ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು ….ಭಾಗ 2
ಮುಕ್ತಿನಾಥವು ಶಕ್ತಿಪೀಠವೂ ಹೌದು . ಪೌರಾಣಿಕ ಕತೆಯ ಪ್ರಕಾರ, ದಕ್ಷನು ಕೈಗೊಂಡ ಯಜ್ಞಕ್ಕೆ ತನ್ನನ್ನು ಮತ್ತು ಶಿವನನ್ನು ಆಹ್ವಾನಿಸಿದ ಕಾರಣ ಅವಮಾನಿತಳಾದ ಸತಿದೇವಿಯು ಯಜ್ಞಕುಂಡಕ್ಕೆ ಹಾರಿ ಪ್ರಾಣಾರ್ಪಣೆ ಮಾಡಿದ್ದಳು. ಸತಿಯ ಮೃತ ದೇಹವನ್ನು ಹೊತ್ತುಕೊಂಡು ಶಿವನು ಕಾಡು ಮೇಡು ಅಲೆಯುತ್ತಿದ್ದಾಗ ಆಕೆಯ ಶರೀರದ ಭಾಗಗಳು ಬಿದ್ದ ಸ್ಥಳಗಳು ಶಕ್ತಿಪೀಠಗಳಾದುವು. ಒಟ್ಟು 51 ಶಕ್ತಿಪೀಠಗಳಿದ್ದು, ಅವುಗಳಲ್ಲಿ ಮುಕ್ತಿನಾಥವೂ ಒಂದು. ಇಲ್ಲಿ ಸತಿದೇವಿಯ ಹಣೆಯ ಭಾಗ ಬಿದ್ದಿತ್ತೆಂಬ ನಂಬಿಕೆಯಿದೆ.
ದೇವಾಲಯಕ್ಕೆ ಅನತಿ ದೂರದಲ್ಲಿ ‘ಜ್ವಾಲಾಮಾಯಿ’ ಮಂದಿರವಿದೆ. ಸಹಸ್ರಾರು ವರ್ಷಗಳಿಂದಲೂ ಆಸ್ತಿಕರ ತಪೋಭೂಮಿಯಾಗಿರುವ ಮುಕ್ತಿನಾಥವು ಅತಿ ವಿಸ್ಮಯಕಾರಿಯಾದ ಪ್ರಾಕೃತಿಕ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ನೈಸರ್ಗಿಕವಾಗಿ ನೀರು ಮತ್ತು ಅಗ್ನಿ ಪರಸ್ಪರ ವಿರೋಧಿಗಳಾದರೂ , ‘ನೀರಿನಲ್ಲಿ ಉರಿಯುತ್ತಿರುವ ಅಖಂಡ ನೈಸರ್ಗಿಕ ಜ್ಯೋತಿ’ ಇರುವುದು, ಇಲ್ಲಿಯ ವೈಶಿಷ್ಟ್ಯ. ಸ್ಕಂದ ಪುರಾಣದ ಪ್ರಕಾರ, ಮುಕ್ತಿನಾಥದಲ್ಲಿ ಬ್ರಹ್ಮನು ಲೋಕಕ್ಯಾಣಕ್ಕಾಗಿ ಕೈಗೊಂಡ ಯಜ್ಞದಲ್ಲಿ ಶಿವನು ಅಗ್ನಿಜ್ವಾಲೆಯಾಗಿಯೂ, ವಿಷ್ಣುವು ಜಲರೂಪಿಯಾಗಿಯೂ ಪಾಲ್ಗೊಂಡರು ಹಾಗೂ ಆ ಯಜ್ಞಾಗ್ನಿಯು ಈಗಲೂ ನಿರಂತರವಾಗಿ ಉರಿಯುತ್ತಿದೆ. ಇವಲ್ಲದೆ ಮುಕ್ತಿನಾಥದಲ್ಲಿ ಗುರು ರಿಂಪೋಚೆ ಅವರ ಮೊನಾಸ್ಟ್ರಿ ಮತ್ತು 18 ನೆಯ ಶತಮಾನದಲ್ಲಿ ಇಲ್ಲಿಗೆ ಬಂದು ತಪಸ್ಸನ್ನು ಮಾಡಿದ ಸ್ವಾಮಿನಾರಾಯಣ ಗುರುವಿನ ಮಂದಿರವಿದೆ. (ಈ ಮಾಹಿತಿಯ ಮೂಲ: ‘ಮುಕ್ತಿನಾಥದ ಪಥದಲ್ಲಿ’ ಪುಸ್ತಕ, ಲೇಖಕರು: ಶ್ರೀ ಶಿರಂಕಲ್ಲು ಈಶ್ವರ ಭಟ್ಟ)
ನೇಪಾಳದ ವರೆಗೆ ಬಂದು ಇಷ್ಟೆಲ್ಲಾ ವೈಶಿಷ್ಟ್ಯಗಳುಳ್ಳ ಮುಕ್ತಿನಾಥಕ್ಕೆ ಹೋಗದಿರುವುದುಂಟೆ, ಎಂದು ಟ್ರಾವೆಲ್ಸ್ ನವರ ಬಳಿ ಚರ್ಚೆ. ಮಾತುಕತೆಗಳಾದುವು. ನಮ್ಮ ಟ್ರಾವೆಲ್ಸ್ ನ ಮುಖ್ಯಸ್ಥರು, “ ಮುಕ್ತಿನಾಥಕ್ಕೆ ಹೋಗುವುದು ಸುಲಭವಲ್ಲ, ನೇಪಾಳದ ಪರ್ವತ ಪ್ರದೇಶಗಳ ಇಕ್ಕಟ್ಟಾದ ರಸ್ತೆಗಳಲ್ಲಿ ಗಂಟೆಗಟ್ಟಲೆ ಪ್ರಯಾಣಿಸಿ, ಇಂದು ಪೋಖ್ರಾ ತಲಪುವಾಗಲೇ ಸಂಜೆಯಾಗುತ್ತದೆ. ಬಳಲಿರುತ್ತೀರಿ, ನಾಳೆ ಅಲ್ಲಿಂದ ಮುಕ್ತಿನಾಥಕ್ಕೆ ಹೊರಡುವುದಾದರೆ, ಅತ್ಯಂತ ಕಡಿದಾದ, ಇಕ್ಕಟ್ಟಾದ ರಸ್ತೆಯಲ್ಲಿ ದಿನವಿಡೀ ಪ್ರಯಾಣಿಸಿ ‘ ಜೋಮ್ ಸಮ್’ ಎಂಬಲ್ಲಿಗೆ ಹೋಗಬೇಕು. ಅಲ್ಲಿ ರಾತ್ರಿ ಉಳಕೊಂಡು, ಮರುದಿನ ಮುಕ್ತಿನಾಥಕ್ಕೆ ಹೋಗಬಹುದು. ಹಿಮಾಲಯದ ಹವೆಯನ್ನು ಅಂದಾಜಿಸಲು ಕಷ್ಟ.ಇದ್ದಕ್ಕಿದ್ದಂತೆ ಮಳೆ, ಭೂಕುಸಿತ ಆಗಿ ಅರ್ಧ ದಾರಿಯಲ್ಲಿ ಸಿಕ್ಕಿ ಹಾಕಿಕೊಂಡರೆ ನಮ್ಮ ಮುಂದಿನ ವೇಳಾಪಟ್ಟಿಯನ್ನು ಸರಿದೂಗಿಸುವುದು ಸಾಧ್ಯವಿಲ್ಲ. ನಮ್ಮ ಪ್ಲಾನ್ ನ ಪ್ರಕಾರ, ನಾವು ನಾಳೆ ಪೋಖ್ರಾ ನಗರದಲ್ಲಿ ಸುತ್ತಾಡಿ, ನಾಡಿದ್ದು ಕಟ್ಮಂಡುವಿಗೆ ಹೊರಡುತ್ತೇವೆ. ಅದಕ್ಕೆ ಬೇಕಾದ ಪ್ರಯಾಣ ಮತ್ತು ರೂಮ್ ಗಳ ವ್ಯವಸ್ಥೆ ಈಗಾಗಲೇ ಮಾಡಿಯಾಗಿದೆ, ಇನ್ನು ಬದಲಾವಣೆ ಸಾಧ್ಯವಿಲ್ಲ. ಮುಕ್ತಿನಾಥಕ್ಕೆ ಹೋಗುವುದರಲ್ಲಿ ರಿಸ್ಕ್ ಇದೆ, ನಾವು ಜವಾಬ್ದಾರಿ ವಹಿಸುವುದಿಲ್ಲ. ನಮ್ಮ ಅಜೆಂಡಾದಲ್ಲಿ ಅದು ಇಲ್ಲ” ಎಂದು ಸ್ಪಷ್ಟವಾಗಿ ನಿರಾಕರಿಸಿದರು.
ನಮ್ಮ ತಂಡದಲ್ಲಿದ್ದ ಬೆಂಗಳೂರಿನ ಶ್ರೀನಿವಾಸ್ ಮತ್ತು ಡಾ.ಸುಧಾಕರ್ ಅವರು, ತಾವು ಸ್ವಂತ ಖರ್ಚು ಮತ್ತು ವ್ಯವಸ್ಥೆ ಮಾಡಿಕೊಂಡು ಮುಕ್ತಿನಾಥಕ್ಕೆ ಹೋಗುವೆವೆಂದೂ, ಎರಡು ದಿನಗಳ ನಂತರ ಕಟ್ಮಂಡುವಿನಲ್ಲಿ ತಂಡವನ್ನು ಸೇರುವೆವೆಂದೂ, ಆಸಕ್ತರು ಬರಬಹುದು ಎಂತಲೂ ತಿಳಿಸಿದರು. ಯಾರಿಗೆಲ್ಲಾ ಆಸಕ್ತಿ ಇದೆ ಎಂದಾಗ , 22 ಮಂದಿ ಕೈ ಎತ್ತಿದೆವು.
ಕೊನೆಗೆ ನಮ್ಮ ಒತ್ತಾಸೆಯ ಮೇರೆಗೆ, ಟ್ರಾವೆಲ್ಸ್ ನವರು ತಮಗೆ ಪರಿಚಯವಿರುವ ಸ್ಥಳೀಯ ಏಜೆಂಟ್ ಒಬ್ಬರನ್ನು ಹೋಟೆಲ್ ಗೆ ಕರೆಸಿದರು. ಆಗಲೇ ರಾತ್ರಿ ಒಂಭತ್ತು ಗಂಟೆ ಆಗಿತ್ತು. ನಾವು ಕೆಲವರು ಅವರ ಬಳಿ ಮುಕ್ತಿನಾಥಕ್ಕೆ ಹೋಗುವ ಬಗ್ಗೆ ವಿಚಾರಿಸಿದೆವು. ಆವರು “ಮುಕ್ತಿನಾಥಕ್ಕೆ ಹೋಗಲು ಪೋಖ್ರಾದಿಂದ ‘ ಜೋಮ್ ಸಮ್’ ಎಂಬಲ್ಲಿಗೆ ವಿಮಾನ ಹಾರಾಟ ಇದೆ. ಆದರೆ ಅದನ್ನು ಮುಂಚಿತವಾಗಿ ಒಬ್ಬರಿಗೆ ರೂ.15000/- ಕೊಟ್ಟು ಬುಕ್ ಮಾಡಬೇಕು.” ಎಂದರು.
ನಮ್ಮಲ್ಲಿ ಹೆಚ್ಚಿನವರು, ವಿಮಾನದ ಟಿಕೆಟ್ ದರ ಬಹಳ ಹೆಚ್ಚಾಯಿತು, ಮೇಲಾಗಿ ಹವೆ ಚೆನ್ನಾಗಿಲ್ಲದಿದ್ದರೆ ವಿಮಾನ ಹಾರದು. ಹಾಗಾಗಿ, ನಾಳೆಯೇ ಮುಕ್ತಿನಾಥಕ್ಕೆ ಹೊರಡಬಹುದೆಂಬ ಗ್ಯಾರಂಟಿ ಇಲ್ಲ. ಹಾಗಾಗಿ ಹೋಗುವುದು ಬೇಡವೆಂದು ನಿರ್ಧರಿಸಿದೆವು.
ಆದರೆ, ಛಲ ಬಿಡದ ಕೆಲವು ಆಸಕ್ತರು ಮಾತುಕತೆಯನ್ನು ಮುಂದುವರಿಸಿ, ಮಿನಿಬಸ್ / ಜೀಪ್ ಮೂಲಕ ಹೋಗುವುದಾದರೆ ಎಷ್ಟಾಗುತ್ತದೆಯೆಂದು ವಿಚಾರಿಸಿದರು. ಸಾಕಷ್ಟು ಚೌಕಾಸಿ ನಡೆಸಿದರು. ಅಂತಿಮವಾಗಿ, ನಮ್ಮನ್ನು ಜೋಮ್ ಸಮ್ ಗೆ ಮಿನಿಬಸ್ ನಲ್ಲಿ ತಲಪಿಸಿ, ಅಲ್ಲಿ ರಾತ್ರಿ ಊಟ ಮತ್ತು ವಾಸ್ತವ್ಯಕ್ಕೆ ವ್ಯವಸ್ಥೆ, ಮರುದಿನ ಮುಕ್ತಿನಾಥಕ್ಕೆ ಜೀಪುಗಳಲ್ಲಿ ಪ್ರಯಾಣ ಮಾಡಿ ಹಿಂತಿರುಗುವುದು, ಪುನ: ಜೋಮ್ ಸಮ್ ನಿಂದ ಅದೇ ಮಿನಿಬಸ್ ನಲ್ಲಿ ಪೋಖ್ರಾಕ್ಕೆ ತಲಪಿಸುವುದು -ಇಷ್ಟು ಸೇವೆಗೆ ತಲಾ ರೂ.5000/- ಎಂದು ನಿಗದಿ ಪಡಿಸಿದರು. ಹಾಗಾದರೆ ನಾಳೆ ಮುಕ್ತಿನಾಥಕ್ಕೆ ಹೊರಡುವವರು ಮಾತ್ರ ಬೆಳಗ್ಗೆ 05 ಗಂಟೆಗೆ ಹೊರಡಲು ಸಿದ್ದರಾಗಿರಬೇಕೆಂದೂ, ಈಗಲೇ 3000/- ರೂ ಮುಂಗಡ ಹಣ ಕೊಡಬೇಕೆಂದೂ, ಇತರರು ಬೆಳಗಿನ ತಿಂಡಿಯ ನಂತರ ಪೋಖ್ರಾ ನಗರ ವೀಕ್ಷಣೆಗೆ ಸಿದ್ಧರಾದರೆ ಸಾಕೆಂದೂ ಆದೇಶ ಬಂತು.
(ಮುಂದುವರಿಯುವುದು)
ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು ….ಭಾಗ 1 :
– ಹೇಮಮಾಲಾ.ಬಿ,
ಹಿಮಗಿರಿಯ ಮಡಿಲು ಸೇರದೆ ಬಿಡಲು ಬಿಡಲಿಲ್ಲ ನಿಮ್ಮ ಆಸೆಯ ಕಡಲು .
ರಿಸ್ಕ್ ತೆಗೊಂಡಾದ್ರೂ ಹೋಗಲೇ ಬೇಕು ಎಂಬುದು ಪ್ರವಾಸದ ಹೆಚ್ಚಿನ ಅನುಭವ ಪಡೆಯುವ ಉತ್ಕಟ ಇಚ್ಛೆಯನ್ನು ತೋರಿಸುತ್ತದೆ
ಆಸಕ್ತಿಯಿಂದ ಓದಿ ಪ್ರತಿಕ್ರಿಯಿಸುವ ತಮಗೆ ಅನಂತ ಧನ್ಯವಾದಗಳು.