…

Share Button
ನಾನಾಗ ತಾಲ್ಲೂಕಾದ ಸಾಗರದಲ್ಲಿ 1997-98 ರಲ್ಲಿ ಸೆಕೆಂಡ್ ಇಯರ್ ಡಿಗ್ರಿ ಓದುತ್ತಿದ್ದೆ. ಮಲೆನಾಡಿನಲ್ಲಿ ಜೂನ್ ನಿಂದ 3 ತಿಂಗಳು ಮಳೆಗಾಲ. ಅದರಲ್ಲೇ ಸೈಕಲ್ ತುಳಿದುಕೊಂಡು ಕಾಲೇಜ್ ಹೋಗುತ್ತಿದ್ದೆವು. ಒಂದು ದಿನ ಕೆಮ್ಮು, ನೆಗಡಿ ಶುರುವಾಗಿ ಜ್ವರ ಬಂದಿತು. ಸರಿ 3 ದಿನ ಮಾಮೂಲಿ ಕ್ರೋಸಿನ್ ತಿಂದಾಯ್ತು, ಆದರೂ ಜ್ವರ ಕಡಿಮೆಯಾಗಲಿಲ್ಲ. ಕ್ರಮೇಣ ಛಳಿ ಬಂದರೆ ಮನೇಲಿ ಇದ್ದಬದ್ದ ರಗ್ಗು, ಬೆಡ್ಶೀಟ್ಗಳೆಲ್ಲಾ ನನ್ನ ಮೇಲೆ ಪ್ರತ್ಯಕ್ಷವಾಗುತ್ತಿದ್ದವು. ಹೀಗೇ 15 ದಿನದಲ್ಲಿ ವಾಂತಿ ಹಾಗೂ ಕೆಮ್ಮು ಕೂಡ ಶುರುವಾಗಿ ಊಟ, ತಿಂಡಿ ಸೇರದೆ ಬರೀ ಬಿಸಿ ನೀರಿನಲ್ಲಿ ಕಾಲ ಕಳೆಯುವಂತಾಗಿತ್ತು.  ಹಾಗೇ ಒಬ್ಬ ಪ್ರೈವೇಟ್ ಡಾಕ್ಟರ್ ಹತ್ತಿರ ಜ್ವರಕ್ಕೆ ಚಿಕಿತ್ಸೆ ತೆಗೆದುಕೊಂಡಾಯ್ತು, ಆದರೂ ಜ್ವರಕ್ಕೆ ನನ್ನ ಬಿಟ್ಟು ಹೋಗಲು ಮನಸ್ಸಿರಲಿಲ್ಲವೇನೋ, ಕಡಿಮೆಯಾಗಲೇ ಇಲ್ಲ.
.
ಇನ್ನೊಬ್ಬರು ಸ್ನೇಹಿತರ ಸೂಚನೆಯಂತೆ ಹೆಸರಾಂತ ಸರ್ಕಾರಿ ವೈದ್ಯರಿಗೆ ತೋರಿಸಿದೆವು. ಅವರು ಪ್ರೈವೇಟ್ ಹಾಸ್ಪಿಟಲ್ ಒಂದರಲ್ಲಿ ಟೈಫಾಯಿಡ್ ಗೆ 8 ದಿನ  ಇಂಜೆಕ್ಷನ್ ಕೊಟ್ಟರು. ಆದರೂ ಜ್ವರಕ್ಕೆ ನನ್ನ ಕಂಡರೆ ಅದೆಷ್ಟು ಪ್ರೀತಿಯೋ ಏನೋ ಹೋಗಲೇ ಇಲ್ಲ. ಮತ್ತೊಬ್ಬರ ಸೂಚನೆಯಂತೆ ದೇವಸ್ಥಾನದಲ್ಲಿ ಹರಕೆ ಹೊತ್ತು ಅಮಾವಾಸ್ಯೆಗೊಂದು, ಹುಣ್ಣಿಮೆಗೊಂದು ಪೂಜೆಯನ್ನೂ ಮಾಡಿಸಾಯ್ತು. ಬಂದಿದ್ದು ಮಲೇರಿಯಾ ಅಂತ ಯಾರಿಗೂ ಗೊತ್ತಾಗಲೇ ಇಲ್ಲ. ಯಾರೂ ಮಲೇರಿಯಾ ಅಂತ ಕಂಡು ಹಿಡಿಯಲೇ (ಡಯಾಗ್ನೈಸ್) ಇಲ್ಲ. ಈ ನಡುವೆ ನನ್ನ ತೂಕ ಇಳಿದು ಮೂಳೆ ಕಂಡು ಕಣ್ಣೆಲ್ಲಾ ಹೊರಗೆ ಬಂದು ಭಯ ಹುಟ್ಟಿಸುವಂತಿದ್ದು ಇನ್ನೇನು ಹೋಗೇ ಬಿಡುತ್ತಾಳೆಂದು ನೆಂಟರು, ಸ್ನೇಹಿತರೆಲ್ಲಾ ನೋಡಲು ಮನೆಗೆ ಬರುತ್ತಿದ್ದರು,

ಆಮೇಲೆ ಇನ್ನೊಬ್ಬರ ಸಲಹೆಯಂತೆ ಮತ್ತೊಬ್ಬರು ಡಾಕ್ಟರ್ ರನ್ನು ಕಂಡೆವು. ಅಲ್ಲಿ ನೋಡಿ! ನನ್ನ ಬೆಂಬಿಡದ ಜ್ವರಕ್ಕೆ ಸ್ವಲ್ಪ ಬಿಸಿ ಮುಟ್ಟಿತ್ತು. ಅವರು ಇಂಜೆಕ್ಷನ್ ಕೊಟ್ಟೂ ಕಡಿಮೆಯಾಗದಿದ್ದರೆ ಶಿವಮೊಗ್ಗ ಜಿಲ್ಲೆಗೆ ಕರೆದುಕೊಂಡು ಹೋಗಲು ಸಲಹೆ ಇತ್ತು ಇಂಜೆಕ್ಷನ್ ಕೊಟ್ಟರು. ಅದಾಗ್ಯೂ ಜ್ವರ ಕಡಿಮೆಯಾಗಲೇ ಇಲ್ಲ, ಸರಿ ಮಾರನೇ ದಿನವೇ ಶಿವಮೊಗ್ಗಾದ ಪ್ರೈವೇಟ್ ಡಾಕ್ಟರ್ ಒಬ್ಬರ ಬಳಿ ಚಿಕಿತ್ಸೆಗೆ ಹೋದೆವು, ಅವರು ಛಳಿ ಬಂದಾಗಲೇ ರಕ್ತ ಪರೀಕ್ಷೆ ಮಾಡಬೇಕೆಂದು ಹೇಳಿ ಕಳಿಸಿದ್ದರು. ಅದೂ ಮಾಡಿಸಿ ರಿಪೋರ್ಟ್ ಬರೋವರ್ಗೂ ಕೆಮ್ಮುತ್ತಾ ಕಾಲ ಕಳೆದಾಯ್ತು. ಅಲ್ಲೇ ಇದ್ದ ದೊಡ್ಡಮ್ನನ ಮನೆಯಲ್ಲಿ ರಾತ್ರಿ  ಉಳಿದುಕೊಂಡೆವು. ಬೆಳಿಗ್ಗೆ ರಿಪೋರ್ಟ್ ತಂದು ಡಾಕ್ಟರ್ ಗೆ ತೋರಿಸಿದೆವು. ಅಲ್ಲಿ ಗೊತ್ತಾಯ್ತು ಬಂದಿರೋದು ಮಾಮೂಲಿ ಜ್ವರ ಅಥವಾ ಟೈಫಾಯಿಡ್ ಅಲ್ಲ,,, **ಮಲೇರಿಯಾ**,ಹಾಗೂ ಅವಾಗ ಭಯಂಕರವಾಗಿದ್ದ ಟಿ.ಬಿ. ಅಂತ. ಅವರದ್ದೇ ನರ್ಸಿಂಗ್ ಹೋಮ್ ಸೇರಿಸಿ 3-4 ದಿನ ಮಲೇರಿಯಾ ಓಡಿಸಲು ಡ್ರಿಪ್ಸ್ ಹಾಕಿ ಅದರಲ್ಲಿ ಇಂಜೆಕ್ಷನ್ ಕೊಟ್ಟಾಯ್ತು. ಅವರು ಮೊದಲೇ ಹೇಳಿದಂತೆ ಟಿ,ಬಿ. ಕಾಯಿಲೆಗೂ ಮಾತ್ರೆ ಕೊಟ್ಟು ಅದರ ಸೈಡ್ ಇಫೆಕ್ಟ್ ಆಗಿ ಜಾಂಡೀಸ್ ಕೂಡ ಬಂದಿತ್ತು. ಜಾಂಡೀಸ್ ಗೂ ಆಯುರ್ವೇದ ಗುಳಿಗೆ ನೀಡಿ ಮನೆಗೆ ಕಳಿಸಿದರು. ದೊಡ್ಡಮ್ಮನ ಮನೆಗೆ ಬಂದವಳೇ ಇನ್ನೇನು ತಿಂದರೂ ವಾಂತಿಯಾಗುವುದಿಲ್ಲವೆಂದು ತಿಂಗಳುಗಟ್ಟಲೇ ಸರಿಯಾಗಿ ತಿಂಡಿ ತಿನ್ನದ ಗಂಜಿ ಕುಡಿದ ನಾಲಿಗೆಗೆ  ಮಸಾಲೆದೋಸೆ ತರಿಸಿಕೊಂಡು ನೈವೇದ್ಯ ಮಾಡಾಯ್ತು.

ಮಾರನೇ ದಿನ ಊರಿಗೆ ಹೊರಟು ಬಂದು  ಮತ್ತೆ ಮನೆಗೆ ಸ್ನೇಹಿತರೆಲ್ಲಾ ನೋಡಲು ಬಂದರೆ ರೆಸ್ಟ್ ಸಿಗುವುದಿಲ್ಲವೆಂದು ಮತ್ತೊಂದು ನರ್ಸಿಂಗ್  ಹೋಮ್ ನಲ್ಲಿ ಅಡ್ಮಿಟ್ ಮಾಡಿ ಜಾಂಡೀಸ್ ಗಾಗಿ ಕಬ್ಬಿನ ಹಾಲು, ಎಳನೀರು ಸಮಾರಾಧನೆ ನಡೆಯುತ್ತಿತ್ತು. ಅಲ್ಲೊಬ್ಬರು ನಮ್ಮ ತಂದೆಯ ಸ್ನೇಹಿತರಂತೆ, ಹೊರಗಡೆ ತಂದೆಯವರನ್ನು ಮಾತನಾಡಿಸಿಕೊಂಡು ನನ್ನನ್ನು ನೋಡಲು ವಾರ್ಡ್ ಒಳಗೆ ಬಂದರು, ಯಾರೋ ಅಪರಿಚಿತರು ಬಂದರೆಂದು ಒಮ್ಮೆಗೇ ಭಯಪಟ್ಟು ಮಲಗಿದ್ದಲ್ಲಿಂದ ಎದ್ದು ಕೂರುವುದಕ್ಕೂ ಆಗಲಿಲ್ಲ, ಅಯ್ಯಪ್ಪ! ಅಸಹಾಯಕ ಪರಿಸ್ಥಿತಿಯಾಗಿತ್ತು ಅಂದು.. ಅಷ್ಟರಲ್ಲೇ ಅಮ್ಮ ಬಂದು ತಂದೆಯ ಸ್ನೇಹಿತರೆಂದು ಪರಿಚಯ ಮಾಡಿ ಕೊಟ್ಟರು.  ನಮಸ್ಕಾರ ಮಾಡಿ ಮತ್ತೆ ಸಮಾಧಾನವಾಗಿ ಮಲಗಿದೆ.  ಅವಾಗಿನ್ನೂ ಟಿ,ಬಿ ಕಾಯಿಲೆಗೆ ಡಾಟ್ಸ್ ಕೊಡುತ್ತಿರಲಿಲ್ಲ. ಒಂದು ವಾರದ ನಂತರ ಮನೆಗೆ ಹೋಗಿ ಟಿ,ಬಿ,ಗೆ ಡಾಕ್ಟರ್ ಸಲಹೆಯಂತೆ 6 ತಿಂಗಳು ಇಂಜೆಕ್ಷನ್ ,ಮಾತ್ರೆ ತೆಗೆದುಕೊಳ್ಳಲು ಪ್ರಾರಂಭಿಸಿದೆ.
.
ಇಷ್ಟೆಲ್ಲಾ ಮುಗಿಯಲು ಅಕ್ಟೋಬರ್ ತಿಂಗಳು ಮುಗಿದು ಗಣೇಶ ಹಬ್ಬವೂ ಮುಗಿದು ದೀಪಾವಳಿ ಬಂದಿತು. ಟಿ,ಬಿ ಗೆ ಮಾತ್ರೆ ಮುಂದುವರಿದಿತ್ತು, ಕೆಮ್ಮು ನಿಂತಿರಲಿಲ್ಲ, ಹೀಗೆ ನನ್ನ ಸೆಕೆಂಡ್ ಇಯರ್ ಕಾಲೇಜ್ ಮಲೇರಿಯಾಕ್ಕೆ ನೈವೇದ್ಯವಾಗಿತ್ತು. ತಂದೆ, ತಾಯಿ, ಅಣ್ಣ, ತಂಗಿಯ ಆರೈಕೆಯಲ್ಲಿ ಮತ್ತೆ ಮೊದಲಿನಂತಾದೆ.
.
 – ಸುಮನ ದೇವಾನಂದ (ಸುಮಿ)

,

3 Responses

  1. Shankari Sharma says:

    ಆಯ್ಯೋ ದೇವರೇ…ಎಷ್ಟು ಕಷ್ಟ ಪಟ್ರಲ್ಲಾ..!.ಆಂತೂ ಸರಿಯಾದ ಡಾಕ್ಟರ್ ಸಿಕ್ಕಿದ್ರಲ್ಲಾ…ನೆಮ್ಮದಿಯಾಯ್ತು. ಕಷ್ಟವನ್ನೂ ಚೆನ್ನಾಗಿ ಬರೆದಿದ್ದೀರಿ.

  2. Nayana Bajakudlu says:

    ನೆನೆದರೆ ಚಳಿ ಬರಿಸುವಂತಹ ಘಟನೆ ನಿಮ್ಮ ಪಾಲಿಗೆ am i right???

  3. Latha Gopalakrishna says:

    ಅಬ್ಬಬ್ಬಾ…‌‌.‌…..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: