ವರ್ಷ – ಹರ್ಷ
ಮಳೆ ಮಳೆ ಮಳೆ ಮಳೆ ಇಳಿದಿದೆ ಹನಿಹೊಳೆ
ಮುಗಿಲಿನ ಬಾಗಿಲ ತೆರೆಯುತಲಿ.
ಕಳೆ ಕಳೆಯಿಂದಲಿ ನಗುತಿಳೆ ಹಾಡಿದೆ ಕಥನಕುತೂಹಲ ರಾಗದಲಿ.
ಎಳೆಯೆಳೆ ಕಡಿಯದೆ ಸುರಿಯುತ ಬೆಸೆಯುತ
ಗಗನಕು ಭೂಮಿಗು ಸೇತುವೆಯ
ತಳೆತಳೆಯೆನ್ನುತ ಹಸಿರಿನ ಸಿರಿಮೊಗ
ಹಾಡಿದೆ ಮೀಟುತ ತಂಬುರಿಯ.
ತೊಳೆತೊಳೆಯೆನ್ನುತ ಜಳಕವ ಮಾಡಿಸಿ
ಹೊಳೆಸುತ ಗಿಡಮರಬಳ್ಳಿಗಳ
ಬೆಳೆಮೆಳೆ ಪೊದರುಗಳೆಲ್ಲವ ಮೀಯಿಸಿ
ಗುನುಗಿರುವುದಮೃತವರ್ಷಿಣಿಯ.
ಮೊಳೆಮೊಳೆ ಬೀಜವೆ ಕಳೆ ಬರವೆಲ್ಲವ-
ನಳಿಸುತ ಅಳಲಿನ ನೆನಹುಗಳ
ಅಳೆದಳೆಯುತ ಕಳಿಸುವ ಬಳ್ಳಗಳಲಿ
ಮಳೆಯುಲಿಯುತಿರುವುದೀ ಸ್ವರವ.
.
– ಭಾವನಾ
ಮಳೆಗಾಲದ ವರ್ಣನೆ ಎಷ್ಟೊಂದು ಚಂದ..!