ಮಹಾಗಣಪತಿ ನಮೋಸ್ತುತೇ…
ಮಾತೆ ಮೈಯಲಿನ ಮಲಿನದಿಂದಲೆ
ರೂಪ ಪಡೆದೆ ನೀ ವಿನಾಯಕ
ಪಿತನ ತಡೆದೆ ನೀ, ಆ ಕೋಪಾಗ್ನಿಯಲಿ
ಶಿರವ ಕಳೆದೆ ನೀ ನಿಯಾಮಕ
ಸತಿಯ ಮಾತಿಗೆ ಒಲಿದು ಶಿವನು ತಾ
ಗಜ ಮುಖ ಜೋಡಿಸಿ ಬದುಕಿಸಿದ
ಗಣಗಳ ಅಧಿಪತಿಯಾಗಲು ಹರಸುತ
“ಮೊದಲ ಪೂಜೆ” ದಯಪಾಲಿಸಿದ
ಉದರದಿ ತುಂಬಿದ ಕಡುಬು ಕಜ್ಜಾಯ
ಬಿರಿದು ಬಿದ್ದಿತೇ.. ಗಜಾನನ?
ಚೌತಿಚಂದ್ರ ತಾ ಕಿಸಕ್ಕನೆ ನಕ್ಕನು
ನೋಡಿ ಮೂಷಿಕ ವಾಹನನ
ಚೆಲ್ಲಿದ ತಿಂಡಿಯ ತುಂಬಿಸಿ ಬಿಗಿದ
ಬಳಿಯಲಿ ಸುಳಿದ ನಾಗರನ
ಕೋಪದಿ ಚಂದ್ರಗೆ ಶಾಪವ ಒಗೆದ
ಅಪವಾದವು ನೋಡಿರೆ ಚೌತಿ ದಿನ
ಅಪವಾದವು ತಪ್ಪದು ಚಂದಿರ ಮೊಗವ
ನೋಡಿರೆ ಚೌತಿಯ ದಿನದಲ್ಲಿ
ಶ್ಯಮಂತಕ ಮಣಿಯ ಕದ್ದಪವಾದವ
ನೀಗಿದ ಮುರಳಿಯು ಕಷ್ಟದಲಿ
ಸಕಲ ಕಾರ್ಯಗಳ ಸಿದ್ಧಿಗೆ ಗಣಪನ
ಭಕುತಿಲಿ ಪೂಜಿಸೆ ಶುಭ ಕೊಡುವ
ಶಾಂತಿ, ನೆಮ್ಮದಿ, ಸುಖ,ಸೌಹಾರ್ದವ
ಬೇಡುತ ನಾವು ಪೊಡಮಡುವ.
-ಶಂಕರಿ ಶರ್ಮ, ಪುತ್ತೂರು.