ಮನೆಯ ನೋಡಿರಣ್ಣಾ….
ಅಚ್ಚುಕಟ್ಟಾದ ಮನೆಯ ಸುಂದರ ವಿನ್ಯಾಸ. ಸುತ್ತಲೂ ಕೃಷಿ ಹಾಗೂ ಹೂದೋಟ. ಬದಲಿ ಇಂಧನ ವ್ಯವಸ್ಥೆಯ ಉಪಯೋಗ. ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುತ್ತಿರುವ ಮನೆಯ ವಾತಾವರಣ… ಇದು ಯಾವುದೇ ನೈಜ ಮನೆಯಲ್ಲ; ಬದಲಾಗಿ ಮನೆಯ ಒಂದು ಮಾದರಿ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ದೀಪಾಲಂಕಾರ, ಉತ್ಸವ, ಧಾರ್ಮಿಕ ಆಚರಣೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಅಚ್ಚುಕಟ್ಟಾಗಿ ನಿಮಾಣಗೊಂಡಿರುವ ಮನೆಯ ಮಾದರಿಯೊಂದು ಎಲ್ಲರ ಗಮನಸೆಳೆಯುತ್ತಿದೆ. ಈ ಮಾದರಿ ಮನೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಮಾಣಗೊಂಡಿದ್ದು, ಮನೆಯೆಂದರೆ ಲಕ್ಷದೀಪೋತ್ಸವದಲ್ಲಿ ನಿರ್ಮಿತವಾಗಿರುವ ಮಾದರಿ ಮನೆಯಂತಿರಬೇಕು ಎಂಬ ಸಂದೇಶ ಸಾರುತ್ತಿದೆ.
ಮಾದರಿ ಮನೆ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಸೌರಶಕ್ತಿಯನ್ನು ಮನೆಯಲ್ಲಿ ಯಾವೆಲ್ಲ ಕಾರ್ಯಗಳಿಗೆ ಬಳಸಬಹುದು ಹಾಗೂ ವಿದ್ಯುತ್‌ಗೆ ಬದಲಿ ವ್ಯವಸ್ಥೆಯಾಗಿ ಸೌರಶಕ್ತಿಯನ್ನು ಹೇಗೆ ಉಪಯೋಗಿಸಬಹುದು ಎಂಬ ಕುರಿತು ಮಾಹಿತಿ ನೀಡುತ್ತಿದೆ. ಮನೆಯಲ್ಲಿ ಸೋಲಾರ್ ಲೈಟ್ ಹಾಗೂ ಬಿಸಿ ನೀರಿಗಾಗಿ ಸೋಲಾರ್ ಅಳವಡಿಸಲಾಗಿದೆ. ದನದ ಹಾಲು ಕರೆಯುವ ಯಂತ್ರವೂ ವಿದ್ಯುತ್ ಬದಲು ಸೌರಶಕ್ತಿಯನ್ನೇ ಉಪಯೋಗಿಸುತ್ತದೆ.
ಮನೆಯಲ್ಲಿ ಹೈನುಗಾರಿಕೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಹಸುವಿನ ಗೊಬ್ಬರವನ್ನು ಕೃಷಿ ಹಾಗೂ ಗೋಬರ್ ಗ್ಯಾಸ್‌ಗೆ ಬಳಸಲಾಗುತ್ತಿದೆ. ಕೃಷಿಯಲ್ಲಿ ಕಡಿಮೆ ನೀರು ಬಳಸುವ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಲಾಗಿದೆ.
ಕಡಿಮೆ ಕಟ್ಟಿಗೆ ಉಪಯೋಗಿಸಿ ಅಡುಗೆ ಮಾಡವ ಒಲೆಯೂ ಈ ಮನೆಯಲ್ಲಿದೆ. ಸೌದೆ, ಬೆರಣಿ ಹಾಗೂ ಕೃಷಿ ತ್ಯಾಜ್ಯವನ್ನು ಉಪಯೋಗಿಸಿ ಅಡುಗೆ ಮಡಬಹುದು. ಇತರ ಒಲೆಗಳಿಗೆ ಹೋಲಿಸಿದರೆ ಈ ಒಲೆ ಕಡಿಮೆ ಹೊಗೆ ಬಿಡುತ್ತದೆ. ಈ ಒಲೆಯಿಂದ ಸಮಯ ಹಾಗೂ ಇಂಧನದ ಉಳಿತಾಯ ಸಾಧ್ಯವಿದೆ.
ಮನೆಯ ಮಾದರಿಯಲ್ಲಿ ತುಳಸಿಕಟ್ಟೆ, ಬಾವಿ, ಜೇನು ಸಾಕಣಿಕಾ ಯಂತ್ರ ಹಾಗೂ ಶೌಚಾಲಯದ ಮಾದರಿಯೂ ಇದೆ. ಅಲಂಕಾರಕ್ಕಾಗಿ ನೈಜ ಹೂವಿನ ಗಿಡಗಳನ್ನು ಬಳಸಲಾಗಿದೆ. ವಿವಿಧ ರೀತಿಯ ಕೃಷಿಯನ್ನು ಬಿಂಬಿಸುವ ಸಸಿಗಳಿವೆ.
ಮರ, ಬಿದಿರು ಹಾಗೂ ಸಿಮೆಂಟ್ ಉಪಯೋಗಿಸಿ ಈ ಮಾದರಿ ಮನೆಯನ್ನು ನಿರ್ಮಿಸಲಾಗಿದೆ. ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆಂದೇ ಈ ಮಾದರಿ ಮನೆಯನ್ನು ನಿರ್ಮಿಸಿದ್ದು ವಿಶೇಷವಾಗಿದೆ. ಮನೆಯೆಂದರೆ ಕೇವಲ ಐಷಾರಮಿ ಬಂಗಲೆಗಳಲ್ಲ; ಬದಲಾಗಿ ಕಡಿಮೆ ಖರ್ಚಿನಲ್ಲಿ ಇಂತಹ ಮಾದರಿ ಮನೆಯ ನಿರ್ಮಾಣವನ್ನು ಮಾಡಬಹುದು ಎಂದು ಸಾರುತ್ತಿದೆ.
ವರದಿ: ಮೇಧಾ ರಾಮಕುಂಜ,
ಫೊಟೋ: ಧನ್ಯ ಹೊಳ್ಳ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಮ್. ಸ್ನಾತಕೋತ್ತರ ಅಧ್ಯಯನ ಕೇಂದ್ರ, ಉಜಿರೆ
Super ಮೇಧಾರವರೇ
ಮಾಹಿತಿಯುಕ್ತ ಬರಹ ….ಚೆನ್ನಾಗಿದೆ