ಕಲೆಯ ಮೂಲಕ ಕನಸು ಕಟ್ಟುವ ಸಾಧಕ ದೀಪಕ ಸುತಾರ
ಕಟ್ಟುತ್ತೇವಾ ನಾವು ಕಟ್ಟುತ್ತೇವಾ ನಾವು
ಕಟ್ಟೇ ಕಟ್ಟುತ್ತೇವಾ
ಒಡೆದ ಮನಸುಗಳ ಕಂಡ ಕನಸುಗಳ
ಕಟ್ಟೇ ಕಟ್ಟುತ್ತೇವಾ
ನಾವು ಕನಸು ಕಟ್ಟುತ್ತೇವಾ, ನಾವು ಮನಸ ಕಟ್ಟುತ್ತೇವಾ..
ಸೂಕ್ಷ್ಮ ಸಂವೇದನೆ, ನವಿರಾದ ಭಾವಗಳು ಮನದ ಮೂಲೆಯೊಳಗೆ ಮೊಳಕೆಯೊಡೆದಾಗ ಮಾತ್ರ ಒಂದೇ ನಾಣ್ಯದ ಎರಡು ಮುಖಗಳಂತಿರುವ ಚಿತ್ರ ಮತ್ತು ಕಾವ್ಯ ಅರ್ಥವಾಗುತ್ತಾ ಹೊಸಲೋಕಕ್ಕೆ ಕರೆದೊಯ್ಯುತ್ತವೆ. ಕವಿ ಸತೀಶ್ ಕುಲಕರ್ಣಿಯವರ ಮೇಲಿನ ಕವಿತೆಯ ಸಾಲುಗಳನ್ನು ಭರವಸೆಯ ಯುವ ಕಲಾವಿದ ದೀಪಕ ಸುತಾರವರು ಓದಿದ್ದಾರೊ.. ಇಲ್ಲವೊ ಗೊತ್ತಿಲ್ಲ, ಆದರೆ ಅಕ್ಷರಶಃ ತಮ್ಮೆಲ್ಲ ಕನಸುಗಳನ್ನು ಪೆನ್ನು, ಬಣ್ಣ, ಕುಂಚಗಳ ಬಳಸಿಕೊಂಡು ಕ್ಯಾನವಾಸ್ ಹಾಗೂ ಹಾಳೆಗಳ ಮೇಲೆ ಅದ್ಭುತವಾಗಿ ಹರವಿದ್ದಾರೆ. ಕಂಡ ಕನಸುಗಳನ್ನೆಲ್ಲಾ ಕಲಾಕೃತಿಗಳ ರೂಪದಲ್ಲಿ ಕಟ್ಟಿಕೊಡುವ ಬಗೆ, ಶೈಲಿ ತುಂಬಾ ಭಿನ್ನವಾಗಿದೆ.
ದೀಪಕರವರ ಚಿತ್ರಗಳನ್ನು ಗ್ರಹಿಸಿದಾಕ್ಷಣ ನಮ್ಮೊಳಗೆ ಹೊಸ ಹೊಸ ಹೊಳುಹುಗಳು ಝರಿಯಂತೆ ಹರಿಯುತ್ತವೆ. ಇವರ ಆಧುನಿಕ ಮತ್ತು ಅಮೂರ್ತ ಪರಿಕಲ್ಪನೆಯ ಸ್ಟ್ರೋಕ್ ಕಲಾಸಕ್ತರನ್ನು ತಕ್ಷಣ ಸೆಳೆದುಕೊಂಡು ಸೂಜಿಗಲ್ಲಿನಂತೆ ನಿಲ್ಲಿಸಿ ಚಿಂತನೆಗೆ ಹಚ್ಚುತ್ತವೆ ಅರ್ಥಾತ್ ಒಡೆದ ಮನಸ್ಸುಗಳನ್ನು ಕಟ್ಟುತ್ತವೆ.
ಪೆಂಟಿಂಗ್ಸ್‌ನಷ್ಟೆ ಇವರ ರೇಖಾಚಿತ್ರಗಳು ಕೂಡಾ ಭಾರೀ ಪರಿಣಾಮಕಾರಿಯಾಗಿ ಜೀವತಳೆದಿವೆ. ಪ್ರತಿ ಗೆರೆಗಳಲ್ಲೂ ಕಾಣುವ ಕನಸು ಪ್ರಗತಿ ಉತ್ಸಾಹ ರೋಚಕ ಗೆಲವುಗಳು ನೋಡುಗರನ್ನು ಗಮ್ಯತೆಯತ್ತ ಕರೆದೊಯ್ಯುತ್ತವೆ. ಒಗ್ಗೂಡುವಿಕೆ, ಸ್ತ್ರೀ ಸಂವೇದನೆ, ಸಮಾನತೆ, ರಸಿಕತೆಯನ್ನೆ ಮುಖ್ಯವಾಗಿಟ್ಟುಕೊಂಡು ನಿತ್ಯ ನವನವೀನ ಚಿತ್ತಾರ ಬರೆಯಲು ಧ್ಯಾನಿಸುವ ದೀಪಕ ಸುತಾರ ಕಲಾಲೋಕದಲಿ ಒರ್ವ ಅನನ್ಯ ಸಾಧಕನಾಗಲೆಂಬುದು ಕಲಾಭಿಮಾನಿಗಳ ಸದಾಶಯ.
ಬೆಳಗಾವಿ ಜಿಲ್ಲೆ, ಚಿಕ್ಕೊಡಿ ತಾಲೂಕಿನ ಮಗನೂರು ಗ್ರಾಮದ ದೀಪಕ ಸುತಾರ ಚಿತ್ರಕಲೆಯಲ್ಲಿ ಪದವಿ ಪಡೆದುಕೊಂಡು ಪ್ರಸ್ತುತ ಬೆಂಗಳೂರಿನ ಜಾಹಿರಾತು ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಈಗಾಗಲೇ ಹಲವಡೆ ಚಿತ್ರಕಲಾ ಪ್ರದರ್ಶನ, ಚಿತ್ರಸಂತೆ ಹಾಗೂ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
-ಕೆ.ಬಿ.ವೀರಲಿಂಗನಗೌಡ್ರ,
ಸಿದ್ದಾಪುರ,. ಉತ್ತರ ಕನ್ನಡ ಜಿಲ್ಲೆ.