ಮನಸ್ಸು…
ಉರಿವ ಬೇಸಿಗೆಯಲ್ಲಿ ಸೂರ್ಯನಲಿ ಮುನಿಸಾಗಿ,
ದುಗುಡ ದುಮ್ಮಾನದಲಿ ಸಿಡುಕದಿರು ಮನವೇ…!
ಅಂಬರದಿ ತಂಪೆರೆವ ಮಳೆ ಬರಲು ತಲೆದೂಗಿ,
ಬೀಸೊ ಗಾಳಿಗೆ ಹೆದರಿ ಮುದುಡದಿರು ಮನವೇ…!
ಬಿಳಿಮೋಡ ಗಗನದಲಿ ಶುಭ್ರತೆಯ ಬೆಳಕಾಗಿ,
ಕಣ್ಣ ಸೆಳೆಯುವ ಪರಿಯ ನಂಬದಿರು ಮನವೇ…!
ಇಳೆಯ ಬೆಳೆಗೇ ಜೀವ ಕಾರ್ಮೋಡ ಹನಿಯಾಗಿ,
ಅಮೃತ ಸಿಂಚನವೀಯೆ ನಕ್ಕು ನಲಿ ಮನವೇ…!
ಭವ್ಯತೆಯ ಸವಿ ಬೆಳಕು ಆಸೆಗೇ ಮರುಳಾಗಿ,
ಪರರ ವಂಚಿಸಿ ಮೆರೆದು ಹಿಗ್ಗದಿರು ಮನವೇ…!
ನೂರಾರು ಹಣತೆಗಳ ಬೆಳಗು ಚೇತನವಾಗಿ,
ಕಹಿ ನುಂಗಿ ಸಿಹಿಯುಣಿಸಿ ಹೂವಾಗು ಮನವೇ…!
ಸೂರ್ಯನಿಗು ಚಂದ್ರನಿಗು ಪೃಥ್ವಿಗೂ ಮಿಗಿಲಾಗಿ,
ತಾನೆ ಮೇಲೂ ಎನುವ ಭ್ರಮೆಯ ಬಿಡು ಮನವೇ…!
ಭಾವನೆಗಳ ಕೆದಕಿ ಕಳೆದು ಹೋದುದಕೆ ಕೊರಗಿ ,
ನೆಮ್ಮದಿಯ ಅರಸುತ್ತ ಕುಗ್ಗದಿರು ಮನವೇ…!
ಸೋಲು ಗೆಲುವುಗಳನ್ನು ಸ್ವೀಕರಿಸಿ ಸಮನಾಗಿ,
ಅಳುವ ಒರೆಸುತ ನಕ್ಕು ನಗಿಸು ಮನವೇ…!
ಎಲ್ಲವೂ ಅಳಿದಾಗ ಒಳಿತು ಶಾಶ್ವತವಾಗಿ,
ನಾಳಿನಿತಿಹಾಸದಲಿ ನೆನಪಲುಳಿ ಮನವೇ…!
–ಪ್ರಮೀಳ ಚುಳ್ಳಿಕಾನ
ನಮ್ಮ ಬದುಕಿನೊಳಗೆ ಪ್ರಕೃತಿಯೂ ಬೆರೆತಂತಿದೆ .
ಕವನ ಚೆನ್ನಾಗಿದೆ .
ಚೆನ್ನಾಗಿದೆ.