ವನದೊಳಾಡುವ ನವಿಲೇ
ವಸಂತನಾಗಮನಕೆ ಇಂದು
ವನವೆಲ್ಲ ಹಸಿರಾಗಿರಲು
ಮುದ್ದಾದ ನವಿಲೇ ನಿನ್ನ
ಮನವೂ ಹಸಿರಾಗಿದೆಯೇನು.
ಹಸಿರ ಕಿರೀಟವ ಮುಡಿಗೇರಿಸಿ
ಮರಗಳೆಲ್ಲ ತಂಪ ನೀಡುತಿರಲು
ವನಸುಮಗಳ ಘಮಲು ಹರಡಿರಲು
ಮನದನ್ನೆಯ ಜೊತೆಗೂಡುವಾಸೆಯೇನು.
ಗರಿ ಬಿಚ್ಚಿ ನೀ ನಾಟ್ಯವಾಡುತಿರಲು
ಮನತುಂಬಿ ನಿನ್ನಂತೆ ನರ್ತಿಸುತ
ಗಿಡಮರಗಳೂ ಜೊತೆಯಾಗಿರಲು
ಪ್ರೇಮಗೀತೆಯ ಹಾಡುತಿರುವಿಯೇನು.
ಮನವೆಂಬ ಬಯಲು
ಹಸಿರಿಂದ ತುಂಬಿದರು
ನಡುವೆ ಬರುವ
ಅಂಕುಡೊಂಕಿನಲು ನೀ
ಪ್ರಿಯತಮೆಯ ಕೈಹಿಡಿದು
ಬದುಕ ಶೃಂಗಾರವಾಗಿಸುವ ಬಯಕೆಯೇನು.
ಬಣ್ಣಬಣ್ದ ಕನಸುಗಳ ಹೊತ್ತು
ನರ್ತಿಸುವ ಮುದ್ದಾದ ನವಿಲೇ
ನಿನ್ನ ಕನಸೆಂದೂ ಹಸಿರಾಗಿರಲಿ
ಬಾಳ ಪಯಣದ ಹಾದಿಯಲಿ.
- ಅನ್ನಪೂರ್ಣ, ಕುಂಬಳೆ