ಕೃಷ್ಣಾ……
ರಾಧೆಯ ಉಸಿರನು ಧನಿಯಾಗಿಸಿ,ಕೃಷ್ಣ ಬಂದನು ಕೊಳಲನು ನುಡಿಸಿ
ದೇವಕಿ ತನುಜ ಯಶೋದೆ ನಂದನ
ಕೃಷ್ಣನು ಬಂದ ನವಿಲಿನ ಗರಿಯನು
ಮುಡಿಯಲಿ ಧರಿಸಿ.
ಜನನವು ಸೆರೆಮನೆ ಬಾಲ್ಯಕೆ ಗೋಕುಲ
ಶ್ರೀಹರಿ ಕೃಪೆಯಲಿ ಯಮುನೆಯ ಒಲವಲಿ
ಮಾವನಿಗರಿಯದೆ ಮೃತ್ಯುವ ಜಯಿಸಿದ.
ಬಾಲ್ಯದಲವನ ಲೀಲಾವಿನೋದದ
ತರ ತರ ಮಾಯೆ.
ಮಣ್ಣನು ಮುಕ್ಕಿ ಯಶೋದೆಯಮ್ಮಗೆ
ಬಾಯೊಳಗೆನೇ ಬ್ರಹ್ಮಾಂಡವ ತೋರಿದ.
ಬೆಣ್ಣೆಯ ಗಡಿಗೆಗೆ ಕನ್ನವ ಹಾಕಿ ಅಮ್ಮನ ಕಾಡಿದ ಚೋರ ಕೃಷ್ಣ
ಇಂದ್ರನ ಕೋಪಕೆ ಪವಾಡದಿ ಉತ್ತರ
ಕಿರು ಬೆರಳೊಳಗೆ ಗೋವರ್ಧನ ಗಿರಿಯು
ಗೋವಿಗೂ ಗೋಪಾಲಕರ ರಕ್ಷಕ ತಾನಾಗಿ.
ಹದಿನಾರು ಸಾವಿರ ಗೋಪಿಕೆಯರ ಸೆಳೆದ ಚೆಲುವು
ಇದ್ದರೂ ಹೃದಯದ ಬಡಿತದಿ ರಾಧೆಯ ಒಲವು.
ರಾಧೆಯು ಮೆಚ್ಚಿದ ಕೃಷ್ಣನ ಆಧ್ಯಾತ್ಮಿಕ ಬಲವು.
ಅಷ್ಟಮಿ ದಿನವದು ಕೃಷ್ಣನ ಜಪತಪ,ಊರೊಳಗೆಲ್ಲಾ ರಾಧಾಕೃಷ್ಣ,
ತರ ತರವೇಷದಿ ಮಕ್ಕಳ ಸಂಭ್ರಮ.
ದೇಗುಲದಲ್ಲಿ ಕೃಷ್ಣನನೊಮ್ಮೆ
ತೊಟ್ಟಿಲು ತೂಗಿ ಭಕ್ತಿಯನೊಪ್ಪಿಸೆ
ಜೀವನ ಧನ್ಯ.
-ಲತಾ(ವಿಶಾಲಿ) ವಿಶ್ವನಾಥ್