ಪರಿಸರ ದೇವಿಗೊಂದು ನಿವೇದನೆ
ಮಳೆಯಿರದೆ ಬಿರಿದು ಬಿಕ್ಕುತಿರುವ
ನೆಲವ ನೋಡಿ ಸಹಿಸಬಲ್ಲೆ …
ನೆರೆ ಉಕ್ಕಿ ಜೀವಗಳ ಕೊಚ್ಚಿ ಹೋದರು
ನನ್ನುಸಿರ ಕೊಂಕಿಸದೆ ಜೀವಿಸುವೆ ..
.
ಹತ್ತಿ ಉರಿದು ಬೂದಿಯಾಗುವ
ಕಾಡಿನ ಸುದ್ದಿ ಕೇಳಿ ಮರೆತುಬಿಡುವೆ…
ಕೆರೆಗಳ ಬತ್ತಿಸಿ ಮನೆಗಳ ಕಟ್ಟುವ
ಧನದಾಹಿಗಳ ಗೊಡವೆ ನನಗೇಕೇನುವೆ …
,
ನಶಿಸಿ ಹೋಗುತಿಹ ಪಕ್ಷಿ ಪ್ರಾಣಿ
ಸಂಕುಲವು ನನ್ನ ಬಂಧುವೇನು ಎನುವೆ…
ಭುವಿಯ ಒಡಲ ಬಗೆವ ರಕ್ಕಸರ
ಸುದ್ದಿಯ ಓದಿ ಮರೆತುಬಿಡುವೆ…
.
ಕುಡಿದು ,ತಿಂದುಂಡು ಉಗಿದು ತಾಜ್ಯ
ಬಿಸುಡುವ ದುರಹಂಕಾರಿಗಳ ಸಹಿಸುವೆ …
ಅಬ್ಬರಿಸುತ ವಿಷ ಕಾರುವ ರಸ್ತೆ ತುಂಬಿದ
ವಾಹನಗಳ ತಡೆವ ಶಕ್ತಿ ನನಗೆಲ್ಲಿದೆ..
.
ನನ್ನೆಲ್ಲ ಈ ಸಹಿಷ್ಣುತೆಯ ಅವಗುಣ ಮನ್ನಿಸಿ
ಹಸಿ ತ್ಯಾಜ್ಯದ ಗೊಬ್ಬರದಿ ಹೊಳೆವ ಅಂಗಳದ ಹಸಿರೆ …
ಅಮಿತ ವರಗಳನೀವ ಪ್ರಕೃತಿಯ ಕೊರಳಿಗೆ.
ಕುಣಿಕೆ ಹೆಣೆಯುವವರ ಸದೆ ಬಡಿಯಲಾರೆನೆ..
.
ಪ್ರೀತಿಯ ಪರಿಸರವೆ ಕ್ಷಮಿಸಿಬಿಡು ದೈವವೆ
ಕಾದಿರುವೆ ನೀ ನೀಡುವ ದೀಕ್ಷೆಯ ಕ್ಷಣಕೆ …
ಸೇವೆ ಸಲ್ಲಿಸಲು ಮರಿ ಅಳಿಲಂತೆ
ನನ್ನ ಪ್ರತಿ ದಿನವನು ನಿನ್ನದಾಗಿಸಿಬಿಡು ತಾಯೆ ….
-ಭಾರತಿ
ಚೆಂದದ ಕವನ…