ಹೆಣ್ಣೆಂಬ ಹಣೆಪಟ್ಟಿ ಹೊತ್ತು..
ಯಾರಿಗೂ ಬೇಕಿಲ್ಲದವಳು
ಎಲ್ಲರಿಗೂ ಬೇಕಾದವಳು
ಗಂಡಿನ ವ್ಯಾಮೋಹದಲ್ಲಿ
ಗರ್ಭದಲ್ಲೇ ಅಸುನೀಗುವವಳು
ಹೆಣ್ಣೆಂಬ ಹಣೆಪಟ್ಟಿ ಹೊತ್ತು
ಆಗಿಹೆ ಅತ್ಯಾಚಾರಿಯ ಸುಲಭದ ತುತ್ತು
ಅಬಲೆಯೆಂಬುದೇ ಆಪತ್ತು
ಸಬಲೆಯಾಗಿ ತೋರಿದ್ದರೂ ತಾಕತ್ತು
ತಾಯಿ ಸೋದರಿ ಮಗಳು ಮಡದಿ
ಸ್ನೇಹಿತೆ ಎಷ್ಟೊಂದು ಪಾತ್ರ ನನ್ನದು
ಶೋಷಣೆಯ ಮೊದಲ ಗುರಿ
ವರದಕ್ಷಿಣೆಯ ಅಂತಿಮ ಬಲಿ ನನ್ನದು
ಕಾಮದಾಟಕೆ ಮೈಮಾರಿ
ಪ್ರೇಮಕೂಟಕೆ ನಾನಾಗಿ ಮಾದರಿ
ಅಮ್ಮನೆಂಬ ಕೋಟೆಯೊಳಗೆ
ಜಗವ ಸಲಹೋ ದೈವಸ್ವರೂಪಳು
ಆಧುನಿಕತೆಯ ಎಲ್ಲ ಮಜಲುಗಳಲಿ
ಛಾಪನ್ನೊತ್ತಿದ ಛಲಗಾತಿಯಾದರೂ
ಸಂಸಾರದ ಬೆನ್ನೆಲುಬಾದರೂ
ಸಂಪತ್ತಾಗಿ ಪರಿಗಣಿಸಿಬಿಟ್ಟರು
ಬೆಲೆ ಕೊಡಲಿಲ್ಲ ನನ್ನ ಬಯಕೆಗೆ
ಆಸರೆಯಾಗಲಿಲ್ಲ ನನ್ನ ಸಾಧನೆಗೆ
ಎಲ್ಲರ ಕೆಂಗಣ್ಣಿಗೆ ಸುಟ್ಟು ಹೋದೆ
ಆದರೂ ಎಲ್ಲರ ಬಾಳ ಬೆಳಗಿದೆ
– ಅಮುಭಾವಜೀವಿ