ಮೊರೆ
ಹೂವು ಅರಳುತ್ತಿಲ್ಲ ದುಂಬಿ ಗುಂಜನವಿಲ್ಲ
ಕುಕಿಲು ಕೇಕೆಗಳೆಲ್ಲಿ ಮರೆಯಾದವೋ
ಬಳೆ ಗೆಜ್ಜೆ ಕಿಂಕಿಣಿಯದೀಗ ಘನಮೌನ
ಯಮುನಾತೀರದಲಿ ಸೂತಕದ ಛಾಯೆ
ಪ್ರಭೂ, ಕಂಡೆ ನೀ ತೆರಳಿದ್ದನ್ನ
ಬೃಂದಾವನದ ಎದೆ ಬಿರಿದಿದ್ದನ್ನ
ಅನಾಥ ಮುರಳಿ ತಲೆಮರೆಸಿ ಕೊಂಡಿಹನು
ಸ್ತಬ್ದವಾಗಿದೆ ಈಗ ವೇಣುಗಾನ
ಗೋಪಿಯರೆಲ್ಲ ಗುಳೆ ಹೋಗಿದ್ದಾರೆ
ಸೇರಿದ್ದಿರಬೇಕು ನಗರ ತೀರ
ಅನ್ನ ನೀರನ್ನು ಬಿಟ್ಟಿಹರು ಅವರು
ಅಗಲಿ ನಿನ್ನ ಹೇಗೆ ಇರಬಲ್ಲರೋ
ಪ್ರಭೂ, ಕಂಡೆ ಎದೆ ಬಿರಿದಿದ್ದನ್ನ
ನಡೆಯಲಾಗದ ಹೆಳವರು ನಾವಷ್ಟು ಹಳಬರು
ದಿಕ್ಕು ದಿಕ್ಕಿಗೆ ಚಾಚಿ ಕೊಂಬೆ ಕೈಯ
ಒರಲುತ್ತಲಿದ್ದೇವೆ ಬಿಗಿದ ಕೊರಲುಗಳಲ್ಲಿ
ನಿರೂಪ ತಂದನೇ ಸಮೀರಣ ?
ಆಡಿ ನೀ ಜೋಕಾಲಿ ಬಿಳಲು ಬಿಳಲುಗಳಲ್ಲಿ
ಟೊಂಗೆ ಟೊಂಗೆಯನೇರಿ ಅಡರಿ ಮೈಯ
ಸಿಬಿರಿಗೆಲ್ಲೋ ಸಿಕ್ಕು ಪೀತಾಂಬರ ಹರಿದು
ಉಳಿಸಿದ್ದೀ ಮೇಲುದದ ಎರಡು ಎಳೆಯ
ಆಸೆಯದೊಂದು ಎಳೆ ಭರವಸೆಯದಿನ್ನೊಂದು
ಅದನೆ ಎದೆಯೊಳಿಟ್ಟು ಕಾವು ಕೂತು
ಕಾಯುತ್ತಲಿದ್ದೇವೆ ಕಾಯಿ ಹಣ್ಣಾ ದೀತೆ
ನಿನ್ನ ಬರವಿನ ಭಾಗ್ಯ ತೆರೆದೀತು ಎಂದೆ
ಕಿವಿಗೆ ಬಿತ್ತೆ ಮೊರೆ ಎದೆಯ ಸೇರಿತೆ ದೊರೆ
ಐತರುವೆ ಎಂದು ನೀನು
ಬಾ ಬಾರೊ ತಾರೊ ಬೆಂದೆದೆಗೆ ಮುದವ
ಮರಳಿ ಬದುಕಿನ ಹದವ ಮುರಳಿ ಲೋಲ
– ಗೋವಿಂದ ಹೆಗಡೆ
ಚೆಂದದ ಕವನ 🙂