ಜಲ್ಲಿಗಲ್ಲಿನ ಕನಸು
ನೆತ್ತಿಯ ಬಿಳಿಯನ ಕಡುನೋಟಕೆ
ನೆತ್ತರಿನ ಬೆವರೇ ಮೈತಂಪಿಟ್ಟಿದೆ
ಹೊತ್ತ ಜಂಬಿಟ್ಟಿಗೆಯ ತಲೆ ಭೂ ಸುತ್ತಿದೆ
ನಡುಗಿ ನಲುಗಿದೆ ಬಡಗಾಲ ನಡಿಗೆ.
ಈ ಗುಡುಗಲೂ ಜಗವರಿಯದ ಕೂಸು
ಜಲ್ಲಿ ಸೋಪಾನದಿ ನಿಶ್ಚಿಂತ ನಿದ್ದೆ..!
ಬಿಸಿಲ ಹೊದ್ದಿಹ ತೇಪೆಯಲಿ ಬೆಚ್ಚನೆ
ನೊಸಲರಳಿಸಿ ಸವಾಲು ‘ಕೆಂಪಂಗೆ..!’
ರಾವುಗಣ್ಗಳಿಗೆ ಕಾವಿಡುವ ರೆಪ್ಪೆಗಳು
ಉಸುಕ ಕಣಗಳ ಹಿಸುಕಿ ನಿಶ್ಚಲ..
ಕಲ್ಲಲ್ಲೇ ಮಲಗಿ ಕಲ್ಲಾದ ಕರ್ಣಗಳು
ಕಲ್ಲಪಾತಕೆ ಬೆದರಿ ಕರಣವಲ್ಲಾಡದೆ??
ತಾಯ ತೆಕ್ಕೆಯ ತೃಷೆಯೆಲ್ಲಾ ಬತ್ತಿ
ತೂರಿದೆ ಬಳಲಿಕೆಯ ಬೆಂಕಿಯಡಿ
ಕುಸಿವ ಮನೆಯ ಮಣ್ಣ ಹೆಂಟೆಯಡಿ
ಅರಿವಿರದ ಹಸುಗೂಸಿಗಿದೆಂಥ ಹಸಿಮನಸು!?
“ನೀ ಹೊತ್ತ ಕುಡಿ ನಿನ್ನ ಕಣ್ಣೀರ ಕುಡಿಯೆನು
ಬಾ ಇತ್ತ ಹಾಲ್ಗನಸೆ ತಂಪಾಗೊರಗುವೆನು..”
.
-ಸಂದೇಶ್ ಹೆಗಡೆ, ಸಂಪ
ತುಂಬಾ ಚೆನ್ನಾಗಿ ಬರೆದಿದ್ದೀರಿ
ಧನ್ಯವಾದಗಳು