ಕಾರಂತಜ್ಜನಿಗೆ….
ನಿನ್ನ ಬಗ್ಗೆ ಹೇಳಹೊರಡುವುದು
ಶರಧಿಗೆ ಕೊಡುವ ಷಟ್ಪದಿಯ
ದೀಕ್ಷೆಯಾದೀತೆಂಬ ಅಳುಕು
ಕೃಷೀವಲ ನೀನು ಶ್ರದ್ಧೆಯಿಂದ
ಮಾಡುತ್ತಲೇ ಹೋದೆ
ನಾಡಿಗರೆದೆಯ ಉತ್ತುವ
ಬಿತ್ತುವ ಕಾಯಕ
ಹತ್ತೇ ಹದಿನೆಂಟೇ ಮುಖ ಮೊಳಕೆ
ಎಲ್ಲಕ್ಕೂ ಬೆಳೆವ ಬೆಳೆಸುವ
ಬದುಕ ಹಿರಿದಾಗಿಸುವ ತವಕ
ಆನೆಯಂತೆ ನಡೆದೆ ಬಿಚ್ಚುತ್ತ
ನಿನ್ನದೇ ದಾರಿ ;ಇಲ್ಲ ರಾಜಿ ಯಾವ
ಕ್ರಿಮಿ ತಿಮಿಯ ಜೊತೆ
ನಡೆಯಲ್ಲಿ ನುಡಿಯಲ್ಲಿ ಸದಾ ಎಚ್ಚರಿದ್ದವನು
ತನ್ನನುಭವದ ಹಿಲಾಲೆತ್ತಿ ದಾರಿ ಕಡಿದು
ನಡೆದವನು
ಬಾಳ್ವೆಯೇ ಬೆಳಕೆಂದವನು ಆದವನು
ಕೆಲಸ ಮುಗಿಯಿತೆನಿಸಿದ್ದೇ ಎದ್ದೆ , ಹೊರಟೆ
ಹೋದಲ್ಲೂ ನೀ ನಡೆಸಿರಬೇಕು ನಿನ್ನ
ಕಾಯಕ ತಪ
‘ನೀನು ದೊಡ್ಡವ; ನಾವು ಚಿಕ್ಕವರಲ್ಲ’
ಅನ್ನುವ ಅದಟು ಉಳಿದಿದೆಯೇ ನಮ್ಮಲ್ಲಿ-
ಶಂಕೆಯೆನಗೆ
ಹಾಗಾಗೇ ನೂರಹದಿನೈದರಲ್ಲೂ
ನೀನು ಉಳಿದಿರುವಿ ಹೊಚ್ಚ ಹೊಸತಾಗಿ
ನಾವು ?
.
– ಡಾ. ಗೋವಿಂದ ಹೆಗಡೆ