ವಾತ್ಸಲ್ಯ ಝರಿ
ಎಚ್ಚರಿಸಿ
ಲಲ್ಲೆಗರೆಸಿ
ಮುದ್ದಿಸಿ
ಸ್ನಾನಿಸಿ ಶುದ್ಧಿಸಿ
ಅಲಂಕರಿಸಿ
ತನ್ನ ಕಣ್ತುಂಬಿಸಿ
ಕೊಳ್ಳುವ ನಿರಂತರ
ಸಂಭ್ರಮದಲ್ಲಿ
ಅರೆಘಳಿಗೆ ವಿಶ್ರಾಂತಿ
ಅವಳಿಗೆ
ಪೂರ್ಣವಿರಾಮ ಚಿನ್ಹೆ
ಇಟ್ಟಾಗ ಕಂದನ
ಗಲ್ಲದಡಿಗೆ !
ಹಾಲ ಬಿಸಿ ಆರಿಸಿ
ಕೇಸರಿಯ ನವಿರು
ದಳವಿಳಿಸಿ
ಸಿಹಿ ಕರಗಿಸಿ
ಕೆನೆ ಗಟ್ಟಿಸಿ
ಮತ್ತೆ ಪೂಸಿ
ಮಾಡಿ ನಗಿಸಿ
ತನ್ನ ಕುಡಿಗೆ
ಕುಡಿಸಿದರಷ್ಟೆ
ಅವಳಿಗೆ
ಆ ದಿನದ ಬೆಳಗು
ನಿರಾಳದಿನಕ್ಕೆ ಮೆರಗು !.
ಕಂಗಳ ಅರಳಿಸಿ
ನಕ್ಷತ್ರಗಳ ತೋರಿಸಿ
ಅವುಗಳ ಎಣಿಸಿ
ಕೂಡಿಸಿ ಗುಣಿಸಿದ
ಮೊತ್ತಕ್ಕೂ ಮೇಲಿನದು
ಅವಳು
ಕಂದನ ಕೈ ಹಿಡಿದು
ಸರಿ ದಾರಿ ಹಿಡಿಸಿದ್ದು
ಮುಗಿಯದ ಕಳಕಳಿ
ನಿರಂತರ ಹರಿವ
ವಾತ್ಸಲ್ಯ ಝರಿ
ತನ್ನ ದೇಹ ಕರಗಿಸಿ
ಕಂದನ ಗಟ್ಟಿಯಾಗಿಸಿ
ತಾನು
ಅಣುವಾಗುವ ಪರಿ
ಅಪರಿಮಿತ ಅಚ್ಚರಿ
ನಿತ್ಯ ಕನಸಿ,
ಕಟ್ಟಿದ ಬಂಧಗಳ
ಅಲೆಯುರುಳಿಸಿ
ಪ್ರೇಮ ಪರಿಮಳದ
ಸುಗಂಧ ಆಗರದ ಹಡಗ
ಸಂಸಾರ ಸಾಗರದಲ್ಲಿ ತೇಲಿಸಿ
ಹರಸಿ ಹರಿಸುವ ಸಾಹಸಿ
ಅವಿನಾಶಿ
“ಅಮ್ಮ”
ಆಪ್ಯಾಯಿ
ಪ್ರತಿ ಮನೆ
ಮನದೊಳಗಿನ
ಅಮೃತ ಜೀವಿ
– ಅನಂತ ರಮೇಶ್