ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ ಭಾಗ – 9
ವಿಶಾಲ ಬದರಿ
ಜೋಷಿಮಠದಿಂದ ೨೦-೯-೨೦೧೬ರಂದು ಹೊರಟು ೧೨ಗಂಟೆಗೆ ವಿಶಾಲಬದರಿ ತಲಪಿದೆವು. ಕೇದಾರನಾಥದಿಂದ (ಗೌರಿಕುಂಡ) ಬದರಿನಾಥ ಸುಮಾರು ೨೩೩ ಕಿ.ಮೀ. ದೂರದಲ್ಲಿದೆ. ರಿಷಿಕೇಶದಿಂದ ೩೦೧ ಕಿ.ಮೀ. ದೂರ. ಬದರಿ ಸಮುದ್ರಮಟ್ಟದಿಂದ ೧೦೩೫೦ ಅಡಿ ಎತ್ತರದಲ್ಲಿದೆ. ಅಲ್ಲಿಯ ದೀಪಕ್ ವಸತಿಗೃಹದಲ್ಲಿ ಲಗೇಜು ಇಟ್ಟು ೧೨.೪೫ಕ್ಕೆ ವಾಪಾಸು ಬಸ್ ಹತ್ತಿ ಮಾನಾದೆಡೆಗೆ ಸಾಗಿದೆವು.
ಭಾರತದ ಕಟ್ಟಕಡೆಯ ಹಳ್ಳಿ ಮಾನಾ
ಈ ಯಾತ್ರೆ ಹೊರಡುವ ಮುನ್ನ, ಮಾನಾ ಹಳ್ಳಿಗೆ ಹೋಗಲಿದೆಯಾ ಎಂದು ಕೇಳಿಕೊಂಡಿದ್ದೆ. ಅದೇನೋ ಈ ಹಳ್ಳಿಯನ್ನು ನೋಡಲೇಬೇಕೆಂದು ಬಹಳ ಕುತೂಹಲವಿತ್ತು. ಆ ಆಸೆ ನೆರವೇರಿತು. ಬದರಿಯಿಂದ ಮಾನಾಗೆ ೪ ಕಿಮೀ ಇದೆ. ಭಾರತದ ಕೊನೆಯ ಹಳ್ಳಿ. ಅಲ್ಲಿಂದ ಮುಂದೆ ಚೀನಾ ಟಿಬೆಟ್ ಸರಹದ್ದು ಪ್ರಾರಂಭವಾಗುತ್ತದೆ. ಆ ಗಡಿಭಾಗದಲ್ಲಿ ಸೇನಾವಾಹನಕ್ಕೆ ಮಾತ್ರ ಪ್ರವೇಶಾವಕಾಶ. ನಾವು ಮಾನಾ ತಲಪುವಾಗ ಗಂಟೆ ಒಂದು ಆಗಿತ್ತು. ಹಳ್ಳಿಯಲ್ಲಿ ಸುತ್ತಿದಾಗ ಮನೆಮುಂದೆ ಕೆಲವರು ಉಣ್ಣೆ ಬೇರ್ಪಡಿಸುತ್ತಿರುವುದು, ಹೆಂಗಸರು ಸ್ವೆಟರ್ ತಯಾರಿಸುತ್ತ ಕೂತಿರುವುದು, ಸ್ವೆಟರ್ ಮಾರಾಟ ಮಾಡುತ್ತ ಇರುವುದು ಕಂಡಿತು. ಮಾನಾ ಹಳ್ಳಿಯಲ್ಲಿ ವರ್ಷದ ಆರು ತಿಂಗಳು ಮಾತ್ರ ಜನವಸತಿ ಇರುತ್ತದೆ. ಚಳಿಗಾಲದಲ್ಲಿ ವಿಪರೀತ ಹಿಮದಿಂದಾಗಿ ಅವರು ತಮ್ಮ ಸಾಕುಪ್ರಾಣಿ, ಜಾನುವಾರುಗಳೊಂದಿಗೆ (ಸಾಕಷ್ಟು ದನಕರುಗಳು ಅಲ್ಲಿ ಇದ್ದುದನ್ನು ಕಂಡೆವು) ಸುರಕ್ಷಿತ ಸ್ಥಳಕ್ಕೆ ವಸತಿ ಬದಲಾಯಿಸುತ್ತಾರೆ. ಅದೆಂತ ಜೀವನ ಅವರದು. ಒಂದು ವರ್ಷವಲ್ಲ, ಜೀವನಪರ್ಯಂತ ಇದೇ ವ್ಯವಸ್ಥೆಯಲ್ಲೇ ಬದುಕಬೇಕು. ಜೀವನೋಪಾಯಕ್ಕಾಗಿ ಕೃಷಿ, ಸ್ವೆಟರು ತಯಾರಿಸುವ, ಹೊಟೇಲು ನಡೆಸುವ ವೃತ್ತಿ ಅವರದು.
ವ್ಯಾಸ ಗುಹೆ, ಗಣೇಶ ಗುಹೆ,
ಮಾನಾದಲ್ಲಿ ವ್ಯಾಸಗುಹೆ, ಗಣೇಶ ಗುಹೆ ನೋಡಿದೆವು. ವ್ಯಾಸರು ಮಹಾಭಾರತ ಕಥೆ ಹೇಳುವಾಗ ಅದನ್ನು ಗಣಪತಿ ಬರೆದುಕೊಳ್ಳುತ್ತಿದ್ದ ಸ್ಥಳವಂತೆ.
ಪ್ರತೀತಿಯಲ್ಲಿರುವ ಕಥೆ: ವೇದವ್ಯಾಸರು ಮಹಾಭಾರತ ಗ್ರಂಥದ ರಚನೆ ಇಲ್ಲಿಯೇ ಕುಳಿತು ಮಾಡಿದರೆಂಬುದು ಪುರಾಣದ ಕಥೆ. ವ್ಯಾಸರು ಕಥೆ ಹೇಳುವುದನ್ನು ಬರೆದುಕೊಳ್ಳಲು ಗಣೇಶನಲ್ಲಿ ಕೇಳಿದಾಗ, ಅದಕ್ಕೆ ಗಣೇಶ ಸಮ್ಮತಿಸಿ ಒಂದು ಷರತ್ತು ವಿಧಿಸುತ್ತಾನೆ. ಮಧ್ಯೆ ಎಲ್ಲೂ ನಿಲ್ಲಿಸದೆ ಎಡೆಬಿಡದೆ ಹೇಳಿದರೆ ಮಾತ್ರ ಬರೆದುಕೊಳ್ಳುತ್ತೇನೆ. ಮಧ್ಯೆ ಹೇಳುವುದನ್ನು ನಿಲ್ಲಿಸಿದರೆ ನಾನೂ ಬರೆದುಕೊಳ್ಳುವುದನ್ನು ನಿಲ್ಲಿಸಿಬಿಡುತ್ತೇನೆ. ಗಣಪತಿಯ ಈ ಷರತ್ತಿಗೆ ವ್ಯಾಸರು ಒಪ್ಪಿ, ಎಲ್ಲೂ ನಿಲ್ಲಿಸದೆ ಕಥೆ ಹೇಳಲು ಪ್ರಾರಂಭಿಸಿ ಅದನ್ನು ಗಣೇಶ ಬರೆದುಕೊಂಡನು. (ವ್ಯಾಸ ಗುಹೆ ಹಾಗೂ ಗಣೇಶ ಗುಹೆ ಇರುವ ಸ್ಥಳ ಎರಡೂ ತುಂಬ ಹತ್ತಿರ ಇಲ್ಲ. ಆದರೂ ಹೇಗೆ ವ್ಯಾಸರು ಹೇಳಿದ ಕಥೆ ಗಣೇಶನಿಗೆ ಕೇಳಿಸಿತೊ ಗೊತ್ತಿಲ್ಲ! ಗಣೇಶನ ಕಿವಿ ತುಂಬ ದೊಡ್ಡದಿರುವುದರಿಂದ ಕಿವಿಯ ಕ್ಷಮತೆ ಹೆಚ್ಚಿದ್ದಿರಬಹುದು ಹಾಗಾಗಿ ಅಷ್ಟು ದೂರದಿಂದ ಹೇಳಿದ್ದೂ ಕೇಳಿಸಿರಬಹುದು ಎಂದು ಭಾವಿಸೋಣ!) ವ್ಯಾಸರು ಮಹಾಭಾರತದ ಕಥೆ ಹೇಳಲು ಗಣೇಶ ಅದನ್ನು ಬರೆದುಕೊಳ್ಳುತ್ತಿರಬೇಕಾದರೆ ಸರಸ್ವತೀನದಿಯ ಭೋರ್ಗರೆತದಿಂದ ಗಣೇಶನಿಗೆ ಸರಿಯಾಗಿ ಕೇಳದೆ ಇದ್ದದ್ದರಿಂದ ವ್ಯಾಸರು ಸಿಟ್ಟುಗೊಂಡು ಸರಸ್ವತಿಗೆ ಗುಪ್ತಗಾಮಿನಿಯಾಗಿ ಹರಿ ಎಂದು ಶಾಪಕೊಟ್ಟರಂತೆ. ಮುಂದೆ ಸರಸ್ವತೀ ಗುಪ್ತಗಾಮಿನಿಯಾಗಿ ಹರಿದಳಂತೆ. ಅಲ್ಲಿ ಅಲಕನಂದನದಿಗೆ ಸರಸ್ವತೀನದಿ ಸೇರಿಕೊಂಡು ಹರಿದು ಸಂಗಮವಾಗುವುದನ್ನು ನೋಡಿದೆವು.
ಇಲ್ಲಿ ವ್ಯಾಸ ಗುಹೆಯಲ್ಲಿ ವ್ಯಾಸರ ಮೂರ್ತಿ ಇದೆ. ಹಾಗೆಯೇ ಗಣೇಶ ಗುಹೆಯಲ್ಲಿ ಗಣೇಶನ ಮೂರ್ತಿ ಇದ್ದು, ಪೂಜೆ ನಡೆಯುತ್ತದೆ.
ಭೀಮಶಿಲೆ, ಭೀಮಪೂಲ್
ಮುಂದೆ ಹೋದಂತೆ ಬೃಹತ್ತಾದ ಭೀಮಶಿಲೆ ಕಾಣುತ್ತದೆ. ಅಲ್ಲಿ ಸರಸ್ವತೀನದಿ ಜೋರಾಗಿ ಹರಿಯುತ್ತ ಜಲಪಾತದಂತೆ ಕಾಣುತ್ತದೆ. ಆ ಮಧ್ಯಾಹ್ನ ಭೀಮಪೂಲಿನಲ್ಲಿ ಕಾಮನಬಿಲ್ಲು ಮೂಡಿ ಸುಂದರವಾಗಿ ಕಾಣುತ್ತಿತ್ತು. ಭೀಮಶಿಲೆ ಬಗ್ಗೆ ಕಥೆ ಹೀಗಿದೆ: ಕುರುಕ್ಷೇತ್ರ ಯುದ್ಧದಲ್ಲಿ ಅಪಾರ ಸಾವುನೋವುಗಳು ಆಗಿತ್ತಷ್ಟೆ. ಪಾಂಡವರು ಪ್ರಾಣಹತ್ಯಾ ದೋಷ ನಿವಾರಣೆಗಾಗಿ ಶಿವನನ್ನು ಅರಸುತ್ತ ಬರುತ್ತಿದ್ದಾಗ, ಸರಸ್ವತೀನದಿಯನ್ನು ದಾಟಬೇಕಾಗಿ ಬರುತ್ತದೆ. ಸರಸ್ವತಿಯ ಮಡಿಲಲ್ಲಿ ಕಾಲು ಊರಲು ಮನಸ್ಸಾಗದೆ, ನದಿ ದಾಟಲು ಭೀಮ ದೊಡ್ಡದಾದ ಬಂಡೆಯನ್ನೊಂದನ್ನು ಸರಸ್ವತೀನದಿಗೆ ಅಡ್ಡಲಾಗಿ ನಿಲ್ಲಿಸಿದನಂತೆ. ಭೀಮನ ಕೈ ಬೆರಳುಗಳ ಗುರುತುಗಳಿವೆ ಎಂದು ಅಲ್ಲಿರುವ ಚಿಕ್ಕ ಸೇತುವೆಯಂತೆ ನಿಂತಿರುವ ಒಂದು ದೊಡ್ಡದಾದ ಬಂಡೆಯನ್ನು ತೋರಿಸುತ್ತಾರೆ. ಅಲ್ಲೇ ಪಕ್ಕದಲ್ಲಿ ಭಾರತದ ಕೊನೆಯ ಚಹಾ ದುಖಾನೆ ಎಂಬ ಫಲಕವಿರುವ ಅಂಗಡಿ ಇದೆ. ಅಲ್ಲಿಗೆ ಹಳ್ಳಿ ಕೊನೆಯಾಗುತ್ತದೆ. ಇಲ್ಲಿ ಸರಸ್ವತಿಯ ಚಿಕ್ಕ ಮಂದಿರವಿದೆ. ಇಲ್ಲಿಂದ ಬಗ್ಗಿ ನೋಡಿದರೆ ನಮಗೆ ರಭಸದಿಂದ ಹರಿಯುತ್ತಿರುವ ಸರಸ್ವತೀನದಿ ಕಾಣುತ್ತದೆ. ಸುತ್ತ ಹಸಿರು ಹೊತ್ತ ಬೆಟ್ಟ ಸಾಲುಗಳು ಬಲು ಸುಂದರವಾಗಿ ಕಾಣುತ್ತದೆ.
ಅದನ್ನು ನೋಡಿ ಅಲ್ಲಿಂದ ನಾವು ಹಾಗೇ ಮುಂದುವರೆದು ವಸುಧಾರಾ ಫಾಲ್ಸ್ ಕಡೆಗೆ ಹೆಜ್ಜೆ ಹಾಕಿದೆವು.
ವಸುಧಾರಾ ಫಾಲ್ಸ್
ಮಾನಾದಿಂದ ಸುಮಾರು ೫ ಕಿಮೀ ನಡೆದರೆ ವಸುಧಾರಾ ಫಾಲ್ಸ್ ಸಿಗುತ್ತದೆ. ಬಿರುಸಾಗಿ ನಡೆಯಲು ಸಾಧ್ಯವಾದವರು ಮಾತ್ರ ಇಲ್ಲಿಗೆ ಬರತಕ್ಕದ್ದು ಎಂದು ವಿಠಲರಾಜು ಕಟ್ಟುನಿಟ್ಟಾಗಿ ಹಿಂದಿನ ದಿನವೇ ಹೇಳಿದ್ದರು. ಸವಿತಾ, ಶಶಿಕಲಾ, ರಂಗಪ್ರಸಾದ, ಲತಾ, ರುಕ್ಮಿಣಿಮಾಲಾ, ಪೂರ್ಣಿಮಾ, ಸರೋಜ, ಶೋಭಾ, ವಿಠಲರಾಜು ಒಂಬತ್ತು ಮಂದಿ ಮಾತ್ರ ಭೀಮಪೂಲಿನಿಂದ ಮುಂದೆ ಹೆಜ್ಜೆ ಹಾಕಿದೆವು. ಬಾಕಿದ್ದವರೆಲ್ಲ ಮಾನಾ ಹಳ್ಳಿಯಲ್ಲೆ ಉಳಿದರು. ಅವರು ಹಳ್ಳಿ ಸುತ್ತಿ ವಿಸ್ತಾರವಾಗಿ ನೋಡಿ ಖುಷಿಪಟ್ಟರಂತೆ.
ನಾವು ನಡೆದೆವು ನಡೆದೆವು. ನಡೆದಷ್ಟೂ ಮುಗಿಯುವುದೇ ಇಲ್ಲ. ದೂರದಲ್ಲಿ ಒಮ್ಮೆ ಫಾಲ್ಸ್ ಕಂಡು ಓಹೋ ಇನ್ನು ದೂರವಿಲ್ಲ, ಕಾಣುತ್ತಲ್ಲ ಜಲಪಾತ ಅಂತ ಖುಷಿಯಿಂದ ಹೆಜ್ಜೆ ಹಾಕುತ್ತಿದ್ದೆವು. ಆದರೆ ಮುಂದೆ ಸಾಗಿದಂತೆಲ್ಲ ಜಲಪಾತ ಮಾಯ. ಎಷ್ಟೋ ದೂರವಿದೆ ಅದು. ನಡೆಯುವ ದಾರಿಯನ್ನು ಅಲ್ಲೇ ಲಭ್ಯವಿದ್ದ ಕಲ್ಲು ಹಾಕಿ ದಾರಿ ಚೆನ್ನಾಗಿ ಮಾಡಿದ್ದಾರೆ. ಕಲ್ಲುಗಳಿಗೆ ಅಲ್ಲಿ ಬರವಿಲ್ಲ. ದಾರಿ ಬದಿ ವಿಧವಿಧ ಹೂಗಳು ಕಾಣಿಸಿತು. ಬಂಡೆಗಲ್ಲುಗಳಲ್ಲಿ ಬಣ್ಣಬಣ್ಣದ ಪಾಚಿಯಂತೆ ಕಾಣುವ ಸಸ್ಯ. ಬೇರೆ ಬೇರೆ ಬಣ್ಣದ ಬಂಡೆಗಲ್ಲುಗಳು ಇದ್ದುವು. ದಾರಿಯುದ್ದಕ್ಕೂ ಕೆಳಗೆ ಅಲಕನಂದ ನದಿ ಹರಿಯುವುದು ಕಾಣುತ್ತದೆ. ಸುತ್ತಲೂ ಪರ್ವತಗಳಿದ್ದು, ಕುರುಚಲು ಸಸ್ಯಗಳಿವೆ. ದೊಡ್ಡ ಮರಗಳಿಲ್ಲ. ಬೆಟ್ಟಗಳು ಹಿಮದಿಂದ ಕೂಡಿ ಸುಂದರವಾಗಿ ಕಾಣುತ್ತಿತ್ತು.
ಜಲಪಾತ ನೋಡಿ ಹಿಂದಿರುಗುತ್ತಿದ್ದವರನ್ನೆಲ್ಲ ಕೇಳುತ್ತಿದ್ದೆವು. ಇನ್ನು ಎಷ್ಟು ದೂರ ಇದೆಯೆಂದು. ಕೆಲವರು, ಇನ್ನು ಸ್ವಲ್ಪ ಅಷ್ಟೆ ಎಂದರೆ, ಇನ್ನು ಕೆಲವರು ನೀವೀಗ ಅರ್ಧ ದಾರಿ ಬಂದಿರಷ್ಟೆ. ಇನ್ನೂ ಸುಮಾರು ದೂರ ಹೋಗಬೇಕು ಅಂತ ಹೇಳುತ್ತಿದ್ದರು. ವಯಸ್ಸಾದ ಹೆಂಗಸರು ಫಾಲ್ಸ್ ನೋಡಿ ವಾಪಾಸು ಬರುತ್ತಿದ್ದದ್ದು ಮುಂದೆ ನೋಡಿ ನಡೆಯಲು ಸ್ಫೂರ್ತಿ ಬಂತು. ಈ ಕಲ್ಲು ದಾರಿಯಲ್ಲಿ ಬರಿಕಾಲಿನಲ್ಲಿ ನಡೆಯುತ್ತಿದ್ದ ಅವರನ್ನು ನೋಡಿ ಅಬ್ಬ ಇವರ ಸಾಹಸವೇ ಎನಿಸಿತು! ಅವರು ರಾಜಸ್ಥಾನದಿಂದ ಬಂದದ್ದಂತೆ. ಅಲ್ಲಿ ದಿನಾ ಸಾಕಷ್ಟು ದೂರದಿಂದ ನೀರು ಹೊತ್ತು ನಡೆದು ಅವರಿಗೆ ಅಭ್ಯಾಸವಿರಬಹುದು ಎಂದು ಭಾವಿಸಿಕೊಂಡೆ. ಮುಂದೆ ನಡೆದಂತೆ ಆಯಾಸವಾಗಿ, ಉಸಿರಾಟ ಕಷ್ಟವೆನಿಸುತ್ತಿತ್ತು. ಆದರೂ ಮುಂದೆ ಗುರಿ ಇರುವುದರಿಂದ ಅಲ್ಲಿ ಹೋಗಿ ತಲಪಲೇಬೇಕೆಂಬ ಅದಮ್ಯ ಉತ್ಸಾಹ ಬರಿಸಿಕೊಳ್ಳುತ್ತ ಮುಂದಕ್ಕೆ ಕಾಲು ಎತ್ತಿ ಹಾಕುತ್ತಿದ್ದೆವು. ಇದನ್ನು ಆಗಾಗ ಆಘ್ರಾಣಿಸಿ ಉಸಿರಾಟ ಸುಲಭವಾಗುತ್ತದೆ ಎಂದು ವಾಪಾಸು ಬರುತ್ತಿದ್ದ ಹೆಂಗಸೊಬ್ಬಳು ನನಗೆ ಕರ್ಪೂರ ಕೊಟ್ಟಳು. ಉಸ್ ಎಂದು ಕಷ್ಟವಾಗುವಾಗ ಆಗಾಗ ಅದನ್ನು ಮೂಸುತ್ತ ನಡೆದೆ. ಅಲ್ಲಿರುವ ಒಂದು ಸಸ್ಯವನ್ನು ಮೂಸಿದರೂ ಉಸಿರಾಟ ಸರಾಗವಾಗಿ ಆಗುತ್ತದೆ ಎಂದು ವಿಠಲರಾಜು ಆ ಸಸ್ಯ ತೋರಿಸಿದರು. ವಿಶಿಷ್ಟ ಪರಿಮಳವಿತ್ತದು. ಸಮುದ್ರಮಟ್ಟದಿಂದ ವಸುಧಾರಾ ಫಾಲ್ಸ್ ೧೩೦೦೦ ಅಡಿ ಮೇಲಿದೆ.
ಮೊದಮೊದಲು ಉತ್ಸಾಹ ಜಾಸ್ತಿಯಾಗಿದ್ದು, ಪ್ರಕೃತಿ ಸೌಂದರ್ಯವನ್ನು ನೋಡುತ್ತಲೇ, ಒಂದು ಹೂ ಕಂಡರೂ ಅದನ್ನು ಕ್ಯಾಮರಾದಲ್ಲಿ ಕ್ಲಿಕ್ಕಿಸುತ್ತ, ಬಂಡೆಕಲ್ಲು ಕಂಡರೂ ಆಹಾ ಎಷ್ಟು ಚಂದ ಇದೆ ಇದು ಎಂದು ಪೂರ್ಣಿಮಳಿಗೆ ತೋರಿಸುತ್ತ ಸಾಗುತ್ತಿದ್ದೆ. ಮುಂದೆ ಸಾಗುತ್ತಿದ್ದಂತೆ ಕ್ಯಾಮರಾ ಚೀಲದೊಳಗೆ ಸೇರಿತು. ಫೋಟೋ ತೆಗೆಯುವುದೂ ಬೇಡ, ಒಮ್ಮೆ ಅಲ್ಲಿ ತಲಪಿದರೆ ಸಾಕು ಅನಿಸಲು ತೊಡಗಿತು. ಒಮ್ಮೆ ಬೆಟ್ಟ ಹತ್ತಿದರೆ ಮತ್ತೆ ಇಳಿಯಬೇಕು. ಹತ್ತಿ ಉಸ್ ಎಂದು ನಿಂತು ಸುಧಾರಿಸಿ ಮುಂದೆ ನಡೆಯುತ್ತಿದ್ದೆವು. ಹೀಗೆ ಕಠಿಣವಾದ ದಾರಿ. ಪೂರ್ಣಿಮಾ ನಿಮ್ಮ ಹೆಸರನ್ನು ಪೂರ್ತಿ ಹೇಳಲೂ ಆಗದಷ್ಟು ಸುಸ್ತು. ಹಾಗೆ ಪೂರ್ಣಿ ಎನ್ನುತ್ತೇನೆ ಎಂದು ಆ ಸುಸ್ತಿನಲ್ಲೂ ತಮಾಷೆ ಮಾಡುತ್ತಿದ್ದೆ. ಹಾಗೆಯೇ ಹೇಳಿ. ಮನೆಯಲ್ಲಿ ಎಲ್ಲರೂ ನನ್ನನ್ನು ಹಾಗೆಯೇ ಕರೆಯುವುದು ಎಂದು ಅವರೂ ಉಸ್ ಎಂದು ಉಸಿರು ಬಿಡುತ್ತ ಸಮ್ಮತಿಸಿದರು!
ಊಟ ಮಾಡದೆ ನಾವು ಚಾರಣ ಹೊರಟದ್ದು. ಹೊಟ್ಟೆಯೂ ಹಸಿಯಲು ತೊಡಗಿ ಸುಸ್ತು ಹೆಚ್ಚಾಯಿತು. ಚೀಲದಲ್ಲಿ ನಾಲ್ಕು ಸೇಬು, ಬಾದಾಮಿ ಇತ್ತು. ಒಂದು ಸೇಬು, ನಾಲ್ಕಾರು ಬಾದಾಮಿ ತಿಂದದ್ದೇ ದೇಹ ಚೈತನ್ಯ ಪಡೆಯಿತು. ಮುಂದೆ ನಡೆಯಲು ಶಕ್ತಿ ನೀಡಿತು. ನನ್ನೊಡನೆ ಇದ್ದವರಿಗೆಲ್ಲ ಸೇಬು, ಬಾದಾಮಿ ಕೊಟ್ಟೆ. ಹಸಿವು ಆದರೆ ದೇಹದಲ್ಲಿ ತ್ರಾಣವೇ ಇರುವುದಿಲ್ಲ, ಹಸಿವೆಂದರೆ ಹೇಗಿರುತ್ತದೆ ಎಂಬುದು ಅಲ್ಲಿ ಮನವರಿಕೆಯಾಯಿತು. ಅಂತೂ ನಾಲ್ಕು ಗಂಟೆಗೆ ವಸುಧಾರಾ ಫಾಲ್ಸ್ ಬಳಿ ತಲಪಿಯೇ ಬಿಟ್ಟೆವು. ನಾಲ್ಕು ಮಂದಿ ೩.೩೦ಕ್ಕೇ ತಲಪಿದರು. ಶೋಭಾ ಮುಕ್ಕಾಲು ದಾರಿ ಕ್ರಮಿಸಿದವರು ಕಡೇ ಘಳಿಗೆಯಲ್ಲಿ ಹಿಂದಕ್ಕೇ ವಾಪಾಸಾದರು. ವಾಪಾಸು ಹೋಗಲು ತುಂಬ ತಡವಾದೀತು, ತನ್ನಿಂದ ಇತರರಿಗೆ ತೊಂದರೆಯಾಗುವುದು ಬೇಡ ಎಂದು ಅವರು ಹಿಂದೆ ಹೋಗುವ ತೀರ್ಮಾನ ಮಾಡಿದ್ದಂತೆ.
ವಸುಧಾರಾ ಫಾಲ್ಸ್ ಬಲು ಎತ್ತರದ ಬೆಟ್ಟದಿಂದ ಕೆಳಗೆ ಅಲೆಅಲೆಯಾಗಿ ಧುಮುಕುತ್ತದೆ. ಓಹ್ ಎಂಥ ಸೌಂದರ್ಯವದು. ಮೇಲೆ ನಿಂತಿದ್ದ ನಮ್ಮ ಮುಖದತ್ತ ನೀರಿನ ಅಲೆಗಳು ಗಾಳಿಯಲ್ಲಿ ಸೋಕಿದಾಗ ಆಹಾ ಇಲ್ಲಿ ಬಂದದ್ದೂ ಸಾರ್ಥಕವೆನಿಸುವಂಥ ಭಾವ ಆ ಕ್ಷಣ ಮೂಡುತ್ತದೆ. ಅಲ್ಲಿ ನಮ್ಮ ಮುಖಕ್ಕೆ ನೀರು ಸೋಕದೆ ಇದ್ದರೆ ನಾವು ಏನೋ ಪಾಪ ಮಾಡಿದ್ದೇವೆಂದು ಪ್ರತೀತಿಯಲ್ಲಿದೆಯಂತೆ! ನಮ್ಮೆಲ್ಲರ ಮುಖಕ್ಕೂ ನೀರಹನಿ ಪನ್ನೀರಿನಂತೆ ಸೋಕಿತ್ತು. ಇದರಿಂದ ಸದ್ಯ ನಾವ್ಯಾರೂ ಯಾವ ಪಾಪವೂ ಮಾಡಿಲ್ಲವೆಂಬುದು ಖಾತ್ರಿಯಾಯಿತು!
ಅಷ್ಟವಸುಗಳು ಮೂವತ್ತು ಸಾವಿರ ವರ್ಷ ಇಲ್ಲಿ ತಪಸ್ಸು ಮಾಡಿದ್ದರಂತೆ. ಅಬ್ಬ ಅವರು ತಪಸ್ಸಿಗೆ ಕೂರಲು ಕಂಡುಹಿಡಿದ ಸ್ಥಳ ಎಂತದ್ದು ಮಾರಾಯ್ತಿ, ಮಾರಾಯ್ರೆ!ಅಲ್ಲಿ ಭಾವಚಿತ್ರ ತೆಗೆಸಿಕೊಂಡೆವು. ನಾವು ಕೆಳಗೆ ನೀರಿನ ಬಳಿ ಇಳಿಯಲಿಲ್ಲ. ಇಳಿದರೆ ವಾಪಾಸು ಹೋಗಲು ತಡವಾಗುತ್ತದೆ. ೫ಕಿಮೀ ಹಿಂದಕ್ಕೆ ನಡೆಯಬೇಕಲ್ಲ. ಕತ್ತಲೆ ಆದರೆ ಇಲ್ಲಿ ನಡೆಯುವುದು ಕಷ್ಟ ಎಂದು ನಾವು ಕೇವಲ ಇಪ್ಪತೈದು ನಿಮಿಷ ಅಲ್ಲಿದ್ದು ೪.೨೫ಕ್ಕೆ ಹಿಂದಕ್ಕೆ ವಾಪಾಸು ನಡೆಯಲು ತೀರ್ಮಾನಿಸಿದೆವು.
ನಡೆದು ಬರುತ್ತಿರುವಾಗ ಹಿಮತುಂಬಿದ ಬೆಟ್ಟ ಬಲು ಸೊಗಸಾಗಿ ಕಾಣುತ್ತಿತ್ತು. ಪೂರ್ಣಿಮಾ ಹಾಗೂ ನಾನು ಅದನ್ನು ನೋಡುತ್ತಲೇ ಓಹೋ ಹಿಮಾಲಯ ಆಹಾ ಹಿಮಾಲಯ ಎಂದು ಹಾಡುಕಟ್ಟಿ ಹಾಡುತ್ತ ನಡೆದೆವು. ಹೋದಾಗ ಇದ್ದ ಸುಸ್ತು ಮಾಯವಾಗಿತ್ತು! ಬರುತ್ತ, ಕೆಳ ಭಾಗದಲ್ಲಿ ಸೇನೆಯ ಇಬ್ಬರು ತರುಣರು ಕಾವಲು ಕಾಯುತ್ತಿರುವುದನ್ನು ಕಂಡೆವು. ಚಳಿಮಳೆಗೂ ನಿರಂತರ ಕೆಲಸ ಮಾಡಬೇಕು ಅವರು. ಆ ನಿರ್ಜನ ಪ್ರದೇಶದಲ್ಲಿ ಅಷ್ಟು ದೂರದಲ್ಲಿ ಇಬ್ಬರೇ ನಿಂತು ಸದಾ ಕಟ್ಟೆಚ್ಚರದಲ್ಲಿದ್ದು ಕರ್ತವ್ಯ ನಿರ್ವಹಿಸುತ್ತಾರಲ್ಲ, ಅವರನ್ನು ನೋಡುವಾಗ ಗೌರವ ಭಾವ ಮೂಡಿ ಮನಸ್ಸು ಆದ್ರವಾಗುತ್ತದೆ. ಅವರ ಈ ಕಾರ್ಯದಿಂದ ತಾನೆ ಇಲ್ಲಿ ನಾವೆಲ್ಲಾ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ ಎಂಬುದು ನಮ್ಮ ನೆನಪಿನಲ್ಲಿ ಸದಾ ಇರಬೇಕು.
ನಾವು ವಾಪಾಸು ಬರುತ್ತಿರಬೇಕಾದರೆ ಕೆಲವು ಮಂದಿ ಜಲಪಾತದೆಡೆಗೆ ಹೋಗುತ್ತಿದ್ದರು. ನಾವು ಅವರಿಗೆ ಸ್ಪಷ್ಟವಾಗಿ ಹೇಳಿದೆವು. ಈಗ ಹೋಗಬೇಡಿ. ಕತ್ತಲಾಗುತ್ತದೆ. ನೀವು ಅಲ್ಲಿಗೆ ತಲಪುವಾಗಲೇ ಕತ್ತಲಾದೀತು. ತುಂಬ ನಡೆಯಬೇಕು. ಮತ್ತೆ ಹಿಂದೆ ಬರುವುದು ಕಷ್ಟ. ಆದರೆ ಅವರು ನಮ್ಮ ಮಾತಿಗೆ ಕಿವಿಗೊಡದೆ ಮುಂದೆ ಹೋದರು. ಹೇಗೆ ಹಿಂದೆ ಬಂದರೋ? ಕೆಲವರಂತೂ ಚಳಿ ತಡೆಯಲು ಸ್ವೆಟರ್ ಇಲ್ಲದೆ ಹೋಗುತ್ತಿದ್ದರು. ಒಬ್ಬಳಂತೂ ತೋಳಿಲ್ಲದ ಅಂಗಿ ಧರಿಸಿದ್ದಳು. ಚಳಿ ಮೆಲ್ಲಮೆಲ್ಲನೆ ಆವರಿಸಿಕೊಳ್ಳಲು ಹವಣಿಸುತ್ತಿತ್ತು. ಸುತ್ತಲೂ ಬೆಟ್ಟದಿಂದಾವರಿಸಿದ ಕಾರಣ ಸಂಜೆ ಐದು ಗಂಟೆಯಾಗುವಾಗಲೇ ಸೂರ್ಯ ಕಾಣಿಸುವುದಿಲ್ಲ. ಕತ್ತಲು ಬೇಗ ಆಗುತ್ತದೆ. ಎಷ್ಟು ದೂರ ನಡೆಯಬೇಕೆಂಬ ತಿಳಿವಳಿಕೆ ಇಲ್ಲದೆ ಹೋಗುತ್ತಿದ್ದರು. ವಸುಧಾರಾ ಫಾಲ್ಸ್ ಕಡೆಗೆ ಹೋಗಲು ಪ್ರಶಸ್ತ ಕಾಲ ಬೆಳಗ್ಗೆ ಬೇಗ ಹೊರಟು ಹೋಗಬೇಕು. ಆಗ ಆರಾಮವಾಗಿ ನಡೆಯುತ್ತ, ಅಲ್ಲಿ ಜಲಪಾತವನ್ನು ಮನದಣಿಯೆ ನೋಡಿ ಆನಂದಿಸಿ ವಾಪಾಸು ಬರಬಹುದು.
ಸಂಜೆ ೬.೪೫ಕ್ಕೆ ನಾವು ಮಾನ ತಲಪಿದೆವು. ತಲಪಿ ವ್ಯಾಸಗುಹೆ, ಗಣಪತಿ ಮಂದಿರ ಎಲ್ಲ ನೋಡಿದೆವು. ಓಹ್ ೧.೩೦ರಿಂದ ೬.೪೫ರವರೆಗೆ ಉಳಿದವರು ನಮ್ಮನ್ನು ಕಾಯುತ್ತ ಅಲ್ಲೇ ಇದ್ದರು. ಬಸ್ಸಿನಲ್ಲಿ ಕುಳಿತು ಹರಟುತ್ತಿದ್ದರು. ಅವರ ಈ ತಾಳ್ಮೆಗೆ ನಮೋನಮಃ. ಅವರು ಹಳ್ಳಿಇಡೀ ತಿರುಗಿ, ಅಲ್ಲಿ ಸಿಕ್ಕುವ ಮೊಮೋ ಎಂಬ ತಿಂಡಿ, ಕುರುಕಲು ತಿಂಡಿ, ಜ್ಯೂಸ್ ಎಲ್ಲ ರುಚಿ ನೋಡಿದರಂತೆ.
ಬದರಿನಾರಾಯಣನ ದರ್ಶನ
ಬಸ್ ಹತ್ತಿ ನಾವು ಬದರಿಗೆ ಬಂದೆವು. ಕೋಣೆಗೆ ಹೋಗಿ ಮುಖ ತೊಳೆದು ಬದರಿನಾರಾಯಣ ದೇವಾಲಯಕ್ಕೆ ಬಂದೆವು. ನಮ್ಮ ವಸತಿಗೃಹದಿಂದ ನಾಲ್ಕುಮಾರು ದೂರದಲ್ಲಿ ದೇವಾಲಯವಿದ್ದುದು. ತುಂಬ ಜನ ಇದ್ದರು. ಒಳಗೆ ಆಗ ಪ್ರವೇಶವಿರಲಿಲ್ಲ. ಹೊರಗಿನಿಂದಲೇ ದೇವರ ದರ್ಶನ ಮಾಡಿದೆವು.
ಅನಂತಮಠ
ಬದರಿಯಲ್ಲಿ ಉಡುಪಿ ಪೇಜಾವರದ ಅನಂತಮಠ ಇದೆ. ಅಲ್ಲಿ ಊಟ ಮಾಡುವ ಬಹಳ ಚೆನ್ನಾಗಿರುತ್ತದಂತೆ ಎಂದು ಸರೋಜ ಹೇಳಿದ್ದರು. ಸರೋಜ ಅವರಿಗೆ ಗೊತ್ತಿದ್ದವರಿಗೆ ದೂರವಾಣಿ ಮಾಡಿ ಮಧ್ಯಾಹ್ನವೇ ಕೇಳಿದ್ದರು. ಬನ್ನಿ ಎಂದು ಅಲ್ಲಿಂದ ಆಹ್ವಾನ ಬಂದಿತ್ತಂತೆ. ಆದರೆ ಊಟವಿಲ್ಲ. ಇವತ್ತು ತಿಂಡಿ ಎಂದಿದ್ದರಂತೆ. ನಾವೂ ಖುಷಿಯಿಂದಲೇ ಅವರ ಈ ಮಾತಿಗೆ ಸಮ್ಮತಿ ಇತ್ತಿದ್ದೆವು. ಸರೋಜರಿಗೂ ಅನಂತಮಠ ಇರುವುದು ಎಲ್ಲಿ ಎಂದು ಗೊತ್ತಿಲ್ಲ. ಕೇಳಿಕೊಂಡು ನಡೆದೆವು. ಅನಂತಮಠ ತಲಪಲು ಸ್ವಲ್ಪ ಹೆಚ್ಚೇ ದೂರ ನಡೆಯಬೇಕಾಯಿತು. ದೇವಾಲಯದಿಂದ ಸುಮಾರು ಒಂದು ಕಿಮೀ ದೂರ ಇರಬಹುದು. ಆಗ ಕೆಲವರ ತಾಳ್ಮೆ ತಪ್ಪಲು ಸುರುವಾಯಿತು. ಆ ಪರಿಣಾಮ ನಿಷ್ಟುರವಾಗಿ ಮಾತಾಡಿದರು. ಬೇಕಿತ್ತ ಈ ಉಸಾಬಾರಿ ನನಗೆ ಎಂದು ಸರೋಜ ನಮ್ಮಲ್ಲಿ ಹೇಳಿಕೊಂಡರು. ಆಗ ನಾವು, ‘ಇದೂ ಒಂದು ಅನುಭವ ತಾನೆ. ನಮಗೆ ಅನಂತಮಠ ನೋಡಿದ ಹಾಗೂ ಆಯಿತು. ಇಂಥ ಮಾತಿಗೆಲ್ಲ ನೀವೇನು ತಲೆಕೆಡಿಸಿಕೊಳ್ಳಬೇಡಿ’ ಎಂದು ನಾವು ಕೆಲವರು ಸಂತೈಸಿದೆವು. ಮನುಜನ ತಾಳ್ಮೆ ಪರೀಕ್ಷಿಸುವ ಕಾಲವದು. ಇಂಥ ಒಳ್ಳೆಯ ಯಾತ್ರೆ ಮಾಡಿದರೂ, ಊಟಕ್ಕೆ ಸ್ವಲ್ಪ ತಡವಾದರೂ ಅದನ್ನು ಸಹಿಸುವ ತಾಳ್ಮೆ ಸ್ವಲ್ಪವೂ ಬರುವುದಿಲ್ಲವಲ್ಲ? ಎಂಥ ವಿಪರ್ಯಾಸವಿದು. ಎಂದು ಮನದಲ್ಲೇ ಮಂಥನ ನಡೆಸಿದೆ. ಕೆಲವರಿಗೆ ಹೊಟ್ಟೆ ಹಸಿದರೆ ಬಲುಬೇಗ ಸಿಟ್ಟು ಬರುತ್ತದಂತೆ. ಹಾಗಿದೆ ನಮ್ಮ ಹೊಟ್ಟೆಪಾಡು!
ಅನಂತಮಠಕ್ಕೆ ಹೋದೆವು. ಅಲ್ಲಿ ಕೂಡಲೇ ನಮ್ಮನ್ನು ಊಟದ ಕೋಣೆಗೆ ಕರೆದುಕೊಂಡು ಹೋಗಿ ಒಗ್ಗರಣೆ ಹಾಕಿದ ದಪ್ಪಅವಲಕ್ಕಿ ಕೊಟ್ಟರು. ಹೊಟ್ಟೆ ತುಂಬ ತಿಂದೆವು. ಹಸಿದ ಹೊಟ್ಟೆಗೆ ಬಿಸಿಬಿಸಿಯಾಗಿ ಬಲು ರುಚಿಯಾಗಿತ್ತು. ಮಠಕ್ಕೆ ಯತಾನುಶಕ್ತಿ ಕಾಣಿಕೆ ಸಲ್ಲಿಸಿ, ಸರೋಜರಿಗೆ ಕೃತಜ್ಞತೆ ಸಲ್ಲಿಸಿದೆವು. ಈ ಮೊದಲು ಕೋಪಗೊಂಡು ಮಾತಾಡಿದವರೂ ಕ್ಷಮೆ ಕೇಳಿ ದೊಡ್ಡವರೆನಿಸಿಕೊಂಡದ್ದು ನೋಡಿ ನನಗಂತೂ ತುಂಬ ಖುಷಿ ಆಯಿತು. ಸರೋಜರೂ ನಿರಾಳರಾದರು. ನಾವು ನಡೆಯುತ್ತ ವಸತಿಗೃಹಕ್ಕೆ ಬಂದೆವು.
ಕೋಣೆಯಲ್ಲಿ ನಾನು, ಸವಿತಾ, ಲತಾ ಇದ್ದುದು. ಹೊರಗೆ ಅಷ್ಟು ಚಳಿ ಎನಿಸಿರಲಿಲ್ಲ. ತಲೆಗೆ ಟೋಪಿ ಹಾಕಲು ಮರೆತು ಸುತ್ತಿದ್ದೆ. ಆದರೂ ಚಳಿ ಆಗಿರಲಿಲ್ಲ. ಆದರೆ ಕೋಣೆಯೊಳಗೆ ಕಿಟಕಿಗಳೆಲ್ಲ ಹಾಕಿಯೇ ಇದ್ದರೂ ತಣ್ಣಗೆ ಕೊರೆಯುತ್ತಿತ್ತು. ಹಾಸಿಗೆ ತಣ್ಣಗಾಗಿತ್ತು. ಅದರಲ್ಲೇ ಮಲಗಿ ನಿದ್ರಿಸಿದೆವು.
…………………..ಮುಂದುವರಿಯುವುದು
ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 8 : http://52.55.167.220/?p=13222
– ರುಕ್ಮಿಣಿಮಾಲಾ, ಮೈಸೂರು