ದಂತ ಪುರಾಣ …
ಮೊನ್ನೆ ನನ್ನ ಚಿಕ್ಕ ಮಗಳು ನನ್ನಲ್ಲಿ ಅವಳ ಹಲ್ಲೊಂದು ಸಡಿಲವಾಗಿ ಅಲುಗಾಡುತ್ತಿದೆ ದಂತ ವೈದ್ಯರ ಹತ್ತಿರ ಹೋಗಬೇಕು ಎಂದಳು.ಜೊತೆಗೆ ಮಡದಿಯಿಂದ ವಕಾಲತ್ತು .. ಬೇಗನೆ ಕಿತ್ತರೆ ಒಳ್ಳೆಯದು .. ಇಂದೇ ಹೋಗೋಣ …
ನಾನು ದೀರ್ಘ ಶ್ವಾಸ ಬಿಟ್ಟು .. “ಅದೆಲ್ಲಾ ಬೇಡ .. ಬಾ ಹತ್ತಿರ ನಾನೇ ಕಿತ್ತು ಬಿಡುತ್ತೀನಿ” ಎಂದು ಹತ್ತಿರ ಕರೆದೆ. ಈ ಹಲ್ಲು ಕೀಳುವುದು ಎಂದರೆ ಬರಿಯ ದಂತ ವೈದ್ಯರಿಗೆ ಮಾತ್ರ ಸಾಧ್ಯವಾಗುವುದು ಎಂದು ಅವರಿಬ್ಬರ ಅನಿಸಿಕೆ …
ನಾನು ಮಗಳನ್ನು ಹತ್ತಿರ ಕರೆದು ಮೆತ್ತಗೆ ಹಲ್ಲನ್ನು ಅಲುಗಾಡಿಸ ತೊಡಗಿದೆ .. ಉಹೂಂ . ಬೇಗನೆ ಬರಲಿಲ್ಲ .. ಮಗಳು ಬೊಬ್ಬೆ ಹಾಕಲು ಪ್ರಾರಂಭಿಸಿದಳು.ಮಡದಿಯೂ ಓಡೋಡಿ ಬಂದು .. ಮೊದಲ ಹಲ್ಲು/ಹಾಲು ಹಲ್ಲು … ದಂತ ವೈದ್ಯರ ಬಳಿ ಹೋಗೋಣ ಅಂದಳು …ನನ್ನ ಪ್ರಯತ್ನ ವಿಫಲವಾದಾಗ ನಾನು ಸರಿ ಎಂದು ಹೂಂ ಗುಟ್ಟಿದೆ.
ಹೌದು ..ಇಂದಿನ ಮಕ್ಕಳಿಗೆ ಹಲ್ಲಿನಲ್ಲಿ ಹುಳುಕು .. ದಂತ ವೈದ್ಯರ ಸಲಹೆ ಇದೆಲ್ಲಾ ಮಾಮೂಲಿ.ಬಹುಶಃ ಇಂದಿನ ಆಹಾರ .. ಚಾಕಲೇಟ್ ಗಳು ಇನ್ನಿತರ ವಸ್ತುಗಳ ಅತಿಯಾದ ಸೇವನೆಯೂ ಇದಕ್ಕೆ ಕಾರಣವಿರಬಹುದು.
ನಾನು ಮಗಳನ್ನು ಪಕ್ಕದಲ್ಲಿ ಕುಳ್ಳಿರಿಸಿ ಕಥೆ ಹೇಳಲು ಪ್ರಾರಂಭಿಸಿದೆ ..ನೋಡು ನಿದಾ .. ನಾನು ಚಿಕ್ಕವನಿದ್ದಾಗ ಹಲ್ಲು ಎಲ್ಲಾದರೂ ಸಡಿಲವಾಗಿ ಅಲುಗಾಡತೊಡಗಿದರೆ ಪಕ್ಕದ ಮನೆಯ ದೊಡ್ಡಮ್ಮನ ಹತ್ತಿರ ಹೋಗುತ್ತಿದ್ದೆ. ಅವರು ನನ್ನಲ್ಲಿ ಏನೇನೋ ಪ್ರಶ್ನೆ ಕೇಳುತ್ತಾ, ಕಥೆ ಹೇಳುತ್ತಾ ಮೆತ್ತಗೆ ಹಲ್ಲನ್ನು ಅಲುಗಾಡಿಸಿ ಕೈಗೆ ಹಲ್ಲನ್ನು ಕಿತ್ತು ಕೊಡುತ್ತಿದ್ದರು .. ಆಕೆಯೇನೂ ದಂತ ವೈದ್ಯೆ ಆಗಿರಲಿಲ್ಲ.ನಂತರ ನೆತ್ತರು ಬಂದಾಗ ಆ ಭಾಗಕ್ಕೆ ಶುಭ್ರ ಬಿಳಿ ಬಟ್ಟೆಯನ್ನು ಒತ್ತಿ ಹಿಡಿಯುತ್ತಿದ್ದೆವು .. ಉಪ್ಪು ನೀರಿನಲ್ಲಿ ಬಾಯಿ ತೊಳೆಯುತ್ತಿದ್ದೆವು.ಒಂದೆರಡು ಗಂಟೆಯೊಳಗೆ ನೋವು ಮಾಯ. ಕೆಲವು ದಿನಗಳಲ್ಲಿ ಹೊಸ ದಂತದ ಆಗಮನ ..
ಇನ್ನು ಆ ಕಿತ್ತು ಬಂದ ಹಲ್ಲನ್ನು ಅಲ್ಲಿಲ್ಲಿ ಎಸೆಯುವ ಪರಿಪಾಠ ಇರಲಿಲ್ಲ .. ಶುಭ್ರವಾಗಿ ತೊಳೆದು ಬಿಳಿ ವಸ್ತದಿಂದ ಕಟ್ಟಿ ನಂತರ ” ಹಳೆ ಹಲ್ಲು ಹೋಗಿ ಹೊಸ ಹಲ್ಲು ಬರಲಿ” ಎನ್ನುತ್ತಾ ಆ ಹಲ್ಲನ್ನು ಮನೆಯ ಮಾಡಿಗೆ ಎಸೆಯುತ್ತಿದ್ದೆವು.
ಒಂದು ರೀತಿಯ ಆಚರಣೆ ಇದು ..ಇತರ ಧರ್ಮದವರಾದರೆ ಈ ಹಲ್ಲಿಗೆ ಸೆಗಣಿ ಲೇಪಿಸಿ .. (ಹಿಂದೂ ಸಂಪ್ರದಾಯದಂತೆ ಅದು ಕೂಡ ಶುದ್ಧ ಮಾಡುವುದು) ಮನೆಯ ಮಾಡಿಗೆ ಎಸೆಯುವುದು …
ನನ್ನ ಕಥೆ ಕೇಳಿ ಮಗಳು ತುಂಬಾ ಆಶ್ಚರ್ಯದಿಂದ ಕೇಳಿಸಿಕೊಳ್ಳುತ್ತಿದ್ದಳು.
ಹೌದು …
ಅಂದೆಲ್ಲಾ ಇಂದಿನಂತೆ ದಂತ ವೈದ್ಯರು ಇರಲಿಲ್ಲ .. ಇದ್ದರೂ ಇಂದಿನಂತೆ ಎಲ್ಲಾ ಕಡೆ ಇರುತ್ತಿರಲಿಲ್ಲ. ತುಂಬಾ ಕಡಿಮೆ.
ಚಿಕ್ಕ ಹಲ್ಲು ನೋವಿಗೆ ನಾಟಿ ಮದ್ದು ಅಥವಾ ಲವಂಗ/ ಲವಂಗದ ಎಣ್ಣೆ ಲೇಪಿಸಿದರೆ ಹಲ್ಲು ನೋವು ಕೂಡಾ ವಾಸಿಯಾಗುತ್ತಿತ್ತು. ಇಂದಿನಂತೆ ಪೈನ್ ಕಿಲ್ಲರ್ ಉಪಯೋಗಿಸುವ ಸಂಭವ ಇರಲಿಲ್ಲ.
ಟೂತ್ ಪೇಸ್ಟ್ ಅಂದರೆ ಕಾಲ್ಗೇಟ್ .. ಅದರಲ್ಲಿ ಉಪ್ಪು ಇದೆಯಾ ಮೆಣಸು ಇದೆಯಾ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ .. ಅದೂ ಇಲ್ಲ ಅಂದರೆ ಮಾವಿನ ಎಲೆಯೋ ಗೇರು ಹಣ್ಣಿನ ಎಲೆಯೋ ದಂತವನ್ನು ಶುಭ್ರ ಮಾಡುತ್ತಿತ್ತು ..
ಇನ್ನಷ್ಟು ಹಿಂದಿನ ತಲೆಮಾರಿನತ್ತ ನೋಡಿದರೆ ಇದ್ದಿಲು/ಮಸಿ ಅಥವಾ ಭತ್ತದ ಹೊರ ಪದರು/ಉಮಿ(ಗ್ರಾಮ್ಯ ಭಾಷೆ) ಅಥವಾ ತೆಂಗಿನ ಕಾಯಿ ಚಿಪ್ಪಿನ ಬ್ರಶ್ ..
ಮಾತು ಮುಗಿಸುವ ಮುನ್ನ ಮಡದಿ ರೆಡಿಯಾಗಿ ನಿಂತಿದ್ದಳು …
ಸರಿ .. ನಾವು ಮೂವರೂ ಪೇಟೆಗೆ ತೆರಳಿದೆವು. ಐದು ಪೈಸೆ ಖರ್ಚಿಲ್ಲದೆ ಮಾಡಬಹುದಾದ ಕೆಲಸ .. ಅಂತೂ ಕಿಸೆಗೆ ನಾಲ್ಕೈದು ಗಾಂಧಿ ನೋಟು ತುರುಕಿಸಿದೆ..
ಅಲ್ಲಿ ನೋಡಿದರೆ ತುಂಬಾ ರಶ್.. ಒಂದು ಗಂಟೆ ಕಾದ ನಂತರ ವೈದ್ಯರು ಒಳಗೆ ಕರೆದರು ..
ಒಂದು ಕಟಿಂಗ್ ಪ್ಲೇರ್ ಥರದ ವಸ್ತುವಿನಿಂದ ಒಂದೇ ನಿಮಿಷದಲ್ಲಿ ಹಲ್ಲು ಕಿತ್ತು ಬಿಟ್ಟರು. ಜೊತೆಗೆ ನಾಲ್ಕೈದು ವಿಧದ ಔಷಧಿ ಗಳು/ಆಂಟಿ ಬಯೋಟಿಕ್ ಗಳು …
ನೋವು ಜಾಸ್ತಿಯಿದ್ದರೆ ಇನ್ನೊಂದು .. ನೋವು ಕಡಿಮೆಯಾಗದಿದ್ದರೆ ಎರಡು ದಿವಸ ಬಿಟ್ಟು ಬನ್ನಿ ಎನ್ನುವ ಪುಕ್ಕಟೆ ಸಲಹೆ. ಜೇಬಿನಿಂದ ಗಾಂಧಿ ನೋಟು ವೈದ್ಯರ ಕೈ ಸೇರಿತ್ತು.
ನಾನು ಆ ಹಲ್ಲನ್ನೇ ನೋಡುತ್ತಿದ್ದೆ …
ಅದು ಕಸದ ಬುಟ್ಟಿಗೆ ಬಿದ್ದಿತ್ತು .. ಯಾವುದೇ ಆಚರಣೆಯಿಲ್ಲ .. ಒಮ್ಮೆ ಭಾವಿಸಿದೆ .. ಆ ಹಲ್ಲನ್ನು ತೆಗೆದುಕೊಂಡು ಬಂದು ಅದನ್ನು ಶಾಸ್ತ್ರೀಯ ರೀತಿಯಿಂದ ದಫನ ಮಾಡೋಣ ಎಂದು ..
ಇನ್ನೊಂದು ಚಿಂತೆ .. ಕಾಂಕ್ರೀಟ್ ಹಾಕಿದ ಮನೆಯಲ್ಲಿ ಮಾಡು ಎಲ್ಲಿ … ?
ನನ್ನ ಹುಚ್ಚು ಆಲೋಚನೆಗಳು .. ಸುಮ್ಮನಾದೆ.
ಮತ್ತೆ ಮಡದಿಯ ಇನ್ನೊಂದು ಸಲಹೆ ..
ಹಲ್ಲು ತೆಗೆದರೆ ಐಸ್ ಕ್ರೀಮ್ ತಿನ್ನಬೇಕು … ಕೇವಲ ಮಗಳಿಗೆ ಮಾತ್ರ ತೆಗೆದು ಕೊಟ್ಟರೆ ಸಾಕೇ … ?.
ನೇರವಾಗಿ ಐಸ್ ಕ್ರೀಮ್ ಅಂಗಡಿಯತ್ತ ಹೆಜ್ಜೆ . ಮೂವರೂ ತಿಂದು ಎದ್ದಾಗ … ಅಲ್ಲೂ ಗಾಂಧಿ ನೋಟುಗಳು ಪರಾರಿ …
ಇಂದಿನ ದಿನಗಳಲ್ಲಿ ದಂತ ವೈದ್ಯರ ಹತ್ತಿರ ಹೋಗುವುದೇ ಒಂದು ದೊಡ್ಡ ಪ್ರಹಸನ …
ಅಂತೂ ಒಂದು ಹಲ್ಲಿನೊಂದಿಗೆ ನನ್ನ ಕೈ ಬಿಟ್ಟದ್ದು ಹಲವು ಗಾಂಧಿ ನೋಟುಗಳು … !!!
– ಕೆ. ಎ. ಎಂ. ಅನ್ಸಾರಿ ಮೂಡಂಬೈಲ್
‘ದಂತ’ಕತೆ ಚೆನ್ನಾಗಿದೆ ..