ಶೆಟ್ಟಿಗೇನು ಕೆಲಸ ಅಳೆಯುವುದು ಸುರಿಯುವುದು
ಮನೆಯ ಒಳಾಂಗಣದ ವಿನ್ಯಾಸವನ್ನು ಅಂದರೆ ಸೋಫಾ, ಕುರ್ಚಿ, ದಿವಾನ್ ಎಂಬ ಸಲಕರಣೆಗಳನ್ನು ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಎಂದು ಇರುವ ಸ್ಥಳದಲ್ಲೇ ಆಚೀಚೆ ಬದಲಾಯಿಸುವ ಕೆಲಸ ನನಗೆ ಬಹಳ ಅಚ್ಚುಮೆಚ್ಚು. ಹೀಗೆ ಒಂದುಸಲ ದಿವಾನನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಇಡಬೇಕೆಂದು ಅದನ್ನು ಹಿಡಿಯಲು ಬಲಗೈ ಬಂಟಿ ಸಿದ್ದಮ್ಮಳ ಸಹಾಯ ಪಡೆದೆ. ಆಗ ಅವಳು ಬಾಯಿತಪ್ಪಿ `ಶೆಟ್ಟಿಗೇನು ಕೆಲ್ಸ ಅಳೆಯುವುದು ಸುರಿಯುವುದು ಎಂಬ ಗಾದೆ ಹೇಳಿದಳು.
ಸಿದ್ದಮ್ಮಳಿಗೆ ಅಕ್ಷರ ಜ್ಞಾನವಿಲ್ಲ. ಆದರೆ ಗಾದೆ ಮಾತು ಸಾಕಷ್ಟು ಗೊತ್ತು. ಮಾತು ಮಾತಿಗೂ ಒಂದೊಂದು ಗಾದೆಯನ್ನು ಉದಾಹರಣೆ ಕೊಟ್ಟು ವಿವರಿಸುತ್ತಾಳೆ. ಚಿಕ್ಕಂದಿನಲ್ಲಿ ಅವಳಪ್ಪ ಗಾದೆಮಾತು ಹೇಳುತ್ತಿದ್ದನಂತೆ.
ಈ ಗಾದೆಯ ಅಂತರಂಗವನ್ನು ಬಹಿರಂಗಗೊಳಿಸಲು ಮನವಿ ಮಾಡಿದೆ. ನೋಡವ್ವ, ಶೆಟ್ಟಿ ಅಂಗಡಿಯಲ್ಲಿ ಸುಮ್ಮನೆ ಕೂತಿರುತ್ತಾನಲ್ಲ, ಗಿರಾಕಿಗಳಿಗೆ ಸಾಮಾನು ಕಟ್ಟಿಕೊಡುವ ಕೆಲಸಕ್ಕೆ ಜನ ಇರುತ್ತಾರಲ್ಲ. ಆಗ ಶೆಟ್ಟಿಗೆ ಸುಮ್ಮನೆ ಕೂತುಕೊಂಡು ಏನು ಕೆಲಸ ಮಾಡಲು ತೋರದೆ ಅಂಗಡಿಯಲ್ಲಿರುವ ಸಾಮಾನನ್ನು ಸಕ್ಕರೆ, ಅಕ್ಕಿ ಇತ್ಯಾದಿ ಸುಮ್ಮನೆ ಅಳೆದು ಅಳೆದು ಸುರಿಯುತ್ತಾನೆ ಎಂದು ವಿವರಿಸಿದಳು. ಈ ವಿವರ ಕೇಳಿದಾಗ ನನಗೆ ಅರ್ಥವಾದದ್ದು. ಹಾಗೆಯೇ ನಾನು ಕೂಡ ಶೆಟ್ಟಿಯಂತೆಯೇ ಮಾಡಲು ಕೆಲಸವಿಲ್ಲದೆ ಇರುವ ಸಲಕರಣೆಯನ್ನು ಅತ್ತಿಂದಿತ್ತ ಬದಲಾಯಿಸುವುದು ಎಂದಂತಾಯಿತು!
-ರುಕ್ಮಿಣಿಮಾಲಾ, ಮೈಸೂರು
ಒಳ್ಳೆಯ ಗಾದೆ!. ಮಾಡಿದ ಕೆಲಸವನ್ನೇ ಮತ್ತೂ ಮತ್ತೂ ಮಾಡುವಾಗ; ನನ್ನಪ್ಪ ಹೇಳುವುದು ಕೇಳಿದ್ದೆ. “ಅಳೆಯುತ್ತಾನೆ ಸುರಿಯುತ್ತಾನೆ,ಅಳೆಯುತ್ತಾನೆ ಸುರಿಯುತ್ತಾನೆ”.
ನವಿರು ಹಾಸ್ಯದ ಗಾದೆ ಬರಹ ಚೆನ್ನಾಗಿದೆ.
ಚೆನ್ನಾಗಿದೆ , ನವಿರಾದ ಹಾಸ್ಯ ಇಷ್ಟ ಆಯಿತು . ಓದು ಬರಹ ಇಲ್ಲದವರು ಕೂಡ ಸಾಮಾನ್ಯ ಜ್ಞಾನದಲ್ಲಿ ಬಹಳ ಬುದ್ದಿವಂತರಿರ್ತಾರೆ . ಅವರಿಗಿರುವ ಕೆಲವೊಂದು ಅದ್ಭುತ ಜ್ಞಾನ ಕೆಲವೊಮ್ಮೆ ನಮಿಗೆ ಓದು ಬರಹ ಇದ್ದವರಿಗೂ ಇರುವುದಿಲ್ಲ.