ಪ್ರೇರಣಾ
ಟಿ.ವಿ. ರಿಪೋರ್ಟರ್ ಆ ಮನೆಯ ದೊಡ್ಡ ಗೇಟ್ ದಾಟಿ ಮನೆಯೊಳಗೆ ಬಂದ. ಸೋಫ಼ಾದ ಮೇಲೆ ಪ್ರೇರಣಾ ಆಸ್ಪತ್ರೆಯ ಸಂಸ್ಥಾಪಕರಾದ ಮಧುಕರ್ ಜೋಶಿ ಕುಳಿತಿದ್ದರು. ಸಂದರ್ಶನಕ್ಕಾಗಿಯೇ ಕ್ಲಪ್ತ ಸಮಯಕ್ಕೆ ತಯಾರಾಗಿದ್ದರು. “ಸರ್, ಪ್ರೇರಣಾ ಆಸ್ಪತ್ರೆಯ ಬಗ್ಗೆ ಏನೇನೋ ವದಂತಿ ಕೇಳಿ ಬರ್ತಿದೆ ಅದ್ಕೆ ನಿಮ್ಮತ್ರಾನೇ ಕೇಳೋನಾಂತ” ನೇರವಾದ ಪ್ರಶ್ನೆ ಸಂದರ್ಶಕನಿಂದ.
ಕ್ಯಾಮೆರಾಗೆ ಸುಂದರ ನಗು ನೀಡಿ ಆರಾಮಾಗಿಯೇ ಕೇಳಿದರು”ಏನು ಕೇಳಿ, ಯಾವ ವದಂತಿ ನಿಮಗೆ ಬಗೆ ಹರಿಯಬೇಕು?” ತಕ್ಷಣ ರಿಪೋರ್ಟರ್, “ನೀವು ವಿಲ್ ಮಾಡಿದ್ದೀರಂತೆ. ನಿಮ್ಮ ಚಾರಿಟೇಬಲ್ ಟ್ರಸ್ಟ್, ಆಸ್ಪತ್ರೆ ಎಲ್ಲಾ ‘ಪ್ರೇರಣಾ’ ಹೆಸ್ರಿಗಂತೆ, ಸ್ವಂತ ಮಗನಿದ್ದೂ ಅವನಿಗೇನೂ ಆಸ್ತಿ ಇಲ್ಲಾಂತ ಸುದ್ದಿ. ಹೌದೇ?” ಏನು, ಹೇಗೆ ಉತ್ತರಿಸಬೇಕೆಂದು ತಡಕಾಡುತ್ತಿದ್ದಾಗಲೇ, ಪ್ರೇರಣಾ ಬಂದಳು. ಸೋಫ಼ಾದ ಮೇಲೆ ಕೂತವಳೇ, “ಅಪ್ಪಾ ಯಾಕಿಷ್ಟು ಯೋಚನೆ ಮಾಡ್ಬೇಕು, ನಿಜ ಹೇಳೋಕೆ? ನಾನೇ ಹೇಳ್ತೀನಿ. ಸರ್ ನನ್ಜೊತೆ ಬನ್ನಿ” ಎಂದವಳೇ ಒಂದು ರೂಮ್ ಹತ್ರ ನಡೆದಳು.
ಅದು ತೆರೆದಾಗ ಅಲ್ಲಿ ಕೋಮಾದಲ್ಲಿ ಮಲಗಿದ್ದ ವ್ಯಕ್ತಿಯ ಮೇಲೇನೆ ಕ್ಯಾಮೆರಾ ತಿರುಗುತಿತ್ತು. “ಇಲ್ಲಿ ಮಲ್ಗಿರೋರೆ ನನ್ನ ನಿಜಾ ತಂದೆ. ಅದೆಷ್ಟೋ ವರ್ಷಗಳಿಂದ ಹೀಗೆಯೇ ಮಲಗಿದ್ದಾರೆ. 28 ವರ್ಷಗಳ ಹಿಂದೆ ನನ್ನ ಅಮ್ಮ ನಂಗೆ ಜನ್ಮ ಕೊಟ್ಟಳು, ಒಂದು ಗುಡಿಸಲಿನಲ್ಲಿ; ಆದ್ರೆ ಅದೇ ದಿನ ಸಣ್ಣ ಆಸ್ಪತ್ರೇಲಿ ಮಧುಕರ್ ಜೋಶಿಯವ್ರ ಪತ್ನಿ ಮಗು ಹೆರುತ್ತಲೇ ತೀರಿಕೊಂಡ್ರು. ಕೆಲಸದವಳ ಮಗಳಾದ ನನ್ನನ್ನೂ, ಆ ಗಂಡು ಮಗುವನ್ನೂ ಜೊತೇಲೇ ಸಾಕಿದ್ರು ಯಾಕಂದ್ರೆ ನನ್ನ ಅಮ್ಮ ನಾನು ಹುಟ್ಟಿದ್ಮೇಲೆ ಬದುಕಿದ್ದೇ ಒಂದ ವಾರ. ತಂದೆ ಕುಡುಕ, ಒಮ್ಮೆ ತಲೆಗೆ ಪೆಟ್ಟು ಬಿದ್ದು ಕೋಮಾಗೆ ಹೋಗಿದ್ರೂ ಇವ್ರನ್ನು ಮನೇಲೆ ಟ್ರೀಟ್ ಮಾಡ್ತಿದ್ದೀವಿ. ನನ್ನನ್ನು ಡಾಕ್ಟರ್ ಮಾಡಿದ್ದೇ ಸಮಾಜಕ್ಕಾಗಿ…”
ಇನ್ನು ಏನೋ ಹೇಳಬೇಕೆನ್ನುವಷ್ಟ್ರಲ್ಲಿ… ದಿನಕರ್ ಜೋಶಿ ಗಂಡು ಮಗ.. ತೂರಾಡುತ್ತಾ ಬಂದ. ನಿನ್ನೆ ರಾತ್ರಿ ಕುಡಿದ ನಶೆ ಇನ್ನೂ ಇಳಿದಿರಲಿಲ್ಲ…
ಸಂದರ್ಶಕನಿಗೆ ಅವನ ಉತ್ತರ ದೊರಕಿತ್ತು….
_ ಅಶೋಕ್ ಕೆ. ಜಿ. ಮಿಜಾರ್.
ಪ್ರೇರಣೆ……
ಚೆನ್ನಾಗಿದೆ