ಪ್ರಥಮ ವಿಮಾನ ಯಾನ….!!
ವಿದೇಶ ಪ್ರಯಾಣಕ್ಕೆ ವೀಸಾ ಕೈ ಸೇರಿತ್ತು.ಆದರೆ ವಿಮಾನ ಪ್ರಯಾಣದ ಅನುಭವ ಇನ್ನೂ ಆಗಿರಲಿಲ್ಲ. ಅಲ್ಲದೆ ಅದರಲ್ಲಿ ಬಸ್ಸು, ರೈಲಿನಲ್ಲಿ ಹೋದಂತೆ ಟಿಕೇಟ್ ತೆಗೆದು ಹೋಗಿ ಕುಳಿತುಕೊಳ್ಳಲು ಆಗುವುದಿಲ್ವಲ್ಲ..!.ವಿಮಾನ ನಿಲ್ದಾಣದ ಒಳ ಹೊಕ್ಕಮೇಲೆ ಕಡಿಮೆ ಎಂದರೂ ಎರಡು ಗಂಟೆಗಳಷ್ಟು ಹೊತ್ತು ತಪಾಸಣೆ ಇತ್ಯಾದಿಗಳಿರುತ್ತವೆ. ಹಾಗಾಗಿ ಮೂರು ಗಂಟೆ ಮೊದಲೇ ನಾವು ಅಲ್ಲಿ ಹಾಜರಿರಬೇಕಾಗುತ್ತದೆ.ಇದರೆಲ್ಲದರ ಅನುಭವಕ್ಕೋಸ್ಕರ ಮಗಳು,ಅಳಿಯ, ನಮಗಾಗಿ ಮಂಗಳೂರಿನಿಂದ ಚೆನ್ನೈಗೆ ವಿಮಾನದಲ್ಲಿ ಹೋಗಲು ತಯಾರಿ ನಡೆಸಿದ್ದರು, ಹಾಗೆಯೇ ದಿನವೂ ನಿಗದಿಯಾಯಿತು.
ಚೆನ್ನೈಯಲ್ಲಿರುವ ಸಂಬಂಧಿಕರ ಮನೆಗೆ, ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹೋಗುವುದಿತ್ತು. ಅದಾಗಲೇ ವಿಮಾನ ಟಿಕೆಟ್ ಮನೆಗೆ ತಲಪಿಯಾಗಿತ್ತು. ವಿಮಾನ ಪ್ರಯಾಣದ ಅನುಭವವಿಲ್ಲದ ನಾವಿಬ್ಬರು ಹೊರಡುವ ದಿನ ಹತ್ತಿರವಾದಂತೆಲ್ಲ ಗಡಿಬಿಡಿಗೊಳ್ಳತೊಡಗಿದೆವು..!. ಮಂಗಳೂರಿನಿಂದ ಚೆನ್ನೈಗೆ ಸೀದಾ ವಿಮಾನವಿರಲಿಲ್ಲ. ಮಂಗಳೂರಿನಿಂದ ಹೊರಟ ವಿಮಾನ ಬೆಂಗಳೂರಿಗೆ ಹೋಗಿ, ಅಲ್ಲಿ ಸ್ವಲ್ಪ ತಂಗಿ,ಅಲ್ಲಿಂದ ಚೆನ್ನೈಗೆ ಹೋಗುವುದಿತ್ತು. ವಿಮಾನ ಪ್ರಯಾಣದ ಅನುಭವ ಹಾಗೂ ಮುಖ್ಯವಾಗಿ ನಿಲ್ದಾಣ,ದಲ್ಲಿ ಒಳ ಹೊಕ್ಕ ಮೇಲೆ ವಿವಿಧ ಹಂತಗಳಲ್ಲಿ ನಮ್ಮ ಮತ್ತು ನಮ್ಮ ಬ್ಯಾಗುಗಳ ತಪಾಸಣಾ ಕ್ರಮಗಳು, ಹಾಗೂ ಆಮೇಲೆ ವಿಮಾನದ ಒಳಗೆ ಹೋಗುವ ರೀತಿಗಳ ಬಗ್ಗೆ ತಿಳುವಳಿಕೆಗೋಸ್ಕರ ಈ ಪ್ರಯಾಣ ನಿಗದಿಯಾಗಿತ್ತು. ಹಾಗೆಯೇ ಹೊರಡುವ ದಿನ ಬಂತು. ಸ್ವಲ್ಪ ಬಟ್ಟೆ ಬರೆಗಳ ಜೊತೆ ತಿಂಡಿ ಪೊಟ್ಟಣಗಳೂ ಬ್ಯಾಗ್ ನೊಳಗೆ ಸೇರಿದವು.ವಿಮಾನದಲ್ಲಿ ತಿಂಡಿ ತೆಗೆದುಕೊಂಡು ಹೋಗಲು ಬಿಡ್ತಾರೋ ಇಲ್ಲವೋ ಸಂಶಯವಿದ್ದರೂ, ಮಗಳ ಸಲಹೆಯಂತೆ ಪ್ಯಾಕ್ ಮಾಡಿದ್ದಾಯಿತು. ಒಂದು ಸೂಟ್ ಕೇಸು ಹಾಗೂ ಒಂದು ಬ್ಯಾಗ್ ಜೊತೆಗೆ ನಮ್ಮ ಪ್ರಯಾಣ ಪ್ರಾರಂಭವಾಯಿತು.ಮಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 3ಗಂಟೆ ಮೊದಲೇ ತಲಪಿದ್ದಾಯ್ತು.ಮಗಳು, ಅಳಿಯ,ನಮಗೆ ಮೊದಲೇ,ಹಂತ ಹಂತವಾಗಿ ನಡೆಯುವ ಎಲ್ಲಾ ತಪಾಸಣೆಗಳ ಬಗ್ಗೆಯೂ ವಿವರವಾಗಿ ಹೇಳಿದ್ದನ್ನು ತುಂಬಾ ಜಾಗರೂಕತೆಯಿಂದ ನೆನಪಿಟ್ಟುಕೊಂಡಿದ್ದರೂ ಆಲ್ಲಿಯ ಜನಗಳನ್ನೆಲ್ಲಾ ನೋಡಿ ಮರೆತೇ ಹೋಯ್ತ! ಆದರೂ ಅಲ್ಲಿ ಎಲ್ಲಾ ಜನರು ಎಲ್ಲಿ ಹೋಗ್ತಾರೆ ನೋಡಿಕೊಂಡು ಅವರ ಹಿಂದೆಯೇ ನಡೆದೆವು ಅನ್ನಿ…!
ನಿಲ್ದಾಣದ ಒಳಗೆ ಬಂದಾಯ್ತು. ಸರದಿಯಲ್ಲಿದ್ದ ನಾವು ಮುಂದೆ ಮುಂದಕ್ಕೆ ಹೋದಂತೆ ನಮ್ಮೊಡನಿದ್ದ ಸಾಮಾನುಗಳ ತಪಾಸಣೆಯೂ ಅಗಿ, ಕೈಚೀಲದಲ್ಲಿದ್ದ ನೀರಿನ ಬಾಟಲಿ ಕಸದ ಬುಟ್ಟಿ ಸೇರಿತು..!!.(ಬಾಟಲಿಯಲ್ಲಿದ್ದ ನೀರು ಖಾಲಿ ಮಾಡಲು ಮರೆತೇ ಹೋಗಿತ್ತು..!) ಮುಂದಿನ ಹಂತದಲ್ಲಿ ನಮ್ಮ ದಿರುಸುಗಳ ತಪಾಸಣೆ..!.ಮೊದಲ ಸಲವಾದ್ದರಿಂದ ಸ್ವಲ್ಪ ಇರುಸು ಮುರುಸು ಆಯಿತೆನ್ನಿ.ಕೈಚೀಲ ಮಾತ್ರ ನಮ್ಮೊಂದಿಗೆ..ಉಳಿದವೆಲ್ಲಾ ವಿಮಾನದ ಲಗೇಜ್ ರೂಮಿಗೆ.. ಧ್ವನಿವರ್ಧಕದ ಮೂಲಕ ಎಲ್ಲಾ ಮಾಹಿತಿಗಳನ್ನೂ ಇಂಗ್ಲಿಷಲ್ಲಿ ಬಿತ್ತರಿಸುತ್ತಿದ್ದರೂ ನಮಗೆ ಆ ಗದ್ದಲದಲ್ಲಿ ಗೊತ್ತಾಗುತ್ತಲೇ ಇರಲಿಲ್ಲ..! ಅಂತೂ ಎಲ್ಲಾ ಮುಗಿಸಿ,ಕೊನೆಯ ಹಂತವಾಗಿ ,ವಿಮಾನ ನಿಂತಿರುವ ದ್ವಾರದ ಬಳಿ ತೆರಳಿ ಕಾಯುತ್ತಾ ಕುಳಿತೆವು. ಅಲ್ಲಿಯ ಶುಚಿ, ಅಚ್ಚುಕಟ್ಟುತನ ಮನಸ್ಸಿಗೇನೋ ಖುಷಿ ತಂದಿತ್ತು.. ಆದರೆ ಜೊತೆಗೇ ಏನೋ ಆತಂಕ…ಜೊತೆಗೆ ಇರುವವರೊಡನೆ ಕೇಳಿ, ನಾವು ಕುಳಿತಿರುವ ಸ್ಥಳ ಸರಿಯಾಗಿರುವ ಬಗ್ಗೆ ಖಾತರಿ ಪಡಿಸಿಕೊಂಡದ್ದಾಯಿತು… ಹೊರಗೆ ನೋಡಿದರೆ ತುಂಬಾ ವಿಮಾನಗಳು ನಿಂತಿದ್ದವು…! ಅಷ್ಟು ಹತ್ತಿರದಿಂದ ವಿಮಾನ ನೋಡಿದ್ದು ಅದೇ ಮೊದಲು.! ನಾನು 4ನೇ ಕ್ಲಾಸಿನಲ್ಲಿ ಇರುವಾಗ ಅಜ್ಜ ವಿಮಾನ ತೋರಿಸಲು ಬಜ್ಪೆಯಲ್ಲಿದ್ದ ವಿಮಾನ ನಿಲ್ದಾಣಕ್ಕೆ ಕರಕೊಂಡು ಹೋಗಿದ್ದರು, ದೂರದಿಂದಲೇ ಕಣ್ಣು ಬಾಯಿ ಬಿಟ್ಟು ನೋಡಿದ್ದು ಎಲ್ಲಾ ನೆನಪಾಯಿತು. ಈಗ ನಮ್ಮ ಕುತೂಹಲ, ಅಚ್ಚರಿಯನ್ನು ಸಣ್ಣ ಮಕ್ಕಳಂತೆ ತೋರಿಸಲಾಗುವುದಿಲ್ಲವಲ್ಲ…!
ಅಂತೂ ನಾವು ಪ್ರಯಾಣಿಸಬೇಕಾಗಿದ್ದ ವಿಮಾನ ಬಂತು. ಸರದಿ ಪ್ರಕಾರ ನಮ್ಮ ಪಾಸ್ ಪೋರ್ಟ್ ಇತ್ಯಾದಿಗಳನ್ನೆಲ್ಲ ಪರಿಶೀಲಿಸಿ ಒಳಗೆ(ಹೊರಗೆ?) ಬಿಟ್ಟರು. ವಿಶಾಲವಾದ ಮೈದಾನದಲ್ಲಿ, ಸ್ವಲ್ಪ ದೂರದಲ್ಲಿ ನಾವು ಹೋಗಲಿರುವ ವಿಮಾನ ನಿಂತಿತ್ತು. ಅದಕ್ಕೆ ಹತ್ತಲು ಏಣಿಯನ್ನೂ ಇಟ್ಟಿದ್ದರು. ಎಲ್ಲರೆದುರಿಗೆ ನಾವು ಹಳ್ಳಿ ಗುಗ್ಗುಗಳಂತೆ ವರ್ತಿಸಬಾರದೆಂದು ಹರಸಾಹಸ ಪಟ್ಟು, ಸಮಾಧಾನವಾಗಿ ವಿಮಾನ ಹತ್ತಿಯಾಯಿತು.ನಮ್ಮ ಮನಸ್ಸು ಪುಳಕಗೊಂಡಿತ್ತು ಗಗನಸಖಿಯನ್ನು ಹತ್ತಿರದಿಂದ ನೋಡಿ ಖುಶಿಯಾಯಿತು.. ಜೊತೆಗೇ , ಏನೂ ತಿಳಿಯದ ನಾವಿಬ್ಬರೇ ಇದ್ದುದರಿಂದ ಸ್ವಲ್ಪ ಹೆದರಿಕೆ ಕೂಡ ಆಯಿತು..!
45 ಜನ ಪ್ರಯಾಣಿಸಬಹುದಾಗಿದ್ದ ವಿಮಾನವಾಗಿತ್ತದು.ಕೈಯಲ್ಲೇ ಇದ್ದ ಟಿಕೆಟ್ ನೋಡಿ ಆಸನ ಸಂಖ್ಯೆಯನ್ನು ಹುಡುಕಿ ಕುಳಿತೆವು.ನನಗೆ ಕಿಟಕಿ ಬಳಿಯ ಆಸನ ಸಿಕ್ಕಿದ್ದರಿಂದ ಸ್ವಾಭಾವಿಕವಾಗಿಯೇ ಖುಶಿಯಾಗಿತ್ತು.ಮೊದಲ ಅನುಭವವಾದ್ದರಿಂದ ನಾವು ತುಂಬಾ ಕುತೂಹಲದಿಂದ ಅಕ್ಕ ಪಕ್ಕ ನೋಡಿದರೆ ಎಲ್ಲರೂ ಸ್ವಾಭಾವಿಕವಾಗಿಯೇ ಇದ್ದರು. ಕೂತ ಕೂಡಲೇ ಸೀಟು ಬೆಲ್ಟ್ ಹಾಕಬೇಕೆಂದು ಮಗಳು ಹೇಳಿದ್ದರಿಂದ, ಬೆಲ್ಟನ್ನು ಹುಡುಕಿ ಹಿಡಿದಾಯ್ತು. ಅದನ್ನು ಹಾಗೂ ಹೀಗೂ ತಿರುಗಿಸಿ ನೋಡಿದರೆ, ಅದನ್ನು ಹಾಕುವುದು ಹೇಗೆಂದು ತಿಳಿಯಲಿಲ್ಲ. ಅಕ್ಕ ಪಕ್ಕದಲ್ಲಿ ಮೆಲ್ಲ ಕಣ್ಣು ಹಾಯಿಸಿದಾಗ ಅವರೆಲ್ಲ ಆರಾಮವಾಗಿ ಸಿಕ್ಕಿಸಿ ಕೂತಿದ್ದರು. ನಾವು ಅದನ್ನು ಹಾಕಲಾಗದೆ ಪೇಚಾಡುತ್ತಿದ್ದೆವು. ಅಂತೂ ಹೇಗೋ ಸರ್ಕಸ್ ಮಾಡಿ ಹಾಕಿಯಾಯ್ತು..!. ಹಾಂ… ಇನ್ನು ತೆಗೆಯುವುದು ಹೇಗೆಂದು ನೋಡೋಣವೆಂದರೆ ಅದು ಜಪ್ಪಯ್ಯಾ ಎಂದರೂ ಬರಲೇ ಇಲ್ಲ ನೋಡಿ..!. ನಮ್ಮ ಈ ಕಿತಾಪತಿಯನ್ನು ಯಾರೂ ಗಮನಿಸಲಿಲ್ಲವಲ್ಲ ಎಂದು ಆಚೆ ಈಚೆ ನೋಡಿ ಏನೂ ಆಗದಂತೆ ಗಂಭೀರವಾಗಿ ಕುಳಿತಿದ್ದಾಯ್ತು… ಮಿಸ್ಟರ್ ಬೀನ್ಸ್ ತರಹ.. (ನಾವು ಅವನ ಫೇನ್ಗಳು ಬೇರೆ..!.) ನಮ್ಮ ಪಕ್ಕದಲ್ಲಿದ್ದವರು ನಮ್ಮನ್ನೊಮ್ಮೆ ನೋಡಿ ಸುಮ್ಮನಿದ್ದರು. ಮನಸ್ಸಲ್ಲೇ ನಗಾಡಿರಬಹುದೆಂದು ನಮ್ಮ ಊಹೆ. ಹಾಂ… ಇಷ್ಟೆಲ್ಲಾ ಆದ ಮೇಲೆ ಬಂದಳು ನೋಡಿ ಗಗನಸಖಿ.. ಎದುರಿಗೆ ಬಂದು ಒಂದು ಬೆಲ್ಟ್ ಕೈಯಲ್ಲಿ ಹಿಡಿದು ಹೇಗೆ ಹಾಕುವುದು ತೆಗೆಯುವುದೆಂದು ಚೆನ್ನಾಗಿ ತೋರಿಸಿಕೊಟ್ಟಳು. ಈಗ ಬೆಪ್ಪಾಗುವ ಸರದಿ ನಮ್ಮದು. ಇಷ್ಟು ಸುಲಭದ ಕೆಲಸವನ್ನು ಮಾಡಲು ಎಷ್ಟೆಲ್ಲಾ ಸರ್ಕಸ್ ಮಾಡ್ತಾ ಇದ್ದೆವಲ್ಲಾ ..! ಗೊತ್ತಾದ ಮೇಲೆ ..ನಾವೇ ಈಗ ಉಶಾರು ಅಲ್ವಾ..?
ಕಿಟಕಿಯ ಪಕ್ಕದ ಸೀಟಾದ್ಧರಿಂದ ಹೊರಗೆಲ್ಲಾ ಚೆನ್ನಾಗಿ ಕಾಣಿಸುತ್ತಿತ್ತು. ಸ್ವಲ್ಪ ಹೊತ್ತಿನಲ್ಲಿ ವಿಮಾನ ಹೊರಟಿತು. ಮನಸ್ಸು ಸಂತಸದಿಂದ ತುಂಬಿತ್ತು. ಆದರೂ ಸ್ವಲ್ಪ ಆತಂಕ. ವಿಮಾನ ಮೇಲೇರುವಾಗ ಕೆಲವರಿಗೆ ವಾಂತಿಯಾಗುತ್ತದಂತೆ. ಅದನ್ನು ನೆನಸಿಯೇ ಭಯ ಆಯಿತು. ಏನಾಗುವುದೋ ಎಂದು ಕಾದು ಕುಳಿತೆವು. ಮೇಲೇರುವಾಗ ಸ್ವಲ್ಪ ತಲೆ ಸುತ್ತಿದಂತಾಯಿತು ಅಷ್ಟೇ. ದೇವರ ದಯದಿಂದ ಮತ್ತೇನಾಗಲಿಲ್ಲ.! ವಿಮಾನ ಮೆಲ್ಲ ಮೆಲ್ಲನೆ ಮೇಲೇರುತ್ತಿದ್ದಂತೆ ಕೆಳಗೆ ಕಟ್ಟಡಗಳೆಲ್ಲ ಬೆಂಕಿ ಪೊಟ್ಟಣಗಳಂತೆ ಕಾಣುವುದು ಮನಕ್ಕೆ ಮುದ ನೀಡುತ್ತಿತ್ತು. ಅಂತೂ ನಮ್ಮ ಜೀವನ ಪಯಣದ ಮೊದಲ ವಿಮಾನ ಯಾನ ಸುಖಕರವಾಗಿ ಸುರುವಾಗಿಯೇ ಬಿಟ್ಟಿತ್ತು..!!
-ಶಂಕರಿ ಶರ್ಮ, ಪುತ್ತೂರು.
.
ಒಳ್ಳೆಯ ಅನುಭವ ಶಂಕರಿ ಶರ್ಮ. ಎರಡು ವಾರಗಳ ಹಿಂದೆ ನಾನು ಹ್ಯೆದ್ರಾಬಾದ್ ಗೆ ವಿಮಾನದಲ್ಲಿ ಪ್ರಯಾಣಿಸಿದ್ದು ; ನನ್ನ ಪ್ರಥಮ ವಿಮಾನ ಯಾನ ಎಂಬುದಾಗಿ ಹವ್ಯಕದಲ್ಲಿ ಬರೆದು ಒಪ್ಪಣ್ಣ ಬಯಲಿಗೆ ಹಾಕಿರುತ್ತೇನೆ. ಇನ್ನು ಅಚ್ಚಕನ್ನಡದಲ್ಲಿ ಬರೆಯತೊಡಗಿದ್ದು ಪೂರ್ತಿಯಾಗಿಲ್ಲ,. ಆದಮೇಲೆ ಸುರಹೊನ್ನೆಗೆ ಹಾಕುವವಳಿದ್ದೇನೆ.
ಒಳ್ಳೆದು ವಿಜಯಕ್ಕ…ನಿಮ್ಮ ಬರಹಕ್ಕಾಗಿ ಕಾತರದಿಂದ ಕಾಯುವೆವು…!!
ಒಳ್ಳೆಯ ಬರಹ. ನಾನೇ ಸ್ವತಹ ವಿಮಾನ ಯಾನ್ ಮಾಡಿದ ಹಾಗಾಯಿತು .
ತಮ್ಮ ಅನಿಸಿಕೆಗೆ ಧನ್ಯವಾದಗಳು.