ಹೆಚ್ಚೇನೂ ಇಲ್ಲದ ‘ವಟ್ಟವಡ’

Share Button

ಬೈಕ್ ಸವಾರಿಯ ನಾಲ್ಕನೇ ದಿನ. ಸಂಜೆಯಾಗುತಿದ್ದಲೇ ನಿಗದಿತವಾಗಿದ್ದಂತೆ ಮುನ್ನಾರ್ ನಗರದಿಂದ ಅರ್ಧ ಗಂಟೆ ದೂರದಲ್ಲಿದ್ದ ನಮ್ಮ ತಂಗುದಾಣಕ್ಕೆ ತಲುಪಿದೆವು. ಬೈಕುಗಳಿಗೆ ಕಟ್ಟಿದ್ದ ಬ್ಯಾಗುಗಳನ್ನೂ, ನಮ್ಮ ದೇಹಕ್ಕೆ ಕಟ್ಟಿದ್ದ ರೈಡಿಂಗ್ ಗೇರುಗಳನ್ನೂ ಕಳಚಿ, ನಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ನಮ್ಮ ಕಿವಿಗೆ ಶಿವ ಪೂಜೆಯಲ್ಲಿ ಕರಡಿ ಬಿಟ್ಟಂತೆ ಮರುದಿನದ ಹರತಾಳದ ವಾರ್ತೆಯು ಬಂದು ಬಿತ್ತು. ಹೌದು! ಕೇರಳದಲ್ಲಿ ಪ್ರವಾಸ ಮಾಡುವವರು ಬಾಕಿ ಎಲ್ಲಾ ತಯಾರಿಗಳೊಂದಿಗೆ ಹರತಾಳಗಳನ್ನು ಎದುರಿಸುವ ತಯಾರಿಯೂ ಮಾಡಲೇ ಬೇಕು. ನಮ್ಮ ಯೋಜನೆಗಳೆಲ್ಲ ತಲೆಕೆಳಗಾಗಿ ಬಿಟ್ಟಿತ್ತು. ಮುಂದೇನು ಎಂಬ ಚರ್ಚೆಯು ನಮ್ಮೊಳಗೆ ಶುರುವಾಗಿ ಬಿಟ್ಟಿತು. ಮುನ್ನಾರಿಗೆ ಹೋದವರೆಲ್ಲ “ಟಾಪ್ ಸ್ಟೇಟಷನ್” ನೋಡಲೇ ಬೇಕು ಎಂದು ಕೇಳಿದ್ದೆವು. ಸರಿ, ಟಾಪ್ ಸ್ಟೇಷನ್ ಅಂತೂ ನಾಳೆ ಬೆಳಗ್ಗೆಯೇ ನೋಡಿ ಬಿಡೋಣ ಎಂದಾಯಿತು. ಮತ್ತೆ? ಚರ್ಚೆ ಮುಂದುವರಿಯುತ್ತಿದ್ದಂತೆ ಮನೋಜನು ಹೊಸದೊಂದು ಹೆಸರನ್ನು ಹೊರ ಹಾಕಿದ. ” ವಟ್ಟವಡ ನೋಡಿ ಬಂದರೇನು?”. ಅಲ್ಲೇನಿದೆ ಎಂಬ ಮರು ಪ್ರಶ್ನೆಯು ನಮ್ಮದಾಗಿತ್ತು. “ಹೆಚ್ಚೇನು ಇಲ್ಲ. ಆದರೂ ನನಗೆ ಓಕೆ” ಅಂದರು ಪತಿ ರಾಯರು. ಹಾಗೆ ಟಾಪ್ ಸ್ಟೇಷನ್ ಹಾಗು ವಟ್ಟವಡ ನಮ್ಮ ಮುಂದಿನ ದಿನದ ಪಟ್ಟಿಗೆ ಸೇರಿಕೊಂಡಿತು. ಮರುದಿನ 5 ಗಂಟೆಗೆ ಹೊರಡೋಣ ಎಂಬ ನಮ್ಮ ಯೋಜನೆಯನ್ನು ಮನೆಯ ಆತಿಥೇಯರಿಗೆ ತಿಳುಹಿಸಿದರೆ, ಅವರು ನಗುತ್ತಾ 7 ಗಂಟೆಯಾದರೂ ಆಗದೆ ನೀವ್ಯಾರು ಏಳಲ್ಲ ಎಂದು ಬಿಟ್ಟರು. ನಾವೆಲ್ಲ 3 ಗಂಟೆಗೇ ಎದ್ದು ಹೊರಡುವವರು ಎಂದು ನಮ್ಮೊಳಗೆ ಬೀಗುತ್ತಾ ನಿದ್ದೆಗೆ ಜಾರಿತು ನಮ್ಮ ತಂಡ.

ಮುಂಜಾವೆ 5 ಗಂಟೆಯ ಸಮಯ. ಇನ್ನೂ ಬೆಳಕಾಗಿರಲಿಲ್ಲ. ವಾತಾವರಣವೇನೋ ನಮ್ಮೂರ ಹಾಗೆ ಇದೆ ಎಂದನಿಸಿತು ನಮಗೆಲ್ಲ. ಬೈಕ್ ಹತ್ತಿ ಮುನ್ನಾರ್ ಕಡೆಗೆ ಪ್ರಯಾಣವನ್ನಾರಂಭಿಸಿದೆವು. ಮುನ್ನಾರ್ ನಗರ ತಲುಪುತ್ತಿರಬೇಕಾದರೆ ಸ್ವಲ್ಪ ಚಳಿ ಜಾಸ್ತಿಯಾಗುತ್ತಿದಂತೆ ಭಾಸವಾಯಿತು. ಎಷ್ಟಾದರೂ ಪಶ್ಚಿಮ ಘಟ್ಟವಲ್ಲವೇ, ಅದೂ ಜನವರಿ ತಿಂಗಳಲ್ಲವೇ, ಇಷ್ಟು ಚಳಿಯಂತೂ ಇದ್ದೇ ಇರುತ್ತದೆ ಎಂದು ಕೊಂಡೆವು. ಅಂಗಡಿಗಳೇನೂ ಇನ್ನೂ  ತೆರದಿಲ್ಲವಾದುದರಿಂದ ಒಂದು ಲೋಟ ಚಹಕ್ಕೂ ಗತಿಯಿಲ್ಲ ಎಂದು ಗೊಣಗಿಕೊಳ್ಳುತ್ತ ನಮ್ಮ ಪ್ರಯಾಣವನ್ನು ಮುಂದುವರಿಸಲು ನಿರ್ಧರಿಸಿದೆವು. ಬೈಕುಗಳು ಕಣ್ಣನ್ ದೆವಾನ್ ಬೆಟ್ಟಗಳ ಮದ್ಯ ಸಾಗ ತೊಡಗಿತು. ಕಣ್ಣಿಗೆ ಕಾಣದಷ್ಟೂ ದೂರಕ್ಕೆ ಚಾ ತೋಟಗಳೇ ತುಂಬಿಕೊಂಡಿದ್ದವು. ಚಾ ತೋಟದ ಹಸಿರು ಮನವನ್ನು ತಂಪಿಸುತ್ತಿದ್ದರೆ, ಬೀಸುತಿದ್ದ ಗಾಳಿಯು ಶರೀರವನ್ನು ತಂಪಿಸುತ್ತಿತು. ಮತ್ತಿನ್ನೊಂದಷ್ಟು ನಿಮಿಷಗಳಲ್ಲಿ ಬೆರಳುಗಳೆಲ್ಲಾ ಹೆಪ್ಪು ಕಟ್ಟ ತೊಡಗಿದವು. ಹಾಕಿ ಕೊಂಡಿದ್ದ 2-3  ಅಂಗಿಗಳು ಕಮ್ಮಿ ಎಂದೆನಿಸತೊಡಗಿತು. ಹೆಲ್ಮೆಟ್ ಹಾಗು ಗ್ಲೋಸ್ಸ್ ಗಳಿದ್ದರೂ ಹೊಡೆಯುತ್ತಿದ್ದ ಗಾಳಿಗೆ ಸಾಕೆನಿಸುತ್ತಿರಲಿಲ್ಲ. ಹಲ್ಲು ಕಡಿಯತೊಡಗಿತು. ಎಲ್ಲಾದರೂ ಒಂದು ಆಶ್ರಯ ಸಿಕ್ಕರೆ ಅಲ್ಲೇ ನಿಲ್ಲಿಸಿ ಬಿಡೋಣವೆನಿಸಿತು. ದೂರ ದೂರಕ್ಕೂ ಏನೂ ಇಲ್ಲ, ಯಾರು ಇಲ್ಲ. ನಿಧಾನವಾಗಿ ಸಾಗಿದರೂ, ಚಳಿಯಲ್ಲಿ ಏನೂ ಬದಲಾವಣೆಯಾಗಲಿಲ್ಲ.

ಒಂದಷ್ಟು ಕೀ.ಮೀ ಗಳು ಹಾಗೆ ಸಾಗುತ್ತಿದ್ದಂತೆ ಅದ್ಯಾರೋ ಒಂದು ಗೂಡಂಗಡಿಯನ್ನು ತೆರೆಯುತ್ತಿದ್ದದ್ದು ನಮ್ಮ ಕಣ್ಣಿಗೆ ಬಿತ್ತು. ಬೈಕ್ ನಿಲ್ಲಿಸಿ “ಚೆಟಾ,, ನೀವೇ ದೇವರು” ಎಂದು ಕಿರುಚುತ್ತಾ ಒಳ ನುಗ್ಗಿ ಬಿಟ್ಟೆವು. ನಮ್ಮ ಅವಸ್ಥೆಯನ್ನು ಅರಿತ ಚೇಟನು, ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಒಲೆಯನ್ನು ಹಚ್ಚಿ, ಚಹಾ ಮಾಡ ತೊಡಗಿದನು. ಒಲೆಯ ಬದಿಯಲ್ಲಿ ಚಳಿ ಕಾಯಿಸಿ, ಒಂದೆರಡು ಬನ್ ಅನ್ನೂ ತಿಂದಾಗ ಸ್ವಲ್ಪ ಮಟ್ಟಿಗೆ ಬೆಚ್ಚಗೆನಿಸತೊಡಗಿತು. “ತಟ್ಟುಕಡದ” ಚೇಟನಿಗೆ ದೊಡ್ಡ ನಮಸ್ಕಾರವನ್ನಿತ್ತು ಮತ್ತೆ ಬೈಕ್ ಹತ್ತಿಕೊಂಡೆವು.

ಮುನ್ನಾರಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ “ಟಾಪ್ ಸ್ಟೇಷನ್”.  1880  ಮೀಟರುಗಳಷ್ಟು ಎತ್ತರದಲ್ಲಿ ಇರುವ ಈ ವ್ಯೂ ಪಾಯಿಂಟ್ ಅನ್ನು ವೀಕ್ಷಿಸಲು ದಿನಂಪ್ರತಿ ಸಾವಿರಾರು ಪ್ರವಾಸಿಗರು ಬರುತ್ತಾರೆ. ಈ ಪಾಯಿಂಟಿನ ತುದಿಯಲ್ಲಿ ನಿಂತಲ್ಲಿ ಹತ್ತಾರು ಎತ್ತರೆತ್ತರದ ಬೆಟ್ಟಗಳ ವಿಹಂಗ ನೋಟವನ್ನು ನೋಡಬಹುದು. ಸುಮಾರು  3  ಗಂಟೆಗಳ ಕಾಲ ಕಾಡೊಳೊಗೆ ಟ್ರೆಕಿಂಗ್ ಮಾಡುವ ವ್ಯವಸ್ಥೆಯೂ ಇಲ್ಲಿದೆ. ಇಲ್ಲಿನ ವ್ಯೂ ಪಾಯಿಂಟಿನಿಂದ ಸೂರ್ಯೋದಯವನ್ನು ನೋಡುವ ಖುಷಿಯೇ ಬೇರೆಯೆಂದು ಯಾರೋ ಹೇಳುವುದು ನಮ್ಮ ಕಿವಿಗೆ ಬಿತ್ತು. ಆದರೆ ನಮ್ಮ ದುರಾದೃಷ್ಟಕ್ಕೆ ಆ ದಿನವಂತೂ ಆಕಾಶವಿಡೀ ಮೋಡಗಳದ್ದೇ ಕಾರುಬಾರು. ನಿರಾಸೆಯೊಂದಿಗೆ ಇನ್ನು ಮುಂದಿನ ಗುರಿಯೆಡೆಗೆ ಸಾಗೋಣವೆಂದು ತೀರ್ಮಾನಿಸಿದೆವು.

ನಮ್ಮ ಮುಂದಿನ ಗುರಿಯೇ “ಹೆಚ್ಚೇನೂ ಇಲ್ಲದ, ಅಷ್ಟೇನು ಪ್ರಸಿದ್ಧವಲ್ಲದ ವಟ್ಟವಡ”.  ಕೇರಳ ಹಾಗು ತಮಿಳುನಾಡಿನ ಗಡಿಪ್ರದೇಶದಲ್ಲಿರುವ ಒಂದು ಪುಟ್ಟ ಊರೇ “ವಟ್ಟವಡ”. ಇಲ್ಲಿಗೆ ತಲುಪಲು ಇರುವುದು ಬರೀ ಒಂದೇ ದಾರಿ, ಅದೂ ಕಾಡ ನಡುವಿನ ದಾರಿ. ಹಾಗಾಗಿಯೇ ಅಲ್ಲಿಗೆ ಸಾಗುವ ಪ್ರತಿ ವಾಹನದ ವಿವರಗಳನ್ನೂ ಅರಣ್ಯ ಇಲಾಖೆಯವರು ದಾಖಲಿಸಿಕೊಳ್ಳುತ್ತಾರೆ. ಬೈಕುಗಳು ಎತ್ತರೆತ್ತರದ ಮರಗಳ ನಡುವೆ ಸಾಗ ತೊಡಗಿದವು. ದೂರದೂರಕ್ಕೂ ಬೇರೆಯಾವುದೇ ವಾಹನಗಳೂ ಕಣ್ಣಿಗೆ ಬೀಳಲಿಲ್ಲ. ನಮ್ಮ ಬೈಕುಗಳ ಗದ್ದಲವನ್ನು ಬಿಟ್ಟರೆ ಮಿಕ್ಕಿದೆಲ್ಲವೂ ಸ್ಥಬ್ದ ಚಿತ್ರದಂತಿತ್ತು. 9 ಕೀ.ಮೀ ಗಳಷ್ಟು ಅದೇ ಮಾರ್ಗದಲ್ಲಿ ಸಾಗಿದಾಗ ದೂರದಲ್ಲಿ ಪುಟ್ಟ ಊರೊಂದು ಗೋಚರವಾಗತೊಡಗಿತು. ದೂರದಿಂದ ನೋಡುತ್ತಿರಬೇಕಾದರೆ ಊಟಿ ನಗರದ ಸಣ್ಣ ಆವೃತಿಯಂತೆ  ಭಾಸವಾಗುತಿತ್ತು ಆ ಊರು.

ಊರೊಳಗೆ ಪ್ರವೇಶಿಸುತ್ತಿದ್ದಂತೆಯೇ ಕೆಲ ಹಳ್ಳಿಗರು ಕೈ ಎತ್ತಿ “ಹಾಯ್” ಎಂದು ಬರಮಾಡಿಕೊಂಡರು. ಇನ್ನು ಮುಂದೆ ಸಾಗುತ್ತಿದ್ದಂತೆ ಎಲ್ಲಿ, ಏನು ಎಂಬೆಲ್ಲಾ ಪ್ರಶ್ನೆಗಳು ನಮ್ಮನ್ನು ಕಾಡ ತೊಡಗಿದವು. ಹಿರಿಯರೊಬ್ಬರ ಬಳಿ ಸಲುಹೆಯನ್ನು ಕೇಳಿದೆವು. “ಹೀಗೆ ಹೋಗಿ, ಈ ದಾರಿಯು ಪೂರ್ತಿ ಊರನ್ನು ಸುತ್ತಿ ಮತ್ತೆ ಇಲ್ಲಿಗೆ ಬಂದು ಸೇರುತ್ತದೆ” ಎಂದರು. “ಬರುತ್ತಲೇ ಇಲ್ಲಿನ ಗದ್ದೆಗಳಿಗೆ ಭೇಟಿ ನೀಡಲು ಮರೆಯದಿರಿ” ಎಂದೂ ನೆನಪಿಸಿದರು. “ಖಂಡಿತ. ಇಲ್ಲಿನ ಕೃಷಿ ಪದ್ದತಿಗಳ ಬಗ್ಗೆ ಕೇಳಿದ್ದೇವೆ” ಎಂದು ಉತ್ತರಿಸುತ್ತಾ ಬೈಕನ್ನು ಸ್ಟಾರ್ಟ್ ಮಾಡಿದನು ಗೆಳೆಯನು. ಹೌದು. ವಟ್ಟವಡ ಎಂಬ ಊರಿನ ಪ್ರತ್ಯೇಕತೆಯೇ ಅಲ್ಲಿನ ಸಾವಯವ ಕೃಷಿ ಪದ್ಧತಿ. ಅಲ್ಲಿಗೆ ಹೋದವರಾರೂ ಅಲ್ಲಿನ ತಾಜಾ ಸ್ಟ್ರಾಬೆರ್ರಿಗಳನ್ನು ಸವಿಯದೇ ಮರಳುವಂತಿಲ್ಲ.

ಹಿರಿಯರ ಸಲುಹೆಯಂತೆ ಮುಂದೆ ಸಾಗ ತೊಡಗಿದೆವು. ದಾರಿ ಕಿರಿದಾಗ ತೊಡಗಿತ್ತು. ಚಕ್ರಗಳು ಗುಂಡಿಗಳನ್ನು ಹಾರಿಸಿಕೊಂಡು ಪುಟ್ಟ ಗುಡ್ಡವೊಂದನ್ನು ಹತ್ತ ತೊಡಗಿತ್ತು.  ಬೆಟ್ಟದ ತುದಿ ತಲುಪುತ್ತಲೇ ನಮ್ಮ ಈ ಯಾತ್ರೆಯು ಸಾರ್ಥಕವಾಯಿತೆಂದು ನಮಗೆ ಅರ್ಥವಾಗ ತೊಡಗಿತ್ತು. ಬೆಟ್ಟಗಳ ನಡುವಿರುವ “ವಟ್ಟವಡ” ಎಂಬ ಕಣಿವೆಯ ಪೂರ್ಣ ಚಿತ್ರಣವು ಅಲ್ಲಿತ್ತು. ಹಸಿರು ಬೆಟ್ಟಗಳ ನಡುವಿನ ಪ್ರಶಾಂತವಾದ ಊರು. ದೊಡ್ಡ ದೊಡ್ಡ ಕಟ್ಟಡಗಳಿಲ್ಲ. ಕಾರು ಬಸ್ಸುಗಳ ಗದ್ದಲಗಳಿಲ್ಲ. ಕಿಕ್ಕಿರಿವ ಪ್ರವಾಸಿಗರಿಲ್ಲ. ಸೆಲ್ಫಿಗಳ ಅಬ್ಬರವಿಲ್ಲ. ನಿಟ್ಟುಸಿರು ಬಿಡುತ್ತ ಅಲ್ಲೇ ಒಂದು ಮರದ ಕೆಳಗೆ ಹಾಯಾಗಿ ಕುಳಿತು ಬಿಟ್ಟೆವು. ಎಲ್ಲವನ್ನೂ ಮರೆತು ಹರಟೆ ಹೊಡೆಯುವ ಕಾರ್ಯಕ್ರಮವನ್ನು ಹಚ್ಚಿಕೊಂಡೆವು. ಹರಟೆಯು ಮುಂದುವರಿಯುತಿದ್ದಂತೆಯೇ ಕಟ್ಟಿಗೆಗಳನ್ನು ಹೊತ್ತೂ ಒಯ್ಯುತ್ತಿದ್ದ ವ್ಯಕ್ತಿಯೊಬ್ಬರು ನಮ್ಮ ಕಣ್ಣಿಗೆ ಬಿದ್ದರು. ಅವರನ್ನು ಅಡ್ಡ ಹಾಕಿ “ಇಲ್ಲಿ ಎಲ್ಲಾದರೂ ಉಳಿದುಕೊಳ್ಳುವ ವ್ಯವಸ್ಥೆ ಇದೆಯೇ? ” ಎಂದು ಪ್ರಶ್ನಿಸತೊಡಗಿದೆವು. “ಇಲ್ಲಿ ಒಂದು ರೆಸಾರ್ಟ್ ಇದೆ. 3000- 5000  ಒಂದು ದಿನಕ್ಕೆ. ಆದರೆ ನಿಮಗೆ ಟೆಂಟ್ ಸಾಕಾದರೆ ನಾನೇ ಹಾಕಿ ಕೊಡುತ್ತೇನೆ. 300  ರುಪಾಯೀಗಳನಿತ್ತರೆ ಸಾಕು” ಎಂದು ಬಿಟ್ಟರು. ಸರಿ, ಅದನ್ನು ಮುಂದಿನ ಬಾರಿ ನೋಡೋಣ, ಸದ್ಯಕ್ಕೆ ಇಲ್ಲಿನ ಪ್ರತ್ಯೇಕತೆಗಳನ್ನು ಹೇಳಿ ಎಂದು ಮತ್ತೆ ಅವರನ್ನು ಕೆದಕ ತೊಡಗಿದೆವು. “ಅದುವೇ ನೋಡಿ ಕುರಂಜಿ ಮಲೆ (ಸುಪ್ರಸಿದ್ದ ಕುರುಂಜಿ ಹೂವುಗಳ ಬೆಟ್ಟ) , ಅದರ ಆ ಕಡೆಯೇ ಆನಮಲೈ (ಕೇರಳದ ಅತಿ ಎತ್ತರದ ಬೆಟ್ಟ), ಈ ಕಡೆ ಮರೆಯೂರು (ಇಡುಕ್ಕಿ ಜಿಲ್ಲೆಯ ಇನ್ನೊಂದು ಪ್ರವಾಸಿ ತಾಣ). ಅಷ್ಟೇ ಅಲ್ಲದೆ ಇಲ್ಲಿನ ಬೆಟ್ಟಗಳಲ್ಲೂ ಕುರುಂಜಿ ಹೂವುಗಳು ಆಗುವುದುಂಟು.” ಎಂದು ವಿವರಿಸಿದರು. “ವಟ್ಟವಡದಿಂದ ಕೊಡೈಕನಾಲಿಗೆ ಬರೀ 54 ಕೀ.ಮೀ ಗಳಷ್ಟೇ, ಆದರೆ ಜೀಪುಗಳಿಗೆ ಮಾತ್ರ ಆ ದಾರಿಯಲ್ಲಿ ಸಾಗಲು ಸಾಧ್ಯ” ಎಂದೂ ಸೇರಿಸಿದರು. ನಾವು ದಂಗಾಗಿ ಬಿಟ್ಟೆವು. ಕಳೆಗೆ 3-4 ದಿನಗಳಿಂದ ನಾವು ಸುತ್ತುತ್ತಿದ್ದದ್ದೂ ಇದೇ ಬೆಟ್ಟಗಳನ್ನೇ. ಆದರೆ ಅದ್ಯಾವುದೂ ಇಷ್ಟು ಹತ್ತಿರವೆಂದು ನಮಗೆ ತಿಳಿದಿರಲಿಲ್ಲ.

ಬಿಸಿಲೇರುತ್ತಿತ್ತು. ಊರ ದಾರಿ ಹಿಡಿಯತೊಡಗಿದೆವು. ದಾರಿ ಮಧ್ಯದಲ್ಲಿ ಬೈಕಿಗೆ ಕೈ ಅಡ್ಡ ಹಾಕಿದರು ಒಬ್ಬರು ಮಧ್ಯ ವಯಸ್ಸಿನ ಮಹಿಳೆ. ಅವರ ಆಮಂತ್ರಣದಂತೆ ಅವರೊಂದಿಗೆ ಸಾಗತೊಡಗಿತು ನಮ್ಮ ತಂಡ. ಅಚ್ಚುಕಟ್ಟಾದ ಪುಟ್ಟ ಮನೆ. ಅದರ ಪಕ್ಕದಲ್ಲಿ ಸಣ್ಣದೊಂದು ಗದ್ದೆ. ಗದ್ದೆ ಪೂರ್ತಿ  ಕೆಂಪು ಬಣ್ಣದ ರಸಭರಿತವಾದ ಸ್ಟ್ರಾಬೆರಿ ಹಣ್ಣುಗಳು. ನಗರಗಳಲ್ಲಿ ಪ್ಲಾಸ್ಟಿಕ್ ಕವರುಗಳಲ್ಲಿ ದೊರೆಯುವ ಸ್ಟ್ರಾಬೆರಿಹಣ್ಣುಗಳಿಗೂ, ಅಲ್ಲಿ ಸವಿದ ಹಣ್ಣಿಗಳಿಗೂ ಅದೆಷ್ಟು ವ್ಯತ್ಯಾಸವೂ, ವಿವರಿಸಲು ಕಷ್ಟವೇ.   “ಎಷ್ಟು ಬೇಕು” ಎಂಬ ಆಕೆಯ ಪ್ರಶ್ನೆಗೆ ಬೇಡವೆಂದು ಉತ್ತರಿಸಲು ನಾಲಿಗೆಯೊಪ್ಪುತಿರಲಿಲ್ಲ. “ಜಾಸ್ತಿ ಬೇಡ ಅಕ್ಕಾ. ಬೈಕಿನಲ್ಲಿ ಕೊಂಡೊಯ್ಯುವುದು ಕಷ್ಟ.” ಎಂದುತ್ತರಿಸಬೇಕಾಗಿ ಬಂತು. ಬೇಡ ಬೇಡವೆನುತ್ತಿದ್ದಂತೆ ಬಾಸ್ಕೆಟ್ ಒಂದರಲ್ಲಿ ಬೆರ್ರಿ ಹಣ್ಣುಗಳನ್ನು ತುಂಬತೊಡಗಿದರು ಆ ತಾಯಿ. ಜೊತೆಗೆ ಏನಕ್ಕೂ “ಹಣ್ಣಿನ ವೈನನ್ನೂ ರುಚಿ ನೋಡಿ” ಎಂದು ಒಂದು ಗ್ಲಾಸ್ ವೈನನ್ನೂ ನಮ್ಮ ಕೈಗಿತ್ತರು. ಅಲ್ಲಿನ ಗದ್ದೆಗಳನ್ನು ನೋಡಿ, ಒಂದಷ್ಟು ಹರಟೆ ಹೊಡೆದು , ಒಂದು ಕಟ್ಟ ಹಣ್ಣುಗಳನ್ನೂ ಎತ್ತಿ ಕೊಂಡು ಮುಂದಿನ ಬಾರಿ ಖಂಡಿತ ಬರುತ್ತೇವೆ ಎಂದು ಹೇಳಿ ಬೈಕ್ ಹತ್ತಿಕೊಂಡೆವು.

ಊರ ಜನಕ್ಕೆ ಟಾಟಾ ಮಾಡುತ್ತಾ ವಟ್ಟವಡ ಎಂಬ ಊರಿಂದ ಹೊರಬರುತ್ತಿದ್ದಂತೆ ಅದ್ಯಾವುದೋ ಬೇರೆ ಪ್ರಪಂಚಕ್ಕೆ ಹೋಗಿ ಬಂದಂತಾಯಿತು. ಕರಾವಳಿಯಲ್ಲೇ ಹುಟ್ಟಿಬೆಳೆದ ನಮಗೆ ಗುಡ್ಡಗಾಡಿನ ಜನ ಹಾಗು ಜನಜೀವನದ ಒಂದು ಮಿನುಗು ನೋಟ ಸಿಕ್ಕಂತಾಗಿತ್ತು. ಪ್ರಸಿದ್ದವಾದ ಪ್ರವಾಸಿ ತಾಣಗಳನ್ನು ನೋಡುವುದರೊಂದಿಗೆ ಇಂತಹ ಊರುಗಿಳಿಗೂ ಭೇಟಿ ನೀಡಿದಲ್ಲಿ ಹೊಸದೇನನ್ನೋ ಕಲಿಯುವ ಅವಕಾಶವು ನಮ್ಮದಾಗುತ್ತದೆ ಎಂದನಿಸತೊಡಗಿತು. ಹೊಸದನ್ನು ಹುಡುಕುವ ಆಸಕ್ತರಿಗೆ  “ಹೆಚ್ಚೇನೂ ಇಲ್ಲದ ವಟ್ಟವಡ” ಒಂದು ಆಸಕ್ತಿದಾಯಕವಾದ ತಾಣವಾಗಿರುತ್ತದೆ.
.

– ಪಲ್ಲವಿ ಭಟ್, ಬೆಂಗಳೂರು

8 Responses

  1. Shruthi Sharma says:

    Wow! Very interesting location to explore and good information. 🙂
    I could literally picturize “chettanaanu daivam!!” moment

    Wonderfully narrated Pallavi!

  2. Vishwanatha Kana says:

    ಲೇಖನದ ಪೀಠಿಕೆ ಓದುತ್ತಿದ್ದಾಗ ಹರತಾಳದ ಒಂದು ಅನುಭವ ಇರಬಹುದು ಎಂಬ ನಿರೀಕ್ಷೆ ಹುಟ್ಟಿಸಿ ನಮಗೆ ಅರಿವಿಲ್ಲದಂತೆ ಸುಂದರ ವಿವರಣೆಯ ಲೇಖನ ಓದಿಸಿದಿರಿ. ಲೇಖನದ ಬಗ್ಗೆ ಶೃತಿಯವರ ಕಾಮೆಂಟ್ ನ್ನು ನಾನೂ ಅನುಮೋದಿಸುತ್ತೇನೆ.

  3. Vasanth Shenoy says:

    Nanagu Alli hoguva ase aguthade. Thumba Chennagi barediddira

  4. Shankari Sharma says:

    ಪ್ರವಾಸ ಕಥನ ಚೆನ್ನಾಗಿದೆ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: