ಯಶಸ್ಸಿಗೆ ಮೈಬಣ್ಣ ಯಾಕೆ?!

Share Button

ಶ್ರುತಿ ಶರ್ಮಾ, ಬೆಂಗಳೂರು

ಮಹಾಭಾರತದಲ್ಲಿ ದ್ರೌಪದಿಯನ್ನು ಅತ್ಯಂತ ಸುಂದರಿ ಎಂದು ವರ್ಣಿಸಲಾಗುತ್ತದೆ. ಆಕೆಗೆ “ಕೃಷ್ಣೆ” ಎಂಬ ಹೆಸರೂ ಇತ್ತು. ಕಥೆಯ ಪ್ರಕಾರ ಆಕೆಯ ಮೈಬಣ್ಣ ಕಪ್ಪಾಗಿದ್ದುದಕ್ಕೆ “ಕೃಷ್ಣೆ” ಎಂಬ ಹೆಸರಿತ್ತಂತೆ. ಭಾರತೀಯರಲ್ಲಿ ಸುಂದರಿಯರು ಎಂದು ಅರಿಯಲ್ಪಡುವ ಕೇರಳದ ಹೆಣ್ಣುಮಕ್ಕಳ ಬಣ್ಣವೂ ಸಾಧಾರಣವಾಗಿ ಉತ್ತರದವರಿಗೆ ಹೋಲಿಕೆ ಮಾಡಿದರೆ ಕಪ್ಪು-ನಸುಗಪ್ಪು. ಆದರೆ ಆಫ಼್ರಿಕನ್ನರಿಗೆ ಹೋಲಿಸಿದರೆ ಬೆಳ್ಳಗೆಯೇ! ಹಾಗಾದರೆ “ಬಿಳಿ”, “ಕಪ್ಪು” ಪದಗಳ ನಿರ್ವಚನ ಏನು?!

ಇದೆಲ್ಲಾ ಸತ್ಯಗಳು ಅಸ್ತಿತ್ವದಲ್ಲಿರುವ ನಮ್ಮ ಭಾರತದ ಮಾಧ್ಯಮಗಳಲ್ಲಿ ಆಗಾಗ, ಬಿಳಿಚಿಕೊಂಡಂತೆ ಕಾಣಿಸಿಕೊಳ್ಳುವ ಯಾಮಿ ಗೌತಮ್ ಫಳ್ಳನೆ ನಗುತ್ತಾ ಬಂದು ನಸುಗಪ್ಪು ಚರ್ಮದ ಮಂಕಾಗಿ ಕುಳಿತಿರುವ ಹುಡುಗಿಯೊಬ್ಬಳಿಗೆ ಫ಼ೇರ್ ಆಂಡ್ ಲವ್ಲಿ ಕೈಗಿತ್ತು ಯಶಸ್ಸಿನ ಬಗ್ಗೆ ಮಾತನಾಡುವ ಜಾಹೀರಾತು ಪ್ರಸಾರವಾಗುವಾಗ ಅಂದುಕೊಳ್ಳುತ್ತಿರುತ್ತೇನೆ, “ಯಶಸ್ಸಿಗೂ ಮೈಬಣ್ಣಕ್ಕೂ ಏನು ಸಂಬಂಧ”?

ಇನ್ನು, “ಸೌಂದರ್ಯ ವರ್ಧಕ” ಎಂದು ಕರೆಸಿಕೊಳ್ಳಲ್ಪಡುವ ಇಂತಹಾ ಪ್ರಾಡಕ್ಟ್ ಗಳ ಜಾಹೀರಾತುಗಳು ಮಾಡುತ್ತಿರುವುದೇನು?! ಸಾಧಾರಣ ಭಾರತೀಯ ಮನೆಗಳಲ್ಲಿ ನೋಡಲ್ಪಡುವ ಟಿವಿ ಕಾರ್ಯಕ್ರಮಗಳ ಮಧ್ಯೆ, ಧಾರಾವಾಹಿಗಳ ಮಧ್ಯೆ, ಯೂಟ್ಯೂಬ್ ವಿಡಿಯೋಗಳೊಂದಿಗೆ ಬರುವ ಇವರ ಜಾಹೀರಾತುಗಳಲ್ಲಿ ಇಲ್ಲಿ ಬೆಳ್ಳಗಿದ್ದರೆ ಮಾತ್ರ ಸೌಂದರ್ಯ, ಅದಿಲ್ಲದಿದ್ದರೆ ಆತ್ಮವಿಶ್ವಾಸ, ಯಶಸ್ಸು ಖಂಡಿತ ನಿಮಗಲ್ಲ – ಎಂದು ಬಿಂಬಿಸುವ ಮಾರ್ಕೆಟಿಂಗ್ ಪ್ರಯತ್ನಗಳು ಯಶಸ್ವಿಯಾಗಿ ನಡೆಯುತ್ತಿರುವಂತೆ, ಈ ಜಾಹೀರಾತು ಅದನ್ನು ವೀಕ್ಷಿಸುವ ನಸುಗಪ್ಪು ಬಣ್ಣದ ಹದಿಹರೆಯದ ಭಾರತೀಯ ಹೆಣ್ಣುಮಗಳೊಬ್ಬಳ ಮನದಲ್ಲಿ ಅದೆಂಥಹ ಕೋಲಾಹಲವನ್ನು ಉಂಟುಮಾಡಬಹುದು! ಆತ್ಮವಿಶ್ವಾಸದ ಕೊರತೆಯನ್ನು ಬಿತ್ತುವ ಕಾರ್ಯಕ್ರಮವೂ ಇದಲ್ಲವೇ?! ಒಬ್ಬಿಬ್ಬರಲ್ಲ, ಕೋಟ್ಯಂತರ ಹೆಣ್ಣುಮಕ್ಕಳ ಮನಸ್ಸಿಗೆ ಹುಳಬಿಡುವ ಕಾರ್ಯವನ್ನೂ ಈ ಕಂಪನಿಗಳು ಮಾಡುತ್ತಾ ಲಾಭ ಗಳಿಸುತ್ತಿವೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಲಭಿಸುವ ಇಂತಹ ಕ್ರೀಂ ಗಳನ್ನು ಕೊಳ್ಳುವುದೂ ಸುಲಭ, ಮೆತ್ತಿಕೊಳ್ಳುವುದೂ ಸುಲಭ, ಆದರೆ ಅದರ ಪರಿಣಾಮಗಳಿಂದ ಮಾನಸಿಕವಾಗಿಯೂ ಕುಗ್ಗುವ ಸಾಧ್ಯತೆ ಭವಿಷ್ಯದಲ್ಲಿರುತ್ತದೆಯೆಂಬುದು ತಿಳಿವ ವೇಳೆಗೆ ಸಮಯ ಮೀರಿ ಹೋಗಿರುತ್ತದೆ.

ಇನ್ನು ಕೆಲವು ಯಶಸ್ವೀ ಭಾರತೀಯ ಮಹಿಳೆಯರ ವಿಚಾರಕ್ಕೆ ಬರೋಣ. ಸೌಂದರ್ಯಕ್ಕೂ ಮಹತ್ವವೀಯುವ ಮಾಡೆಲಿಂಗ್ ಹಾಗೂ ನಟನೆಯ ಕ್ಷೇತ್ರವನ್ನೇ ತೆಗೆದುಕೊಂಡರೆ, ಹೊಳೆವ ಕಪ್ಪು ಚರ್ಮದ ಸುಂದರಿಯರು ಅದೆಷ್ಟು ಮಂದಿ ಇಲ್ಲ? ೨೦೦೮ರ ವಿಶ್ವ ಸುಂದರಿ ಸ್ಪರ್ಧೆಯ ಮೊದಲ ರನ್ನರ್ ಅಪ್ ಪಾರ್ವತಿ ಓಮನಕುಟ್ಟನ್; ಆಕೆಗೆ ಬೆಳ್ಳಗಿನ ಎದುರಾಳಿಗಳು ಬೇಕಾದಷ್ಟು ಮಂದಿ ಇದ್ದರು. ಆದರೆ ಆಕೆಯ ಬುದ್ಧಿಮತ್ತೆ ಹಾಗೂ ಸ್ಪರ್ಧೆಯ ಮುಂದೆ ಅವರಾರೂ ನಿಲ್ಲಲಿಲ್ಲ. ಪ್ರಿಯಾಂಕ ಚೋಪ್ರಾ, ಕಾಜೋಲ್, ನಟಾಶಾ ಶರ್ಮಾ, ನಂದಿತಾ ದಾಸ್, ಬಿಪಾಶಾ ಬಸು, ಮುಗ್ಧಾ ಗೊಡ್ಸೆ.. ಹೀಗೆ ಅದೆಷ್ಟು ಕಪ್ಪು ಮೈಬಣ್ಣದವರೆಂದೆನಿಸಿಕೊಂಡ ನಟೀ ಮಣಿಯರು, ರೂಪದರ್ಶಿಗಳಿಲ್ಲ ನಮ್ಮಲ್ಲಿ? ವಿವಿಧ ಕ್ಷೇತ್ರಗಳಲ್ಲಿ ಮಿಂಚಿದ ನೂರಾರು ಮಂದಿ ಸಾಧಕಿಯರು ಅವರವರ ಮೈಬಣ್ಣಕ್ಕೆ ಮಹತ್ವವಿಕ್ಕಿದ್ದರೆ ಇಂದು ಅವರಿರುವ ಸ್ಥಾನ ತಲುಪುತ್ತಿದ್ದರೋ ಇಲ್ಲವೋ! ನಟನೆಯಲ್ಲಿ ಮಾತ್ರವಲ್ಲ, ಬಹಳಷ್ಟು ಕ್ಶೇತ್ರಗಳಲ್ಲಿ ದೇಶ ವಿದೇಶಗಳಲ್ಲಿ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಮೇರು ಸಾಧಕಿಯರಿದ್ದಾರೆ ನಮ್ಮಲ್ಲಿ. ಹಾಗಾದರೆ, ಇಲ್ಲಿ ಚರ್ಮದ ಬಣ್ಣಕ್ಕೂ ಯಶಸ್ಸಿಗೂ ಸಂಬಂಧವಿದೆ ಎಂದು ಕಿವಿಗೆ ಹೂವಿಡುವ ಜಾಹೀರಾತುಗಳನ್ನು ನಂಬಬೇಕೇ?!

ಈ “ಸೌಂದರ್ಯ” ಎನ್ನುವುದರ ಅರ್ಥ ಒಬ್ಬೊಬ್ಬರಿಗೆ ಒಂದೊಂದಿರಬಹುದು. ಅದು ನೋಡುಗನ ಕಣ್ಣಲ್ಲಿರುತ್ತದೆ ಎನ್ನುತ್ತಾರೆ. ಭಾರತೀಯ ಮೈಬಣ್ಣ ಪಾಶ್ಚಿಮಾತ್ಯರಿಗೆ ಹೋಲಿಸಿದರೆ ಅದು ಯಾವತ್ತಿಗೂ ಕಪ್ಪೇ. ಸುತ್ತಲಿನ ಪರಿಸರ, ಹವೆ ಇತ್ಯಾದಿಗಳ ಮೇಲೆ ಹೊಂದಿಕೊಂದು ಚರ್ಮದ ಬಣ್ಣ ವ್ಯತ್ಯಾಸವಾಗುತ್ತದೆ. ಬಣ್ಣ ಯಾವುದೇ ಇರಲಿ, ಆರೋಗ್ಯವಂತ ಚರ್ಮದ ಹೊಳಪಿಗೆ ಇನ್ನೇನೂ ಸಾಟಿಯಿಲ್ಲ. ಕಪ್ಪಿರಲಿ ನಸುಗಪ್ಪಿರಲಿ, ಬೆಳ್ಳಗಿರಲಿ, ಚರ್ಮದ ಆರೋಗ್ಯವನ್ನು ಕಾಪಿಟ್ಟುಕೊಂಡಲ್ಲಿ, ಅರೋಗ್ಯಕರ ಹವ್ಯಾಸ, ಆಹಾರ, ವ್ಯಾಯಾಮಗಳೊಂದಿಗೆ ಸುಂದರ ಮನಸ್ಸನ್ನೂ ಕಾಯ್ದುಕೊಂಡಲ್ಲಿ ಸೌಂದರ್ಯವು ವ್ಯಕ್ತಿತ್ವದಲ್ಲಿ ಪ್ರತಿಫಲಿತವಾಗುತ್ತದೆ. ಸುಂದರ ವ್ಯಕ್ತಿತ್ವವು ಸಾಧನೆ, ಶ್ರಮಕ್ಕೆ ಬೆನ್ನೆಲುಬಾದರೆ ಯಶಸ್ಸು ಖಂಡಿತಾ ಜತೆಯಾಗುತ್ತದೆ.
.

 -ಶ್ರುತಿ ಶರ್ಮಾ, ಬೆಂಗಳೂರು.

5 Responses

  1. Pallavi Bhat says:

    Well Said Shruthi .ಮೈಯಿಬಣ್ಣಕ್ಕೂ ಸಾಧನೆಗೂ ಅದೆಲ್ಲಿಯ ಸಂಬಂಧ!! ನಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆ ಬಾರಿಸಿದರಷ್ಟೇ ಅಲ್ಲವೇ mulitnational ಕಂಪನಿಗಳಿಗೆ ವ್ಯಾಪಾರ.

  2. Hema says:

    ಕಪ್ಪೆಂದು ಜನರನ್ನು ಎತ್ಯಾಡಾದಿರು ಕಂಡ್ಯ…ಎಂಬ ಜನಪಝಾಡು ನೆನೆಪಿಸಿದ ಲೇಖನವಿದು.. ಉತ್ತಮ ಬರಹ.

  3. ಉತ್ತಮ ಸಂದೇಶ..ಚೆನ್ನಾಗಿದೆ ಲೇಖನ.

  4. Shankari Sharma says:

    ಬರಹ ಚೆನ್ನಾಗಿದೆ

  5. savithri s.bhat says:

    ಅರ್ಥಪೂರ್ಣ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: