ಗಾಢವಿಷಾದದ ಬಟ್ಟಲೊಳಗೆ ಮುಖವನದ್ದಿ!
ನಾನು ಬದುಕಲೋ ಬೇಡವೊ ಎನ್ನುವ
ಗಾಢ ವಿಷಾದದ ದ್ವಂದ್ವದಲ್ಲಿ
ಮತ್ತು ಚರ್ಮ ಸೀಳಿ ಮೈಯೊಳಗೆ ನುಗ್ಗಿ
ನನ್ನ ಹಸಿಮಾಂಸವ ಸುಡುತ್ತಿರುವೀ!
ಬಿಸಿಲ ಧಗೆಯಲ್ಲಿ
ಕೂತಿರುವಾಗ
ನಿನ್ನ ಮುಖ ಮಾತ್ರ ನೆನಪಿಗೆ ಬರುತ್ತೆ
ಹಸಿದ ಹಸುಗೂಸಿಗದರ ತಾಯ ಮುಖ ನೆನಪಾದಂತೆ
–
ಸುಮ್ಮನೇ ಬಿಳಿಗೋಡೆಯ ನಿಟ್ಟಿಸುತ್ತೇನೆ
ಕಿಟಕಿಯಿಂದ ರಾಚಿದ ಬಿಸಿಲ ಝಳದೊಳಗೆಲ್ಲಾದರು
ನಿನ್ನ ಚಿತ್ರ ಮೂಡಬಹುದೆಂಬ
ನಂಬಿಕೆಯಿಂದ
ಕಾಯುತ್ತೇನೆ ಹಾಗೇನೆ
ನಾನು ಬದುಕಲೋ ಬೇಡವೋ
ಎನ್ನುವ ದ್ವಂದ್ವದ ಹೆಣಬಾರವ ಹೊತ್ತು ತಲೆಯೊಳಗೆ
–
ಹಾಗೆ ಕಾಯುತ್ತಲೇ ಮದ್ಯಾಹ್ನ ಮುಗಿದು
ಸಂಜೆ ತೆರೆದು ಮತ್ತದೂ
ಮರೆಯಾಗಿ ಕವಿಯುತ್ತದೆ ಇರುಳು
ನನ್ನ ಮನಸ್ಸಿಗೆ ಕವಿದ ಕಾರ್ಮೋಡದಂತೆ
ಅಂತಿರುಳ ಏಕಾಂಗಿತನದಲ್ಲೂ
ಅಸೆಯೊಂದು ಉಳಿದಿರುತ್ತೆ
ಕತ್ತಲೆಯಲೆಯೊಳಗೆ ಸುಳಿಯುವ ಮಿಂಚು ಹುಳದ
ಬೆಳಕಲ್ಲಾದರು ಕಾಣಬಹುದೇನೊ ನಿನ್ನ ಮುಖವೆಂದು
–
ಹೀಗೆ ಇರುವಾಗಲೇ ಬೆಳಕು ಹರಿಯುತ್ತದೆ
ನಾನು ಮಾತ್ರ ಗಾಢವಿಷಾದದ
ಬಟ್ಟಲಲ್ಲಿ ಮುಖವೊಡ್ಡಿ ಕೂತಿದ್ದೇನೆ
ನಾನು ಬದುಕಲೋ ಬೇಡವೋ ಎನುವ ದ್ವಂದ್ವದಲ್ಲಿ
ನಿಂತು ನಡು ನೀರಲ್ಲಿ!
.
– ಕು.ಸ.ಮಧುಸೂದನ ನಾಯರ್