ಅಕ್ಷರದೊಡತಿಗೆ ಅಕ್ಕರೆಯಿಂದ
ಅಕ್ಷರದರಸಿಯೇ ನಮನ
ಇಂದು ನಿನ್ನತ್ತವೇ ಗಮನ
ನೀನಿರಲೆಲ್ಲರ ಮನೆಮನ
ಕಾಣುವೆರು ಆನಂದವನ
ವಿದ್ಯಾದೇಗುಲದೊಡತಿ
ಬ್ರಹ್ಮನರಾಣಿ ಸರಸ್ವತಿ
ವೀಣಾಪಾಣಿ ಭಗವತಿ
ಕರುಣಿಸೆಮಗೆ ಸನ್ಮತಿ
ವಿದ್ಯೆಯಿರದ ಕೂಸು
ಬುದ್ದಿಯಿರದಿಹ ಪಶು
ಇದ್ದರೂ ಇಲ್ಲದಂತೆ ಅಸು
ಆದಾನವನು ಬರೀ ಬೂಸು
ಒಲಿದು ಬಾ ನೀ ಶಾರದೆ
ನಿನಗಾಗಿ ಹೃದಯ ತೆರೆದೆ
ಭಕ್ತಿಯ ಪ್ರೀತಿಯ ಎರೆದೆ
ಕರವನು ಮುಗಿದು ಕರೆದೆ
ಕಾಶ್ಮೀರಪುರದ ವಾಸಿನಿ
ನಿತ್ಯವೂ ನೀ ಸುಹಾಸಿನಿ
ಆಪ್ತೆ ಅಭಯಪ್ರದಾಯಿನಿ
ಅಕ್ಷರದಿ ನಮಿಪೆ ಪೊರೆ ನೀ
– ಗಣೇಶಪ್ರಸಾದ ಪಾಂಡೇಲು
ತುಂಬಾ ಚೆನ್ನಾಗಿದೆ. ಅಕ್ಷರದೊಡತಿಗೆ ನಮನಗಳು..