ಬಿದಿರು….ಬಾಳು…
ಚೂಪು ಪರ್ಣಗಳ ಹೊತ್ತು ಪುಟ್ಟ ಗಿಡ ನಲಿದಿರಲು
ವೇಗದಿಂದಲಿ ಬೆಳೆದು ನಭದೆಡೆಗೆ ಸಾಗಿರಲು
ಹಿಂಡು ಹಿಂಡಾಗಿಯೆ ವನದಲ್ಲಿ ಕಾಣಿಸಲು
ಸದುಪಯೋಗದ ಬಿದಿರು ಅಲ್ಲಲ್ಲಿ ಹರಡಿರಲು
ಅಕ್ಕರೆಯ ಆರೈಕೆ ಇಲ್ಲದೆಯೆ ತಾ ಬೆಳಗಿ
ಗೃಹಕುಪಯೋಗ ವಸ್ತು ತಾನೆ ತಾನಾಗಿ
ಕೊಳಲ ರಾಗಕೆ ಸೊಗದ ಮೊಗವೆ ತಾನಾಗಿ
ಬಾನ್ಸುರಿಯ ಇಂಪು ಹರಡೆ.. ನಿನಾದವಾಗಿ
ಆಹಾರದನ್ನವನು ನೀಡೆ…ಕಡೆಗಾಲ!!
ಕೊನೆಯಾಗೆ ಅದರಿರವು ..ನೆನಪು ಕ್ಷಣಕಾಲ!!
ಆಗಸದೆತ್ತರಕೆ ಬೆಳೆವಾಸೆ..ನೂರ್ಕಾಲ!
ಮನುಜ ನಶಿಪನು ಅದನು ಬಿಡದೆ ಬಹುಕಾಲ
ನಾವ್ ಬಿಡುವ ಸ್ವಾರ್ಥತೆಯ..ತ್ಯಾಗವನು ತುಂಬಿ
ವನ ವೃಕ್ಷಗಳ ಉಳಿಸೆ..ಜೀವಿಸಲದ ನಂಬಿ
ಮನ ಮುರಳಿಯನು ನುಡಿಸಿ ಹೃದಯವನು ತುಂಬಿ
ಪ್ರಕೃತಿಯೊಡಗೂಡಿದರದೆ ಏಳಿಗೆಯು..ನಂಬಿ!
-ಶಂಕರಿ ಶರ್ಮ, ಪುತ್ತೂರು