ಬೊಂಬೆ ಹೇಳುತೈತೆ…. ಮತ್ತೆ ಹೇಳುತೈತೆ….
ದೇಸಿ ಸಂಸ್ಕೃತಿ ಮತ್ತೆ ಪಾರಂಭವಾಗಿದೆ. ಆಧುನಿಕತೆಯಲ್ಲಿ ಪುರಾತನತ್ವ ಮತ್ತೆ ಮೈಗೂಡುತ್ತಿದೆ. ದಿನ ನಿತ್ಯ ಬಳಕೆಯ ವಸ್ತುಗಳ ಜೊತೆ ಅಲಂಕಾರಿಕ ವಸ್ತುಗಳಾಗಿ ಎಲ್ಲೆಡೆ ‘ಮರದ ವಸ್ತುಗಳು’ ಕಾಣಿಸಿಕೊಳ್ಳುತ್ತಿವೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ನಡೆಯುತ್ತಿರುವ ಲಕ್ಷದೀಪೋತ್ವವದಲ್ಲಿ ವಸ್ತುಪ್ರದರ್ಶನ ಕೇಂದ್ರ ಬಿಂದುವಾಗಿದೆ. ಪ್ರದರ್ಶನದಲ್ಲಿ ಮರದ ಆಟಿಕೆಗಳು, ಅಲಂಕಾರಿಕ ವಸ್ತುಗಳು ಹಾಗು ಗೃಹೋಪಯೋಗಿ ಸಲಕರಣೆಗಳು ವಸ್ತುಪ್ರದರ್ಶನದ ಆಕರ್ಷಣೆ ಹೆಚ್ಚಿಸಿವೆ.
ಗೃಹೋಪಯೋಗಿ ಉಪಕರಣಗಳಾದ ಮರದ ಸೌಟು, ಚಮಚ, ನೈಲ್ ಕಟ್ಟರ್, ಮರದ ಟ್ರೇ, ಮಜ್ಜಿಗೆ ಕಡೆಯಲು ಬಳಸುವ ಕಡಗೋಲು, ಲಟ್ಟಣಿಗೆ-ಮಣೆ ಮತ್ತು ಹೂವಿನ ಬುಟ್ಟಿಗಳು ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ. ಬಳೆ ಸ್ಟ್ಯಾಂಡ್, ಕುಂಕುಮ ಭರಣಿ, ಬಾಚಣಿಗೆ , ಒಡವೆ ಪಟ್ಟಿಗೆ, ಬಳೆಗಳು ಎಲ್ಲವೂ ಮರದಿಂದಲೇ ತಯಾರಾಗಿರುವ ಅಲಂಕಾರಿಕ ಸಾಧನಗಳು. ಹೆಂಗೆಳೆಯರನ್ನು ತನ್ನತ್ತ ಆಕರ್ಷಿಸುತ್ತಿವೆ. ಮುದ್ದು ಮುದ್ದಾಗಿರುವ ಮರದ ಆಟಿಕೆಗಳು ನೋಡಲು ಸುಂದರವಾಗಿವೆ. ಮರದ ಪುಟ್ಟ, ಪುಟ್ಟ ಫಿರಂಗಿ, ಕಾರು, ಬುಗುರಿ, ಜೀಪು, ಎತ್ತಿನಗಾಡಿ, ಮೊಸಳೆ, ಹಾವು, ಸೈಕಲ್ ಮತ್ತು ಎತ್ತಿನಗಾಡಿಗಳು ಚಿಣ್ಣರ ಮನ ಗೆದ್ದಿವೆ.
ಚನ್ನಪಟ್ಟಣದಿಂದ ತಯಾರಾದ ಮರದ ವಸ್ತುಗಳು ದೀಪೋತ್ಸವದ ಅಂದ ಹೆಚ್ಚಿಸಿವೆ. ಈ ಎಲ್ಲಾ ಮರದ ವಸ್ತುಗಳನ್ನು ಮೈಸೂರು, ಚನ್ನಪಟ್ಟಣ ಹಾಗು ಉತ್ತರ ಪ್ರದೇಶದಿಂದ ಕೊಂಡು ಮಾರಾಟ ಮಾಡಲಾಗುತ್ತಿದೆ. ಎಲ್ಲಾ ವಯೋಮಾನದವರೂ ಇಷ್ಟಪಟ್ಟು ಬಳಸುವ ಅನೇಕ ಸಾಧನಗಳು ಮಾರಾಟವಾಗುತ್ತಿವೆ.
ಪ್ಲಾಸ್ಟಿಕ್ ಯುಗವಾಗಿರುವ ಇಂದಿನ ಕಾಲಘಟ್ಟದಲ್ಲಿ ಮತ್ತೆ ಘತವೈಭವ ಮರುಕಳಿಸುತ್ತಿದೆ. ಪ್ರಾಚೀನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳೆಲ್ಲ ಇಂದಿನ ಯುವ ಪೀಳಿಗೆ ಮಾರು ಹೋಗುವಂತೆ ಮಾಡುತ್ತಿದೆ. ಯಾವುದೇ ದುಷ್ಪರಿಣಾಮಗಳಿಲ್ಲದೇ ಆರೋಗ್ಯಕ್ಕೆ ಮಾರಕವಲ್ಲದ ಮರದ ವಸ್ತುಗಳು ನೋಡಲು ಸುಂದರವಾಗಿರುವುದರ ಜೊತೆ ಪರಿಸರ ಸ್ನೇಹಿಯಾಗಿದೆ.
.
ವರದಿ: ಕಾವೇರಿ ಭಾರದ್ವಾಜ್,
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ,
ಎಸ್.ಡಿ.ಎಂ ಕಾಲೇಜು, ಉಜಿರೆ
ಕೊಳ್ಳಬಲ್ಲ ವರ್ಗದ ಜನ ಪ್ರಕೃತಿಪ್ರಿಯರಾಗಿ ಗುರುತಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಇತ್ತೀಚಿನ ವಸ್ತುಪ್ರದರ್ಶನಗಳ ಆಕರ್ಷಣೆಗಳ ಬಗ್ಗೆ ಚೆನ್ನಾದ ಲೇಖನ.