ಗರಡಿ ಮನೆಯಿಂದ ಮೋರ್ಚರಿ ವರೆಗೆ ..
ಸುಮಾರು ಹತ್ತು ಹದಿನಾಲ್ಕು ವರುಷದ ಹಿಂದಿನ ಕಥೆ ..
ಆತನ ಹೆಸರು ಶಿಹಾಬ್. ಮೂಲತಃ ಸುಳ್ಯ ದವನು. ಊರಿನಲ್ಲೇ ಪದವಿ ಮುಗಿಸಿ ಬೆಂಗಳೂರಿಗೆ ಬಂದು NIIT ಯಲ್ಲಿ ಕಂಪ್ಯೂಟರ್ ವಿದ್ಯಾಭ್ಯಾಸ ಮಾಡುತ್ತಿದ್ದ.
ನನಗೆ ಈತ ಪರಿಚಯವಾದದ್ದು ಒಂದು ಗರಡಿ ಮನೆಯಲ್ಲಿ.
ನಗರದಲ್ಲಿ ಒಂದು ಕೇರಳ ಜಮಾತ್ ಮಸೀದಿ .. ಪಕ್ಕದಲ್ಲಿ ಆಸ್ಪತ್ರೆ .. ಅದರ ಎದುರುಗಡೆ ಒಂದು ಸರ್ಕಾರಿ ಶಾಲೆ ..
ಈ ಶಾಲೆಯ ಪಕ್ಕದ ಒಂದು ಕೊಠಡಿಯೇ ಇಲ್ಲಿ ಗರಡಿ ಮನೆ.
ಈ ಶಿಹಾಬ್ ನನ್ನ ಹಾಗೆ ಬೊಜ್ಜು ಬೆಳೆಸಿ ಕೊಂಡವನಲ್ಲ. ಆದರೂ ದಿನನಿತ್ಯ ಬೆಳಗ್ಗಿನ ಜಾವ ಸುಮಾರು ಆರು ಘಂಟೆಗೆ ಗರಡಿ ಮನೆಯಲ್ಲಿ ಹಾಜರ್.
ನಾನು ಕಷ್ಟಪಟ್ಟು ಒಂದು ನಾಲ್ಕು ಸುತ್ತು ಆ ಶಾಲೆಯ ಮೈದಾನದಲ್ಲಿ ಓಡುತ್ತಿದ್ದೆ. ನಂತರ ಸ್ವಲ್ಪ ದೇಹ ದಂಡನೆ. ಸುಮಾರು ಒಂದು ಗಂಟೆ ಅಲ್ಲಿ ಕಳೆದು ಪಕ್ಕದ ಮಲಯಾಳಿ ಹೋಟೆಲ್ ನಲ್ಲಿ ಚಹಾ ಕುಡಿದು ಹಿಂತಿರುಗುತ್ತಿದ್ದೆವು .
ಆಧುನಿಕ ಸಲಕರಣೆಗಳೇನೂ ಇಲ್ಲದ ಒಂದು ಹಳ್ಳಿಯ ಗರಡಿ ಮನೆಯಂತಿತ್ತು ಈ ವ್ಯಾಯಾಮ ಶಾಲೆ.
ಗರಡಿ ಮನೆತುಂಬಾ ದಷ್ಟ ಪುಷ್ಟವಾದ ಯುವಕರು ..
ಮೊದಮೊದಲು ನನಗೆ ಇಲ್ಲಿ ಇವರೊಂದಿಗೆ ಜೊತೆಗೂಡಿ ವ್ಯಾಯಾಮ ಮಾಡಲು ನಾಚಿಕೆಯಾಗುತ್ತಿತ್ತು.
(ಸುಮಾರು ಇಪ್ಪತ್ತು ವರುಷಗಳಿಂದ ನಾನು ಈ ಬೆಳೆದ ಬೊಜ್ಜು ಕರಗಿಸಲು ಕಸರತ್ತು ಮಾಡುತ್ತಿದ್ದರೂ ಇಂದಿನ ವರೆಗೂ ಫಲ ಕಾಣಲಿಲ್ಲ ಎನ್ನುವುದು ಒಪ್ಪಿಕೊಳ್ಳಬೇಕಾದ ಸತ್ಯ).
ನಾನು ಹೇಳಹೊರಟಿರುವ ವಿಷಯದ ಪ್ರಸ್ತಾವನೆಗೆ ಮೊದಲು ಅಲ್ಲಿ ನಮ್ಮೆಲ್ಲರನ್ನೂ ಹೊಟ್ಟೆ ಹುಣ್ಣಾಗುವಷ್ಟು ನಗುವಂತೆ ಮಾಡಿದ ಘಟನೆಯನ್ನು ಚಿಕ್ಕ ವಿವರಣೆಯೊಂದಿಗೆ ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ.
ಈ ಗರಡಿ ಮನೆಗೊಂದು ಕಾವಲುಗಾರ . ಹೆಸರು ಕೃಷ್ಣಪ್ಪ.
ಒಂದು ದಿನ ನಾವು ಬೆಳಗ್ಗೆ ಸುಮಾರು ಏಳು ಗಂಟೆಗೆ ಮೈದಾನದಲ್ಲಿ ಇದ್ದೆವು. ಜೊತೆಯಲ್ಲಿ ಕೃಷ್ಣಪ್ಪ .
ಮೇಲಿನಿಂದ ವಿಮಾನವೊಂದು ಹಾರುತ್ತಿತ್ತು ..
ಆತ ಬೇಗನೆ ಓಡೋಡಿ ಹೋಗಿ ಕೊಠಡಿಯೊಳಗೆ ನುಗ್ಗಿದ .. ನಮ್ಮನ್ನೂ ಒಳಗಡೆ ಕರೆಯುತಿದ್ದ.
ನಂತರವೇ ಗೊತ್ತಾಗಿದ್ದು ಅವನು ನಮ್ಮ ತಲೆಮೇಲೆ ವಿಮಾನ ಹಾರಾಡುವಾಗ ಒಳಗೆ ಓಡಿ ಹೋದ ಹಿಂದಿರುವ ರಹಸ್ಯ …
ವಿಮಾನದ ಟಾಯ್ಲಟ್ ನಲ್ಲಿ ಯಾರಾದರೂ ಆಫ್ ಲೋಡ್ ಮಾಡುತ್ತಿದ್ದರೆ ನಾವು ಕೆಳಗಡೆ ಇದ್ದವರಿಗೂ ಅದರ ಅಭಿಷೇಕ ಆಗುವುದಂತೆ .. !!! ಅಂತೂ ಈತನ ಮೌಢ್ಯ ಕಂಡು ನಮಗೆ ನಕ್ಕೂ ನಕ್ಕು ಸುಸ್ತಾಗಿತ್ತು. ನಿಮಗೆ ಓದುಗರಿಗೆ ಇದೊಂದು ಜೋಕ್ ತರ ಕಾಣಿಸಿದರೂ ಇದೊಂದು ಸತ್ಯ ಘಟನೆ.
ಅದೇನೇ ಇರಲಿ ..
ಬೆಳಿಗ್ಗೆ ಮಾತ್ರ ಕಾಣುತ್ತಿದ್ದ ಈತ ನಂತರದ ದಿನಗಳಲ್ಲಿ ತುಂಬಾ ಹತ್ತಿರದವನಾದಾಗ ಸಂಜೆಯ ಹೊತ್ತಿನಲ್ಲೂ ಈತನ ಬಳಿ ತೆರಳಿ ಮಾತುಕತೆ ನಡೆಸುತ್ತಿದ್ದೆ.ಅಲ್ಲಿ ಈತನ ಇನ್ನೊಬ್ಬ ಗೆಳೆಯನಿದ್ದ .ಹೆಸರು ಶರೀಫ್.ಆತನ ಕೊಠಡಿಯ ಪಕ್ಕದಲ್ಲಿ ನಾವು ನಾಲ್ಕೈದು ಜನ ಸೇರುತ್ತಿದ್ದೆವು. ಪಕ್ಕದ ದರ್ಶಿನಿ ಹೋಟೆಲ್ ನ ಮಾಲೀಕ ನಾರಾಯಣ ಭಟ್ಟ, ಗೂಡಂಗಡಿ ಗೌಡ್ರು, ಸಮದ್ ಮತ್ತು ಕಂಪ್ಯೂಟರ್ ಶಾಪ್ ನ ಚೇತನ್ …ಅದೊಂದು ದಿನ ಈತ ಬೆಂಗಳೂರು ಬಿಟ್ಟು ಊರಿಗೆ ಹೋಗುವ ಸನ್ನಾಹದಲ್ಲಿದ್ದ.
ಮುಂದಿನ ತಿಂಗಳು ಮೂರನೇ ತಾರೀಕಿನಂದು ಕೊಲ್ಲಿ ರಾಷ್ಟ್ರಕ್ಕೆ ಹೋಗಲು ವೀಸಾ ರೆಡಿಯಾಗಿತ್ತು. ಈತ ಮತ್ತು ಶರೀಫ್ ಸುಳ್ಯಕ್ಕೆ ತೆರಳುವ ಖಾಸಗಿ ಬಸ್ ನಲ್ಲಿ ತಮ್ಮ ಲಗ್ಗೇಜ್ ಗಳನ್ನು ಒಂದು ದಿನ ಮೊದಲೇ ಊರಿಗೆ ಪಾರ್ಸೆಲ್ ಮಾಡಿ ಬಂದಿದ್ದರು.
ಬೆಳಗ್ಗಿನ ಜಾವ ಅವರ ಯಮಹಾ ಬೈಕ್ ನಲ್ಲಿ ಊರಿಗೆ ತೆರಳಲು ಪ್ಲಾನ್ ಮಾಡಿದ್ದರು.
ಫುಲ್ ಟಾಂಕ್ ಪೆಟ್ರೋಲ್ ಹಾಕಲಾಯಿತು .. ಆದರೆ ಟಾಂಕ್ ಸೋರುತ್ತಿರುವುದು ಗಮನಕ್ಕೆ ಬಂದಾಗ ರಾತ್ರಿಯೇ ಹೋಗಿ ಸರಿ ಮಾಡಿಸಿಕೊಂಡು ಬಂದಿದ್ದರು.
ಸರಿ ..
ರಾತ್ರಿ ಸುಮಾರು ಹತ್ತು ಘಂಟೆಗೆ ಎಲ್ಲರೂ ಮಗದೊಮ್ಮೆ ಅಲ್ಲಿ ಸೇರಿದರು ..
ಆ ಹೊತ್ತಿನಲ್ಲಿ ಒಂದು ಚಿಕ್ಕ ಬೀಳ್ಕೊಡುವ ಸಮಾರಂಭ.
ಇಲ್ಲಿ ತಮಾಷೆಗೆಂದು ಹೋಟೆಲ್ ನ ನಾರಾಯಣ ಭಟ್ಟರು ಒಂದು ಮಾತು ಹೇಳಿದರು … ” ನಮ್ಮೆಲ್ಲರನ್ನು ಬಿಟ್ಟು ಹೋಗುತ್ತಿರುವ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ .. ”
ಅದೊಂದು ತಮಾಷೆ ಅಷ್ಟೇ ಆಗಿತ್ತು ..
ಆದರೆ ನಡೆದದ್ದು … ???
ಇಬ್ಬರೂ ಮೈಸೂರು ಮಾರ್ಗವಾಗಿ ಸುಳ್ಯ ಹೋಗುತ್ತಿರಲು ಸರ್ಕಾರಿ ಬಸ್ಸೊಂದು ಇವರನ್ನು ತಳ್ಳಿ ಹಾಕಿತ್ತು.
ಚಾಲಕ ಬಸ್ ನಿಲ್ಲಿಸದೆ ಹೋಗಿದ್ದ …
ಷರೀಫ್ ಮತ್ತು ಶಿಹಾಬ್ ಇಬ್ಬರೂ ಪಕ್ಕದ ಹೊಂಡಕ್ಕೆ ಬಿದ್ದರು ..
ಬೈಕ್ ಚಲಾಯಿಸುತ್ತಿದ್ದ ಶಿಹಾಬ್ ಅಂಗಾತ ಮಲಗಿದ್ದ .. ಯಾರೂ ಇವರಿಬ್ಬರನ್ನು ನೋಡಿರಲಿಲ್ಲ .. !!!
ಸ್ವಲ್ಪ ತಡವಾಗಿ ಎದ್ದ ಶರೀಫ್ ಅಂಗಾತ ಮಲಗಿದ್ದ ಶಿಹಾಬ್ ನನ್ನ ಕೂಗಿ ಕರೆಯುತ್ತಿದ್ದ .. ಆದರೆ ಮಾತಿಲ್ಲ …
ನಂತರ ಇನ್ನಾರದೋ ಸಹಾಯದಿಂದ ಇವರಿಬ್ಬರನ್ನೂ ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಶರೀಫ್ ಚಿಕ್ಕ ಪುಟ್ಟ ಗಾಯಗಳಿಂದ ಚೇತರಿಸುತ್ತಿದ್ದ.. ಆದರೆ ಶಿಹಾಬ್ ಕೋಮಾ ಹಂತಕ್ಕೆ ತಲುಪಿದ್ದ.
ಇಲ್ಲೂ ಮಾನವೀಯತೆ ಮಾಯವಾದ ಒಂದೆರಡು ಘಟನೆಗಳಿವೆ ..
ಅಂಗಾತವಾಗಿ ಬಿದ್ದಿದ್ದ ಶಿಹಾಬ್ ನನ್ನ ಕೆಳಗಿನ ಹಳ್ಳದಿಂದ ಮೇಲೆತ್ತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಹಾಯಕ್ಕೆ ಕೂಗಿದರೂ ಸುಮಾರು ಒಂದು ಘಂಟೆ ಕಾಲ ಯಾರೂ ಇವರನ್ನು ನೋಡಿ ವಾಹನ ನಿಲ್ಲಿಸಿ ವಿಚಾರಿಸಿಲ್ಲ .. !!!
ಕೊನೆಗೆ ಕಷ್ಟಪಟ್ಟು ಯಾವುದೋ ವಾಹನದಲ್ಲಿ ಆಸ್ಪತ್ರೆ ತಲುಪಿಸಿವ ಮಧ್ಯೆ ಶಿಹಾಬ್ ನ ಕಯ್ಯಲ್ಲಿದ್ದ ಗಡಿಯಾರವನ್ನು ಕೂಡಾ ದೋಚಿಯಾಗಿತ್ತು .. !!!
ಸುಮಾರು ಒಂದು ವಾರಗಳ ಕಾಲ ಮೈಸೂರಿನ ಆಸ್ಪತ್ರೆಯಲ್ಲಿ ಚೇತರಿಕೆ ಕಾಣದಿದ್ದಾಗ ಆತನನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲು ಕುಟುಂಬದವರು ತೀರ್ಮಾನಿಸಿದ್ದರು.
ಆ ದಿನ ರಾತ್ರಿ ಗೆಳೆಯ ಸಮದ್ ನನಗೆ ಕಾಲ್ ಮಾಡಿ .. ” ಶಿಹಾಬ್ ನನ್ನ ನಾಳೆ ಬೆಳಿಗ್ಗೆ ಮಣಿಪಾಲ್ ಆಸ್ಪತ್ರೆಗೆ ಕರೆತರುತ್ತಾರಂತೆ. ನಾವು ನಾಳೆ ಬೆಳಿಗ್ಗೆನೇ ಹೋಗೋಣ” ಎಂದ.
ನಾನೂ ಒಪ್ಪಿದ್ದೆ.
ಆದರೆ ವಿಧಿ ಬರಹ ಬೇರೆಯೇ ಆಗಿತ್ತು …
ಮೈಸೂರಿನಿಂದ ಬೆಂಗಳೂರಿಗೆ ಕರೆತರುವ ದಾರಿ ಮಧ್ಯೆ ಶಿಹಾಬ್ ಕೊನೆಯುಸಿರೆಳೆದಿದ್ದ.
ಬೆಳಗ್ಗೆ ನನಗೆ ಈ ವಿಷಯ ಸಮದ್ ತಿಳಿಸಿದ. ನಾವಿಬ್ಬರೂ ಮಣಿಪಾಲ್ ಆಸ್ಪತ್ರೆಯತ್ತ ದೌಡಾಯಿಸಿದೆವು. ಸುಮಾರು ಹೊತ್ತು ಅವನ ಅಂತಿಮ ದರ್ಶನಕ್ಕೆ ಕಾದೆವು.
ಆದರೆ ಮರಣದ ಕಾರಣ ಅಪಘಾತವಾದುದರಿಂದ ಶವವನ್ನು ಅಷ್ಟು ಬೇಗ ನಮಗೆ ನೋಡುವಂತಿರಲಿಲ್ಲ .. ಮರಣಾನಂತರದ ಕೆಲವೊಂದು ಕಟ್ಟುಪಾಡುಗಳಿದ್ದುವು.
ನಮ್ಮಿಬ್ಬರಿಗೂ ಕಾದು ಕಾದು ಸುಸ್ತಾಗಿತ್ತು ..
ಕೊನೆಗೆ ನಾನೆಂದೆ .. ” ಸಮದ್ .. ನಾವು ಹಿಂತಿರುಗೋಣ .. ಆತನ ಮೊಗ ನಾನು ನೋಡುವುದಿಲ್ಲ ..
ಆ ಲವಲವಿಕೆಯ ಮೊಗದ ನೆನಪು ಮಾತ್ರ ನಮ್ಮಿಬ್ಬರ ಮನಸ್ಸಲ್ಲಿ ಹಸಿರಾಗಿರಲಿ .. ಬೇಡ … ನಾವು ವಾಪಸ್ ಹೋಗಿ ಬಿಡೋಣ .. ”
ಆ ಹೊತ್ತಿಗಾಗಲೇ ಊರ ಪರವೂರ ಜನರು ಜಮಾಯಿಸಿದ್ದರು ..
ನಾವು ಅಂತಿಮ ದರ್ಶನಕ್ಕೆ ಕಾಯದೆ ಹಿಂತಿರುಗಿದೆವು .
ಆಪ್ತರು ಮೋರ್ಚರಿಯ ಮಂದಿ ನಿಂತು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಇನ್ನೂ ಕಣ್ಣ ಮುಂದಿದೆ.
ಶರೀಫ್ ಚೇತರಿಸಿದ್ದ .. ನಂತರ ಷರೀಫ್ ಕೆಲವು ವರ್ಷ ಆಸ್ಟ್ರೇಲಿಯಾದಲ್ಲಿದ್ದ. ಇಂದಿಗೂ ಆ ಘಟನೆ ವಿವರಿಸುವಾಗ ಷರೀಫ್ ನ ಕಣ್ಣಲ್ಲಿ ನೀರು ತುಂಬುತ್ತದೆ.
ನಾವು ಹಿಂತಿರುಗಿದೆವು ..
ಇಲ್ಲಿ ನಮ್ಮ ಕೊಠಡಿಯಲ್ಲಿ ಹೋಟೆಲ್ ಮಾಲಿಕ ನಾರಾಯಣ ಭಟ್ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.
ಸುಮ್ಮನೆ ತಮಾಷೆಗೆ ಆಡಿದ ಮಾತು ದಿಟವಾಗಿತ್ತು .. !!!
ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ..
‘
-ಕೆ. ಎ. ಎಂ. ಅನ್ಸಾರಿ