ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ ಭಾಗ – 10
ಉದರಪೋಷಣೆ
ಬೆಳಗ್ಗೆ (೨೧-೯-೧೬) ಆರು ಗಂಟೆಗೆ ಎದ್ದು ಬಿಸಿನೀರು ಪಡೆದು ಸ್ನಾನ ಮಾಡಿದೆವು. ಒಂದು ಬಾಲ್ದಿಗೆ ರೂ.೩೦. ಲತಾ ಅವರೇ ಕೊಟ್ಟರು. ಎದ್ದು ಸ್ನಾನವಾಗಿ ಸುಮ್ಮನೆ ಕೂತೆವು. ಇನ್ನು ಕೂತು ಕಾಲ ಕಳೆಯುವ ಬದಲು ದೇವಾಲಯಕ್ಕೆ ಹೋಗಬಹುದು. ಎಲ್ಲರೂ ಹೊರಟಿದ್ದಾರ ನೋಡಿ ಬರುತ್ತೇನೆಂದು ಎದ್ದು ಹೊರಗೆ ಬಂದು ನೋಡಿದರೆ ಕೆಲವರ ಕೋಣೆಗಳೆಲ್ಲ ಬೀಗ ಹಾಕಿವೆ. ನಮಗೆ ಹೇಳದೆಯೇ ದೇವಾಲಯಕ್ಕೆ ಹೋಗಿದ್ದರು. ಹೇಳಬೇಕಿತ್ತು ಅವರು ಎನಿಸಿ ಒಂದುಕ್ಷಣ ಬೇಸರವೆನಿಸಿತು. ನಮ್ಮದೇ ತಪ್ಪು. ಹೊರಟು ಕೂಡ ಕೋಣೆಯಲ್ಲೇ ಕೂತದ್ದು ನಮ್ಮದೇ ತಪ್ಪು ತಾನೆ ಎಂದು ಮರುಕ್ಷಣವೇ ಬೇಸರ ನೀಗಿಸಿಕೊಂಡೆ. ನಾವು ಮೂವರು ೮ ಗಂಟೆಗೆ ಹೊರಟು ದೇವಾಲಯದ ಹತ್ತಿರವಿರುವ ಖಾನಾವಳಿಯಲ್ಲಿ ದೋಸೆ, ಪೂರಿ ತಿಂದೆವು. ದೋಸೆ ಅಷ್ಟು ಚೆನ್ನಾಗಿರಲಿಲ್ಲ. ಈರುಳ್ಳಿ ದೋಸೆ ಎಂದರೆ ದೋಸೆ ಮೇಲೆ ಸ್ವಲ್ಪ ನೀರುಳ್ಳಿ ಚೂರು ಹಾಕಿ ಕೊಡುತ್ತಾರೆ. ಚಟ್ನಿ ಬಾಯಿಗೆ ಹಾಕಲೇ ಸಾಧ್ಯವಿರಲಿಲ್ಲ. ನಮ್ಮ ಊರಿನ ತಿಂಡಿ ತಿಂದದ್ದು ನಮ್ಮ ತಪ್ಪು. ಅಲ್ಲೆಲ್ಲ ದೋಸೆ ತಿನ್ನಬಾರದು. ಚಪಾತಿ, ಪೂರಿಯನ್ನೇ ತಿನ್ನಬೇಕು. ಅದೇ ತುಂಬ ಚೆನ್ನಾಗಿರುತ್ತದೆ.
ಬಾಗಿಲನು ತೆರೆದು ದರುಶನ ತೋರೋ ಬದರಿನಾರಾಯಣನೆ
ದೇವಾಲಯಕ್ಕೆ ಹೋದೆವು. ಒಳಗೆ ಹೋಗಲು ನೋಡಿದರೆ ಒಂದು ಮೈಲಿ ಉದ್ದದ ಸರತಿ ಸಾಲು. ನಾವೂ ಸರತಿ ಸಾಲಿನಲ್ಲಿ ಸೇರಿಕೊಂಡೆವು. ೯ಗಂಟೆಗೆ ಸರತಿಯಲ್ಲಿ ನಿಂತು ಹತ್ತು ಘಂಟೆಗೆ ದೇವರ ದರ್ಶನ ಮಾಡಿದೆವು. ಗರ್ಭಗೃಹದಲ್ಲಿ ಕಪ್ಪುಸಾಲಿಗ್ರಾಮ ಶಿಲೆಯ ಧ್ಯಾನಮುದ್ರೆಯಲ್ಲಿರುವ ಚತುರ್ಭುಜಗಳಿರುವ ನಾರಾಯಣನ ವಿಗ್ರಹವಿದೆ. ಎರಡು ಕೈಗಳು ಧ್ಯಾನಮುದ್ರೆಯಲ್ಲೂ, ಮತ್ತೆರಡು ಕೈಗಳಲ್ಲಿ ಶಂಖಚಕ್ರಗಳಿವೆ. ನಾರಾಯಣದ ಬಲಭಾಗದಲ್ಲಿ ಕುಬೇರ, ಗಣೇಶ ಮತ್ತು ಗರುಡ ಮೂರ್ತಿಗಳಿವೆ. ಎಡಭಾಗದಲ್ಲಿ ಲಕ್ಷ್ಮೀ ಚಾಮರ ಬೀಸುತ್ತ ನಿಂತ ಮೂರ್ತಿ ಇದೆ. ಒಂದು ನಿಮಿಷ ದೇವರನ್ನು ನೋಡಲೂ ಬಿಡದಂತೆ ಮುಂದೆ ಹೋಗಿ ಎಂದು ನೂಕುತ್ತಾರೆ. ಆದರೂ ಕಣ್ಣುತುಂಬ ಮೂರ್ತಿ ನೋಡಿಯೇ ನಾವು ಅಲ್ಲಿಂದ ತೆರಳಿದ್ದು.
ಲತಾ ಅವರು ದೇವಾಲಯದ ಎದುರು ನಿಂತು ನಮ್ಮ ಮೂವರ ಪೋಟೋ ಪೋಟೋಗ್ರಾಫರರ ಕ್ಯಾಮರಾದಿಂದ ರೂ. ೧೦೦ ಕೊಟ್ಟು ಕ್ಲಿಕ್ಕಿಸಿಕೊಂಡರು. ಇಂಥ ವೃತ್ತಿ ಅಲ್ಲಿ ಅವರ ಹೊಟ್ಟೆಪಾಡು. ತುಂಬ ಜನ ಹೆಗಲಲ್ಲಿ ಕ್ಯಾಮರಾ ಹಾಕಿಕೊಂಡು ಭಕ್ತರ ಗಮನ ಸೆಳೆದು ಕ್ಲಿಕ್ಕಿಸಲೆ ಎಂದು ಕೇಳಿಕೊಳ್ಳುತ್ತಿದ್ದರು. ಹೆಚ್ಚಿನ ಮಂದಿಯೂ ಭೇಟಿ ಸ್ಮರಣೀಯವಾಗಿರಲಿ ಎಂದೋ ಏನೋ ಚಿತ್ರ ತೆಗೆಸಿಕೊಳ್ಳುತ್ತಿದ್ದರು. ದೇವರ ದರ್ಶನಮಾಡಿ ಬಂದ ಬಳಿಕ ಭಾವಚಿತ್ರ ಕೊಡುತ್ತಿದ್ದರು.
ತಪ್ತಕುಂಡದಲ್ಲಿ ಬಿಸಿನೀರು ಹೊಂಡವಿದೆ. ನಾವು ಕೆಲವರು ಅಲ್ಲಿ ಸ್ನಾನ ಮಾಡಲಿಲ್ಲ. ಕೆಲವರು ಬೆಳಗ್ಗೆಯೇ ಹೋಗಿ ಸ್ನಾನ ಮಾಡಿ ದೇವಾಲಯಕ್ಕೆ ಹೋಗಿ ಬಂದರು.
ಬದರಿ ಬಗ್ಗೆ ವಿವರಣೆ :
ಬದರಿನಾಥ ಭಾರತದ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಒಂದು ಪುಟ್ಟ ಪಟ್ಟಣ. ಹಿಂದೂ ಧರ್ಮೀಯರಿಗೆ ಅತಿ ಪಾವನವೆಂದು ಪರಿಗಣಿಸಲ್ಪಡುವ ಕ್ಷೇತ್ರಗಳಲ್ಲಿ ಬದರಿನಾಥ ಅತಿ ಪ್ರಮುಖವಾದುದು. ಚಾರ್ಧಾಮ್ (ಚತುರ್ಧಾಮ)ಗಳಲ್ಲಿ ಬದರಿನಾಥವು ಸಹ ಒಂದು. ಸಮುದ್ರ ಮಟ್ಟದಿಂದ ಸರಾಸರಿ ೩೧೨೪ ಮೀ. ಎತ್ತರವಿರುವ ಬದರಿನಾಥವು ಗಡ್ವಾಲ್ ಹಿಮಾಲಯದಲ್ಲಿ ಅಲಕನಂದಾ ನದಿಯ ದಂಡೆಯ ಮೇಲೆ ನರ ಮತ್ತು ನಾರಾಯಣ ಪರ್ವತಗಳ ನಡುವೆ ಸ್ಥಾಪಿತವಾಗಿದೆ.
ಅಲಕನಂದಾ ನದಿಯಲ್ಲಿ ಮುಳುಗಿದ್ದ ಮೂರ್ತಿಯನ್ನು ಆದಿ ಶಂಕರರು ತಪ್ತ ಕುಂಡದ ಬಳಿಯ ಗುಹೆಯಲ್ಲಿ ಪ್ರತಿಷ್ಠಾಪಿಸಿ ಮೂರ್ತಿಗೆ ನಿಯಮಿತ ಪೂಜಾವ್ಯವಸ್ಥೆಗಳನ್ನು ಮಾಡಿದರು. ಮುಂದೆ ೧೬ನೆಯ ಶತಮಾನದಲ್ಲಿ ಗಡ್ವಾಲ್ನ ಅರಸನು ಈಗ ನಾವು ಕಾಣುವ ದೇವಾಲಯವನ್ನು ನಿರ್ಮಿಸಿ ಬದರಿನಾರಾಯಣ ಮೂರ್ತಿಯನ್ನು ಅಲ್ಲಿ ಪುನಃ ಪ್ರತಿಷ್ಠಾಪಿಸಿದನು. ಈ ಮಂದಿರವು ಹಲವು ಸಲ ಪುನರುಜ್ಜೀವಗೊಳಿಸಲ್ಪಟ್ಟಿದೆ. ತೀವ್ರಹಿಮಪಾತ ಮತ್ತು ಭೂಕಂಪಗಳಂಥ ನೈಸರ್ಗಿಕ ಪ್ರಕೋಪಗಳಿಂದ ದೇವಾಲಯದ ಕಟ್ಟಡ ಸಾಕಷ್ಟು ಬಾರಿ ಹಾನಿಯುಂಟಾಗಿದೆ. ಮಂದಿರದ ಮುಖ್ಯ ಆರಾಧ್ಯ ಮೂರ್ತಿಯು ಶ್ರೀಮನ್ನಾರಾಯಣನದಾಗಿದ್ದು ಈ ಮೂರ್ತಿಯು ಕಪ್ಪು ಸಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿದ್ದು ಸುಮಾರು ಒಂದು ಮೀ. ಎತ್ತರವಾಗಿದೆ. ಇಲ್ಲಿಯ ನಾರಾಯಣ ಮೂರ್ತಿಯು ಧ್ಯಾನನಿರತ ಭಂಗಿಯಲ್ಲಿದೆ. ಸುಮಾರು ೫೦ ಅಡಿ ಎತ್ತರವಾಗಿರುವ ದೇವಾಲಯವು ಚಿನ್ನದ ವಿಮಾನ ಮತ್ತು ಚಾವಣಿಗಳನ್ನು ಹೊಂದಿದೆ. ದೇವಾಲಯದಲ್ಲಿ ಬದರಿನಾರಾಯಣನ ಮೂರ್ತಿಯ ಜೊತೆಗೆ ನರ ಮತ್ತು ನಾರಾಯಣ, ನರಸಿಂಹ, ಲಕ್ಷ್ಮಿ, ಉದ್ಧವ, ಗರುಡ, ಕುಬೇರ, ನಾರದ ಮತ್ತು ನವದುರ್ಗೆಯರ ಮೂರ್ತಿಗಳು ಸಹ ಸ್ಥಾಪಿಸಲ್ಪಟ್ಟಿದ್ದು ಪೂಜಿಸಲ್ಪಡುತ್ತಿವೆ.
ಸಂಸ್ಕೃತದಲ್ಲಿ ಬದರಿ ಅಥವಾ ಬದ್ರಿ ಎಂದರೆ ಎಲಚಿ ಕಾಯಿ (ಬೋರೆ ಕಾಯಿ) ಎಂದರ್ಥವಿದೆ. ಕೆಲವು ಪೌರಾಣಿಕ ಉಲ್ಲೇಖಗಳಲ್ಲಿ ಹೇಳಿರುವಂತೆ ಒಂದು ಕಾಲದಲ್ಲಿ ಇಲ್ಲಿ ಬೋರೆಕಾಯಿಗಳು ಅತ್ಯಂತ ಹೆಚ್ಚಾಗಿ ಬೆಳೆಯುತ್ತಿತ್ತಂತೆ. ಹಾಗಾಗಿ ಇಲ್ಲಿಗೆ ಬದರಿ ಅಥವಾ ಬದ್ರಿ ಎಂಬ ಹೆಸರು ಬಂದಿತೆನ್ನಲಾಗಿದೆ.
ಬದರಿನಾಥ ಕ್ಷೇತ್ರವು ವರ್ಷದಲ್ಲಿ ಆರು ತಿಂಗಳ ಕಾಲ ಮಾತ್ರವೇ ತೆರೆದಿರುತ್ತದೆ. ಉಳಿದ ಸಮಯ ಇದು ಪೂರ್ಣವಾಗಿ ಹಿಮದಲ್ಲಿ ಮುಚ್ಚಿಹೋಗಿರುತ್ತದೆ. ಸಾಮಾನ್ಯವಾಗಿ ಜೂನ್ನಿಂದ ಸೆಪ್ಟೆಂಬರ್ ವರೆಗೆ ಬದರಿನಾಥ ಕ್ಷೇತ್ರವನ್ನು ದರ್ಶಿಸಲು ಉತ್ತಮ ಕಾಲ. ಬದರಿನಾಥ ಕ್ಷೇತ್ರವು ಮುಚ್ಚಿರುವ ಕಾಲದಲ್ಲಿ ಬದರಿನಾಥನ ಉತ್ಸವ ಮೂರ್ತಿಯನ್ನು ಜ್ಯೋತಿರ್ಮಠ(ಜೋಷಿಮಠ)ಕ್ಕೆ ಕರೆತಂದು ಪೂಜಿಸಲಾಗುತ್ತದೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರಿನಾರಾಯಣನಿಗೆ ಪೂಜೆ ಸಲ್ಲಿಸುವನೆಂದು ನಂಬಿಕೆ. ಕೃಪೆ: ವೀಕಿಪೀಡಿಯಾ
ಉತ್ತರಾಖಂಡದಲ್ಲಿ ಎಲ್ಲಿ ನೋಡಿದರೂ ಶಿವ ದೇವಾಲಯವನ್ನೇ ಕಾಣುತ್ತೇವೆ. ಆದರೆ ಬದರಿಯಲ್ಲಿ ಮಾತ್ರ ನಾರಾಯಣ ಹೇಗೆ ಬಂದ ಎಂಬುದಕ್ಕೆ ಒಂದು ಕಥೆ ಇದೆ. ಬದರಿಯನ್ನು ನೋಡಿದ ನಾರಾಯಣನಿಗೆ ಅಲ್ಲೇ ವಾಸ್ತವ್ಯ ಹೂಡಬೇಕೆಂಬ ಅಪೇಕ್ಷೆ ಆಗುತ್ತದೆ. ಆದರೆ ಅಲ್ಲಿ ಶಿವಪಾರ್ವತಿಯರು ಅದಾಗಲೇ ನೆಲೆನಿಂತಿದ್ದರು. ಅದಕ್ಕೆ ನಾರಾಯಣ ಒಂದು ಉಪಾಯ ಮಾಡಿದ. ವೇಷ ಮರೆಸಿ ಸಣ್ಣ ಬಾಲಕನಂತೆ ಮಾರ್ಪಾಡಾಗಿ ಶಿವ ಪಾರ್ವತಿಯರೆದುರು ಅಳುತ್ತ ನಿಂತ. ಅಳುತ್ತಲಿದ್ದ ಬಾಲಕನನ್ನು ನೋಡಿ ಪಾರ್ವತಿ ಕನಿಕರಗೊಂಡು ಎತ್ತಿಕೊಳ್ಳಲು ಹೋದಾಗ ಶಿವ ತಡೆದ. ಎತ್ತಿಕೊಳ್ಳಬೇಡ ಅವನು ಸಾಮಾನ್ಯ ಬಾಲಕನಲ್ಲ. ಆದರೂ ಪಾರ್ವತಿ ಅವನನ್ನು ಎತ್ತಿಕೊಂಡೇಬಿಟ್ಟಳು. ಆ ಬಾಲಕನಾಗಿದ್ದ ನಾರಾಯಣ ವಿಶಾಲವಾಗಿ ಎತ್ತರೆತ್ತರ ಬೆಳೆದು ಅಲ್ಲೇ ನೆಲೆನಿಂತನಂತೆ. ಅದಕ್ಕೆ ಅಲ್ಲಿಗೆ ವಿಶಾಲಬದರಿ ಎಂಬ ಹೆಸರು ಬಂತಂತೆ.
ಬದರಿಯಿಂದ ನಿರ್ಗಮನ
ನಮ್ಮೆಲ್ಲರ ಒಂದು ದಿನದ ವಸತಿ ಶುಲ್ಕ ರೂ ೨೦೦೦ ಪಾವತಿಸಿದರು. ಕೋಣೆಗೆ ಬಂದು ಗಂಟುಮೂಟೆ ಕಟ್ಟಿ ೧೧ ಗಂಟೆಗೆ ಬಸ್ ಹತ್ತಿದೆವು. ಅಲ್ಲಿಗೆ ನಮ್ಮ ಚಾರ್ಧಾಮ ಯಾತ್ರೆಗೆ ತೆರೆಬಿತ್ತು. ಮೈಕೈ ಎಲ್ಲ ನೋವು. ಏನಾದರೂ ಮಾತ್ರೆ ಇದ್ದರೆ ಕೊಡಿ ಎಂದು ಮಂಗಾರಾಮ ನನ್ನಲ್ಲಿ ಕೇಳಿದರು. ಸಾಮಾನ್ಯ ಎಲ್ಲ ತರಹದ ರೋಗಕ್ಕೆ ತಕ್ಕ ಮಾತ್ರೆಗಳನ್ನು ಸವಿತಾ ತಂದಿದ್ದಳು. ಅವಳು ನೋವು ನಿವಾರಕ ಮಾತ್ರೆ ಕೊಟ್ಟಳು ಮಂಗಾರಾಮನಿಗೆ. ಪಾಪ ಹತ್ತು ದಿನಗಳಿಂದ ಒಂದೇ ಸಮ ಅಂಥ ದಾರಿಯಲ್ಲಿ ಬಸ್ ಚಾಲನೆ ಮಾಡಿ ಸಾಕಾಗಿರಬಹುದು ಎಂದು ನನಗನಿಸಿ, ಬೀಡಿ ಸೇದುತ್ತಾರೆಂದು ಅವರಮೇಲಿದ್ದ ಕೋಪವೂ ಕರಗಿತು!
ಬದರಿಯಿಂದ ಹರಿದ್ವಾರದೆಡೆಗೆ ಸಾಗುವ ರಸ್ತೆ ಕಿರಿದಾಗಿದ್ದು, ಅಲ್ಲಲ್ಲಿ ಬೆಟ್ಟ ಕುಸಿದು, ಬಂಡೆಗಳು ರಸ್ತೆಪಕ್ಕ ಬಿದ್ದದ್ದು ಕಾಣಿಸಿತು. ಅಲ್ಲಲ್ಲಿ ಲ್ಯಾಂಡ್ ಸ್ಲೈಡ್ ಅಂಡ್ ರಾಕ್ ಫಾಲ್ ಝೋನ್ ಎಂಬ ಫಲಕ ಹಾಕಿದ್ದು ನೋಡಿದೆವು. ವಾಟರ್ ಫಾಲ್ಸ್ ನೋಡಿದ್ದೆವು. ಆದರೆ ರಾಕ್ ಫಾಲ್ಸ್ ನಮಗೆ ಹೊಸದು! ಅದನ್ನು ನೋಡುವ ಸಂದರ್ಭ ಬರದೇ ಇದ್ದದ್ದು ನಮ್ಮ ಪುಣ್ಯವೇ ಸರಿ. ಬಸ್ ಚಲಿಸುವಾಗ ಕಿಟಕಿ ಹೊರಗೆ ನೋಡಲೇಬಾರದು. ಕೆಲವೆಡೆ ರಸ್ತೆ ಎಷ್ಟು ಕಿರಿದಾಗಿರುತ್ತದೆ ಅಂದರೆ ಬಸ್ ಕೂದಲೆಳೆಯ ಅಂತರದಲ್ಲಿ ರಸ್ತೆ ದಾಟುತ್ತದೋ ಅನಿಸುತ್ತದೆ. ಕೆಳಗೆ ನದಿ ಪ್ರಪಾತ. ರಸ್ತೆ ಜರಿದು ಅಷ್ಟು ಕಿರಿದಾಗಿರುತ್ತದೆ. ನೋಡಿದರೆ ಎದೆ ಝಲ್ಲೆನಿಸುತ್ತದೆ. ಒಂದೆಡೆ ರಸ್ತೆಬದಿಯಲ್ಲಿ ಒಂದು ಕಾರು ನಜ್ಜುಗುಜ್ಜಾಗಿ ನಿಂತಿರುವುದು ಕಾಣಿಸಿತು. ಕಾರು ಚಲಿಸುತ್ತಿರುವಾಗ ರಾಕ್ ಫಾಲ್ಸ್ ಆಗಿ ಕಾರಿನಮೇಲೆ ಬಿದ್ದು ಕಾರು ಹುಡಿ ಆದದ್ದಂತೆ. ಗಂಡಹೆಂಡತಿ ಎರಡು ಮಕ್ಕಳು ಇದ್ದರಂತೆ ಕಾರಿನಲ್ಲಿ. ನಾಲ್ಕು ಮಂದಿಯ ಜೀವವೂ ಅಲ್ಲೆ ಹೋಗಿತ್ತಂತೆ. ಈ ಸುದ್ದಿ ಮಂಗಾರಾಮ ಹೇಳಿದ್ದು. ಆ ಕಾರು ನೋಡಿದಾಗ ಅಬ್ಬ, ಒಮ್ಮೆ ಇಂಥ ರಸ್ತೆಯಿಂದ ಪಾರಾಗಿ ಹೋಗಿ ಸರಿಯಾಗಿರುವ ರಸ್ತೆ, ಊರು ತಲಪಿದರೆ ಸಾಕಪ್ಪ ಎಂದು ಮನಸ್ಸು ಭಯಗೊಂಡು ಜಪಗೈಯಲು ತೊಡಗುತ್ತದೆ.
ಸೇನಾ ವಾಹನ ಸಿಕ್ಕಿದಾಗಲೆಲ್ಲ ನಾವು ಜೈ ಜವಾನ್ ಎಂದು ದೊಡ್ಡದಾಗಿ ನುಡಿದು ಸೆಲ್ಯೂಟ್ ಹೊಡೆಯುತ್ತಿದ್ದೆವು. ಅವರೂ ನಮಗೆ ಕೈ ಮಾಡಿ ಆ ಗೌರವವನ್ನು ಸ್ವೀಕರಿಸುತ್ತಿದ್ದರು. ಇಂಥ ಸ್ಥಳದಲ್ಲಿ ಅವರ ಸೇವೆ ಅನುಪಮವಾದುದೇ ಸರಿ.
ರಸ್ತೆ ಕೆಲಸ ಮಾಡುವ ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನು ಜೊತೆಯಲ್ಲೆ ಕರೆದುಕೊಂಡು ಅಲ್ಲೇ ಕೂರಿಸಿಕೊಂಡು, ಬೆನ್ನಮೇಲೆ ಹೊತ್ತು ಕೆಲಸ ಮಾಡುವ ದೃಶ್ಯ ನೋಡಿದೆವು.
ವಿಷ್ಣುಪ್ರಯಾಗ
ದಾರಿಯಲ್ಲಿ ಮಧ್ಯಾಹ್ನ ಒಂದು ಗಂಟೆಗೆ ವಿಷ್ಣುಪ್ರಯಾಗಕ್ಕೆ ಹೋದೆವು. ಅಲಕನಂದಾ ನದಿಯೊಂದಿಗೆ ಧವಳಗಂಗಾನದಿ ಸೇರುವ ಸ್ಥಳವದು. ನದಿ ಸಂಗಮವಾಗುವ ಸ್ಥಳ ನೋಡುವುದೇ ಸೊಗಸು. ಒಂದು ನದಿಯ ನೀರಿಗಿಂತ ಇನ್ನೊಂದು ನದಿಯ ನೀರಿನ ಬಣ್ಣದಲ್ಲಿ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ಎಲ್ಲರೂ ನದಿಯಲ್ಲಿ ಇಳಿದು ತಲೆಗೆ ನೀರು ಚಿಮುಕಿಸಿಕೊಂಡು ಪಾವನರಾದರು. ನಾನು ನದಿಗಿಳಿಯದೆ ತೂಗುಸೇತುವೆಯಲ್ಲಿ ಅಡ್ಡಾಡಿದೆ.
ವೃದ್ಧಬದರಿ
ವಿಷ್ಣುಪ್ರಯಾಗದಿಂದ ಮುಂದೆ ಸಾಗಿ ದಾರಿಯಲ್ಲಿ ವೃದ್ಧಬದರಿ ನೋಡಿದೆವು. ಇದು ಪಂಚಬದರಿಯಲ್ಲಿ ಎರಡನೆಯದು. (ಮಹಾವಿಷ್ಣುವನ್ನು ಕುರಿತಾದ ಹಿಮಾಲಯದ ಐದು ಕ್ಷೇತ್ರಗಳು ಪಂಚ ಬದರಿ ಎನಿಸಿಕೊಳ್ಳುತ್ತವೆ. ಇವುಗಳಲ್ಲಿ ಬದರಿನಾಥ ಕ್ಷೇತ್ರವು ಸಹ ಸೇರಿದೆ. ವಿಶಾಲ ಬದರಿ : ಬದರಿನಾಥ ಕ್ಷೇತ್ರ, ಯೋಗ ಬದರಿ : ಪಾಂಡುಕೇಶ್ವರದಲ್ಲಿರುವ ಈ ದೇವಾಲಯದಲ್ಲಿ ಸಹ ಬದರಿನಾಥನು ಧ್ಯಾನಮುದ್ರೆಯಲ್ಲಿರುವನು. ಐತಿಹ್ಯಗಳ ಪ್ರಕಾರ ಪಾಂಡು ಮಹಾರಾಜನು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದನು. ಭವಿಷ್ಯ ಬದರಿ : ಜ್ಯೋತಿರ್ಮಠ ( ಜೋಷಿಮಠ)ದಿಂದ ೧೭ ಕಿ.ಮೀ. ದೂರದಲ್ಲಿದೆ. ಪುರಾಣ ಕಥೆಗಳ ಪ್ರಕಾರ ಮುಂದೊಂದು ದಿನ ಬದರಿನಾಥ ಕ್ಷೇತ್ರವು ಭೂಮಿಯಿಂದ ಮರೆಯಾದಾಗ ಬದರಿನಾಥನು ಇಲ್ಲಿ ನೆಲೆನಿಂತು ದರ್ಶನ ಕೊಡುವನು ಎಂಬುದು ಪ್ರತೀತಿ. ಆದ್ದರಿಂದಲೇ ಇದಕ್ಕೆ ಭವಿಷ್ಯ ಬದರಿ ಎಂಬ ಹೆಸರು. ವೃದ್ಧ ಬದರಿ : ಜ್ಯೋತಿರ್ಮಠದಿಂದ ೭ ಕಿ.ಮೀ. ದೂರದಲ್ಲಿ ಆನಿಮಠದಲ್ಲಿದೆ. ಕಥನಗಳ ಪ್ರಕಾರ ಬದರಿನಾಥನ ಮೂಲ ಪೂಜಾಸ್ಥಾನವು ಇದೇ ಆಗಿದ್ದಿತು.
ಆದಿ ಬದರಿ : ಕರ್ಣಪ್ರಯಾಗದಿಂದ ೧೭ ಕಿ.ಮೀ. ದೂರದಲ್ಲಿದೆ. ೧೬ ಸಣ್ಣ ಮಂದಿರಗಳುಳ್ಳ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ಮಹಾವಿಷ್ಣುವಿನ ೩ ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ ಪೂಜೆಗೊಳ್ಳುತ್ತಿದೆ.) ಪಂಚಬದರಿಗಳಲ್ಲಿ ನಾವು ಎರರು ಸ್ಥಳಕ್ಕೆ ಮಾತ್ರ ಭೇಟಿ ಇತ್ತುದು.
ಕೆಳಗೆ ಮೆಟ್ಟಲಿಳಿದು ಹೋಗಬೇಕು. ಊರೊಳಗೆ ಈ ದೇವಾಲಯವಿದೆ. ಪುಟ್ಟದಾದ ಮಂದಿರ. ಹಳ್ಳಿಯೊಳಗೆ ಕೆಲವಾರು ಮನೆಗಳಿವೆ. ಮನೆಯ ಸುತ್ತ ಸಾಕಷ್ಟು ತರಕಾರಿ ಕೃಷಿ ನಡೆಸಿದ್ದನ್ನು ನೋಡಿದೆವು. ನಮ್ಮಲ್ಲಿರುವಂತದ್ದೇ ಕೆಸುವಿನ ಗಿಡ ನೋಡಿ ಚಕಿತಳಾದೆ. ಕೆಸುವಿನೆಲೆಯಿಂದ ಏನು ಮಾಡುತ್ತಾರೆ ಎಂದು ಕೇಳಲು ಮರೆಯಿತು ಆ ಸಂದರ್ಭದಲ್ಲಿ. ಮುಂದೆ ಪುನಃ ಮೇಲೆ ಮೆಟ್ಟಲು ಹತ್ತುವ ಬದಲು ಕೆಳಗೇ ಇಳಿದೆವು. ಅಲ್ಲಿಗೆ ಬಸ್ ಬಂತು. ನಾವು ಇಳಿದು ಸ್ವಲ್ಪ ಹೊತ್ತಾದಮೇಲೆ ಬಸ್ ಬಂದದ್ದು. ಪೋನ್ ಹೋಗುತ್ತಿರಲಿಲ್ಲ. ಏನು ಮಾಡುವುದಪ್ಪ, ಕೆಳಗೆ ಬರಲು ಹೇಳಿದ್ದೆ ಎಂದು ವಿಠಲರಾಜು ಹೇಳಿಕೊಂಡಾಗ ಬಸ್ ಬರುವುದು ಕಾಣಿಸಿತು. ಬಸ್ಸಿನ ಒಂದು ಚಕ್ರ ಪಂಕ್ಚರ್ ಆಗಿತ್ತಂತೆ. ಇಷ್ಟು ದಿನದಲ್ಲಿ ಇದು ಮೂರನೇ ಸಲ ಚಕ್ರ ಪಂಕ್ಚರ್ ಆದದ್ದು. ಎರಡು ಸಲವೂ ನಾವು ಹೀಗೆ ಯಾವುದಾದರೊಂದು ಸ್ಥಳ ನೋಡಲು ಇಳಿದಾಗಲೇ ಆಗಿದ್ದು. ಹಾಗಾಗಿ ಕಾಯಬೇಕಾದ ಪ್ರಸಂಗ ಬಂದಿರಲಿಲ್ಲ.
ಇಂದ್ರಲೋಕ
ವೃದ್ಧಬದರಿ ನೋಡಿ ಮುಂದೆ ಹೋದಾಗ ಪೀಪಲ್ ಕೋಟಿಯಲ್ಲಿ ಇಂದ್ರಲೋಕ ಹೊಟೇಲಿಗೆ ಊಟಕ್ಕೆ ಹೋದೆವು. ಒಂದು ಊಟಕ್ಕೆ ರೂ.೯೦. ಸೊಗಸಾದ ಊಟ. ಹೆಸರೇನೋ ಇಂದ್ರಲೋಕ. ಆದರೆ ಹೆಸರಿಗೆ ತಕ್ಕಂತೆ ಪಾಯಿಖಾನೆ ಇರಲಿಲ್ಲ. ಒಳಗೆ ಹೋಗಲು ಸಾಧ್ಯವಿಲ್ಲ ಹಾಗಿತ್ತು ಎಂದು ಶೋಭಾ ಹೇಳಿದರು. ನಾವು ಊಟ ಮಾಡಿ ಬಸ್ಸಿನ ಬಳಿ ಬಂದಾಗ ಗಾಳಿ ಹೋದ ಚಕ್ರವನ್ನು ರಿಪೇರಿ ಮಾಡಿಸಿ ತಯಾರಾಗಿದ್ದರು ಸೋನು ಹಾಗೂ ಮಂಗಾರಾಮ.
ನಂದಪ್ರಯಾಗ
ಊಟವಾಗಿ ಮುಂದುವರಿದು ನಂದಪ್ರಯಾಗಕ್ಕೆ ಹೋದೆವು. ಅಲಕನಂದಾ ನದಿಯೊಂದಿಗೆ ನಂದಾಕಿನಿ ನದಿ ಸಂಗಮವಾಗುವ ಸ್ಥಳವದು.
ಕರ್ಣಪ್ರಯಾಗ
ಕರ್ಣಪ್ರಯಾಗ ದೂರದಿಂದಲೇ ನೋಡಿ ಮುಂದುವರಿದೆವು. ಸಣ್ಣಗೆ ಮಳೆ ಬರುತ್ತಲಿದ್ದದ್ದರಿಂದ ಕೆಳಗೆ ಇಳಿಯಲಿಲ್ಲ. ಕರ್ಣನ ದೇವಾಲಯವಿದೆಯಂತೆ ಅಲ್ಲಿ. ಅಲಕನಂದಾ ನದಿಯೊಂದಿಗೆ ಕರ್ಣಪಿಂದಾರ ನದಿ ಸಂಗಮವಾಗುತ್ತದೆ.
ಮುಸ್ಸಂಜೆವೇಳೆಯಲಿ ನಗರಾಸು ಸೇರಿದಾಗ
ಸಂಜೆ ಆರೂವರೆ ಗಂಟೆ ಆದಾಗ ಮಂಗಾರಾಮ ಬಸ್ ಚಾಲನೆ ನಿಲ್ಲಿಸಿಬಿಟ್ಟರು. ನಗರಾಸು ಎಂಬ ಊರಿನಲ್ಲಿ ನಾಗಸಾನಿ ವಸತಿಗೃಹದ ಎದುರು ಬಸ್ನಿಂದ ಇಳಿದೆವು. ಅಲ್ಲಿಯ ಕೋಣೆಯಲ್ಲಿ ನಮ್ಮ ಲಗೇಜು ಇಳಿಸಿ ಕಾಲು ಚಾಚಿದೆವು. ಒಂದು ಕೋಣೆಯಲ್ಲಿ ನಾವು ನಾಲ್ಕು ಮಂದಿ. ಸರೋಜ, ಪೂರ್ಣಿಮಾ, ಸವಿತಾ, ನಾನು. ತಣ್ಣಗೆ ನೀರಿನಲ್ಲಿ ಸ್ನಾನ ಮಾಡಿ ಸುಧಾರಿಸಿಕೊಂಡೆವು. ಮಧ್ಯಾಹ್ನದ ಊಟ ತಡವಾಗಿ ಮಾಡಿದ್ದರಿಂದ ರಾತ್ರಿಯ ಊಟ ಸ್ವಲ್ಪವೇ ಸಾಕು ಎಂದು ನಾವು ಕೆಲವು ಮಂದಿ ತೀರ್ಮಾನಿಸಿ ಕೆಳಗೆ ಯಾವ ಹೊಟೇಲು ಇವೆ ಎಂದು ನೋಡಲು ಹೊರಟೆವು. ಮುಂದೆ ಗುರುದ್ವಾರ ಇದೆ. ಅಲ್ಲಿ ಊಟ ಇದೆ ಎಂಬ ಮಾಹಿತಿ ನಮ್ಮ ಹೊಟೇಲಿನವರು ಕೊಟ್ಟರು. ನಮ್ಮ ವಸತಿಗೃಹದ ಎದುರು ಭಾಗದಲ್ಲೇ ಇರುವ ಗುರುದ್ವಾರಕ್ಕೆ ಹೋದೆವು.
ಗುರುದ್ವಾರದಲ್ಲಿ ನಮಗೆ ಬರೆ ಕಾಸಿದರು!
ನಾವು ಕುತೂಹಲದಿಂದ ಗುರುದ್ವಾರದೊಳಗೆ ಕಾಲಿಟ್ಟೆವು. ಅಲ್ಲಿ ಸುಮಾರು ಮಂದಿ ಸಾಲಾಗಿ ಕೂತು ಊಟ ಮಾಡುತ್ತಿರುವುದು ಕಂಡಿತು. ಮುಂದೆ ಜಗಲಿಯಲ್ಲಿ ಒಬ್ಬರು ಸಿಖ್ಗುರು ಕೂತದ್ದು ಕಂಡು ಅವರನ್ನು ಮಾತಾಡಿಸಿ ಮತ್ತೆ ಊಟಕ್ಕೆ ಹೋಗುವ ಎಂದು ತೀರ್ಮಾನಿಸಿದೆವು. ಅಲ್ಲಿಒಳಗೆ ಹೋಗಬೇಕೆಂದರೆ ಗಂಡಸು ಹೆಂಗಸು ಎಂಬ ಭೇದವಿಲ್ಲದೆ ಎಲ್ಲರೂ ತಲೆಮೇಲೆ ಬಟ್ಟೆ ಹಾಕಿಕೊಳ್ಳಲೇಬೇಕು. ಚೂಡಿದಾರದ ಶಾಲಿದ್ದವರು ತಲೆಗೆ ಸುತ್ತಿಕೊಂಡರು. ಇಲ್ಲದವರು ಅಲ್ಲಿಟ್ಟಿದ್ದ ಮಕಮಲ್ ಬಟ್ಟೆ ತೆಗೆದುಕೊಂಡು ತಲೆಗೆ ಸುತ್ತಿದೆವು. ಸಿಖ್ಗುರು ಬಳಿ ಬಂದು ತಲೆಬಾಗಿ ಕೂತೆವು. ನಮ್ಮನ್ನು ನೋಡಿದ್ದೇ, ‘ಮೊದಲಿಗೆ ಒಬ್ಬರನ್ನು ಕಂಡಾಗುವಾಗ ನಮಸ್ಕಾರ ಎಂದು ಹೇಳುವ ಅಭ್ಯಾಸ ನಿಮಗಿಲ್ಲವೇ? ನಿಮ್ಮ ಊರಿನಲ್ಲಿ ಇಂಥ ಪದ್ಧತಿ ಇಲ್ಲವೆ? ಎಂದು ಬರೆ ಕಾಸಿದರು. ಮೊದಲಿಗೆ ನಮಗೆ ಅವರು ಏನು ಹೇಳುತ್ತಿದ್ದಾರೆಂದೇ ಅರ್ಥವಾಗಿರಲಿಲ್ಲ. ಅರ್ಥವಾದಾಗ ನಮ್ಮ ಮಾವನ (ಜಿ.ಟಿ. ನಾರಾಯಣ ರಾವ್) ನೆನಪು ಬಂತು. ಮೊದಲು ಯಾರನ್ನು ನೋಡಿದರೂ ನಮಸ್ಕಾರ ಎಂದು ಹೇಳಿ ಮಾತಾಡಿಸಬೇಕು ಅಂಥ ಅಭ್ಯಾಸ ಬೆಳೆಸಿಕೊಳ್ಳಲೇಬೇಕು ಎಂದು ನಮ್ಮ ಮಾವ ಪಾಟ ಮಾಡುತ್ತಿದ್ದದ್ದು ಆ ಸಂದರ್ಭದಲ್ಲಿ ಕಣ್ಣಿಗೆ ಕಟ್ಟಿತು! ಆದರೆ ನಾವು ನಮಸ್ಕಾರ ಎಂದು ಬಾಯಿಯಲ್ಲಿ ಹೇಳದೆಯೇ ಇದ್ದರೂ ತಲೆಬಾಗಿ ಅವರೆದುರು ಕೂತಿದ್ದೆವು. ಮತ್ತೆ ನಮ್ಮನ್ನು ಎಲ್ಲಿಂದ ಬಂದದ್ದು ಎಂದೆಲ್ಲ ಕೇಳುತ್ತ ಚೆನ್ನಾಗಿ ಮಾತಾಡಿಸಿದರು.
ಪ್ರಸಾದ ಭೋಜನ
ಅವರೊಡನೆ ಮಾತಾಡಿ ಊಟಕ್ಕೆ ಕೂತೆವು. ಅನ್ನ ಸಾರು, ಚಪಾತಿ, ಗಸಿ. ಚಪಾತಿ ತಟ್ಟೆಗೆ ಬಡಿಸುವುದಿಲ್ಲ. ಚಪಾತಿ ಬಡಿಸುವಾಗ ಎರಡು ಕೈ ಹಿಡಿಯಬೇಕು. ಆಗ ನಮ್ಮ ಕೈಗೆ ಹಾಕುತ್ತಾರೆ. ಅದು ಪ್ರಸಾದವಂತೆ. ಎಲ್ಲವನ್ನೂ ಪದೇಪದೇ ಕೇಳುತ್ತ ಹೊಟ್ಟೆತುಂಬ ಬಡಿಸುತ್ತಾರೆ.
ತಟ್ಟೆ ಲೋಟಗಳನ್ನು ಸಾಬೂನು ನೀರಿನಲ್ಲಿ ತೊಳೆದು ಇಡುತ್ತಿದ್ದುದನ್ನು ಕಂಡೆವು. ವಿಶಾಲವಾದ ಸ್ಥಳದಲ್ಲಿ ದೊಡ್ಡ ದೊಡ್ಡ ಡಬರಿಯಲ್ಲಿ ಅಡುಗೆ ಮಾಡಿಟ್ಟಿರುವುದು ಕಂಡಿತು. ಚಹಾ ಕೂಡ ಇತ್ತು. ಎಲ್ಲವನ್ನೂ ಅವಗಾಹನೆ ಮಾಡಿ ನೋಡಿ ನಮ್ಮ ಕಾಣಿಕೆಯನ್ನು ಹುಂಡಿಗೆ ಹಾಕಿ ಕೋಣೆಗೆ ಬಂದೆವು. ಗುರುದ್ವಾರದಲ್ಲಿ ಕೂಡ ವಸತಿಗೆ ಕೋಣೆಗಳು ಸಿಗುತ್ತವೆ.
ನಗರಾಸು ನಿರ್ಗಮಿಸು
ಬೆಳಗ್ಗೆ (೨೨-೯-೨೦೧೬) ೫.೧೫ಕ್ಕೆ ಎದ್ದು ತಯಾರಾದೆವು. ೬ ಗಂಟೆಯೊಳಗೆ ಹೊರಡಬೇಕೆಂದು ಹೇಳಿದ್ದರು. ಆದರೆ ಹೊರಡುವಾಗ ೬.೫೦ ಆಗಿತ್ತು. ರಾತ್ರಿ ಬಸ್ಸಿನೊಳಗೆ ಲೈಟ್ ಉರಿದು ಬಸ್ ಬ್ಯಾಟರಿ ಚಾರ್ಜು ಕಡಿಮೆಯಾಗಿತ್ತು. ಅದನ್ನು ಮಂಗಾರಾಮ ಮತ್ತು ಸೋನು ಏನೋ ರಿಪೇರಿ ಮಾಡುತ್ತಿದ್ದರು. ಸೋನು ಬಸ್ಸಿನಡಿ ತೂರಿ ರಿಪೇರಿಯಲ್ಲಿ ಮಗ್ನನಾಗಿದ್ದ. ಬಸ್ಸಡಿಯಿಂದ ಹೊರಬಂದಾಗ ಮೈಪೂರ್ತಿ ಮಣ್ಣುಮೆತ್ತಿಕೊಂಡಿದ್ದ. ಕ್ಷಣದಲ್ಲಿ ಸ್ನಾನ ಮಾಡಿ ತಯಾರಾಗಿ ಬಸ್ಸೇರಿದ. ಈ ಮಧ್ಯೆ ನಾವು ಅಲ್ಲಿರುವ ಹೊಟೇಲಿನಲ್ಲಿ ಕಾಫಿ, ಚಹಾ ಕುಡಿದೆವು. ಮಂಗಾರಾಮ ಬೀಡಿ ಪ್ಯಾಕೆಟ್ ಕೊಂಡು ಜೇಬಿಗೆ ಹಾಕಿಕೊಳ್ಳುವುದನ್ನು ಮರೆಯಲಿಲ್ಲ! ಬೀಡಿ ಕಥಮ್ ಹೋಗಯಾ ಎಂದು ನಾನು ತಮಾಷೆಗೆ ಹೇಳಿದೆ. ಆಗ ಜೇಬಿನಿಂದ ಇನ್ನೊಂದು ಕಟ್ಟು ತೆಗೆದು ತೋರಿಸಿದರು! ನಿನ್ನೆ ಗುರುದ್ವಾರ ನೋಡದವರು ಅಲ್ಲಿಗೆ ಹೋಗಿ ನೋಡಿ ಬಂದರು.
ರುದ್ರಪ್ರಯಾಗ
ಅಂತೂ ನಮ್ಮ ಬಸ್ ನಗರಾಸು ಬಿಟ್ಟು ಹೊರಟು ೮ ಗಂಟೆಗೆ ರುದ್ರಪ್ರಯಾಗ ತಲಪಿತು. ರುದ್ರಪ್ರಯಾಗದಲ್ಲಿ ಶಿವನ ದೇವಾಲಯವಿದೆ. ಇಲ್ಲಿ ಅಲಕನಂದಾ ಮತ್ತು ಮಂದಾಕಿನಿ ನದಿಗಳ ಸಂಗಮವಾಗುತ್ತದೆ. ಎರಡು ನದಿಗಳು ಕೂಡಿ ಮುಂದೆ ಹರಿಯುವುದನ್ನು ನೋಡುತ್ತ ನಿಂತರೆ ಸಮಯ ಸರಿಯುವುದು ಗೊತ್ತಾಗುವುದಿಲ್ಲ.
ಪುರಾಣದ ಪ್ರಕಾರ, ಶಿವ ರುದ್ರನ ಅವತಾರ ಹೊಂದಿ, ಸಂಗೀತದಲ್ಲಿ ಪರಿಣತಿ ಪಡೆಯಬೇಕೆನ್ನುವ ಅಭಿಲಾಷೆಯಿಂದ ಇಲ್ಲಿ ತಪಸ್ಸು ಮಾಡಿದ್ದನಂತೆ. ಇಲ್ಲಿ ನಾರದ ಮುನಿಗೆ ಆಶೀರ್ವಾದ ಮಾಡಿದ್ದನಂತೆ. ಅದರ ಕುರುಹಾಗಿ ನಾರದ ವಿಗ್ರಹ ಕೂಡ ಇದೆ. ಈ ಸ್ಥಳದ ಹತ್ತಿರದಲ್ಲಿ ಜಗದಂಬಾ ದೇವಾಲಯವನ್ನೂ ಕಾಣಬಹುದು.
ದೇವಾಲಯ ನೋಡಿ ಹೊರಟು ಹತ್ತಿರವಿರುವ ಹೊಟೇಲಿನಲ್ಲಿ ಪರೋಟ, ಚಪಾತಿ ತಿಂದು ೯.೧೫ಕ್ಕೆ ಮುಂದೆ ಹೊರಟೆವು.
ದಾರಿಮಾತಾ ಮಂದಿರ
ಇದು ಬದ್ರಿನಾಥ- ಶ್ರೀನಗರ ಹೆದ್ದಾರಿಯಲ್ಲಿ ಸಾಗುವಾಗ ಅಲಕನಂದಾ ನದಿ ಮಧ್ಯೆ ಕಾಣುತ್ತದೆ. ನದಿ ಮಧ್ಯೆ ಬೃಹತ್ತಾಗಿ ಕಟ್ಟಿದ್ದಾರೆ. ದೇವಾಲಯ ತಲಪಲು ಒಂದುಕೀಮೀ ಮೆಟ್ಟಲಿಳಿದು ಸೇತುವೆಯಲ್ಲಿ ದಾಟಿ ಹೋಗಬೇಕು. ನಾವು ಹತ್ತು ಗಂಟೆಗೆ ದೇವಾಲಯ ತಲಪಿದೆವು. ಸೇತುವೆಯುದ್ದಕ್ಕೂ ಗಂಟೆ ಕಟ್ಟಿದ್ದಾರೆ. ದೇವಾಲಯದ ಸಂದುಗೊಂದುಗಳಲ್ಲೂ ಗಂಟೆಗಳು ನೇತಾಡುತ್ತಿದ್ದುವು. ಬಹುಶಃ ಭಕ್ತರು ಹರಕೆ ಸಲ್ಲಿಸಲು ಗಂಟೆ ಕೊಟ್ಟದ್ದನ್ನೆಲ್ಲ ಕಟ್ಟಿದ್ದಾರೆ ಎನಿಸುತ್ತದೆ. ಇನ್ನು ಗಂಟೆ ಕೊಟ್ಟರೆ ಅಲ್ಲಿ ಕಟ್ಟಲೂ ಸ್ಥಳವಿಲ್ಲ. ಅದಕ್ಕಾಗಿಯೇ ಒಂದು ಕಟ್ಟಡ ನಿರ್ಮಾಣಗೊಂಡರೂ ಅಶ್ಚರ್ಯವಿಲ್ಲ! ನದಿ ಮಧ್ಯೆ ಕಾಳಿಯಮಂದಿರ. ನೋಡಲು ಚೆನ್ನಾಗಿದೆ. ತೂಗು ಸೇತುವೆ ಕೂಡ ಇದೆ. ಉತ್ತರಾಖಂಡದ ಚಾರ್ಧಾಮಗಳ ರಕ್ಷಕಿ ಈ ಕಾಳೀದೇವಿ ಎಂಬುದು ಅಲ್ಲಿಯ ಜನರ ನಂಬಿಕೆ.
ನಾವು ದೇವಾಲಯ ನೋಡಿ ಹತ್ತೂ ಮೂವತೈದಕ್ಕೆ ವಾಪಾಸು ಮೆಟ್ಟಲು ಹತ್ತಿ ಬಸ್ ಹತ್ತಿದೆವು. ಅಲ್ಲಿಂದ ಹೋಗುವ ರಸ್ತೆಯುದ್ದಕೂ ಮಾವು, ಬೇವು, ಕರಿಬೇವಿನ ಮರಗಳು ಕಂಗೊಳಿಸುತ್ತಿದ್ದುವು.
ದೇವಪ್ರಯಾಗ
೧೨.೪೫ಕ್ಕೆ ದೇವಪ್ರಯಾಗ ತಲಪಿದೆವು. ಮಾರ್ಗದಿಂದ ದೇವಾಲಯಕ್ಕೆ ಹೋಗಲು ಸುಮಾರು ನಡೆಯಬೇಕು. ನದಿ ದಾಟಲು ತೂಗು ಸೇತುವೆ ಇದೆ. ಅಲ್ಲಿ ಪೂಜೆ ಮಾಡಿಸಲು, ಕರ್ಮ ಮಾಡಿಸಲು ಪಂಡಿತರು ನಮ್ಮನ್ನು ಮುತ್ತಿಗೆ ಹಾಕಿದರು. ನಾವ್ಯಾರೂ ಅವರ ಮಾತಿಗೆ ಮರುಳಾಗಲಿಲ್ಲ. ನಮ್ಮಲ್ಲಿ ಕೆಲವರು ನದಿಯಲ್ಲಿ ಸ್ನಾನ ಮಾಡಿದರು.
ಉತ್ತರಾಖಂಡದ ಟೆಹ್ರಿ ಗಡ್ವಾಲ್ ಜಿಲ್ಲೆಯಲ್ಲಿರುವ ದೇವಪ್ರಯಾಗ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲೊಂದು. ಸಂಸ್ಕೃತದಲ್ಲಿ ದೇವಪ್ರಯಾಗ ಅಂದರೆ ಪವಿತ್ರ ಸಂಗಮ. ಇಲ್ಲಿ ಅಲಕನಂದಾ ಬದರಿಯಿಂದ ಹರಿದು ಬಂದು ಭಾಗೀರಥಿ ಗೋಮುಖದಿಂದ ಹರಿದು ಬಂದು ಇಲ್ಲಿ ಇವೆರಡೂ ನದಿಗಳು ಸಂಗಮವಾಗುತ್ತವೆ. ಏಳನೇ ಶತಮಾನದಿಂದೀಚೆಗೆ ಈ ಪ್ರದೇಶ ಹಲವು ಹೆಸರುಗಳಿಂದ ಕರೆಸಿಕೊಂಡಿದೆ. ಮುಖ್ಯವಾಗಿ ಬ್ರಹ್ಮಪುರಿ, ಬ್ರಹ್ಮ ತೀರ್ಥ, ಶ್ರೀಖಂಡ ನಗರ ಮತ್ತು ಉತ್ತರಾಖಂಡದ ಜೆಮ್ ಅಂತಲೂ ಕರೆಯಲ್ಪಡುತ್ತಿತ್ತು. ಹಿಂದೂ ಧರ್ಮದ ಋಷಿ ದೇವ ಶರ್ಮಾ ಇಲ್ಲಿ ವಾಸಿಸುತ್ತಿದ್ದುದರಿಂದ ದೇವಪ್ರಯಾಗವೆಂಬ ಹೊಸ ಹೆಸರು ಬಂದು, ಅದೇ ಶಾಶ್ವತವಾಯಿತು.
ಇಲ್ಲಿ ನದಿಯ ದಡದ ಮೇಲೆ ಎತ್ತರದಲ್ಲಿ ರಾಮನ ದೇವಾಲಯವಿದೆ. ಹಿಂದೂಗಳಲ್ಲಿ ಚಾಲ್ತಿಯಲ್ಲಿರುವ ದಂತಕಥೆಗಳ ಪ್ರಕಾರ, ರಾಮ ಮತ್ತು ಆತನ ತಂದೆ ದಶರಥ ಮಹಾರಾಜ ಈ ಪ್ರದೇಶದಲ್ಲಿ ತಪಸ್ಸು ಕೈಗೊಂಡಿದ್ದರು. ಅದನ್ನು ಪುಷ್ಟೀಕರಿಸುವಂತೆ ಒಂದು ಕಟ್ಟೆ ಇದೆ ಅಲ್ಲಿ. ಅದೇ ಕಟ್ಟೆಯಲ್ಲಿ ಕೂತು ತಪಸ್ಸು ಮಾಡಿದ್ದು ಎಂದು ತೋರಿಸುತ್ತಾರೆ. ದೇವಾಲಯ ಬಾಗಿಲು ಹಾಕಿತ್ತು. ಅರ್ಚಕರು ಬಂದು ಬಾಗಿಲು ತೆರೆದರು. ನಾವು ತಟ್ಟೆಗೆ ದಕ್ಷಿಣೆ ದೊಡ್ಡ ನೋಟು ಹಾಕಲಿಲ್ಲವೆಂದು ಅರ್ಚಕರಿಗೆ ಸಿಟ್ಟುಬಂದು ಎಲ್ಲರೂ ಬರುವ ಮೊದಲೇ ಪುನಃ ದೇವಾಲಯದ ಬಾಗಿಲು ಹಾಕಿಬಿಟ್ಟರು.
ಹರಿದ್ವಾರದೆಡೆಗೆ ಗಮನ
ಅಲ್ಲಿಂದ ಬರುತ್ತ ದಾರಿಯಲ್ಲಿ ಸಮೋಸ ತಿಂದೆವು. ಮೇಲೆ ಹತ್ತಿ ರಸ್ತೆಗೆ ಬಂದು ನಿಂಬೆ ಪಾನಕ ಕುಡಿದು ಹತ್ತಿ ಬಂದ ಸುಸ್ತನ್ನು ಪರಿಹರಿಸಿಕೊಂಡೆವು. ೧.೪೫ಕ್ಕೆ ಅಲ್ಲಿಂದ ಹೊರಟೆವು. ದಾರಿಯುದ್ದಕ್ಕೂ ಅಲ್ಲಲ್ಲಿ ಆಕರ್ಷಕ ಸ್ಲೋಗನ್ಗಳ ಫಲಕ ಹಾಕಿದ್ದು ಕಂಡಿತು. ಉದಾಹರಣೆಗೆ:
This is highway not runway
Speed thrills but kills
Life is journey complete it
No race no rally enjoy the nature
Life is precious don‘t waste it
Land slide and rockfall zone
ದಾರಿಯಲ್ಲಿ ಒಂದು ಖಾನಾವಳಿಯಲ್ಲಿ ಊಟಕ್ಕೆ ನಿಲ್ಲಿಸಿದರು. ಅಲ್ಲಿ ಒಂದು ಥಾಲಿಗೆ ರೂ.೧೭೫. ನಾನು ತಂಗಿ ಸವಿತಳೂ ಒಂದು ಥಾಲಿ ತೆಗೆದುಕೊಂಡು ಹಂಚಿ ತಿಂದೆವು. ಅದೇ ಇಬ್ಬರಿಗೂ ಸಾಕಷ್ಟಾಗಿತ್ತು. ಮುಂದೆ ಋಷಿಕೇಶ ಮಾರ್ಗವಾಗಿ ಹರಿದ್ವಾರ ತಲಪುವಾಗ ಸಂಜೆ ಗಂಟೆ ಆರು ಆಗಿತ್ತು.
ರಾಮಭವನದಲ್ಲಿ ವಾಸ್ತವ್ಯ- ಸಾರಥಿ- ಸಹಾಯಕರಿಗೆ ವಿದಾಯ
ಬಸ್ಸಿಳಿದು ನಮ್ಮ ಬ್ಯಾಗ್ ಹೊತ್ತು ರಾಮಭವನಕ್ಕೆ ಬಂದೆವು. ಅಲ್ಲಿ ಮಂಗಾರಾಮ ಹಾಗೂ ಸೋನುಗೆ ಬೀಳ್ಕೊಡುಗೆ ಸಮಾರಂಭ. ಹತ್ತು ದಿನ ಬಹಳ ಚೆನ್ನಾಗಿ ಬಸ್ ಚಾಲನೆ ಮಾಡಿ ಸುರಕ್ಷತೆಯಿಂದ ನಮ್ಮನ್ನು ಇಲ್ಲಿಗೆ ತಲಪಿಸಿದ್ದಕ್ಕೆ ತುಂಬ ಧನ್ಯವಾದಗಳು ಎಂದು ನುಡಿದು ಮಂಗಾರಾಮನಿಗೆ ಉಡುಗೊರೆ ಕೊಟ್ಟರು. ನನ್ನಿಂದ ಏನಾದರೂ ತಪ್ಪಾಗಿದ್ದರೆ, ಬೀಡಿ ಸೇದಿ ತೊಂದರೆ ಕೊಟ್ಟದ್ದಕ್ಕೆ ಕ್ಷಮಿಸಿ ಎಂದು ಮಂಗಾರಾಮ ಪ್ರತಿಯಾಗಿ ನುಡಿದು ಕ್ಷಮೆ ಯಾಚಿಸಿದರು. ಸೋನುಗೆ ಉಡುಗೊರೆ ಕೊಟ್ಟು ಬೀಡಿ ಸೇದುವ ಚಟ ಕಲಿಯಬೇಡ. ಒಳ್ಳೆಯದಾಗಲಿ ಎಂದು ಶುಭಕೋರಿ ಅವರಿಬ್ಬರಿಗೆ ವಿದಾಯ ಹೇಳಿದೆವು. ಅವರೂ ನಮ್ಮನ್ನು ಆತ್ಮೀಯವಾಗಿ ಬೀಳ್ಕೊಂಡು ಹೊರಟರು.
ಉತ್ತರಾಖಂಡ ರಾಜ್ಯವನ್ನು “ದೇವಭೂಮಿ’’ಎಂಬ ಹೆಸರಿನಿಂದ ಕರೆಯುತ್ತಾರೆ. ನಿಜಕ್ಕೂ ಇದರ ಅನುಭವ ಆಯಿತು ನಮಗೆ. ದಾರಿಯಲ್ಲಿ ಎಲ್ಲಿಯೂ ನಮಗೆ ಹೆಂಡದ ಅಂಗಡಿ ಕಾಣಲಿಲ್ಲ. ಮಾಂಸಾಹಾರದ ಹೊಟೇಲೂ ಕಾಣಸಿಗಲಿಲ್ಲ. ಮತ್ತು ಎಲ್ಲೂ ಹೆಂಡ ಕುಡಿದು ಅಸಭ್ಯವಾಗಿ ವರ್ತಿಸುವ, ತೂರಾಡಿಕೊಂಡು ರಸ್ತೆ ಬದಿ ಬಿದ್ದಿರುವವರಾರೂ ಕಾಣಲಿಲ್ಲ. ನಾವು ಹೋದೆಡೆಯಲ್ಲೆಲ್ಲ ನಮಗೆ ನಗುನಗುತ್ತಲೇ ಉಪಚಾರ ಸೇವೆ ಒದಗಿಸಿದ್ದರು. ಎಲ್ಲೂ ಯಾರಿಂದಲೂ ಏನೂ ಅಪಚಾರ ಅಸಮಾಧಾನ ಆಗಿರಲಿಲ್ಲ.
ನಮ್ಮ ನಮ್ಮ ಕೋಣೆ ಸೇರಿ ಸ್ನಾನಾದಿ ಮುಗಿಸಿದೆವು. ಬಟ್ಟೆ ತೊಳೆಯುವವರು ತೊಳೆದು ಹರಗಿದರು. ಸರಸ್ವತಿ ಹಾಗೂ ಶಶಿಕಲಾ ರಾತ್ರೆ ಊಟಕ್ಕೆ ಅನ್ನ ಸಾರು ಮಾಡಿ ಬಡಿಸಿದರು. ತಿಂದು ಹೊಟ್ಟೆದೇವರನ್ನು ತೃಪ್ತಿಪಡಿಸಿ ಮಲಗಿದೆವು.
–ಮುಂದುವರಿಯುವುದು.
ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 9 : http://52.55.167.220/?p=13282
– ರುಕ್ಮಿಣಿಮಾಲಾ, ಮೈಸೂರು