ಮುನ್ಷಿ ಪ್ರೇಮಚಂದ್ ಅವರ ಕಥಾಲೋಕ

Share Button

ಕಿರಿದರಲ್ಲಿ ಹಿರಿದಾದ ಅರ್ಥ ಹೊಳೆಯುವ ಸಣ್ಣ ಕತೆಗಳಿಗೆ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಕಾದಂಬರಿಯ ಝಲಕು, ಕವಿತೆಯ ಲಾಸ್ಯ, ಲಯ ಎರಡನ್ನೂ ಏಕಕಾಲದಲ್ಲಿ ಒಳಗೊಳ್ಳಬಹುದಾದ ಅನಂತ ಸಾಧ್ಯತೆಗಳುಳ್ಳ ಕಲಾಪ್ರಕಾರವೇ ಸಣ್ಣಕತೆ. ಸಣ್ಣಕತೆಗಳನ್ನು ಓದಲು ಹೆಚ್ಚು ಸಮಯ ಬೇಡದಿರುವ ಕಾರಣ, ಅಂತೆಯೇ ಕವಿತೆಯಷ್ಟು ಅರ್ಥೈಸಿಕೊಳ್ಳಲು ಕ್ಲಿಷ್ಟತೆ ಇರದ ಕಾರಣ, ಅವುಗಳು ಯಾವತ್ತಿಗೂ ಜನರಿಗೆ ಸನಿಹವಾದ ಸಾಹಿತ್ಯಪ್ರಕಾರ. ತಮ್ಮ ವಿಶಿಷ್ಟತೆ, ಶೈಲಿ, ಜೀವನಾನುಭವಗಳನ್ನು ಪೋಣಿಸುವ ರೀತಿ, ಸಮಾಜದ ಅನುಭಾವದ  ಅವಗಾಹನೆ, ಎಲ್ಲಕ್ಕಿಂತ  ಮಿಗಿಲಾಗಿ ಮಾನವೀಯ  ಸ್ಪಂದನೆ ಸಣ್ಣ ಕತೆಗಳ ಮನೋವೈಜ್ಞಾನಿಕ ಪ್ರಭಾವಕ್ಕೆ ಕಾರಣವಾಗುತ್ತದೆ.

ಮನರಂಜನೆಯ ಸರಕುಗಳು, ದೃಶ್ಯಮಾಧ್ಯಮಗಳು ವಿರಳವಾಗಿದ್ದ ಕಾಲದಲ್ಲಿ ಸಣ್ಣ ಕತೆಗಳು,  ಅವುಗಳನ್ನು ಒಳಗೊಂಡ ಪತ್ರಿಕೆಗಳೇ ಜನಮಾನಸವನ್ನು ಎತ್ತರಕ್ಕೊಯ್ಯುವಲ್ಲಿ ಪ್ರಮುಖಪಾತ್ರ ವಹಿಸಿದ್ದುವು.  ಅಜಾತ ಪ್ರತಿಭೆ, ಕಲ್ಪನಾಶಕ್ತಿ, ವಾಗ್ವಿಲಾಸ, ಸರಳವಾದ ಅಭಿವ್ಯಕ್ತಿ ಇವೆಲ್ಲವೂ ಮೇಳೈಸಿದ ಅಪರೂಪದ ಸಾಹಿತಿ ಮುನ್ಷಿ ಪ್ರೇಮಚಂದ್ ಅವರು. ಭಾರತೀಯ  ಕಥಾ ಸಾಹಿತ್ಯದ   ಅನರ್ಘ್ಯ ರತ್ನವೇ ಆಗಿರುವ ಮುನ್ಷಿ ಪ್ರೇಮಚಂದರ 34 ಕತೆಗಳನ್ನು ಶ್ರೀಮತಿ  ಟಿ.ಎಸ್. ಲಲಿತ  ಅವರು  ಸಂಸ್ಕೃತಿಯ ರಹಸ್ಯ’  ಪುಸ್ತಕದಲ್ಲಿ ಸಂಕಲಿಸಿದ್ದಾರೆ.

ಡಾ.  ತಿಪ್ಪೇಸ್ವಾಮಿಯರು ತಮ್ಮ ಮುನ್ನುಡಿಯಲ್ಲಿ ಬರೆದಿರುವಂತೆ  ಬಡ ಕುಟುಂಬದಲ್ಲಿ ಜನ್ಮವೆತ್ತಿ, ಬಡತನದ ನೂರು ನೋವುಗಳಲ್ಲಿ ಬೆಂದು ಬಸವಳಿದು; ಅಲ್ಲಿನ ಪಾಡುಗಳನ್ನೆಲ್ಲ  ಗದ್ಯಕಾವ್ಯವನ್ನಾಗಿ ಪರಿವರ್ತಿಸಿದ ಪ್ರೇಮ್ ಚಂದ್ ಸಾಹಿತ್ಯ ಕಳೆದ ಶತಮಾನದ ಪ್ರಮುಖ ಉಪಲಬ್ದಿಯಾಗಿರುವಂತೆ ನಿನ್ನೆಯ ಕಥೆಯೂ  ಹೌದು, ಇಂದಿನ ಪಾಡೂ ಹೌದು’.

ಭಾರತದಂತಹ ಬಹುಭಾಷಾ ಸಾಂಸ್ಕೃತಿಕ, ಸಾಂಸ್ಥಿಕ ದೇಶದಲ್ಲಿ ಬೇರೆ ಬೇರೆ  ರಾಜ್ಯ, ಧರ್ಮ, ಭಾಷೆಗಳ ಸಾಹಿತ್ಯವನ್ನು ಓದುವುದು, ಅರ್ಥೈಸಿಕೊಳ್ಳುವುದು ನಮ್ಮ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು.  ಅಂತೆಯೇ ಅಪ್ಪಟ ಮಾನವೀಯ ನೆಲೆಯ ಅಂತ:ಕರಣವನ್ನು ನಮ್ಮದಾಗಿಸಿಕೊಳ್ಳುವುದು ಕಾಲದ ಅಗತ್ಯವೂ ಮಾನವಿಕ ಬದ್ಧತೆಯೂ ಆಗಿದೆ. ಈ ನಿಟ್ಟಿನಲ್ಲಿ ಟಿ.ಎಸ್ ಲಲಿತ ಅವರ ಅನುವಾದ ಸಂಕಲನ  ಹಿಂದಿ ಸಾಹಿತ್ಯದಲ್ಲಿ ಅವರಿಗಿರುವ ಅಭಿರುಚಿ, ಆಸಕ್ತಿ,  ಅಂತೆಯೆ  ಅನುವಾದದ ಬಗೆ ಅವರಿಗಿರುವ ಪ್ರೀತಿಯನ್ನೂ ತೋರಿಸುತ್ತದೆ. ಮುನ್ನುಡಿಯಲ್ಲಿ   ಬರೆದಿರುವಂತೆ ಟಿ.ಎಸ್. ಲಲಿತ ಅವರ ಅನುವಾದಗಳನ್ನು ಓದುತ್ತಿರುವಾಗ ನಮಗೆ ಇದು ಅನುವಾದಗಳೆಂದು  ಅನ್ನಿಸುವುದಿಲ್ಲ. ಅಷ್ಟು ಸಹಜತೆ ಇವರ ಅನುವಾದಗಳಲ್ಲಿದೆ. ಲಲಿತ ಅವರು ಅನುವಾದವನ್ನು ಗಂಭೀರವಾಗಿ ತೆಗೆದುಕೊಂಡಿರುವ ಲೇಖಕಿ. ಇವರು ತಮ್ಮ ಈ ಸಂಕಲನಕ್ಕೆ ಆಯ್ದುಕೊಂಡಿರುವ ಕಥೆಗಳು ಇವರ ಸದಭಿರುಚಿಯನ್ನು ತೋರಿಸುತ್ತವೆ.

ಸಂಕಲನದ  ಮೊದಲ ಕತೆ ‘ಸಂಸ್ಕೃತಿಯ ರಹಸ್ಯ’. ಈ ಕತೆಯಲ್ಲಿ  ‘ಡಮರಿ’ ಎಂಬ ಬಡರೈತ ತನ್ನ ಭೂಮಿ ಮತ್ತು ಎತ್ತುಗಳನ್ನು ಉಳಿಸಿಕೊಳ್ಳಲು ಪಡುವ ಪಾಡು, ಹಾಗೆಯೇ ಅವನ ಯಜಮಾನ ಆರಾಮವಾಗಿ ಪಡೆಯುವ ಸರಕಾರಿ ಭತ್ಯೆ ಇವುಗಳ ನಡುವಣ ವಿರೋಧಾಭಾಸವನ್ನು ತೋರಿಸುತ್ತಾರೆ. ಈ ಬಡರೈತ ತನ್ನ ಎತ್ತುಗಳಿಗೋಸ್ಕರ ಒಂದಷ್ಟು ಪೈರು ಕದಿಯುತ್ತಿರುವಾಗ ಪೋಲೀಸನ ಕೈಗೆ ಸಿಕ್ಕಿ ಆರು ತಿಂಗಳ ಕಠಿಣ ಶಿಕ್ಷೆ ಅನುಭವಿಸುತ್ತಾನೆ. ಅದೇ ಊರಿನಲ್ಲಿ ಕೊಲೆ ಆಪಾದನೆಗೆ ಸಿಕ್ಕಿಬಿದ್ದ ಶ್ರೀಮಂತನಿಗೆ ಜಾಮೀನು ಸಿಗುತ್ತದೆ.

ಪ್ರೇಮಚಂದ್ರರ ಎಲ್ಲಾ ಕತೆಗಳೂ  ಬಡವರ, ದಲಿತರ, ರೈತರ, ಶೋಷಿತ ಮಹಿಳೆಯರ ಒಟ್ಟಿನ ಮೇಲೆ ತಳವರ್ಗದವರ ತಳಮಳಕ್ಕೆ ಸ್ಪಂದಿಸುವ ಕತೆಗಳಾಗಿವೆ.  ದಟ್ಟವಾದ ವಿವರಗಳು, ಮಾನವೀಯ ಮೌಲ್ಯಗಳುಳ್ಳ  ಮನಕರಗಿಸುವ ಕತೆಗಳಿವು. ‘ಈದಾ’ ಕತೆಯಲ್ಲಿ ಹಾಮೀದ ಎಂಬ ಬಡ ಬಾಲಕ ಜಾತ್ರೆಗೆ ಹೋಗುವ, ಆಟಿಕೆಗಳಿಗೆ  ಆಸೆ ಪಡುವ ಚಿತ್ರಣವಿದೆ. ಕೊನೆಗೆ ಆ ಎಳೆಹುಡುಗ ತನ್ನ ಆಸೆಗಳನ್ನು  ನಿಯಂತ್ರಣದಲ್ಲಿಟ್ಟು  ತನ್ನ ಅಜ್ಜಿಗೋಸ್ಕರ ರೊಟ್ಟಿಯನ್ನು ತವೆಯಿಂದ ಇಳಿಸುವ ಚಿಮಟ ತರುತ್ತಾನೆ.

‘ಅಪಾತ್ರ ಉಡುಗೊರೆ’ ಕತೆಯು  ಲೇಖಕನೊಬ್ಬನ ಹಿಪಾಕ್ರಸಿಯನ್ನು ತೋರಿಸುತ್ತದೆ. ‘ ಮುಘಲ್ ಆಜಮ್ ‘ ವಜ್ರದ ಹಿನ್ನೆಲೆಯಲ್ಲಿ ಹೆಣೆದ ಚಾರಿತ್ರಿಕ ಕತೆ ‘ವಜ್ರಾಘಾತ’.  ಆ ವಜ್ರದಿಂದಾದ ಕೆಡುಕುಗಳನ್ನು, ಯುದ್ಧ, ರಕ್ತಪಾತಗಳ  ನಿರರ್ಥಕತೆಯನ್ನು ಹೇಳುತ್ತದೆ. ‘ಮಂತ್ರ’ ಕತೆ ಹಳ್ಳಿಗರಲ್ಲಿರುವ ಅಭಿಜಾತ ಒಳ್ಳೆಯತನವನ್ನು ತಿಳಿಸುತ್ತದೆ.  ಭಗತ್   ಎಂಬ ವಯೋವೃದ್ಧನ ಏಳು ಮಕ್ಕಳಲ್ಲಿ ಉಳಿದುಕೊಳ್ಳುವ ಒಬ್ಬನೇ ಮಗ ಸಾವಿನಂಚಿನಲ್ಲಿರುತ್ತಾನೆ. ಡಾ. ಛಡ್ಡಾ ತನಗೆ ಗಾಲ್ಫ್  ಆಟಕ್ಕೆ ವಿಳಂಬವಾಗುವುದೆಂದು ಅವನನ್ನು ಪರೀಕ್ಷಿಸಲು ನಿರಾಕರಿಸುತ್ತಾನೆ. ಇಷ್ಟರಲ್ಲಿ ಈ ಡಾಕ್ಟರ್ ನ ಮಗನಿಗೆ ವಿಷದ ಹಾವು ಕಡಿದು ಇನ್ನೇನು ಸಾಯುತ್ತಾನೆ ಎನ್ನುವಾಗ ಇದೇ ಭಗತ್ ತನ್ನೆದೆಯ ದಾವಾನಲವನ್ನು ನುಂಗಿಕೊಂಡು ಒಂದು ನಯಾಪೈಸೆ ತೆಗೆದುಕೊಳ್ಳದೆ ಅತನ ಪ್ರಾಣ ಉಳಿಸುತ್ತಾನೆ .

ಶಿಕ್ಷಕ ವೃತ್ತಿಯ  ಘನತೆಯನ್ನು ಎತ್ತಿ ಹಿಡಿವ ಕತೆ ‘ಅರಿವು’. ಮನುಷ್ಯ ನಿಸ್ಸಹಾಯಕನಾದಾಗ ಅವನನ್ನು ಕಾಯುವ ದೈವವಿದೆ ಹಾಗೂ ಈ ದೈವತ್ವ ಮನುಷ್ಯನ ಒಳ್ಳೆಯತನದಲ್ಲಿದೆ ಎಂದು  ಪ್ರೇಮಚಂದ್ ಅವರು ದೃಢವಾಗಿ ನಂಬಿದಂತಿದೆ. ಅವರ ಕತೆ ‘ಮಗಳ ಸೊತ್ತು’ ಕತೆಯಲ್ಲಿ ಇದು ವ್ಯಕ್ತವಾಗುತ್ತದೆ.  ಪ್ರೇಮಚಂದರ ಕಥೆಗಳಲ್ಲಿ  ಕಾಣಬರುವುದು ಮುಗ್ಧರ ಲೋಕ. ಚಳಿಗಾಲದಲ್ಲಿ ರಾತ್ರಿಯಲ್ಲಿ ಹೊದೆಯಲೆಂದು ಕಂಬಳಿ ಕೂಡ ಇಲ್ಲದವರು, ಮಗಳ ಮದುವೆಗೆ ದುಡ್ಡು ಕೂಡಿಡುವ ತಂದೆ ಹೀಗೆ, ‘ದೀನತೆಯ ಭಾರದಲಿ ಕುಸಿದುಹೋಗುವ ಮನಸ್ಸು’ಗಳು . ಅಸಹಾಯಕತೆಯಲ್ಲಿಯೂ ಜೀವ ಚೈತನ್ಯ ಕಳೆದುಕೊಳ್ಳದ ಅಮಾಯಕರು.

ಅವರ ಅಭೂತಪೂರ್ವವಾದ ಶೈಲಿಯನ್ನು ಗಮನಿಸಿ. ‘ಪುಷ್ಯದ ರಾತ್ರಿ ಕತೆಯಲ್ಲಿನ ಮೊದಲ ಸಾಲುಗಳಿವು ‘ಪುಷ್ಯದ ಕತ್ತಲ ರಾತ್ರಿ ಆಕಾಶದ ನಕ್ಷತ್ರಗಳು ಚಳಿಯಿಂದ ನಡುಗೋ ಹಾಗೆ ಕಾಣುತ್ತಿದ್ದುವು. ಹಲ್ಕು ತನ್ನ ಹೊಲದಂಚಿನ ಗರಿಗಳ ಚಾವಣಿ ಕೆಳಗಿನ  ಬಿದಿರು ಮಂಚದ ಮೇಲೆ ತನ್ನ ಹಳೆಯ ಚಾದರ ಹೊದ್ದು ನಡುಗುತ್ತಿದ್ದ’

ಹಣ ಕದ್ದು ಓಡಿ ಹೋಗಿ ಸೇನೆಗೆ ಸೇರುವ ಯುವಕರು, ಸವಾಸೇರು ಗೋಧಿ ಸಾಲಕ್ಕೆ ಜೀವನವಿಡೀ ಜೀತ ಮಾಡುವವರು. ಕತೆಗಾರನೊಬ್ಬನ ಶ್ರೇಷ್ಠತೆ ಇರುವುದು ಅವರು ಪ್ರತಿಪಾದಿಸುವ ಸತ್ಯಗಳಲ್ಲಿ, ಹಸಿವಾಸ್ತವವನ್ನು ರೋಚಕವಾಗಿಸದೆ ಬಣ್ಣಿಸುವ ಕಲೆಯ ನೈಪುಣ್ಯದಲ್ಲಿ. ಮಿಲ್ಟನ್ ಮಹಾಕವಿಯ  ‘A good book is the precious lifeblood of a master spirit, embalmed and treasured upon purpose to a life beyond life’ ಎಂಬಂತೆ. ಪ್ರೇಮಚಂದ್ ಅವರು ಅರ್ಧ ಶತಮಾನದ ಹಿಂದೆ ಬರೆದ ಅನೇಕ ವಾಕ್ಯಗಳ ಸಾರ್ವತ್ರಿಕತೆ ಕತೆಗಾರನಾಗಿ ಅವರ ಶ್ರೇಷ್ಠತೆಗೂ, ಭಾರತದ ಬದಲಾಗದ ಅನೇಕ ಕ್ರೂರ ವಾಸ್ತವಗಳಿಗೂ ಕೈಗನ್ನಡಿಯಾಗಿವೆ.

‘ಮುಕ್ತಿಧನ’ ಕತೆಯ ಈ ವಾಕ್ಯವನ್ನು ನೋಡಿ ‘ ರಹಯಾನ ಒಬ್ಬ ಬಡರೈತ, ಬಡವರಿಗೆ ಎಲ್ಲರೂ  ಶತ್ರುಗಳೇ’ ಮನುಷ್ಯ ಉದಾರಿಯಾದಲ್ಲಿ  ದೇವತೆ ನೀಚನಾಗಿದ್ದರೆ ಅವನೇ ಸೈತಾನ್’. ಈ ವಾಕ್ಯ ಬಹುಶ: ಪ್ರೇಮಚಂದ್ ಅವರ ಇಡೀ ಜೀವನ ದೃಷ್ಟಿ, ದರ್ಶನವಾಗಿದೆ.

ಹರಕುಬಟ್ಟೆಯ ಕವಿಗಳು, ಬಡ ವಿಧವೆಯರ ಅನ್ನಕ್ಕೆ ಕನ್ನ ಹಾಕುವ ಧಣಿಗಳು, ತಮ್ಮ ಬಾವಿಯಿಂದ ನೀರು ಸೇದಲು ಕೂಡ ಬಿಡದ ಠಾಕೂರರು….ಹೀಗೆ ಅದೊಂದು ವೈವಿಧ್ಯಮಯ ಪ್ರಪಂಚ. ಇದರಲ್ಲಿನ ಕಲ್ಲು ಕರಗುವಂತಹ ಕತೆ ‘ಮುದಿ ಕಕ್ಕಿ’. ಮುದುಕಿಯಾಗಿರುವ ಕಣ್ಣು ಕಾಣಿಸದಿದ್ದ ಮುದಿಕಕ್ಕಿ. ಮನೆಯಲ್ಲೊಂದು ಸಮಾರಂಭ. ಕಣ್ಣು ಕಾಣಿಸದ ವಿಧವೆಯಾದ ಆ ಮುದುಕಿಯ ಹಸಿವು ಮತ್ತು ಬಾಯಿಚಾಪಲ್ಯದ ಬಗ್ಗೆ ಎಲ್ಲರಿಗೂ ತಾತ್ಸಾರ. ಆಕೆಯ ಅಕ್ಕೆಯ ಮೊಮ್ಮಗು  ತಂದುಕೊಟ್ಟ ಪೂರಿ ಆಕೆಯ ಹಸಿವನ್ನು ಮತ್ತಷ್ಟು ಕೆರಳಿಸಿ, ಆಕೆ ಅತಿಥಿಗಳು ಊಟ ಮಾಡಿದ ಎಂಜಲೆಲೆಗಳಿಂದ ಹೆಕ್ಕಿ ಊಟ ಮಾಡುತ್ತಾಳೆ.  ಹಸಿವಿನ ಆತುರದಿಂದ ಬುದ್ಧಿಗೆಟ್ಟ ಮುದುಕಿ, ಎಲೆಗಳಿಂದ ಪೂರಿಗಳ ತುಂಡನ್ನು ಹೆಕ್ಕಿ ಹೆಕ್ಕಿ ತಿನ್ನುತ್ತಾ ‘ಅಬ್ಬ ಮೊಸರು ರುಚಿಯಾಗಿತ್ತು? ಕಚೋರಿಗಳು ಎಷ್ಟು ಮೃದುವಾಗಿವೆ?!’ ಎನ್ನುತ್ತಿರುತ್ತಾಳೆ. ಹಸಿವಿನ, ದೈನ್ಯದ, ಹಂಗಿನ ಬದುಕು ಅನುಭವಿಸಿದ ಯಾರೇ ಆದರೂ ಈ ಸಾಲುಗಳಿಗೆ ಮಿಡಿಯದಿರಲಾರರು.

ಟಿ.ಎಸ್.ಲಲಿತಾ-ಸುಂದರೇಶನ್ ದಂಪತಿ

ಒಬ್ಬ ಆರ್ಟಿಸ್ಟ್ ಆಗಿರುವಂತಹ ಪ್ರೇಮಚಂದ್ ರ ಕತೆಯಲ್ಲಿ ಕ್ಷಮೆಗೂ ಉನ್ನತ ಸ್ಥಾನವಿದೆ. ತನ್ನ ತಪ್ಪಿನ ಅರಿವಾದ ಸೊಸೆ ರೂಪ, ತನ್ನಿಂದಾದ ಅನ್ಯಾಯವನ್ನು ಮನಗಾಣುತ್ತಾಳೆ. ‘ಅರ್ಧರಾತ್ರಿಯಾಗಿತ್ತು. ಆಕಾಶದಲ್ಲಿ ನಕ್ಷತ್ರಗಳ ಹರಿವಾಣ ಸಜ್ಜಾದಂತಿತ್ತು…ಏಳು ಕಾಕಿ, ಊಟ ಮಾಡು. ಇಂದು ನನ್ನಿಂದ ದೊಡ್ಡ ತಪ್ಪಾಗಿದೆ.  ಅದರ ಬಗ್ಗೆ ಬೇಸರಿಸಿದೆ ನನ್ನ ತಪ್ಪನ್ನು ಮನ್ನಿಸುವಂತೆ ಆ ಪರಮಾತ್ಮನನ್ನು ಪಾರ್ಥಿಸು’ ಎಂದು ಗದ್ಗದಿತಳಾಗಿ ಹೇಳಿದಳು ರೂಪ.

ಈ ಕತೆಗಳ ಓದು ನನ್ನನ್ನೊಂದು ಮುಗ್ಧವಾದ, ಶುದ್ಧ ಅಂತ:ಕರಣದ ಪ್ರಪಂಚಕ್ಕೆ ಕರೆದೊಯ್ಯಿತು.  ನಾವು ಹೆಚ್ಚು ಒಳ್ಳೆಯವರಾಗಲು, ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯರಾಗಲು ಈ ರೀತಿಯ ಸ್ವಚ್ಛ ಸಾಹಿತ್ಯದ ಓದು ಇನ್ನಿಲ್ಲದಂತೆ ಅವಶ್ಯವಾಗಿದೆ.  ಈ ಕತೆಗಳನ್ನು ಅನುವಾದಿಸಿದ ಟಿ. ಎಸ್. ಲಲಿತಾ ಅವರು ಅಭಿನಂದನಾರ್ಹರು . ಈಗಾಗಲೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿರುವ ಅವರ ಲೇಖನಿಯಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ನಮ್ಮ ಆಶಯ.’

 – ಜಯಶ್ರೀ. ಬಿ.ಕದ್ರಿ

2 Responses

  1. Shruthi Sharma says:

    ತುಂಬಾ ಅದ್ಭುತವಾಗಿ ಬರೆದಿದ್ದೀರಿ.

  2. Kiran . says:

    Good read

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: