ಬೆಳಕ ಹುಡುಕಿ ಹೊರಟ ಮನುಜರ ಮಧ್ಯದಲ್ಲಿ
ಹಾಗೆ ಬೆಳಕು ಹುಡುಕಿಹೊರಟವರೆಲ್ಲ ನಾಚುವಂತೆ
ಮಿಂಚುಹುಳುವೊಂದು
ಆ ಕತ್ತಲೆಯ ಕ್ಷಣದಲ್ಲಿ ಹಾದು ಹೋಯಿತು!
ಕಣ್ಣು ಕೋರೈಸುವ ಬೆಳಕಿರದಿದ್ದರೂ
ದಾರಿಗಾಣದೆ ದಿಕ್ಕೆಟ್ಟು ನಿಂತವನಿಗಷ್ಟು
ಆತ್ಮವಿಶ್ವಾಸ ತುಂಬಿತು.
.
ಬೆಳಕಲ್ಲಿ ಬೆತ್ತಲಾಗದೀ ಜಗದೊಳಗೆಲ್ಲಿ ಕತ್ತಲಿಲ್ಲ ಹೇಳು
ಮನೆಯ ಪ್ರತಿ ಮೂಲೆಯೊಳಗೆ
ಮನಸಿನ ಸ್ವಂತ ಕೋಣೆಯೊಳಗೆ
ಹಾಗೆ ಹೊರಬಂದರೆ ಬಕ್ಕಬೋರಲಾಗಿ ಬಿದ್ದ ಬಯಲೊಳಗೆ
ಅಷ್ಟೂ ದೇವರ ಗರ್ಭಗುಡಿಯೊಳಗೆ
ಮಸೀಧಿಮಂದಿರಗಳ ಅಂಗಳದೊಳಗೆ
ಇಗರ್ಜಿಗಳ ಶಾಂತ ಮೌನದೊಳಗೆ
ಸಭ್ಯ ಸಜ್ಜನರ ಮಹಲುಗಳೊಳಗೆ
ಖೈದಿಗಳ ಕೂಡಿಹಾಕಿದ ಕಾರಾಗೃಹದೊಳಗೆ
ಸ್ಮಶಾನದ ಗೋರಿಗಳ ಆಳದೊಳಗೆ
ಕಡಲಂತ ಕತ್ತಲಿಗೆ ಕೊನೆಯೆಲ್ಲಿ‘
ಬೆಳಕ ಹುಡುಕಿ ಹೊರಟ ಅಜ್ಞಾನಿಗಳ ಹುಡುಕಾಟದಲ್ಲಿ?
ಕತ್ತಲಿಗಿಂತ ಅಧಿಕ ಬೆಳಕುಂಟು
ಕಾಣುವ ಕಣ್ಣಿರುವವರಿಗೆ
ಸಹಸ್ರ ಸೂರ್ಯರೂ ಸಾಲರು
ಮನಸು ಮುಚ್ಚಿಕೊಂಡು ಕೂತ ಮನುಷ್ಯರಿಗೆ!
– ಕು.ಸ.ಮಧುಸೂದನನಾಯರ್ , ರಂಗೇನಹಳ್ಳಿ